ಪ್ರಾರಬ್ಧಗಳಿಗೆ ಅಂತ್ಯ ಹಾಡಿದ ‘ಕುವೆಂಪು ಯುಗ’

ಹೆಸರಿನಲ್ಲೇನಿದೆ? ಎನ್ನುತ್ತಾರೆ. ಆದರೆ ಈ ಸಮಾಜದಲ್ಲಿ ಹೆಸರಿನಲ್ಲೂ ತರತಮವನ್ನು ಬಿತ್ತಲಾಗಿದೆ. ಹೆಸರಿನಲ್ಲೂ ನಡೆಯುತ್ತಿದ್ದ ಶೋಷಣೆಯಿಂದ ಮುಕ್ತರಾಗಿಸಿದವರು ವೈಚಾರಿಕ ಪ್ರಜ್ಞೆ ಬಿತ್ತಿದ ಕುವೆಂಪು ಅವರು. ಐ.ಎಂ. ವಿಠ್ಠಲಮೂರ್ತಿ ಅವರು ತಮ್ಮ ಕೃತಿ ‘ಬದುಕು ಜಟಕಾ ಬಂಡಿ, ನಾನದರ ಸಾಹೇಬ...’ದಲ್ಲಿ ಅಂದು ಕುವೆಂಪು ಅವರ ಜೊತೆ ಒಡನಾಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಕೃತಿಯ ಆಯ್ದ ಭಾಗ ಇಲ್ಲಿದೆ. ಎಪ್ರಿಲ್ 4ರಂದು ಈ ಕೃತಿಯ ಬಿಡುಗಡೆ ಬೆಂಗಳೂರಿನಲ್ಲಿ ನಡೆಯಲಿದೆ.
ಮೂವತ್ತೇಳು ವರ್ಷಗಳ ಹಿಂದೆ ನನ್ನ ವೃತ್ತಿ ಜೀವನ ಪ್ರಾರಂಭಿಸಿದ ಜಿಲ್ಲೆ ಧಾರವಾಡ. ಕೆ.ವಿ. ಇರ್ನಿರಾಯರು ಜಿಲ್ಲಾಧಿಕಾರಿಯಾಗಿ ನನಗೆ ಗುರುಕುಲ ಮಾದರಿಯಲ್ಲಿ ತರಬೇತಿ ನೀಡಿ ಎಲ್ಲ ಆಡಳಿತ ವಿಷಯಗಳ ಒಳನೋಟದ ದರ್ಶನ ಮಾಡಿಸಿದ್ದರು. ಮಿತಭಾಷಿ, ವಿಶೇಷ ಸಮಯಪ್ರಜ್ಞೆಯ ಇರ್ನಿರಾಯರು ನನಗೆ ಸದಾ ಪ್ರಾತಃಸ್ಮರಣೀಯರು. ಆಡಳಿತದಲ್ಲಿ ‘ಕೇಳಿಸಿಕೊಳ್ಳುವುದು’ ಎಷ್ಟು ಮುಖ್ಯ ಎಂದು ತಿಳಿಸಿದವರು.
ತರಬೇತಿ ಸಮಯದಲ್ಲಿ ಹುಬ್ಬಳ್ಳಿಯ ರೆವಿನ್ಯೂ ಇನ್ಸ್ಪೆಕ್ಟರ್ ದೇಶಪಾಂಡೆ ನನ್ನ ಸ್ಥಳೀಯ ಅವಶ್ಯಕತೆಗಳನ್ನು ನಿರ್ವಹಿಸುತ್ತಿದ್ದರು. ಈ ದೇಶಪಾಂಡೆ ಒಮ್ಮೆ ನನಗೆ ‘‘ಸರ್, ನಿಮ್ಮ ಅಡ್ಡ ಹೆಸರೇನ್ರಿ’’ ಎಂದರು. ಅಲ್ಲಿಯತನಕ ನನಗೆ ಈ ಅಡ್ಡಹೆಸರಿನ ಮಹತ್ವ, ಮಹಿಮೆ ತಿಳಿದಿರಲಿಲ್ಲ. ‘ಈಗಲೇ ಇಷ್ಟೊಂದು ಉದ್ದವಿರುವ ನನ್ನ ಹೆಸರಿಗೆ ಮತ್ತೊಂದು ಅಡ್ಡ ಹೆಸರೇ’ ಎಂದು ಗಲಿಬಿಲಿಗೊಂಡೆ.
