ರೈತರ ಭೂ ಸ್ವಾಧೀನ ಮತ್ತು ಸಿದ್ದು-1, ಸಿದ್ದು-2 ಸರ್ಕಾರಗಳ ಸೋಗಲಾಡಿ ಜನಪರತೆಗಳು

ಇದಿಷ್ಟು ನಿಮ್ಮ ಮಾಹಿತಿಗೆ -2013 ರಲ್ಲಿ ಸಾರ್ವತ್ರಿಕ ಚುನಾವಣೆಗೆ ಸ್ವಲ್ಪ ಮುನ್ನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ Right to Fair Compensation and Transparency in Land Acquisition, Rehabilitation and Resettlement Act, 2013 ಸಂಕ್ಷಿಪ್ತವಾಗಿ LARR ಕಾಯಿದೆಯನ್ನು ಜಾರಿಗೆ ತಂದಿತು. ಅದರ ಪ್ರಕಾರ ಇನ್ನು ಮುಂದೆ ರೈತರ ಭೂ ಸ್ವಾಧೀನ ಮಾಡಿಕೊಳ್ಳುವ ಮುನ್ನ :
1. Social Impact Study ಸಾಮಾಜಿಕ ಪರಿಣಾಮ ಅಧ್ಯಯನ ಮಾಡಿ, ಯೋಜನೆಯಿಂದಾಗುವ ವ್ಯತಿರಿಕ್ತ ಪರಿಣಾಮಗಳನ್ನು ಹೇಗೆ ತಡೆಗಟ್ಟುತ್ತೇವೆ ಎಂದು ಜನರ ಮುಂದೆ ಇಡಬೇಕಿತ್ತು.
2. ಯಾವುದೇ ಯೋಜನೆಗೆ ಶೇ. 70-80 ರಷ್ಟು ಸಂತ್ರಸ್ತರ ಒಪ್ಪಿಗೆ ಕಡ್ದಾಯ
3. ಪರಿಹಾರ ರೂಪದಲ್ಲಿ ಮಾರುಕಟ್ಟೆ ಬೆಲೆಯ ನಾಲ್ಕುಪಟ್ಟು ಪರಿಹಾರ ಧನ...
ಇವು ಪ್ರಮುಖ. ಇವಲ್ಲದೆ ಇನ್ನೂ ಹಲವು ಜನಪರ ಅಂಶಗಳಿದ್ದವು. (https://bhoomirashi.gov.in/auth/revamp/la_act.pdf)
-2014 ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ತನ್ನ ಕಾರ್ಪೊರೇಟ್ ಹಿತಾಸಕ್ತಿಗೆ ತಕ್ಕಂತೆ ಮೇಲಿನ ಮೂರು ಪ್ರಮುಖ ಜನಪರ ಅಂಶಗಳಿಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತಂದಿತು. ಎರಡು ಮೂರು ಬಾರಿ ಸುಗ್ರೀವಾಜ್ಞೆಗಳನ್ನೂ ತಂದು ಕೊನೆಗೆ ಆ ತಿದ್ದುಪಡಿಗಳನ್ನು ಲೋಕಸಭೆಯಲ್ಲಿ ಪಾಸು ಮಾಡಿಸಿಕೊಂಡಿತು. ಆದರೆ ರಾಜ್ಯ ಸಭೆಯಲ್ಲಿ ಅದಕ್ಕೆ ಅಗತ್ಯ ಬಹುಮತವಿರಲಿಲ್ಲವಾದ್ದರಿಂದ ಅದನ್ನು ಜೆಪಿಸಿ ಗೆ ಒಪ್ಪಿಸಲಾಯಿತು.
(https://prsindia.org/files/bills_acts/acts_parliament/2015/the-larr-(amendment)-ordinance,-2015.pdf)
-ಭೂ ಸ್ವಾಧೀನವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವುದರಿಂದ ಎಲ್ಲಾ ಬಿಜೆಪಿ ರಾಜ್ಯಗಳು LARR ಕಾಯಿದೆಯ ಮೇಲೆ ಹೇಳಿದ ಮೂರು ರೈತ ಪರ ಅಂಶಗಳು ಅನ್ವಯವಾಗದಂತಹ ತಿದ್ದುಪಡಿಗಳನ್ನು ಮಾಡಿ ತಮ್ಮ ಜನವಿರೋಧಿ - ಕಾರ್ಪೊರೇಟ್ ಲಾಭಕೋರತನವನ್ನು ಮುಂದುವರೆಸಿದವು.
