ಬಿಎಲ್‌ಒಗಳಿಗೆ ತರಬೇತಿ ಕೊರತೆ: 750 ಮತದಾರರಿಗೆ ನೋಟಿಸ್
ಅವೈಜ್ಞಾನಿಕ ಎಸ್‌ಐಆರ್ ರದ್ದುಪಡಿಸಲು ಆಗ್ರಹ

ಬೆಂಗಳೂರು, ಸೆ.10: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರು ಗಣತಿ ನಮೂನೆಯಲ್ಲಿ ನೀಡಿರುವ ಮಾಹಿತಿಯನ್ನು ಬಿಎಲ್‌ಒಗಳು ಬಿಎಲ್‌ಒ ಆ್ಯಪ್‌ನಲ್ಲಿ ಸರಿಯಾಗಿ ಡಿಜಿಟಲೀಕರಣ ಮಾಡದ ಕಾರಣ, ಯಶವಂತಪುರದ ಬೂತ್‌ವೊಂದರಲ್ಲಿ ನೋಟಿಸ್ ಪಟ್ಟಿಯಲ್ಲಿರುವ 750 ಮತದಾರರೂ ಅನ್‌ಮ್ಯಾಪ್ಡ್ ವರ್ಗದಲ್ಲಿ ಎಸ್‌ಐಆರ್ ನೋಟಿಸ್ ಪಡೆದುಕೊಳ್ಳಲಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಯಶವಂತಪುರ ಕ್ಷೇತ್ರದಲ್ಲಿ ಈ ಹಿಂದೆ 339ನೇ ಸಂಖ್ಯೆಯಲ್ಲಿದ್ದ, ಇದೀಗ 340ನೇ ಬೂತ್ ಆಗಿರುವ ಮತಗಟ್ಟೆಯಲ್ಲಿ ಒಟ್ಟು 893 ಮತದಾರರಿದ್ದಾರೆ. ಈ ಪೈಕಿ ಬರೋಬ್ಬರಿ ಬೂತ್‌ನ ಶೇ.84ರಷ್ಟು ಮತದಾರರು ಅನ್‌ಮ್ಯಾಪ್ಡ್ ವರ್ಗಕ್ಕೆ ಒಳಗಾಗಿದ್ದಾರೆ. ಸಂತ್ರಸ್ತ ಮತದಾರರ ಪ್ರಕಾರ, ಈ ಮತದಾರರು 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಗಣತಿ ನಮೂನೆಯಲ್ಲಿ ಭರ್ತಿ ಮಾಡಿ ಬಿಎಲ್‌ಒಗಳಿಗೆ ಸಲ್ಲಿಸಿದ್ದರು. ಆದಾಗ್ಯೂ, ಆ ಮಾಹಿತಿಯನ್ನು ಬಿಎಲ್‌ಒ ಮಟ್ಟದಲ್ಲಿ ಸರಿಯಾಗಿ ಡಿಜಿಟಲೀಕರಣ ಮಾಡದ ಕಾರಣ ಅನ್‌ಮ್ಯಾಪ್ಡ್ ಪಟ್ಟಿಗೆ ಹೆಸರುಗಳು ಸೇರ್ಪಡೆಯಾಗಿವೆ ಎಂದು ಸಂತ್ರಸ್ತ ಮತದಾರರು ಆರೋಪ ಮಾಡಿದ್ದಾರೆ.