ಉತ್ತರ ಕರ್ನಾಟಕ ಭಾಗದ ಅಡ್ಡ ಹೆಸರುಗಳ ಒಂದು ಸುದೀರ್ಘ ಪಟ್ಟಿಯನ್ನೇ ಬಿಡುಗಡೆ ಮಾಡಿದರು. ಮೆಣಸಿನಕಾಯಿಯಂತಹ ಖಾರದ ಹೆಸರಿನಿಂದ ಹಿಡಿದು ಕಣ್ಣೀರು ತರಿಸುವ ಉಳ್ಳಾಗಡ್ಡಿ, ಸಿಹಿಯೆನಿಸುವ ಬೆಲ್ಲದ, ಲಿಂಬಿಕಾಯಿ, ಒಣಕುದುರಿ, ಕರಡಿ, ಹೋರಿ, ಕೋರಿ, ಸಂಗಟಿ, ಚೂರಿ, ಈಟಿ, ಕೊಡ್ಲಿ.. ಹೀಗೆ ಬಗೆಬಗೆಯ ಅಡ್ಡ ಹೆಸರುಗಳು. ಅವುಗಳು ಎಷ್ಟೊಂದು ಆಕರ್ಷಕ ಮತ್ತು ಕುತೂಹಲಕಾರಿ!
ದಕ್ಷಿಣ ಭಾಗದ ಜನರ ಹೆಸರುಗಳನ್ನು ನೆನೆದು ತುಂಬಾ ಖಿನ್ನನಾದೆ. ಇವೇನು ಹೆಸರುಗಳೇ? ಹೆಸರುಗಳಿಗೆ ಒಂದು ಕ್ಯಾರೆಕ್ಟರ್ ಸಹ ಇಲ್ಲ ಎನಿಸಿತು. ನನ್ನ ಹೆಸರನ್ನೇ ನೆನೆದು ತುಂಬಾ ನಿರಾಶನಾದೆ. ಪಾಂಡುರಂಗನಿಂದ ಪ್ರಾರಂಭವಾಗಿ ವಿಠ್ಠಲನಾಗಿದ್ದ ನನ್ನ ಹೆಸರು ನಮ್ಮೂರಿನ ಹೆಡ್ ಮಾಸ್ಟರ್ ಭೀಮರಾಯರಿಂದಾಗಿ ವಿಠ್ಠಲಮೂರ್ತಿಯಾಯ್ತು. ಬರೀ ವಿಠ್ಠಲ ಎನ್ನುವ ಹೆಸರು ಯಾವುದೋ ಮರಾಠಿ ಟೇಲರ್ ಹೆಸರಿನಂತಿದೆ ಎಂದು ನನ್ನ ಹೆಸರಿಗೆ ಮೂರ್ತಿ ಸೇರಿಸಿಬಿಟ್ಟರು. ನನ್ನ ಊರಿನವರು ಈಗಲೂ ಕರೆಯುವ ಮತ್ತೊಂದು ಹೆಸರು ಪುಟ್ಟಸ್ವಾಮಿ, ಪುಟ್ಟಸ್ವಾಮಣಯ್ಯ!
ಪಾಸ್ ಪೋರ್ಟ್ನಲ್ಲಿ ಐರವಳ್ಳಿ ಮಲ್ಲೇಗೌಡ ವಿಠ್ಠಲಮೂರ್ತಿ ಎನ್ನುವ ಹೆಸರಿದೆ. ನನ್ನ ಮೊದಲ ಹೆಸರನ್ನು ಎಲ್ಲ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ‘ಐರವಳ್ಳಿ, ಇರವಳ್ಳಿ’ ಎಂದು ವಿಧ ವಿಧವಾಗಿ, ಮಧುರವಾಗಿ ಕೂಗುತ್ತಾರೆ. ನನ್ನನ್ನೇ ಕರೆಯುತ್ತಿರುವುದು ಎಂದು ತಿಳಿದುಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ಹೊರದೇಶಗಳಲ್ಲಿ ನಾನು ಈಗ ‘ಮಿ. ಐರವಳ್ಳಿ’.
