ಹಿಪ್ಪುನೇರಳೆಗೆ ಕಾಡುತ್ತಿರುವ ಎಲೆಸುರುಳಿ ರೋಗ: ಆತಂಕದಲ್ಲಿ ರೇಷ್ಮೆ ಬೆಳೆಗಾರರು

ಶಿಡ್ಲಘಟ್ಟ: ರೈತರು ನಾಟಿ ಮಾಡಿರುವ ಹಿಪ್ಪುನೇರಳೆ ಬೆಳೆಗೆ ಎಲೆ ಸುರುಳಿ ರೋಗ ಕಾಡುತ್ತಿದ್ದು, ರೇಷ್ಮೆ ಬೆಳೆಗೆ ಹಿಪ್ಪುನೇರಳೆ ಸೊಪ್ಪುಸಿಗದೆ, ರೇಷ್ಮೆ ಬೆಳೆಗಾರರು ಆತಂಕದಲ್ಲಿರುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ಗಾಳಿ ಜಾಸ್ತಿಯಾಗಿರುವುದರ ಜೊತೆಗೆ, ಬದಲಾಗುತ್ತಿರುವ ವಾತಾವರಣದಿಂದಾಗಿ ವಿ-1 ತಳಿಯ ಹಿಪ್ಪುನೇರಳೆ ತೋಟಗಳಿಗೆ ಎಲೆಸುರುಳಿ ರೋಗ ಕಾಡುತ್ತಿದೆ. ರೋಗಕ್ಕೆ ತುತ್ತಾಗಿರುವ ಎಲೆಗಳ ಮೇಲೆ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತಿದ್ದು, ಕ್ರಮೇಣ ಎಲೆಗಳು ಮುದುರಿಕೊಳ್ಳುತ್ತಿವೆ. ಈ ಸೊಪ್ಪನ್ನು ರೇಷ್ಮೆಹುಳುಗಳಿಗೆ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರತಿ ವರ್ಷ ಜುಲೈ ತಿಂಗಳಿನಲ್ಲೆ ಈ ರೀತಿಯಾದ ಸಮಸ್ಯೆ ಹಿಪ್ಪುನೇರಳೆ ತೋಟಗಳಿಗೆ ಕಾಡುತ್ತಿದೆ. ಸೊಪ್ಪಿನ ಎಲೆಗಳ ಹಿಂಭಾಗದಲ್ಲಿ ಗೂಡು ಕಟ್ಟಿಕೊಂಡು, ಎಲೆಯಲ್ಲಿನ ನೀರಿನಾಂಶವನ್ನೆಲ್ಲಾ ಹೀರಿಕೊಳ್ಳುವ ಹುಳಗಳು, ಸೊಪ್ಪನ್ನು ಉಪಯೋಗಕ್ಕೆ ಬಾರದಂತೆ ಮಾಡುತ್ತಿವೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸೊಪ್ಪುಕಟಾವಿನ ಹಂತಕ್ಕೆ ಬಂದಿರುವುದರಿಂದ ರೋಗ ನಿಯಂತ್ರಣಕ್ಕಾಗಿ ಔಷಧಿಯನ್ನೂ ಸಿಂಪಡನೆ ಮಾಡುವಂತಿಲ್ಲ. ಔಷಧಿ ಸಿಂಪಡಿಸಿದರೆ, ಹುಳುಗಳಿಗೂ ಹಾಕದೆ, ದನಕರುಗಳಿಗೂ ಹಾಕದೆ, ಸೊಪ್ಪು ವ್ಯರ್ಥವಾಗುತ್ತದೆ. ಸಂಪೂರ್ಣವಾಗಿ ಸೊಪ್ಪನ್ನು ಕಟಾವು ಮಾಡಿಕೊಂಡು, ದೂರಕ್ಕೆ ತೆಗೆದುಕೊಂಡು ಹೋಗಿ ಸುಟ್ಟುಹಾಕುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ರೈತರು ತಿಳಿಸಿದ್ದಾರೆ.
ಹಿಪ್ಪುನೇರಳೆ ಸೊಪ್ಪಿಗೆ ಒಂದು ಮೂಟೆಗೆ 550-600 ರೂಪಾಯಿ ಬೆಲೆ ಇದೆ. ರೇಷ್ಮೆಹುಳು ಸಾಕಣೆ ಮಾಡದಿದ್ದರೂ ಕನಿಷ್ಟ ನಾವು, ಸೊಪ್ಪು ಮಾರಾಟ ಮಾಡಿಕೊಂಡಾದರೂ ಜೀವನ ಮಾಡುತ್ತಿದ್ದೆವು. ಈಗ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಒಂದು ಬಾರಿ ಔಷಧ ಸಿಂಪಡನೆ ಮಾಡಿದರೆ, 20 ದಿನಗಳವರೆಗೂ ಅಂತಹ ಸೊಪ್ಪನ್ನು ಕಟಾವು ಮಾಡುವಂತಿಲ್ಲ. ಔಷಧಗಳು ಸಿಂಪಡನೆ ಮಾಡಿದಾಗ ಎಲೆ ಸುರುಳಿ ರೋಗ ನಿಯಂತ್ರಣಕ್ಕೆ ಬಂದಂತೆ ಕಾಣಿಸುತ್ತದೆ. ಔಷಧಿ ಶಕ್ತಿ ಕಡಿಮೆಯಾಗುತ್ತಿದ್ದಂತೆ ಪುನಃ ಎಲೆಗಳು ತಿನ್ನಲು ಆರಂಭಿಸುತ್ತದೆ. ಗಾಳಿಯಿಂದಾಗಿ ಒಂದು ಕಡೆಯಲ್ಲಿ ರೋಗ ಕಾಣಿಸಿಕೊಂಡರೆ, ಕ್ರಮೇಣ ವೇಗವಾಗಿ ತೋಟವೆಲ್ಲಾ ಹರಡಿಕೊಳ್ಳುತ್ತಿದೆ ಎಂದು ರೈತರು ಹೇಳುತ್ತಾರೆ.