ಇದೀಗ ಯಾವುದೇ ತಪ್ಪು ಮಾಡದ ಮತದಾರರು ನೋಟಿಸ್ ಪಡೆದು ಅಗತ್ಯ ದಾಖಲೆಗಳೊಂದಿಗೆ ಚುನಾವಣಾ ನೋಂದಣಾಧಿಕಾರಿ (ಇಆರ್‌ಒ) ಮುಂದೆ ಹಾಜರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮತದಾರರೊಬ್ಬರು ಬಿಎಲ್‌ಒ ವಿರುದ್ಧ ಇಆರ್‌ಒಗೆ ದೂರು ಸಲ್ಲಿಸಿದ್ದು, ಗಣತಿ ನಮೂನೆಗಳನ್ನು ಸಲ್ಲಿಸಿದ ಹೊರತಾಗಿಯೂ ತಮ್ಮನ್ನು ಅನ್‌ಮ್ಯಾಪಡ್ ಎಂದು ಗುರುತಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತದಾರರ ಪ್ರಕಾರ, ಡಿಜಟಲೀಕರಣ ಮಾಡುವ ಸಂದರ್ಭದಲ್ಲಿ ಬಿಎಲ್‌ಒ ಬಳಸುತ್ತಿದ್ದ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಸಮಸ್ಯೆ ಉಂಟಾಗಿದೆ ಎಂದು ಬಿಎಲ್‌ಒ ತಿಳಿಸಿದ್ದಾರೆ. ಆದರೆ, ಅದರ ಪರಿಣಾಮವನ್ನು ಈಗ ಮತದಾರರು ಅನುಭವಿಸುವಂತಾಗಿದೆ. ನೂರಾರು ಮಂದಿ ದಾಖಲೆಗಳನ್ನು ಸಂಗ್ರಹಿಸಿಕೊಂಡು ಇಆರ್‌ಒ ಮುಂದೆ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಎಸ್‌ಐಆರ್ ಪ್ರಕ್ರಿಯೆ ಆರಂಭಿಸುವ ಮುನ್ನ ಬಿಎಲ್‌ಒಗಳಿಗೆ ಅಗತ್ಯ ಮತ್ತು ಸಮರ್ಪಕ ತರಬೇತಿ ನೀಡದಿರುವುದೇ ಇಂತಹ ಸಮಸ್ಯೆಗಳಿಗೆ ಕಾರಣ ಎಂದು ಸಂತ್ರಸ್ತ ಮತದಾರರು ಹಾಗೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಎಸ್‌ಐಆರ್ ಪ್ರಕ್ರಿಯೆ ಮತ್ತು ತಾಂತ್ರಿಕ ವ್ಯವಸ್ಥೆಯಲ್ಲಿನ ದೋಷ ಅಥವಾ ಸಿಬ್ಬಂದಿಯ ಮಟ್ಟದಲ್ಲಿ ಉಂಟಾಗುವ ತಪ್ಪುಗಳಿಗೆ ಮತದಾರರನ್ನು ಹೊಣೆ ಮಾಡುವುದು ಎಷ್ಟು ಸಮಂಜಸ ಎಂದು ಜಾಗೃತ ಕರ್ನಾಟಕ ಸಂಘಟನೆಯ ಪದಾಧಿಕಾರಿ ಮುತ್ತುರಾಜು ಪ್ರಶ್ನಿಸಿದ್ದಾರೆ.
ಒಂದು ಬೂತ್‌ನಲ್ಲೇ 893 ಮತದಾರರ ಪೈಕಿ 750 ಮಂದಿ ಅನ್‌ಮ್ಯಾಪ್ಡ್ ಆಗಿರುವುದು ಎಸ್‌ಐಆರ್ ಪ್ರಕ್ರಿಯೆಯಲ್ಲಿನ ತಾಂತ್ರಿಕ ಹಾಗೂ ಆಡಳಿತಾತ್ಮಕ ಲೋಪಗಳಿಗೆ ಉದಾಹರಣೆಯಾಗಿದೆ. ಮತದಾರರು ಈಗ ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಲು ದಾಖಲೆಗಳೊಂದಿಗೆ ಅಧಿಕಾರಿಗಳ ಮುಂದೆ ಹಾಜರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆ. ಮತದಾರರ ಮೇಲೆ ಇಂತಹ ಹೆಚ್ಚುವರಿ ಹೊರೆ ಹಾಕುವುದನ್ನು ತಪ್ಪಿಸಲು, ಬಿಎಲ್‌ಒಗಳು ಸಲ್ಲಿಸಿದ ಗಣತಿ ನಮೂನೆಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಅಧಿಕಾರಿಗಳೇ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
