ಹೂಳು ತುಂಬಿದ ಲಕ್ಯಾ ಡ್ಯಾಂ

ಮಂಗಳೂರು : ಕುದುರೆಮುಖ ಎಂದರೆ ಕೇವಲ ಚಾರಣ, ವನ್ಯಧಾಮ ಮಾತ್ರವಲ್ಲ. ಹಸಿರು ತುಂಬಿ ಕೊಂಡು ನಳನಳಿಸುತ್ತಿರುವ ಈ ಪ್ರಕೃತಿಯ ಒಡಲಿನ ಪ್ರಮುಖ ಆಕರ್ಷಣೆಗಳಲ್ಲಿ ಲಕ್ಯಾ ಡ್ಯಾಂ ಪಾತ್ರ ವಹಿಸಿದೆ. ಆದರೆ, ಸದ್ಯ ಇದು ಹೆಸರಿಗೆ ಮಾತ್ರ ಅಣೆಕಟ್ಟಾಗಿದೆ. ಮಳೆಗಾಲದಲ್ಲೂ ಈ ಅಣೆಕಟ್ಟಿನಲ್ಲಿ ನೀರು ಕಾಣಸಿಗದು. ಸದ್ಯ ಹೂಳು ತುಂಬಿಕೊಂಡು ಮರಗಳು ಬೆಳೆದು ಕಿರು ಅರಣ್ಯವಾಗಿ ಈ ಡ್ಯಾಂ ಗೋಚರಿಸುತ್ತಿದ್ದರೂ ಇಂದಿಗೂ ಪ್ರವಾಸಿಗರ ಆಕರ್ಷಣೀಯ ತಾಣವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಭದ್ರಾ ನದಿಯ ಉಪನದಿಯಾದ ಲಕ್ಯಾ ನದಿ ಪಾತ್ರದಲ್ಲಿ ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ ಲಿಮಿಡೆಟ್ (ಕೆಐಒಸಿಎಲ್)ಗೆ 1973ರಲ್ಲಿ ಅರಣ್ಯ ಇಲಾಖೆಯು 3,300 ಎಕರೆ ಪ್ರದೇಶವನ್ನು 30 ವರ್ಷಗಳ ಲೀಸ್ ಆಧಾರದಲ್ಲಿ ಗಣಿಗಾರಿಕೆಗೆ ಗುತ್ತಿಗೆ ನೀಡಿತ್ತು. 1976ರಲ್ಲಿ ಕೆಐಒಸಿಎಲ್‌ನಿಂದ ಅದಿರು ಸಂಸ್ಕರಣಾ ಸ್ಥಾವರ ಸ್ಥಾಪನೆಯಾಗಿ 1980ರಲ್ಲಿ ಅದಿರನ್ನು ಬಗ್ಗಡ ರೂಪಕ್ಕೆ ತಂದು ಗುರುತ್ವದ ಆಧಾರದಲ್ಲಿ ಪೈಪ್‌ಗಳ ಮೂಲಕ ಮಂಗಳೂರಿಗೆ ರವಾನಿಸುವ ತಂತ್ರಜ್ಞಾನ ಅಳವಡಿಸಲಾಗಿತ್ತು. 1987ರಲ್ಲಿ ಕಬ್ಪಿಣದ ಅದಿರನ್ನು ಉಂಡೆರೂಪಕ್ಕೆ ತರುವ 3 ದಶಕಲಕ್ಷ ಟನ್ ಸಾಮರ್ಥ್ಯದ ಸ್ಥಾವರ ಸ್ಥಾಪಿಸಲಾಗಿದ್ದು, ವಾರ್ಷಿಕ 20 ಲಕ್ಷ ಟನ್ ಅದಿರು ಗಣಿಗಾರಿಕೆ ನಡೆಸಲಾಗುತ್ತಿತ್ತು. ಈ ರೀತಿ ಸಾಂದ್ರೀಕೃತ ಅದಿರು ತೆಗೆದ ಬಳಿಕ ಉಳಿದ ತ್ಯಾಜ್ಯವನ್ನು ಸಂಗ್ರಹಿಸುವುದಕ್ಕಾಗಿ ಈ ಲಕ್ಯಾ ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಪೂರ್ವ ನಿಗದಿ ಪ್ರಕಾರ 1999ಕ್ಕೆ ಮುಗಿಯಬೇಕಿದ್ದ ಅದಿರು ಗಣಿಗಾರಿಕೆ ಮುಂದುವರಿದ ಕಾರಣ ಮಲೆನಾಡಿನಲ್ಲಿ ಗಣಿಗಾರಿಕೆ ವಿರೋಧಿ ಆಂದೋಲನ ಆರಂಭವಾಗಿ ಪರಿಸರ ಪ್ರೇಮಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಂದರ್‌ಲಾಲ್ ಬಹುಗುಣ, ಮಹೇಂದ್ರ ಸಿಂಗ್ ಟಿಕಾಯತ್, ಮೇಧಾ ಪಾಟ್ಕರ್, ಡಾ.ಶಿವರಾಮ ಕಾರಂತ, ಡಾ.ಯು.ಆರ್.ಅನಂತಮೂರ್ತಿ, ಕೆ.ವಿ.ಸುಬ್ಬಣ ಮೊದಲಾದವರು ಗಣಿಗಾರಿಕೆ ವಿರೋಧಿ ಆಂದೋಲನದಲ್ಲಿ ಭಾಗಿಯಾಗಿದ್ದರು. ಅಂತಿಮವಾಗಿ 2005ರ ಡಿಸೆಂಬರ್ 31ಕ್ಕೆ ಸುಪ್ರೀಂ ಕೋರ್ಟ್ ಆದೇಶದಂತೆ ಕುದುರೆಮುಖದ ಕೆಐಒಸಿಎಲ್‌ನ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು.