ಇವೆಲ್ಲ ಹೆಸರುಗಳ ಸಂಕೀರ್ಣತೆಯ ಅರಿವಿದ್ದ ನನಗೆ ಕನಿಷ್ಠಪಕ್ಷ ನನ್ನ ಮಕ್ಕಳಿಗಾದರೂ ಕರೆಯಲು ಕಷ್ಟವಾಗದ ಸರಳ ಹೆಸರುಗಳನ್ನು ಇಡಬೇಕೆಂದು ಅವರು ಹುಟ್ಟುವ ಮೊದಲೇ ತೀರ್ಮಾನಿಸಿಬಿಟ್ಟಿದ್ದೆ. ಮಗಳಿಗೆ ‘ಶ್ರೀಗೌರಿ’, ಮಗನಿಗೆ ‘ಶ್ರೀರಾಮ’ ಎಂದು ಅಂದುಕೊಂಡಂತೆ ಹೆಸರಿಟ್ಟೆ. ನನ್ನ ಮಗಳನ್ನು ಸಹಜವಾಗಿ ‘ಗೌರಿ’ ಎಂದು ಕರೆಯುತ್ತಾರೆ. ‘‘ಅಪ್ಪ, ಅದು ಹಸುವಿನ ಹೆಸರೆಂದು ಶಾಲೆಯಲ್ಲಿ ಎಲ್ಲ ರೇಗಿಸುತ್ತಾರೆ’’ ಎನ್ನುತ್ತಿದ್ದಳು. ಈಗ ಅಮೆರಿಕದಲ್ಲಿ ಹುಟ್ಟಿದ ಅವಳ ಮಗಳಿಗೆ ‘ರಾಧ’ ಎಂದು ಹೆಸರಿಟ್ಟಿದ್ದಾಳೆ. ನನ್ನ ಮಗ ‘‘ಅಯೋಧ್ಯೆಯ ಕಾರಣಕ್ಕಾಗಿ ವಿವಾದಕ್ಕೆ ಒಳಗಾದ ಶ್ರೀರಾಮನ ಹೆಸರು ನನಗೇಕೆ?’’ ಎನ್ನುತ್ತಾನೆ.
ಬೇಸಿಗೆಯ ರಜೆಯಲ್ಲಿ ನನ್ನ ಸಂಸಾರವನ್ನು ನನ್ನ ತಂದೆ-ತಾಯಿ ಇರುತ್ತಿದ್ದ ಕೀತೂರಿನಲ್ಲಿ ಬಿಟ್ಟು ಬರುತ್ತಿದ್ದೆ. ಅದೇ ಸಮಯಕ್ಕೆ ನನ್ನ ಅಕ್ಕ-ತಂಗಿಯರ ಮಕ್ಕಳು ಸಹ ರಜೆಗೆ ಬರುತ್ತಿದ್ದರು. ಏಳೆಂಟು ಮಕ್ಕಳ ಆಟ-ಜಗಳ, ಕೆಲಸದವರನ್ನು ಅವರು ಪೀಡಿಸುತ್ತಿದ್ದ ರೀತಿ ಎಲ್ಲವೂ ನಮ್ಮ ಅಪ್ಪ-ಅಮ್ಮನಿಗೆ ಸಂತೋಷದ ಕ್ಷಣಗಳು. ಹೀಗೆ ರಜೆಗೆ ಹೋಗಿದ್ದ ಮನೆಯವರನ್ನು ಒಮ್ಮೆ ಕರೆತರಲು ಹೋಗಿದ್ದೆ. ನನ್ನ ಮಗಳು ಶ್ರೀಗೌರಿ ‘‘ಅಪ್ಪ ಮನೆಗೆ ಕೆಲಸಕ್ಕೆ ಬರುತ್ತಾರಲ್ಲ ಹುಚ್ಚಮ್ಮ, ಅವರಿಗೆ ಅವರ ಅಪ್ಪ-ಅಮ್ಮ ಯಾಕೆ ಆ ಹೆಸರಿಟ್ಟಿದ್ದಾರಪ್ಪ’’ ಎಂದಳು. ಅವಳಿಗೆ ಏನೋ ಸಮಾಧಾನ ಹೇಳಿದೆ. ಆದರೆ, ಇಷ್ಟು ವರ್ಷ ನನಗೆ ಏನೂ ಅನಿಸದಿದ್ದ ಆ ಒಂದು ಹೆಸರಿನ ಬಗ್ಗೆ ನನ್ನ ಮಗಳು ದುಗುಡಗೊಂಡಿದ್ದ ಬಗೆಗೆ ಯೋಚಿಸಿದೆ.