-ಕರ್ನಾಟಕದಲ್ಲಿ 2013-2018ರವರೆಗೆ ಸಿದ್ದರಾಮಯ್ಯನವರ ನೇತೃತ್ವದ ಪೂರ್ಣ ಬಹುಮತದ ಕಾಂಗ್ರೆಸ್ ಸರ್ಕಾರವಿತ್ತು. 2013 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಜಾರಿಗೆ ತಂದಂತ ಜನಪರ ಭೂ ಸ್ವಾದೀನ ಕಾಯಿದೆಯಿತ್ತು. ಅಂದರೆ ಸಿದ್ದು ಸರ್ಕಾರಕ್ಕೆ ಮನಸ್ಸಿದ್ದರೆ ಜನಪರ ಭೂ ಸ್ವಾಧೀನ ಕಾಯಿದೆಯನ್ನು ಜಾರಿಗೆ ಮಾಡಿ ಮಾದರಿ ರಾಜ್ಯವಾಗಬಹುದಾಗಿತ್ತು. ಆದರೆ ಸಿದ್ದು ಸರ್ಕಾರ 2013-18 ರ ನಡುವೆ 5000 ಎಕರೆಗೂ ಹೆಚ್ಚು ರೈತರ ಜಮೀನನ್ನು ವಿಶೇಷ ಕಾಯಿದೆಯಾಗಿರುವ KIADB ಕಾಯಿದೆಯಡಿ ವಶಪಡಿಸಿಕೊಂಡಿತು.
-2013ರ ಕಾಯ್ದೆಯು 1894ರ ಭೂ ಸ್ವಾಧೀನ ವನ್ನು ರದ್ದು ಮಾಡುತ್ತದೆ. ಭಾರತದ ಎಲ್ಲಾ ಭೂ ಸ್ವಾಧೀನ ಕಾಯಿದೆಗಳಿಗೂ ಈಗ 2013ರ ಕಾಯಿದೆಯೇ ತಾಯಿ. ವಿಶೇಷ ಕಾಯಿದೆಯಾಗಿರುವ KIADB ಕಾಯಿದೆಯೂ ಸಹ ಮೂಲ ಕಾಯಿದೆಯ ಅಂಶಗಳಿಗೆ ವ್ಯತಿರಿಕ್ತವಾಗಿರುವ ಹಾಗಿಲ್ಲ. ಹೀಗಾಗಿ 2013 ರ ಕಾಯಿದೆಯನ್ನು ಅನ್ವಯಿಸದೆ, KIADB ಯಂತ ವಿಶೇಷ ಕಾಯಿದೆ ಬಳಸಿ ರೈತರಿಗೆ ಅನ್ಯಾಯ ಮಾಡುತ್ತಿರುವ ಬಗ್ಗೆ ಪ್ರಕರಣಗಳು ಕೋರ್ಟಿನ ಮೆಟ್ಟಿಲೇರಿದವು. ಎರಡೆರಡು ಕಾಯಿದೆಗಳಿರುವಾಗ ಮೂಲ ಕಾಯಿದೆಯನ್ನು ಬಿಟ್ಟು KIADB ಯಂತ ವಿಶೇಷ ಕಾಯಿದೆಯನ್ನೇ ಅನುಸರಿಸಲು ಸರ್ಕಾರಗಳು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಎದುರಾಯಿತು. 2016-17 ರಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ಸರ್ಕಾರಗಳು, LARR ಕಾಯಿದೆಗೆ ತಿದ್ದುಪಡಿ ತಂದುಬಿಟ್ಟವು. ಕೆಲವು ರಾಜ್ಯಗಳು ಹಳೆಯ ಭೂ ಸ್ವಾಧೀನ ಕಾಯಿದೆಯಡಿಯೇ ಸ್ವಾಧೀನ ಮುಂದುವರೆಸಿದವು. ಇದಕ್ಕೆ ಹೈಕೋರ್ಟು ತಡೆ ಒಡ್ಡಿದರೂ ಪ್ರಕರಣ ಸುಪ್ರೀಂ ಕೋರ್ಟು ತಲುಪಿತು .
