ಕುಶಾಲನಗರ ಪುರಸಭೆ ಕಟ್ಟಡ ಜೂ.11 ರಂದು ಉದ್ಘಾಟನೆ
7 ಕೋ. ರೂ. ವೆಚ್ಚದ ಕಾಮಗಾರಿ

ಕುಶಾಲನಗರ : ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕುಶಾಲನಗರ ಪುರಸಭೆ ಕಟ್ಟಡದ ಉದ್ಘಾಟನೆಯನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಜೂ.11ರಂದು ನೆರವೇರಿಸಲಿದ್ದಾರೆ. ಈ ಮೂಲಕ ಕುಶಾಲನಗರ ಜನತೆಯ 7 ವರ್ಷಗಳ ಕನಸನ್ನು ನನಸು ಮಾಡಿದ್ದಾರೆ.
ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕುಶಾಲನಗರ ಪುರಸಭೆಯ ವಾಣಿಜ್ಯ ಸಂಕೀರ್ಣದ ಉದ್ಘಾಟನೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪುರಭವನಕ್ಕೆ ಮುನ್ನುಡಿ ಬರೆಯಲು ಆಡಳಿತ ಮಂಡಳಿ ಸಜ್ಜಾಗಿದೆ. ನಗರದ ಹೃದಯ ಭಾಗದಲ್ಲಿರುವ ಪುರಭವನವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಕಟ್ಟಡದ ಉದ್ಘಾಟನಾ ಕಾಲ ಕೂಡಿ ಬಂದಿರುವುದು ಕುಶಾಲನಗರ ಜನತೆಯ ಸಂತೋಷಕ್ಕೆ ಕಾರಣವಾಗಿದೆ. ಈ ಹಿಂದೆ ಕುಶಾಲನಗರ ಪುರಸಭೆಯಾಗಿದ್ದಾಗ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರು ಪುರಸಭೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು ಸ್ಮರಣೀಯ.
ಹಳೆಯ ಕಟ್ಟಡವನ್ನು 2018ರಲ್ಲಿ ಕೆಡವಿ 2020ರಲ್ಲಿ ಕಟ್ಟಡವನ್ನು ಉದ್ಘಾಟಿಸಬೇಕಾಗಿತ್ತು. ಆದರೆ, ಅನುದಾನ ಹಾಗೂ ತಾಂತ್ರಿಕ ಕಾರಣಗಳಿಂದ ವಾಣಿಜ್ಯ ಸಂಕೀರ್ಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿತ್ತು. ಇದೀಗ ಶಾಸಕ ಡಾ.ಮಂತರ್ ಗೌಡ ಅವರ ಪ್ರಯತ್ನದಿಂದ ಹೆಚ್ಚುವರಿ ಎರಡು ಕೋಟಿ ರೂ. ಅನುದಾನ ಬಳಸಿ ಕಟ್ಟಡವನ್ನು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
7 ಕೋಟಿ ರೂ. ಅನುದಾನ ಬಳಕೆ :
ಕಾಮಗಾರಿ ಪ್ರಾರಂಭವಾದಾಗಿನಿಂದ ಈವರೆಗೆ 7 ಕೋಟಿ ರೂ.ಗೂ ಅಧಿಕ ಅನುದಾನವನ್ನು ಬಳಸಲಾಗಿದ್ದು, 1.10 ಎಕರೆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ಆಧುನಿಕ ವ್ಯವಸ್ಥೆಗಳನ್ನು ಒಳಗೊಂಡಂತೆ ಸುಸಜ್ಜಿತವಾಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಅತ್ಯಾಧುನಿಕ ಸಭಾಂಗಣ, 150 ವಾಹನಗಳಿಗೆ ಬೇಕಾದ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲ ಸಿಬ್ಬಂದಿಗೆ ಬೇಕಾದ ಕೊಠಡಿಗಳನ್ನು ಒಳಗೊಂಡಿದೆ.
