ಭೂ ಮಾಫಿಯಾದಿಂದ ಜಮೀನು ಕಬಳಿಸುವ ಯತ್ನ: ಆರೋಪ
ಕಿಡಿಗೇಡಿಗಳಿಂದ ಬೇಗೂರಿನ ದಲಿತರ ಮನೆ, ದೇವಸ್ಥಾನ ನೆಲಸಮ

ಬೆಂಗಳೂರು, ಮೇ 31: ಮಾದಿಗ ಸಮುದಾಯ ಹಲವು ವರ್ಷಗಳಿಂದ ವಾಸಿಸುತ್ತಿರುವ ಮನೆಗಳು, ಜಮೀನಿಗೆ ಇದೀಗ ರಿಯಲ್ ಎಸ್ಟೇಟ್‌ನವರು ಕಣ್ಣಿಟ್ಟಿದ್ದು, ಇಲ್ಲಿನ ನಿವಾಸಿಗಳ ಮನೆ, ಕೃಷಿ ಭೂಮಿ, 2 ದೇವಸ್ಥಾನಗಳನ್ನು ನೆಲ ಸಮ ಮಾಡಿರುವುದಲ್ಲದೇ ಜನರಿಗೆ ಬದುಕಲು ನೆಲೆ ಇಲ್ಲದಂತೆ ಭೂ ಮಾಫಿಯಾದವರು ಸಿಲಿಕಾನ್ ಸಿಟಿ ಹೊರವಲಯಗಳಲ್ಲಿ ಸಕ್ರಿಯಗೊಂಡಿವೆ.
ಸುಮಾರು 1877ರಿಂದ ಬೇಗೂರು ಸರ್ವೇ ನಂ.352ರಲ್ಲಿ ದೊಣ್ಣೆ ಮುನಿಗ ಎಂಬವರ ಕುಟುಂಬ ವಾಸಿಸುತ್ತಿದ್ದು, ಈಗ ಅವರ ಐದನೇ ತಲೆಮಾರಿನ ಕುಟುಂಬ ಇದೇ ಭೂಮಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಮೇ 28ರಂದು ರಾತ್ರಿ ವೇಳೆಯಲ್ಲಿ ಭೂ ಮಾಫಿಯಾ ಕಡೆಯ ಐನೂರಕ್ಕೂ ಅಧಿಕ ಜನರು ಬಂದು, ಮನೆಯ ಬಾಗಿಲು ಮುರಿದು ಎಲ್ಲರನ್ನೂ ಮನೆಯಿಂದ ಹೊರಗೆ ತಳ್ಳಿ ಮನೆ, ಕೃಷಿ ಭೂಮಿ, 2 ದೇವಸ್ಥಾನಗಳನ್ನು ನೆಲಸಮ ಮಾಡಿ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಮಾದಿಗ ಸಮುದಾಯದ ಭಾಗ್ಯ ಎಂಬವರು ಆರೋಪಿಸಿದ್ದಾರೆ.
ನಮ್ಮ ಮನೆ, ನಾವು ಪೂಜಿಸಿಕೊಂಡು ಬಂದಿದ್ದ ಶ್ರೀರೇಣುಕಾ ಯಲ್ಲಮ್ಮ, ಶಾಂತಿ ಮುನೇಶ್ವರ ಸ್ವಾಮಿ ದೇವಾಲಯವನ್ನು ಜೆಸಿಬಿಗಳಿಂದ ಕಿಡಿಗೇಡಿಗಳು ಧ್ವಂಸ ಮಾಡಿದರು. ಅಲ್ಲಿ ಕಟ್ಟಡಗಳಿದ್ದವು ಎಂಬ ಕುರುಹು ಸಿಗದಂತೆ ಮಾಡಿದ್ದಾರೆ. ಈ ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲು ಮುಂದಾದಾಗ, ಅವುಗಳನ್ನು ಕಸಿದುಕೊಂಡರು ಎಂದು ಸಂತ್ರಸ್ತೆ ಭಾಗ್ಯ ಎಂಬವರು ಅಳಲುತೋಡಿಕೊಂಡಿದ್ದಾರೆ.
ಈ ಕೃತ್ಯದ ಹಿಂದೆ ಶ್ರೀನಿವಾಸ್ ಮತ್ತು ರವಿಚಂದ್ರ ರೆಡ್ಡಿ ಎಂಬ ಭೂ ಮಾಫಿಯಾ ವ್ಯಕ್ತಿಗಳು ಇದ್ದಾರೆ. ಪ್ರೆಸ್ಟೀಜ್ ಕಂಪೆನಿಯವರು ನಮ್ಮ ಜಮೀನನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಹತ್ತಾರು ದಶಕದಿಂದಲೂ ನಾವು ಉಳುಮೆ ಮಾಡುತ್ತಿರುವ ನೆಲದಿಂದ ನಮ್ಮನ್ನು ಬಲವಂತವಾಗಿ ಎತ್ತಂಗಡಿ ಮಾಡಿಸಲು ಯತ್ನಿಸುತ್ತಿದ್ದಾರೆ. ನಮ್ಮ ಜಮೀನನ್ನು ನಾವು ಬಿಟ್ಟುಕೊಡುವುದಿಲ್ಲ ಎಂದು ಸಂತ್ರಸ್ತರು ದುಃಖವನ್ನು ತೋಡಿಕೊಂಡಿದ್ದಾರೆ.