ಇದೊಂದೇ ಹೆಸರಲ್ಲ. ನಮ್ಮ ಊರಿನ ಆಸುಪಾಸಿನಲ್ಲಿ ಈ ರೀತಿಯ ಅಮಾನವೀಯ ಹೆಸರುಗಳಿಂದ ಒಂದು ತಲೆಮಾರಿನ ಜನ ಶಾಪಗ್ರಸ್ತರಾಗಿದ್ದನ್ನು ನೆನೆದು ಗಾಬರಿಯಾದೆ. ಒಂದೊಂದು ಹೆಸರನ್ನೂ ನೆನೆದು ಅರ್ಥೈಸಲು ಹೋದಾಗ ನಡೆದು ಹೋಗಿದ್ದ ದುರಂತದ ಅರಿವಾಗಿತ್ತು. ನಮ್ಮೂರಿನ ಜಾತಕದ ಜೋಯಿಸರುಗಳಿಗೆ ಒಳ್ಳೆಯ ಹೆಸರುಗಳು ಗೊತ್ತಿರಲಿಲ್ಲ ಎಂದಲ್ಲ. ಕೇವಲ ಹೆಸರಿನಿಂದಲೇ ಒಂದು ಸಮುದಾಯವನ್ನು ಗುರುತಿಸಬಹುದಾದ, ಬೇರ್ಪಡಿಸಬಹುದಾದ ಜಾಣ್ಮೆ ಅವರಲ್ಲಿ ಎದ್ದು ಕಾಣುತ್ತಿತ್ತು.
ಹುಚ್ಚೇಗೌಡ, ಹೊಟ್ಟೇಗೌಡ, ಹುಚ್ಚಮ್ಮ, ಕಾಳೇಗೌಡ, ಅಮಾಸೆಗೌಡ... ಹೀಗೆ ಥರಾವರಿ ಹೆಸರುಗಳು. ಒಂದೇ ಊರಿನಲ್ಲಿ ಹೊಟ್ಟೇಗೌಡ ಎಂಬ ಹೆಸರಿನವರು ನಾಲ್ಕಾರು ಜನರು ಇರುತ್ತಿದ್ದರು. ಅವರ ಹೊಟ್ಟೆ ಸದಾ ಬೆನ್ನಿಗೆ ಅಂಟಿಕೊಂಡಿದ್ದರೂ ಅವರು ಹೊಟ್ಟೇಗೌಡ್ರೆ! ಹುಚ್ಚೇಗೌಡ ಎಂಬ ಹೆಸರಿನ ನಮ್ಮ ಸಂಬಂಧಿಕರನ್ನು ‘ಈಗ ಬಂದ್ರ ಹುಚ್ ಮಾವ’ ಎಂತಲೂ ಅದೇ ರೀತಿ ‘ಹುಚ್ ಚಿಕ್ಕಪ್ಪ, ಹುಚ್ ದೊಡ್ಡಪ್ಪ’ ಎಂದೂ ಆದರಿಸುತ್ತಿದ್ದರು. ಅವರೂ ಏನೊಂದೂ ಭಾವಿಸದೆ ಬಹು ಖುಷಿಯಿಂದ ಕೈಕಾಲು ತೊಳೆದುಕೊಂಡು ಮನೆಯೊಳಗೆ ಬರುತ್ತಿದ್ದರು.