ಕೆಐಒಸಿಎಲ್‌ನಿಂದ ಕಬ್ಬಿಣದ ಅದಿರು ಗಣಿಗಾರಿಕೆಯ ಉಚ್ಛ್ರಾಯ ಸ್ಥಿತಿಯಲ್ಲಿ ಈ ಅಣೆಕಟ್ಟು ಕೂಡಾ ಕೈಗಾರಿಕಾ ಅಭಿವೃದ್ದಿಯ ಸಂಕೇತವಾಗಿಯೇ ಗುರುತಿಸಲ್ಪಡುತ್ತಿತ್ತು. ಆದರೆ 2005ರಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ನಂತರ ಲಕ್ಯಾ ಡ್ಯಾಂನ ಕಾರ್ಯನಿರ್ವಹಣೆಯೂ ನನೆಗುದಿಗೆ ಬಿದ್ದಿದೆ. ಹೀಗೆ ಹೂಳು ತುಂಬುತ್ತಾ ಸಾಗಿದ ಈ ಅಣೆಕಟ್ಟಿನಲ್ಲಿ ಮರಗಳು ಬೆಳೆದು ಇದೀಗ ಅಣೆಕಟ್ಟಿನ ಒಂದು ಭಾಗ ಕಿರು ಅರಣ್ಯವಾಗಿಯೇ ಗೋಚರಿಸಲ್ಪಡುತ್ತದೆ. ಕಣ್ಣು ಉದ್ದಕ್ಕೆ ಹಾಯಿಸಿದಷ್ಟು ಕೇವಲ ಹಸಿರು ಮರಗಳು ಮಾತ್ರವೇ ಕಾಣುತ್ತಿದ್ದು, ನೀರು ಕಾಣಸಿಗದು. ಕೆಐಒಸಿಎಲ್‌ನಿಂದ ಇಲ್ಲಿ ಗಣಿಗಾರಿಕೆ ನಿಷೇಧಗೊಂಡ ಬಳಿಕವೂ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದ್ದ ಲಕ್ಯಾ ಡ್ಯಾಂಗೆ ಜೀವ ವೈವಿಧ್ಯದ ಹಿತರಕ್ಷಣೆಯ ದೃಷ್ಟಿಯಿಂದ ಸದ್ಯ ಸಾರ್ವಜನಿಕ ಪ್ರವೇಶವನ್ನೂ ನಿಷೇಧಿಸಲಾಗಿದೆ. 340 ಹೆಕ್ಟೇರ್ ವ್ಯಾಪ್ತಿಯಲ್ಲಿರುವ ಈ ಅಣೆಕಟ್ಟಿನಲ್ಲಿ ಸುಮಾರು 200 ಹೆಕ್ಟೇರ್‌ನಷ್ಟು ಹೂಳು ತುಂಬಿಕೊಂಡಿದೆ. 100 ಮೀಟರ್ ಎತ್ತರವಿರುವ ಈ ಅಣೆಕಟ್ಟು ಹಿಂದೆ ನೀರಿನ ಬದಲು ಹೂಳು ತುಂಬಿದ ಮೈದಾನದಂತಿದ್ದರೆ, ಸದ್ಯ ಕಿರು ಅರಣ್ಯವಾಗಿ ಮಾರ್ಪಟ್ಟಿದೆ. ಹೂಳು ತುಂಬಿದ ಪ್ರದೇಶದಿಂದ ಉಳಿದ ಭಾಗದಲ್ಲಿ ಸ್ವಲ್ಪ ನೀರು ಗೋಚರಿಸುತ್ತದೆ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.