ಭೂ ಮಾಫಿಯಾಗೆ ಪೊಲೀಸರೇ ಸಹಕಾರ: ಪಿಟಿಸಿಎಲ್ ಕಾಯ್ದೆಯಡಿ ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದ್ದಾಗಲೇ ಮಾದಿಗ ಸಮುದಾಯದ ಕುಟುಂಬದ ವಿರುದ್ಧ ಗೂಂಡಾಗಿರಿ ನಡೆಸುತ್ತಿದ್ದರೂ ಸ್ಥಳಕ್ಕೆ ಆಗಮಿಸಿದ ಸಂಬಂಧಪಟ್ಟ ಬೇಗೂರು ಮತ್ತು ಹುಳಿಮಾವು ಠಾಣಾ ಪೊಲೀಸರು ಮೌನವಾಗಿ ನಿಂತುಬಿಟ್ಟಿದ್ದರು. ಈ ಹಿಂದೆ ಎರಡು ಬಾರಿ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸುಮಾರು 3-4 ತಾಸು ಮನೆ ಮತ್ತು ದೇವಾಲಯವನ್ನು ಕೆಡವುತ್ತಿದ್ದರೂ ಪೊಲೀಸರು ಯಾವುದೇ ಕಾರ್ಯಚರಣೆ ನಡೆಸಿಲ್ಲ. ಇದು ಪೊಲೀಸರು ಬೇಕಂತಲೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಂತ್ರಸ್ತರು ಗಂಭೀರ ಆರೋಪ ಮಾಡಿದ್ದಾರೆ.
ದೇವರ ವಿಗ್ರಹ, ಹಣ ದೋಚಿದ ಕಿಡಿಗೇಡಿಗಳು: ದಶಕಗಳಿಂದ ಪೂಜಿಸಿಕೊಂಡು ಬರುತ್ತಿದ್ದ ಬೇಗೂರಿನ ಎರಡು ದೇವಸ್ಥಾನಗಳ ವಿಗ್ರಹ, ಕಾಣಿಕೆ ಹುಂಡಿ, ಮನೆಯಲ್ಲಿ ಚೀಟಿ ಕಟ್ಟಿ ಸಂಗ್ರಹಿಸಿದ್ದ 2 ಲಕ್ಷ ರೂ. ನಗದು, ಚಿನ್ನಾಭರಣ ಎಲ್ಲವನ್ನು ಭೂ ಮಾಫಿಯಾದ ಗೂಂಡಾಗಳು ದೋಚಿಕೊಂಡು ಹೋಗಿದ್ದಾರೆ. ಉಳುಮೆ ಮಾಡುತ್ತಿದ್ದ ಭೂಮಿ, ಕೋಳಿಗಳನ್ನು ಸಾಕಿದ್ದೆವು, ಅವುಗಳೆಲ್ಲವನ್ನು ಸಾಯಿಸಿದ್ದಾರೆ. ಮನೆಗಳಲ್ಲಿದ್ದ ಲಾಪ್‌ಟಾಪ್, ತಮಟೆ, ಸಿಸಿಟಿವಿ ಕ್ಯಾಮರಾ ಹೊತ್ತೊಯ್ಯಲಾಗಿದೆ. ಈ ಜಾಗ ಬಿಟ್ಟರೆ ನಮಗೆ ಯಾವುದೇ ಆಸರೆ ಇಲ್ಲ. ಈ ಘಟನೆಗಳಿಗೆ ಭೂ ಮಾಫಿಯಾದ ಶ್ರೀನಿವಾಸ್ ಮತ್ತು ರವಿಚಂದ್ರ ರೆಡ್ಡಿ ಕುಮ್ಮಕ್ಕು ನೀಡಿದ್ದಾರೆ ಎಂದು ಸಂತ್ರಸ್ತೆ ಭಾಗ್ಯ ದೂರಿದ್ದಾರೆ.