ಅದೇ ರೀತಿ ನಮ್ಮೂರಿನ ಜೋಯಿಸರ ಸೃಜನಶೀಲತೆಯಿಂದ ಸೃಷ್ಟಿಯಾದ ಇನ್ನೊಂದು ಹೆಸರು ಹೊಟ್ಟೇಗೌಡ. ಅವರನ್ನು ‘ಹೊಟ್ ಮಾವ, ಹೊಟ್ ಚಿಕ್ಕಪ್ಪ’ ಎಂದು ಕರೆಯಬೇಕಾಗಿತ್ತು. ಒಂದೇ ಹೆಸರಿಗೆ ಎರಡು ಅರ್ಥ ಬರುವ ಹೆಸರು! ಹೊಟ್ಟೆ ಎಂದು ಒಂದರ್ಥವಾದರೆ ಬೇರೆಯವರು ಕರೆಯುವಾಗ ‘ಹೊಟ್ ಮಾವ’ ಅಂದರೆ ಕಿವುಡನೆಂಬ ಅರ್ಥ ಬರುತ್ತಿತ್ತು. ಆ ಕಾಲದಲ್ಲಿ ಹೆಸರು ಬದಲಾಯಿಸಿಕೊಳ್ಳುವ ಅನುಕೂಲವಿಲ್ಲದ್ದರಿಂದ ಇಡೀ ಜೀವಮಾನ ಅದೇ ಹೆಸರಿನಲ್ಲಿ ಪ್ರಖ್ಯಾತರಾಗಬೇಕಿತ್ತು, ಹೆಸರುವಾಸಿ ಆಗಬೇಕಿತ್ತು!
ನಮ್ಮ ಪ್ರಾಂತದ ಆಸುಪಾಸಿನಲ್ಲಿ ಈ ರೀತಿಯ ಅಥವಾ ಇನ್ನೂ ಅಧ್ವಾನದ ಹೆಸರುಗಳು ಒಂದು ತಲೆಮಾರಿನ ಪೂರ್ತಿ ಚಾಲ್ತಿಯಲ್ಲಿದ್ದವು. ಕೆಲವೊಂದು ಸಮುದಾಯಗಳಿಗೆ ಮಾತ್ರ ಈ ಶಾಪ. ಹೆಸರಿಡುವ ಸ್ಥಾನಮಾನದಲ್ಲಿ ಇದ್ದವರೆಲ್ಲ ಅವರ ಮಕ್ಕಳಿಗೆ ಅನಂತರಾಮು, ಕೃಷ್ಣಮೂರ್ತಿ, ಚಂದ್ರಶೇಖರ, ವೆಂಕಟೇಶ, ಮಂಜುನಾಥ.. ಮುಂತಾದ ಆ ಕಾಲಕ್ಕೆ ಸುಂದರವಾದ ಹೆಸರುಗಳಿಂದ ಕರೆಯುತ್ತಿದ್ದರು.
ಬಹುಶಃ ಕುವೆಂಪು ಯುಗ ಪ್ರಾರಂಭವಾದ ನಂತರ ನಮ್ಮ ಭಾಗದ ಮಕ್ಕಳಿಗೆ ಸುಧಾರಿಸಿದ ಹೆಸರಿಡುವ ಸಂಪ್ರದಾಯ ಬೆಳೆದು ಬಂದಿದೆ ಎನ್ನಬಹುದು. ಕುವೆಂಪು ಸ್ವತಃ ಅವರ ಮಕ್ಕಳಿಗೆ ಹೆಸರಿಟ್ಟ ಬಗ್ಗೆ ತಮಾಷೆಗೆ ಒಂದು ಮಾತಿದೆ. ‘ಏuvemಠಿu ಜiಜ ಟಿoಣ ಟಿಚಿme his soಟಿs, buಣ he seಟಿಣeಟಿಛಿeಜ ಣhem’ ಹೌದು, ಕುಪ್ಪಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ, ಕುಪ್ಪಳಿ ಪುಟ್ಟಪ್ಪ ಕೋಕಿಲೋದಯ ಚೈತ್ರ, ಈ ಹೆಸರುಗಳೆಲ್ಲ ವಾಕ್ಯಗಳೇ! ಅವರನ್ನನುಸರಿಸಿ ಕಳೆದ ಐದಾರು ದಶಕಗಳಲ್ಲಿ ಇಡೀ ಸಮುದಾಯದ ಹೆಸರುಗಳ ಚಿತ್ರಣವೇ ಬದಲಾಗಿದೆ. ಮಕ್ಕಳಿಗೆ ಹೆಸರಿಡುವುದೂ ತಮ್ಮ ಕರ್ತವ್ಯ ಎಂದು ತಂದೆ-ತಾಯಂದಿರು ಭಾವಿಸಿದ್ದಾರೆ.