-2019 ರ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ಸ-ಜೆಡಿಎಸ್ ಮೈತ್ರಿ ಸರ್ಕಾರವೂ ಕೂಡ 2013ರ ಕಾಯಿದೆಗೆ ರಾಜ್ಯ ಮಟ್ಟದ ತಿದ್ದುಪಡಿಗಳನ್ನು ತಂದಿತು. ಪ್ರಮುಖವಾದ ವಿಷಯವೆಂದರೆ ಆ ತಿದ್ದುಪಡಿಗಳು , 2013 ರಲ್ಲಿ ಯುಪಿಎ ಸರ್ಕಾರದ LARR ಕಾಯಿದೆಯಲ್ಲಿದ್ದ ಮೂರು ಜನಪರ ಅಂಶಗಳನ್ನೂ ಕಿತ್ತು ಹಾಕಲು 2014 ರಲ್ಲಿ ಮೋದಿ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ತಿದ್ದುಪಡಿಗಳ ಯಥಾವತ್ ನಕಲಾಗಿದ್ದವು.
(https://faolex.fao.org/docs/pdf/ind201965.pdf)
ಆದರೂ ಬಿಜೆಪಿ-ಕಾಂಗ್ರೆಸ್ ಸಂಪೂರ್ಣ ಭಿನ್ನ ಎಂದು ನಂಬಲು ತುದಿಗಾಲಲ್ಲಿ ನಿಂತಿರುತ್ತೇವೆ..
-2023 ರಲ್ಲಿ ಮತ್ತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಋಣದೊಂದಿಗೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ 2019 ರ ರೈತ ವಿರೋಧಿ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲಿಲ್ಲ. ರೈತರ ಋಣಕ್ಕಿಂತ ಕಾರ್ಪೊರೇಟ್ ಹಣ ಎಲ್ಲಾ ಸರ್ಕಾರಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿರುತ್ತದಲ್ಲವೇ?
-ಇನ್ನು ದುರಂತದ ವಿಷಯವೆಂದರೆ 2021 ರ ಜೂನ್ 29 ರಂದು ಸುಪ್ರೀಂ ಕೋರ್ಟ್ LARR ಗೆ ರಾಜ್ಯಗಳು ತಿದ್ದುಪಡಿ ತಂದಿರುವುದನ್ನು ಹಾಗೂ ಕೇಂದ್ರದ LARR ನೀತಿಗೆ ಪರ್ಯಾಯವಾಗಿ ತನ್ನದೇ ಭೂ ಶ್ವಾಸಹೀನ ಕಾನೂನುಗಳನ್ನು ಅನುಸರಿಸುವ ಹಕ್ಕನ್ನು ಎತ್ತಿ ಹಿಡಿದು ರೈತರ ಹಕ್ಕುಗಳ ಮೇಲೆ ಕಾರ್ಪೊರೇಟ್ ಬಂಡೆಯನ್ನು ಉರುಳಿಸಿದೆ.