ಭೂ ಮಾಫಿಯಾದವರು ಕಳುಹಿಸಿರುವ ಗೂಂಡಾಗಳು ಮಾದಿಗ ಕುಟುಂಬದ ಇಬ್ಬರನ್ನು ಅಪಹರಿಸಿ ಬೇರೆಡೆ ಕರೆದುಕೊಂಡು ಹೋಗಿದ್ದಾರೆಂಬ ಮಾಹಿತಿ ದೊರೆತ ತಕ್ಷಣ 112 ಪೊಲೀಸ್ ಸಹಾಯವಾಣಿಗೆ ಕುಟುಂಬಸ್ಥರು ಕರೆ ಮಾಡಿದ್ದು, ಆ ಬಳಿಕ ಇಬ್ಬರನ್ನು ವಾಪಸ್ ತಂದು ಬಿಟ್ಟಿದ್ದಾರೆ. ಕಿಡಿಗೇಡಿಗಳು ಅಪಹರಿಸಿದ ಇಬ್ಬರು ಯುವಕರಿಗೆ ಕಿರುಕುಳ ಕೊಟ್ಟಿದ್ದಾರೆ. ಆರೋಪಿಗಳು ಯಾರೆಂದು ತಿಳಿದರೂ ಪೊಲೀಸರು ಅವರನ್ನು ಬಂಧಿಸುತ್ತಿಲ್ಲ. ಬಡವರನ್ನು, ದಲಿತರನ್ನು ಕಾಪಾಡುವ ಕಾಂಗ್ರೆಸ್ ಸರಕಾರ ನಮಗೆ ನ್ಯಾಯ ಒದಗಿಸದಿರುವುದು ದುಃಖಭರಿಸುತ್ತದೆ ಎಂದು ಸಂತ್ರಸ್ತ ಕುಟುಂಬದ ಮಂಜುನಾಥ್ ಆರೋಪಿಸಿದ್ದಾರೆ.
ದಲಿತರ 500ಕ್ಕೂ ಅಧಿಕ ಎಕರೆ ಜಮೀನು ಕಬಳಿಸಿದ ಭೂ ಮಾಫಿಯಾ: ಬೇಗೂರಿನ ದಲಿತರ ಭೂಮಿಯನ್ನು ಕಬಳಿಸಲು 1976ರಿಂದ ಭೂ ಮಾಫಿಯಾದಿಂದ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಮೂಲ ಪತ್ರಗಳು ಇರುವುದರಿಂದ ಯಾರಿಗೂ ಮಾರಾಟ ಮಾಡಿರಲಿಲ್ಲ. ಇದೀಗ ದಲಿತ ಕುಟುಂಬಗಳಲ್ಲಿ ಮದ್ಯಪಾನ ಮಾಡುವವರನ್ನು ಹಾಗೂ ಅವಿದ್ಯಾವಂತರನ್ನು ಟಾರ್ಗೆಟ್ ಮಾಡಿಕೊಂಡಿರುವ ಭೂ ಮಾಫಿಯಾದ ಮಾಲಕರು ಅವರಲ್ಲಿ ಖಾಲಿ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಸಂತ್ರಸ್ತ ದಲಿತ ಕುಟುಂಬಗಳು ಆರೋಪಿಸಿವೆ. ಇಲ್ಲಿಯವರೆಗೆ ಬೇಗೂರಿನ ಆಸುಪಾಸಿನಲ್ಲಿ ದಲಿತ ಕುಟುಂಬದ ಸುಮಾರು 500ರಷ್ಟು ಎಕರೆ ಜಮೀನನ್ನು ಭೂ ಮಾಫಿಯಾ ಮಾಲಕರು ಕಬ್ಜ ಮಾಡಿದ್ದಾರೆ. ದಲಿತರ ಪರ ಎನ್ನುತ್ತಿದ್ದ ಕಾಂಗ್ರೆಸ್ ಸರಕಾರ ಹಾಗೂ ಸಮಾಜ ಕಲ್ಯಾಣದ ಇಲಾಖೆಯಿಂದ ಯಾವುದೇ ರಕ್ಷಣೆ, ನೆರವು ದೊರೆತಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಿಕೊಡಬೇಕು ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಪ್ರಕಾಶ್ ಬಾಬು ಆಗ್ರಹಿದ್ದಾರೆ.
ನ್ಯಾಯ ಒದಗಿಸಲು ಸೂಚನೆ
ಬೇಗೂರಿನ ಮಾದಿಗರ ಮನೆ, ದೇವಸ್ಥಾನದ ಧ್ವಂಸ, ಯುವಕರ ಅಪಹರಣ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ನೊಂದವರಿಗೆ ನ್ಯಾಯ ಒದಗಿಸಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಬೆಂಗಳೂರು ಪೂರ್ವ ಜಂಟಿ ಪೊಲೀಸ್ ಆಯುಕ್ತ ರಮೇಶ್ ಭಾನೋತ್ ಅವರು ‘ವಾರ್ತಾಭಾರತಿ’ಗೆ ತಿಳಿಸಿದರು.