ಕುವೆಂಪು ಯುಗದ ಪ್ರಾರಂಭ ಎಲ್ಲ ಪ್ರಾರಬ್ಧಗಳ ಅಂತ್ಯಕ್ಕೆ ನಾಂದಿ ಎನ್ನಬಹುದು. ‘ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು’ ಎಂದ ಕವಿ, ವಿಚಾರಕ್ರಾಂತಿಗೆ ಆಹ್ವಾನ ನೀಡಿ, ಒಂದು ತಲೆಮಾರಿನ ಜನರನ್ನು ಮಾನಸಿಕ ಅತ್ಯಾಚಾರದಿಂದ ಬಿಡುಗಡೆಗೊಳಿಸಿ, ಶೋಷಿತರಿಗೆ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ತುಂಬಿದ ಪರಿವರ್ತನೆಯ ಹರಿಕಾರ. ‘ನೂರು ದೇವರನ್ನೆಲ್ಲ ನೂಕಾಚೆ ದೂರ’ ಎಂದು ಪುರೋಹಿತಶಾಹಿಯ ವಂಚಕ ಮುಖವಾಡ ಕಳಚಿದ ವಿಭೂತಿಪುರುಷ.
‘ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂದು ಸದಾ ಭಾಷಾಭಿಮಾನದ ಕೆಚ್ಚು ತುಂಬಿದ ಕನ್ನಡದ ಋಷಿ. ‘ಜಯ ಭಾರತ ಜನನಿಯ ತನುಜಾತೆ’ ಎಂದು ಭಾರತ ಮಾತೆಯೊಂದಿಗೆ ಕರ್ನಾಟಕವನ್ನೂ ಸಮೀಕರಿಸಿ ನೋಡಿದ ಕವಿ. ‘ನೇಗಿಲ ಯೋಗಿ’ಯ ಕೈಂಕರ್ಯ ಕೊಂಡಾಡಿದ ರಸಋಷಿ. ‘ಮನುಜ ಮತ, ವಿಶ್ವಪಥ’ ಎಂದ ದಾರ್ಶನಿಕ. ‘ಓ ನನ್ನ ಚೇತನ’ದ ಮೂಲಕ ವಿಶ್ವಮಾನವ ಸಂದೇಶ ಸಾರಿದ ಮಹಾ ಮಾನವತಾವಾದಿ. ನನ್ನ ಪೀಳಿಗೆಯವರ ‘ಆರಾಧ್ಯ ದೈವ’. ಅದೂ ಅವರೇ ಹೇಳಿರುವ ದೇವರ ಅರ್ಥದ ದೈವ.
ಕುವೆಂಪು ಅವರನ್ನು ನಾನು ಮೊದಲ ಬಾರಿಗೆ ನೋಡಿದ್ದು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಿಂದ ಪುಟ್ಟಣ್ಣಚೆಟ್ಟಿ ಪುರಭವನದವರೆಗೆ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಶೃಂಗರಿಸಿದ ಆನೆಯ ಮೇಲಿಟ್ಟು ಮೆರವಣಿಗೆಯಲ್ಲಿ ತಂದರು. ನಾಡಿನ ಹಿರಿ-ಕಿರಿಯ ಸಾಹಿತಿಗಳು, ಕಲಾವಿದರು, ಕುವೆಂಪು ಅಭಿಮಾನಿಗಳು, ಜಾನಪದ ನೃತ್ಯ ತಂಡಗಳು, ಅಲಂಕೃತ ಪೂರ್ಣಕುಂಭದೊಂದಿಗೆ ಬರುತ್ತಿದ್ದ ಮಹಿಳಾತಂಡಗಳು, ಅದೊಂದು ಜಾತ್ರೆಯ ಸಂಭ್ರಮ, ಸಡಗರ. ಮೆರವಣಿಗೆ ಪುರಭವನ ತಲುಪುವ ವೇಳೆಗೆ ಜನಜಾತ್ರೆ.