ಅನುದಾನ ಪೋಲು ಆರೋಪ :
ಕುಶಾಲನಗರ ಪುರಸಭೆಯ ಕಟ್ಟಡ ತಳ ಅಂತಸ್ತಿನಲ್ಲಿ ಇಲೆಕ್ಟ್ರಿಕ್ ಪೈಪ್ ಲೈನ್ ಮಾಡದೆ ಇದೀಗ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ತಪ್ಪುಗಳು ಸಂಭವಿಸಿದ್ದು, ಸಾರ್ವಜನಿಕರ ಹಣವನ್ನು ಪೋಲು ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕುಶಾಲನಗರ ಪುರಸಭೆ ಕಟ್ಟಡ ಅನುದಾನದ ಕೊರತೆಯಿಂದ ಅಪೂರ್ಣಗೊಂಡಿತ್ತು. ಕುಶಾಲನಗರ ಜನತೆಯ ಕನಸನ್ನು ನನಸು ಮಾಡುವ ದೃಷ್ಟಿಯಿಂದ ಹೆಚ್ಚುವರಿ ಅನುದಾನವನ್ನು ಒದಗಿಸಿಕೊಡಲಾಗಿದೆ. ನೂತನ ಕಟ್ಟಡವು ಸಾರ್ವಜನಿಕರ ಸೇವೆಗೆ ಸಿದ್ಧವಾಗಿದೆ.
-ಡಾ.ಮಂತರ್ ಗೌಡ, ಶಾಸಕ
ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಕುಶಾಲನಗರ ವಾಣಿಜ್ಯ ಸಂಕೀರ್ಣದ ಕಾಮಗಾರಿ ಪೂರ್ಣಗೊಂಡಿದೆ. ಸಾರ್ವಜನಿಕರಿಗೆ, ಪುರಸಭೆ ಸಿಬ್ಬಂದಿಗೆ ಅಗತ್ಯ ವ್ಯವಸ್ಥೆಗಳನ್ನು ಒಳಗೊಂಡಿದೆ. ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪುರಸಭೆಯು ಸ್ವಂತ ಕಟ್ಟಡದಲ್ಲಿ ಸಾರ್ವಜನಿಕರ ಸೇವೆ ಸಲ್ಲಿಸಲು ಸಿದ್ಧವಾಗಿದೆ.
-ಗಿರೀಶ್, ಪುರಸಭೆ ಮುಖ್ಯಾಧಿಕಾರಿ
ಕುಶಾಲನಗರ ಪುರಸಭೆಯ ಕಟ್ಟಡ ಉದ್ಘಾಟನೆಯಾಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಇದಕ್ಕೆ ಶಾಸಕರ ಪ್ರಯತ್ನ ಬಹಳಷ್ಟಿದೆ. ಹಾಗೆಯೇ ಆಡಳಿತ ಮಂಡಳಿ, ಅಧಿಕಾರಿ ವರ್ಗದವರ ಶ್ರಮವೂ ಇದೆ. ಬುಧವಾರ ಉಸ್ತುವಾರಿ ಸಚಿವರು ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
-ಜಯಲಕ್ಷ್ಮೀ ಚಂದ್ರು, ಕುಶಾಲನಗರ ಪುರಸಭೆ ಅಧ್ಯಕ್ಷೆ
ಐತಿಹಾಸಿಕ ಹಿನ್ನೆಲೆಯಿರುವ ಕುಶಾಲನಗರಕ್ಕೆ ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ಕೀರ್ತಿಯಿದೆ. ಇಂದು ಕುಶಾಲನಗರದಲ್ಲಿ ಪುರಭವನ ಉದ್ಘಾಟನೆಗೆ ಸಜ್ಜಾಗಿದೆ. ಶಾಸಕರ ಆಸಕ್ತಿ ಮತ್ತು ಪ್ರಯತ್ನದಿಂದ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಪುರಸಭೆಗೆ ಆದಾಯ ಬರುವ ದೃಷ್ಟಿಯಿಂದ ಮುಂದುವರಿದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ನಗರಸಭೆಯ ದೂರದೃಷ್ಟಿಯೊಂದಿಗೆ ಕಟ್ಟಡವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು.
-ವಿ.ಪಿ.ಶಶಿಧರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