‘ಯಶವಂತಪುರ ಕ್ಷೇತ್ರದ 339ನೇ ಬೂತ್ ಮತದಾರನಾದ ನಾನು ಬಿಎಲ್‌ಒ ಚಂದ್ರಶೇಖರ್ ಎನ್. ಎನ್ನುವರಿಗೆ ಗಣತಿ ನಮೂನೆ ತುಂಬಿ ಕೊಟ್ಟಿರುತ್ತೇನೆ. ಅದರಲ್ಲಿ ನನ್ನ ಪ್ರೊಜಿನಿ ಮ್ಯಾಪಿಂಗ್ ಕಾಲಂನಲ್ಲಿ ನನ್ನ ತಂದೆಯ 2002ರ ಮತದಾರರ ಪಟ್ಟಿಯ ವಿವರಗಳನ್ನು ತುಂಬಿರುತ್ತೇನೆ. ಆದರೆ ಬಿಎಲ್‌ಒ ತನ್ನ ಆಪ್‌ನಲ್ಲಿ 2002ರ ಮಾಹಿತಿ ತುಂಬದೇ ಖಾಲಿ ಬಿಟ್ಟಿದ್ದಾರೆ. ಅವರು ಮಾಡಿದ ತಪ್ಪಿನಿಂದಾಗಿ ನನಗೆ ಮತ್ತು ನನ್ನ ಬೂತ್‌ನ ಎಲ್ಲ 750 ಮತದಾರರಿಗೂ ಅನ್‌ಮ್ಯಾಪಡ್ ಹೆಸರಿನಲ್ಲಿ ನೋಟಿಸ್ ನೀಡಲಾಗಿದೆ. ನಾವು ಮಾಡದ ತಪ್ಪಿಗೆ ಈ ಶಿಕ್ಷೆ ಸರಿಯೇ? ಹಾಗಾಗಿ ನಮಗ್ಯಾರಿಗೂ ನೋಟಿಸ್ ನೀಡದೇ, ನಮ್ಮ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಬೇಕು ಮತ್ತು ಈ ತಪ್ಪು ಎಸಗಿದ ಬಿಎಲ್‌ಒ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ನೋಟಿಸ್ ಸಂತ್ರಸ್ತ ಮತದಾರ ದೇವು ಪತ್ತಾರ ಇಆರ್‌ಒಗೆ ದೂರು ನೀಡಿದ್ದಾರೆ.
ಮತದಾರರು 2002ರ ಮಾಹಿತಿ ತುಂಬಿದ್ದರೂ, 750 ಜನರಿಗೆ ಅನ್‌ಮ್ಯಾಪ್ಡ್ ಎಂದು ಬಂದಿರುವುದಕ್ಕೆ ಬಿಎಲ್‌ಒಗಳಿಗೆ ಎಸ್‌ಐಆರ್ ಪೂರ್ವದಲ್ಲಿ ಸರಿಯಾಗಿ ತರಬೇತಿ ನೀಡದಿರುವುದೇ ನೇರ ಕಾರಣ. ಚು.ಆಯೋಗದ ಅಸಡ್ಡೆಯ ಕಾರಣಕ್ಕೆ ಈಗ ಆ 750 ಮತದಾರರು ತಮ್ಮ ಕೆಲಸ ಬಿಟ್ಟು ನೋಟಿಸ್ ತೆಗೆದುಕೊಳ್ಳಲು ಒಂದು ದಿನ, ದಾಖಲೆ ಸಿದ್ಧಪಡಿಸಲು ಹಲವು ದಿನ ಮತ್ತು ವಿಚಾರಣೆಗೆ ಹಾಜರಾಗಲು ಒಂದು ದಿನ ವ್ಯಯಿಸಬೇಕಿದೆ. ಆಯೋಗದ ಅಸಮರ್ಥತೆಯಿಂದ ಮತದಾರರು ಸಂಕಷ್ಟ ಅನುಭವಿಸುದನ್ನು ಹೇಗೆ ಒಪ್ಪಲು ಸಾಧ್ಯ? ಹಾಗಾಗಿ ಅಷ್ಟು ಜನರಿಗೆ ವಿಚಾರಣೆ ಮತ್ತು ದಾಖಲೆ ನೀಡುವುದಕ್ಕೆ ವಿನಾಯಿತಿ ನೀಡಬೇಕು.
-ಮುತ್ತುರಾಜು ಪದಾಧಿಕಾರಿ, ಜಾಗೃತ ಕರ್ನಾಟಕ