ವಿದ್ಯಾರ್ಥಿಯಾಗಿದ್ದ ನಾನು ಈ ಗದ್ದಲದೊಳಗೆ ಹೇಗೋ ನುಸುಳಿಕೊಂಡು ಪುರಭವನದೊಳಗೆ ಹೋಗಿ ಆರನೇ ಸಾಲಿನಲ್ಲಿ ಕುಳಿತೆ. ಅಲ್ಲಿಯವರೆಗಿನ ಸಾಲುಗಳನ್ನೆಲ್ಲ ದಾರಕಟ್ಟಿ ಕಾಯ್ದಿರಿಸಿದ್ದರು. ರಾಷ್ಟ್ರಕವಿ ಕುವೆಂಪು, ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್, ಕೆ.ವಿ. ಶಂಕರೇಗೌಡ, ದೇಜಗೌ ಹೀಗೆ ಗಣ್ಯಾತಿಗಣ್ಯರ ದಂಡೇ ಮಂಗಳ ವಾದ್ಯದೊಂದಿಗೆ ಸಭಾಂಗಣದೊಳಗೆ ಪ್ರವೇಶಿಸಿತು. ಒಂದು ಕ್ಷಣ ನನ್ನನ್ನು ಹೊರಗಟ್ಟುತ್ತಾರೇನೋ ಎಂಬ ಭಯ ಕಾಡಿತು. ಕುವೆಂಪು ಅವರ ದಯದಿಂದ ಹಾಗಾಗಲಿಲ್ಲ.
ಕುವೆಂಪು ಅವರ ಸಮೀಪ ದರ್ಶನ ನನ್ನನ್ನು ಪುಳಕಗೊಳಿಸಿತ್ತು. ವೇದಿಕೆಯ ಮೇಲೆ ಕುಳಿತಿದ್ದ ಎಲ್ಲರಿಗಿಂತ ಕುವೆಂಪು ಆಕರ್ಷಕರಾಗಿ ಕಂಡರು. ನಾನು ಮನಸ್ಸಿನಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಎತ್ತರ, ಕಾಂತಿಯುತ ಗಂಭೀರ ಮುಖಭಾವ, ಹೊಳೆಯುವ ಕಣ್ಣುಗಳು, ಲವಲವಿಕೆಯ ಲಕ್ಷಣಗಳು, ವಿಶೇಷವಾದ ಹೇರ್ಸ್ಟೈಲ್. ಉಳಿದವರೆಲ್ಲ ಕಾಂತಿಹೀನರಂತೆ ಕಂಡರು. ಅಂದು ಕಂಡ ಕುವೆಂಪು ನನ್ನ ಮನಸ್ಸಿನಲ್ಲಿ ಹಾಗೆಯೇ ಉಳಿದಿದ್ದಾರೆ.
ನಂತರ 1983ರಲ್ಲಿ ದೇಜಗೌ, ಚದುರಂಗ ಮತ್ತು ಶ್ರೀಕಷ್ಣ ಆಲನಹಳ್ಳಿ ಅವರು ‘ಉದಯರವಿ’ಗೆ ಕರೆದೊಯ್ದು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿದ್ದ ನನ್ನನ್ನು ಪರಿಚಯಿಸಿದರು. ನಂತರ ಒಬ್ಬನೇ ಹೋಗಿ ಹಲವಾರು ಬಾರಿ ಅವರನ್ನು ಭೇಟಿಯಾದೆ, ಮಾತಾಡಿದೆ. ಅವರ ಕೃತಿಗಳ ಬಗ್ಗೆ ಅವರಿಂದಲೇ ತಿಳಿದಿದ್ದೆ. ಧನ್ಯತೆಯ ಕ್ಷಣಗಳವು.
ಮೊತ್ತಮೊದಲ ಪಂಪ ಪ್ರಶಸ್ತಿ ಕುವೆಂಪು ಅವರಿಗೆ ಬಂದ ಸಂದರ್ಭ. ಆ ವಿಷಯವನ್ನು ತಿಳಿಸುವ, ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಇಡೀ ಸಮಾರಂಭ ನಿರ್ವಹಿಸುವ ಅವಕಾಶ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕನಾಗಿ ನನ್ನ ಪಾಲಿಗೆ ಒದಗಿದ್ದು ನನ್ನ ಸೌಭಾಗ್ಯ. ಎಸ್.ಆರ್. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಆ ದಿನಗಳಲ್ಲಿ ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮ ಸದಾ ನೆನಪಿನಲ್ಲಿ ಉಳಿಯುವಂಥದ್ದು. ಪಂಪ ಪ್ರಶಸ್ತಿ ಪಡೆದಿದ್ದ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಕಡಿಮೆ ದರದಲ್ಲಿ ಪುನರ್ ಮುದ್ರಣ ಮಾಡಲು ಸರಕಾರ ತೀರ್ಮಾನಿಸಿತು. ಅದಕ್ಕಾಗಿ ರಾಷ್ಟ್ರಕವಿಯ ಅನುಮತಿಗೆ ಭೇಟಿಯಾದೆ. ಒಪ್ಪಿದರು.