(https://indiankanoon.org/doc/7835951/)
-ಸಿದ್ದರಾಮಯ್ಯ ಸರ್ಕಾರ ನಿಜಕ್ಕೂ ರೈತರವಾಗಿದ್ದರೆ ಇಷ್ಟೆಲ್ಲಾ ಅವಾಂತರಗಳಿಗೆ ಅವಕಾಶವಿಲ್ಲದಂತೆ ತಮ್ಮ ಸರ್ಕಾರವೋ 2013ರ ಮೂಲ ಕಾಯಿದೆಯಂತೆ ಮಾತ್ರ ರೈತರ ಜಾಮೀನು ಭೂ ಸ್ವಾಧೀನ ಮಾಡಿಕೊಳ್ಳುವುದಾಗಿ ಘೋಷಿಸಬಹುದಿತ್ತು. ಆದರೆ ಕಾರ್ಪೊರೇಟ್ ಬಂಡವಾಳ ಹೂಡಿಕೆ ಇಲ್ಲದೆ, ಅದನ್ನು ಬೇರೆ ದೇಶ ಮತ್ತು ರಾಜ್ಯಗಳಿಂದ ಕರ್ನಾಟಕಕ್ಕೇ ಆಕರ್ಷಿಸಲು ಅವುಗಳಿಗೆ ಬೇಕಾದ ಕಡೆ ಬೇಕಾದಷ್ಟು ಭೂಮಿ ಮತ್ತು ಇತರ ಸೌಲಭ್ಯಗಳನ್ನು ಕೊಡದೆ ರಾಜ್ಯ ಅಭಿವೃದ್ಧಿಯಾಗದು ಎಂಬ ಕಾರ್ಪೊರೇಟ್ ಬಂಡವಾಳಶಾಹಿ ಪರ ಅಭಿವೃದ್ಧಿ ಮಾದರಿಯನ್ನೇ ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರ ಅನುಸರಿಸುತ್ತಾ ಬಂದಿವೆ. ಅದಕ್ಕೆ ಎರಡೂ ಸರ್ಕಾರಗಳೂ Global Investors Meet (GIM) ಮಾಡುತ್ತವೆ. ಅಲ್ಲಿಗೆ ಬರುವ ಹೂಡಿಕೆದಾರರಿಗೆ ಎರಡೂ ಸರ್ಕಾರಗಳೂ ಪೈಪೋಟಿಯಲ್ಲಿ ಬೆಂಗಳೂರಿನ ಸುತ್ತ ಮುತ್ತ ರೈತರ ಜಮೀನನನ್ನು ಕಸಿದು ಕಪ್ಪಾ ಒಪ್ಪಿಸುತ್ತವೆ. ಹೀಗಾಗಿ, 2016 ರ ಅದಿವಾಸಿ ದಿಡ್ಡಳ್ಳಿಯಿಂದ ಹಿಡಿದು - 2025ರ ರೈತಾಪಿ ದೇವನಹಳ್ಳಿಯವರೆಗೆ...ಪಾಠವಿಷ್ಟೇ:
ಮುಖ್ಯಮಂತ್ರಿಯಾದಿಯಾಗಿ ರಾಜ್ಯಶಕ್ತಿಯು ಸದಾ ಬಂಡವಾಳಶಾಹಿಗಳ ಹಿತಾಸಕ್ತಿಯ ಮತ್ತು ದಮನದ ಸಾಧನ.
ಚುನಾವಣ ಪ್ರಜಾತಂತ್ರವೆಂಬುದು ಬಂಡವಾಳಶಾಹಿ ವ್ಯವಸ್ಥೆಯು ಪ್ರಜೆಗಳಿಗೆ ಹಾಕಿರುವ ಮಖಮಲ್ ಟೋಪಿ..
ಮುಖ್ಯಮಂತ್ರಿಗಳ ವೈಯಕ್ತಿಕ ಸಜ್ಜನಿಕೆ -ನಿಲುವುಗಳು ಸರ್ಕಾರದ, ಪಕ್ಷದ ವರ್ಗ ಹಿತಾಸಕ್ತಿಯ ಮಿತಿಯನ್ನು ಮೀರುವುದಿಲ್ಲ...
ದುಡಿಯುವ - ಶೋಷಿತ ಜನರು ಬಲವಾದ ಸಂಘಟಿತ ಜನಶಕ್ತಿಯಾಗಿ,ಆಳುವ ವರ್ಗಗಳ ಬಣಗಳ ಬಗ್ಗೆ ಭ್ರಮೆ ಇಟ್ಟುಕೊಳ್ಳದೆ ರಾಜಿ ರಹಿತ ಬೀದಿ ಸಮರಕ್ಕಿಳಿಯದೆ ಬದಲು ದಾರಿಯಿಲ್ಲ..
ಬನ್ನಿ, ದೇವನಹಳ್ಳಿ ರೈತರ ಜಮೀನುಗಳ ಬಲವಂತ ದ ಕಾರ್ಪೋರೆಟ್ ಕಬಳಿಕೆಯನ್ನು ವಿರೋಧಿಸೋಣ..
-ಶಿವಸುಂದರ್







