ಮೂಲಸೌಲಭ್ಯಗಳ ಕೊರತೆ: ತಾಲೂಕು ಆಡಳಿತ ಸೌಧದಲ್ಲಿ ಅವ್ಯವಸ್ಥೆ
ಶೌಚಾಲಯ, ಸ್ವಚ್ಛತೆ, ವಾಹನ ನಿಲುಗಡೆ ಸಮಸ್ಯೆ; ಸಾರ್ವಜನಿಕರ ಪರದಾಟ

ಹರಪನಹಳ್ಳಿ: ಸರಕಾರದ ವಿವಿಧ ಸೇವೆ ಹಾಗೂ ಯೋಜನೆಗಳಿಗಾಗಿ ಪ್ರತಿನಿತ್ಯ ನೂರಾರು ಸಾರ್ವಜನಿಕರು ಭೇಟಿ ನೀಡುವ ಹರಪನಹಳ್ಳಿ ತಾಲೂಕು ಆಡಳಿತ ಸೌಧದಲ್ಲೇ ಮೂಲಸೌಲಭ್ಯಗಳ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಆಡಳಿತ ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿರುವ ಆಡಳಿತ ಸೌಧದಲ್ಲಿ ಸಾರ್ವಜನಿಕರಿಗೆ ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಗಂಭೀರ ಸಮಸ್ಯೆಯಾಗಿದೆ. ವಿವಿಧ ಕೆಲಸಗಳಿಗಾಗಿ ದೂರದ ಗ್ರಾಮಗಳಿಂದ ಆಗಮಿಸುವ ಮಹಿಳೆಯರು, ವೃದ್ಧರು ಸೇರಿದಂತೆ ಸಾರ್ವಜನಿಕರು ಶೌಚಾಲಯದ ಕೊರತೆಯಿಂದ ತೊಂದರೆ ಅನುಭವಿಸುವಂತಾಗಿದೆ.
ಆವರಣದಲ್ಲೇ ಅನೈರ್ಮಲ್ಯ :
ಆಡಳಿತ ಸೌಧದ ಆವರಣದಲ್ಲಿ ಸಮರ್ಪಕವಾಗಿ ಸ್ವಚ್ಛತೆ ನಿರ್ವಹಣೆ ಮಾಡದ ಪರಿಣಾಮ ಕಸ, ಖಾಲಿ ನೀರಿನ ಬಾಟಲಿಗಳು ಸೇರಿದಂತೆ ತ್ಯಾಜ್ಯ ವಸ್ತುಗಳು ಅಲ್ಲಲ್ಲಿ ಬಿದ್ದಿರುವುದು ಕಂಡುಬರುತ್ತಿದೆ. ಇದರಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಸಾರ್ವಜನಿಕರ ಆರೋಗ್ಯದ ಬಗ್ಗೆಯೂ ಆತಂಕ ಮೂಡಿಸಿದೆ.
ತಹಶೀಲ್ದಾರ್ ಕಚೇರಿ ಪಕ್ಕದ ಆವರಣದಲ್ಲೂ ಅನೈರ್ಮಲ್ಯ ಮುಂದುವರಿದಿದ್ದು, ಕಚೇರಿ ಗೋಡೆಯನ್ನೇ ಕೆಲವರು ಮೂತ್ರ ವಿಸರ್ಜನೆಗೆ ಬಳಸುವ ಸ್ಥಿತಿ ನಿರ್ಮಾಣವಾಗಿದೆ. ಇದು ಆಡಳಿತ ಸೌಧದ ಸ್ವಚ್ಛತಾ ನಿರ್ವಹಣೆಯ ಸ್ಥಿತಿಯನ್ನು ಎತ್ತಿತೋರಿಸುತ್ತಿದೆ.
ವಾಹನ ನಿಲುಗಡೆಗೂ ವ್ಯವಸ್ಥೆಯಿಲ್ಲ :
ಆಡಳಿತ ಸೌಧಕ್ಕೆ ಆಗಮಿಸುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುವಂತಾಗಿದೆ. ಇದರಿಂದ ಆವರಣದಲ್ಲಿ ಸಂಚಾರಕ್ಕೆ ಅಡಚಣೆಯಾಗುವುದರ ಜತೆಗೆ ಸಾರ್ವಜನಿಕರಿಗೆ ಮತ್ತಷ್ಟು ಅನಾನುಕೂಲ ಉಂಟಾಗುತ್ತಿದೆ.
ಸರಕಾರದ ವಿವಿಧ ಇಲಾಖೆಗಳ ಸೇವೆ ಪಡೆಯಲು ತಾಲೂಕು ಆಡಳಿತ ಸೌಧಕ್ಕೆ ಬರುವ ಜನರಿಗೆ ಕನಿಷ್ಠ ಮೂಲಸೌಲಭ್ಯಗಳನ್ನೂ ಒದಗಿಸದಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಶೌಚಾಲಯ, ಸ್ವಚ್ಛತೆ ಹಾಗೂ ವಾಹನ ನಿಲುಗಡೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ತಕ್ಷಣ ಕಲ್ಪಿಸಿ, ಸಾರ್ವಜನಿಕರಿಗೆ ಅನುಕೂಲಕರ ವಾತಾವರಣ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲೂಕು ಆಡಳಿತಸೌಧಕ್ಕೆ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಹಿನ್ನೆಲೆಯಲ್ಲಿ ಅವರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಆಡಳಿತದ ಜವಾಬ್ದಾರಿಯಾಗಿದೆ. ಶೌಚಾಲಯ, ಸ್ವಚ್ಛತೆ ಹಾಗೂ ವಾಹನ ನಿಲುಗಡೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಗಮನ ಹರಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಕ್ರಮ ವಹಿಸಲಾಗುವುದು.
-ಬಿ.ವಿ. ಗಿರೀಶ್ ಬಾಬು, ತಹಶೀಲ್ದಾರ್, ಹರಪನಹಳ್ಳಿ
ಆಡಳಿತ ಸೌಧದಲ್ಲಿ ಸಮರ್ಪಕ ಶೌಚಾಲಯವಿಲ್ಲದೆ ಕಚೇರಿಯ ಗೋಡೆಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಕೂಡಲೇ ತಹಶೀಲ್ದಾರ್ ಅಗತ್ಯ ಕ್ರಮ ಕೈಗೊಂಡು ನಗರಸಭೆಯಿಂದ ನಿರ್ಮಿಸಿರುವ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಆವರಣದಲ್ಲಿ ಸ್ವಚ್ಛತೆ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು.
-ಬಡಗಿ ರೆಹಮತುಲ್ಲಾ, ಸ್ಥಳೀಯ ನಿವಾಸಿ
ಆಡಳಿತ ಸೌಧದ ಆವರಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆಯಿಂದ ಶೌಚಾಲಯ ನಿರ್ಮಿಸಲಾಗಿದೆ. ಸದ್ಯ ನೀರಿನ ಸಂಪರ್ಕದ ವ್ಯವಸ್ಥೆ ಪೂರ್ಣಗೊಳ್ಳಬೇಕಿದೆ. ಮುಂದಿನ 10 ದಿನಗಳೊಳಗೆ ಅಗತ್ಯ ನೀರಿನ ವ್ಯವಸ್ಥೆ ಕಲ್ಪಿಸಿ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು. ಶೌಚಾಲಯದ ಸ್ವಚ್ಛತೆ ಹಾಗೂ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ರೇಣುಕಾ ಎಸ್. ದೇಸಾಯಿ, ನಗರಸಭೆ ಆಯುಕ್ತೆ, ಹರಪನಹಳ್ಳಿ