ನಾವಿಬ್ಬರೇ ಇದ್ದೆವು. ಬಹಳ ಮೃದುವಾಗಿ ‘ನನ್ನದೊಂದು ಸಣ್ಣ ಕೋರಿಕೆಯಿದೆ’ ಎಂದರು. ಒಬ್ಬ ಮಹಾನ್ ಕವಿ ಈ ರೀತಿ ಕೋರಿಕೆ ಎಂಬ ಪದ ಬಳಸಿದ್ದು ನನಗೆ ತುಂಬಾ ಮುಜುಗರವಾಯಿತು. ನಾನು ಮೌನವಾಗಿ ಕುಳಿತೆ. ಮುಂದುವರಿಸಿ ಹೇಳಿದರು. ‘‘ನನ್ನ ರಾಮಾಯಣ ದರ್ಶನಂ ಕೃತಿ ಯಾವುದೇ ಮುದ್ರಣ ದೋಷವಿಲ್ಲದೆ ಅಚ್ಚಾಗಬೇಕೆಂಬುದು ನನ್ನ ಅಪೇಕ್ಷೆ’’ ಎಂದರು.
ನನಗೋ ಮುದ್ರಣದ ಬಗ್ಗೆ ಮೂರುಕಾಸಿನ ಜ್ಞಾನವಿರಲಿಲ್ಲ. ಆದರೂ ನನ್ನ ಪ್ರೀತಿಯ ಕವಿಯ ಆಸೆ ಈಡೇರಿಸುತ್ತೇನೆಂದು ಮಾತುಕೊಟ್ಟೆ. ನಂತರ ದೇಜಗೌ ಅವರಿಗೆ ನನ್ನ ಪರಿಸ್ಥಿತಿ ತಿಳಿಸಿದೆ. ಅವರು ಮೈಸೂರಿನ ದಾಸೇಗೌಡ ಎಂಬವರನ್ನು ಕರಡು ತಿದ್ದಲು ವ್ಯವಸ್ಥೆ ಮಾಡಿಕೊಟ್ಟರು. ಚಿಂತಾಮಣಿ ಪ್ರಿಂಟರ್ಸ್ ಮಾಲಕರೊಡನೆ ಈ ಬಗ್ಗೆ ತಿಳಿಸಿದೆ. ಅವರೂ ಸಹ ಕವಿಯ ಆಶಯಕ್ಕೆ ತಕ್ಕಂತೆ ಪ್ರಿಂಟ್ ಮಾಡಿಕೊಡಲು ಸನ್ನದ್ಧರಾದರು. ಎಲ್ಲರ ಬಯಕೆ ಮತ್ತು ಸಹಾಯದಿಂದ ಪುನರ್ ಮುದ್ರಣವಾದ ರಾಮಾಯಣ ದರ್ಶನಂ ಕೃತಿ ಹೊರಬಂತು. ಅಳುಕಿನಿಂದ ನಾನೇ ಕುವೆಂಪು ಅವರಿಗೆ ಕೊಟ್ಟುಬಂದೆ.
ಸುಮಾರು ಒಂದು ವಾರದ ನಂತರ ನನ್ನ ಕಚೇರಿಗೆ ಒಂದು ಪೋಸ್ಟ್ ಕಾರ್ಡ್ ಬಂತು. ನನ್ನ ಪಿ.ಎ. ಲೀಲಾವತಿಯವರು ‘ಸಾರ್ ಕುವೆಂಪು ಅವರು ಕಾಗದ ಬರೆದಿದ್ದಾರೆ’ ಎಂದರು. ‘ರಾಮಾಯಣ ದರ್ಶನಂ ಕೃತಿಯನ್ನು ಯಾವುದೇ ಮುದ್ರಣ ದೋಷವಿಲ್ಲದೆ ಅಚ್ಚುಮಾಡಿಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ’ ಎಂದು ಬರೆದಿದ್ದರು. ಹೃದಯ-ಮನಸ್ಸು ತುಂಬಿಬಂದಿತ್ತು. ನಿಜವಾಗಿ ನಾನು ಅವರಿಗೆ ಕೃತಜ್ಞನಾಗಿದ್ದೆ.