ಕೃಷಿ, ತೋಟಗಾರಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡು, ಜೀವನ ನಡೆಸುತ್ತಿದ್ದ ರೈತರು, ನೀರಾವರಿಗಾಗಿ ನಂಬಿಕೊಂಡಿದ್ದ ಜಲಮೂಲಗಳು ಬತ್ತಿಹೋಗಿದ್ದ ಕಾರಣ, ಕೊಳವೆಬಾವಿಗಳ ಮೇಲೆ ಅವಲಂಬಿತರಾಗಿ, ರೇಷ್ಮೆ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ. ಆದರೆ, ಇತ್ತಿಚೆಗೆ ಹಿಪ್ಪುನೇರಳೆ ತೋಟಗಳಿಗೆ ಕಾಡುತ್ತಿರುವ ರೋಗದಿಂದಾಗಿ ರೇಷ್ಮೆ ಬೆಳೆಗಳಲ್ಲಿನ ಗುಣಮಟ್ಟವೂ ಕಡಿಮೆಯಾಗುತ್ತಿದೆ.
ರೇಷ್ಮೆ ಕೃಷಿಯನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ದಾಳಿಂಬೆ ಬಂದ ನಂತರವಂತೂ ರೇಷ್ಮೆಬೆಳೆ ತೆರೆಮರೆಗೆ ಸರಿಯುತ್ತಿದೆ. ಆದರೆ, ಈಗ ಇರುವ ಹಿಪ್ಪುನೇರಳೆ ಸೊಪ್ಪಿಗೆ ಕಾಡುತ್ತಿರುವ ಎಲೆ ಸುರುಳಿ ರೋಗದ ಬಗ್ಗೆ ಮುಂಜಾಗ್ರತೆ ಕೈಗೊಳ್ಳಬೇಕಾಗಿರುವ ಅಧಿಕಾರಿಗಳು, ರೇಷ್ಮೆ ಇದೆ ಎನ್ನುವುದನ್ನೇ ಮರೆತಿರುವಂತಿದೆ.
-ತಾದೂರು ಮಂಜುನಾಥ್, ರೈತ ಸಂಘದ ತಾಲೂಕು ಅಧ್ಯಕ್ಷ, ಶಿಡ್ಲಘಟ್ಟ
ಶಿಡ್ಲಘಟ್ಟ ತಾಲೂಕಿನಲ್ಲಿ 7,500 ಹೆಕ್ಟೇರ್‌ನಲ್ಲಿ ಹಿಪ್ಪುನೇರಳೆ ಬೆಳೆ ಇದೆ. ಎಲೆ ಸುರುಳಿ ರೋಗದ ನಿಯಂತ್ರಣಕ್ಕಾಗಿ ನಾವು ಕ್ಷೇತ್ರದ ಹಂತದಲ್ಲಿ ಅರಿವು ಮೂಡಿಸುತ್ತಿದೆ. ಗ್ರಾಮಸಭೆಗಳಲ್ಲಿಯೂ ಅರಿವು ಮೂಡಿಸುತಿದ್ದೆವೆ. ನಾವು ನಿರಂತರವಾಗಿ ರೈತರ ಮನೆ ಬಾಗಿಲಿಗೆ ಹೋಗಿ ಮಾಹಿತಿ ಕೊಡುತ್ತಿದ್ದೇವೆ. ಮೂರು ತಿಂಗಳ ಕಾಲ ವೈರಸ್ ಹೆಚ್ಚಿರುತ್ತದೆ. ಗಾಳಿ ಹೆಚ್ಚಾಗಿರುವ ಕಾರಣ ಹರಡುತ್ತಿದೆ. ಮಳೆ ಬಂದರೆ, ಕ್ರಮೇಣ ಕಡಿಮೆಯಾಗುತ್ತದೆ. ರೈತರು, ನೀರು ಸಿಂಪಡನೆ ಮಾಡಿದರೂ ಅನುಕೂಲವಾಗುತ್ತದೆ.
-ಅಕ್ಮಲ್ ಪಾಷಾ, ಸಹಾಯಕ ನಿರ್ದೇಶಕ ರೇಷ್ಮೆ ಇಲಾಖೆ ಶಿಡ್ಲಘಟ್ಟ