ಸದ್ಯ ಅಣೆಕಟ್ಟಿನ ಒಂದು ಭಾಗದಲ್ಲಿ ಕಿರು ಅರಣ್ಯದ ಸೃಷ್ಟಿಯಾಗಿದ್ದರೆ, ಇನ್ನೊಂದು ಭಾಗದಿಂದ ಕಣ್ಣಳತೆಯ ದೂರದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಬಗೆಯಲ್ಪಟ್ಟ ಪರ್ವತಗಳ ಶ್ರೇಣಿಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಗಣಿಗಾರಿಕೆ ನಿಂತು ಹಲವು ವರ್ಷಗಳೇ ಆಗಿರುವುದರಿಂದ ಅಗೆದು ಬಗೆದ ಗಿರಿಶಿಖರಗಳ ಒಡಲು ತುಂಬುತ್ತಿರುವುದು ಪ್ರಕೃತಿಯ ಸಂರಕ್ಷಣೆಯ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಸಂಗತಿ.
ಡ್ಯಾಂನ ಸುತ್ತಮುತ್ತ ಅರಣ್ಯ ವ್ಯಾಪ್ತಿ ಹೆಚ್ಚಾಗುತ್ತಿರುವುದು ಹಾಗೂ ವನ್ಯಜೀವಿಗಳ ಸಂತತಿ ವೃದ್ಧಿಯಾಗುತ್ತಿರುವುದು ಪರಿಸರ ಪುನಃಶ್ಚೇತನದ ಸಕಾರಾತ್ಮಕ ಬೆಳವಣಿಗೆ ಎಂಬುದಾಗಿ ಪರಿಸರ ತಜ್ಞರೂ ವಿಶ್ಲೇಷಿಸುತ್ತಾರೆ.
ಒಂದು ಕಾಲದಲ್ಲಿ ಕೆಐಒಸಿಎಲ್‌ನ ಆರ್ಥಿಕತೆ, ಭವ್ಯತೆಯ ಸಂಕೇತವಾಗಿದ್ದ, ಕೈಗಾರಿಕೆಯ ಇತಿಹಾಸದ ಗತ ವೈಭವಕ್ಕೆ ಸಾಕ್ಷಿಯಾಗಿದ್ದ ಲಕ್ಯಾ ಅಣೆಕಟ್ಟು ಪ್ರಕೃತಿಯೊಡನೆ ಲೀನವಾಗುತ್ತಾ ಸಾಗುತ್ತಿದೆ.
ಅಣೆಕಟ್ಟಿನ ವಿವರ
ಎತ್ತರ -100 ಮೀಟರ್
ಜಲಾನಯನ ಪ್ರದೇಶ-1,870 ಚ.ಕಿ.ಮೀ.
ಜಲಾನಯನ ವಿಸ್ತೀರ್ಣ- 572 ಚ.ಕಿ.ಮೀ.
ಪ್ರಮಾಣ 245 ಮಿ.ಘನ ಮೀ.
ಲಕ್ಯಾ ಡ್ಯಾಂನಿಂದ ಮಂಗಳೂರಿಗೆ ನೀರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾದಾ ಗಲೆಲ್ಲ ಲಕ್ಯಾದಿಂದ ಮಂಗಳೂರಿನ ಕೆಐಒಸಿಎಲ್ ಸಂಸ್ಥೆಗೆ ಅಳವಡಿಸಲಾಗಿರುವ 6 ಎಂಜಿಡಿ ಪೈಪ್‌ಲೈನ್ ಮೂಲಕ ನೀರು ಹರಿಸುವ ಚರ್ಚೆ ಮುನ್ನಲೆಗೆ ಬರುತ್ತದೆ. ಸುಪ್ರೀಂ ಕೋರ್ಟ್‌ನ ಸಮ್ಮತಿಯ ಮೇರೆಗೆ 2016ರಿಂದ ಮಂಗಳೂರು ನಗರದ ಉತ್ತರ ಭಾಗಕ್ಕೆ ಕುದುರೆಮುಖ ಪೈಪ್‌ಲೈನ್ ಮೂಲಕ ನೀರು ಹರಿಸುವ ಕಾರ್ಯವೂ ಆರಂಭಗೊಂಡಿತ್ತು. ಬಳಿಕ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾದಾಗಲೆಲ್ಲ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಲಕ್ಯಾ ಡ್ಯಾಂನಿಂದ ನೀರು ಹರಿಸುವ ಪ್ರಸ್ತಾವ ಚರ್ಚೆಯಾಗುತ್ತದೆ. ಆದರೆ ಸದ್ಯ ಅಣೆಕಟ್ಟಿನಿಂದ ನೀರು ಬಳಸಬೇಕಾದರೆ ಹೂಳು ತೆಗೆಯುವ ಕಾರ್ಯ ನಡೆಯುವುದು ಅಗತ್ಯವಾಗಿರುವಂತೆ ಗೋಚರಿಸುತ್ತದೆ.






