ಕಲಿಕಾ ಬಡತನ, ಕಲಿಸಲಾಗದ ಶಿಕ್ಷಕರು
ಇಂದು ಶಿಕ್ಷಕರ ದಿನ

ಪ್ರತಿಯೊಂದು ಸಾರ್ವಜನಿಕ ಶಾಲೆಯು ಸಂವಿಧಾನದ ತೊಟ್ಟಿಲು. ಆ ತೊಟ್ಟಿಲನ್ನು ತೂಗಬೇಕಾದ ಶಿಕ್ಷಕರನ್ನು, ಅಭದ್ರತೆಯ ಉದ್ಯೋಗ, ಕಲಿಕೇತರ ಹೊರೆ, ಆಡಳಿತಾತ್ಮಕ ಕೆಲಸ ಮತ್ತು ದಿನನಿತ್ಯ ಮಾಹಿತಿ ರವಾನಿಸುವ ಕಿರುಕುಳ-ಅವಮಾನಗಳಿಂದ ಹಿಂಸಿಸಿದರೆ ಭಾರತದ ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ. ಶಿಕ್ಷಕರನ್ನು ಗೌರವಿಸುವುದು ಕೇವಲ ಅವರ ಹಿತರಕ್ಷಣೆಯಲ್ಲ. ಬದಲಿಗೆ, ಪ್ರತಿಯೊಂದು ಮಗುವಿನ ಶಿಕ್ಷಣದ ಮೂಲಭೂತ ಹಕ್ಕು, ಸಮಸಮಾಜದ ನಿರ್ಮಾಣ ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸಲು ಅವರೊಂದಿಗೆ ಸಮಾನವಾಗಿ ಹೆಜ್ಜೆ ಹಾಕುವುದು.
ಸೆಪ್ಟಂಬರ್ 5, ಶಿಕ್ಷಕರ ದಿನಾಚರಣೆ. ಶಿಕ್ಷಕರಿಗೆ ಪ್ರೋತ್ಸಾಹ ಮತ್ತು ಅವರ ಕಾರ್ಯಕ್ಷಮತೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದು ನಾಡಿನ ಕರ್ತವ್ಯ. ಆದರೆ, ಮರುದಿನ ಅದೇ ಶಿಕ್ಷಕರನ್ನು ಜನಗಣತಿ, ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ, ಸಮೀಕ್ಷೆ, ಮಧ್ಯಾಹ್ನದ ಊಟದ ಲೆಕ್ಕ, ವಿದ್ಯಾರ್ಥಿಗಳ ಆಧಾರ್ ಜೋಡಣೆ, ಆನ್‌ಲೈನ್ ದತ್ತಾಂಶ ಮತ್ತು ಇಲಾಖೆಯ ಅಸಂಖ್ಯಾತ ಕಲಿಕೇತರ ಕೆಲಸದಲ್ಲಿ ಮುಳುಗಿಸುವುದು ಕಲಿಕೆಗೆ ಬಗೆಯುವ ದ್ರೋಹ. ಶಿಕ್ಷಕರ ದಿನಾಚರಣೆ ಕೇವಲ ಕಾಟಾಚಾರದ ಆಚರಣೆಯಾಗಬಾರದು. ಶಿಕ್ಷಕರು ಯಾವ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಕಲಿಸಲು ಬೇಕಾದ ಸಮಯವಿದೆಯೇ, ವೃತ್ತಿಪರ ಸ್ವಾಯತ್ತತೆ ಮತ್ತು ಗೌರವ ದೊರೆಯುತ್ತಿದೆಯೇ ಎಂಬ ಸಾಮಾಜಿಕ ಲೆಕ್ಕಪರಿಶೋಧನೆಯ ಹಾಗೂ ಆತ್ಮಾವಲೋಕನದ ದಿನವಾಗಬೇಕು.
ಭಾರತದ ಶಾಲಾ ವ್ಯವಸ್ಥೆಯ ಅಗಾಧತೆಯನ್ನು ಮೊದಲು ನಾವು ಅರ್ಥಮಾಡಿಕೊಳ್ಳಬೇಕು. 2025-26ರಲ್ಲಿ ದೇಶದಲ್ಲಿ 14,66,682 ಶಾಲೆಗಳಿದ್ದು, ಅವುಗಳಲ್ಲಿ ಸುಮಾರು 24.72 ಕೋಟಿ ಮಕ್ಕಳು ಕಲಿಯುತ್ತಿದ್ದಾರೆ. ಶಾಲಾ ಶಿಕ್ಷಣದಲ್ಲಿ ಒಟ್ಟು ಶಿಕ್ಷಕರ ಸಂಖ್ಯೆ ಒಂದು ಕೋಟಿಯನ್ನು ಮೀರಿದೆ. ಪೂರ್ವ-ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ತರಗತಿಗಳನ್ನು ಕಲಿಸುತ್ತಿರುವ ಶಿಕ್ಷಕರ ಸಂಖ್ಯೆ 95,74,324 ಎಂದು ಕೇಂದ್ರ ಸರಕಾರ ಸಂಸತ್ತಿಗೆ ತಿಳಿಸಿದೆ (ಶಿಕ್ಷಣ ಮಂತ್ರಾಲಯ, 2026). ಶಿಕ್ಷಕರ ಸಂಖ್ಯೆ ಹೆಚ್ಚಿರುವುದು ಸಕಾರಾತ್ಮಕ ಬೆಳವಣಿಗೆ. ಆದರೆ, ದೇಶ/ರಾಜ್ಯದ ಸರಾಸರಿ ಶಿಕ್ಷಕ-ವಿದ್ಯಾರ್ಥಿ ಅನುಪಾತ ತೋರಿಸಿ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಲಾಗುವುದಿಲ್ಲ. ಈ ಸರಾಸರಿ ಅನುಪಾತದ ಲೆಕ್ಕ ಶಿಕ್ಷಕರ ಹಂಚಿಕೆಯಲ್ಲಿ ಗ್ರಾಮ-ನಗರ, ರಾಜ್ಯ-ರಾಜ್ಯ ಮತ್ತು ಶಾಲೆ-ಶಾಲೆಗಳ ನಡುವಿನ ತೀವ್ರ ಅಸಮಾನತೆಯನ್ನು ಮರೆಮಾಚುತ್ತದೆ. ರಾಷ್ಟ್ರೀಯ/ರಾಜ್ಯ ಸರಾಸರಿಯಲ್ಲಿ ಅನುಪಾತ ಸಮರ್ಪಕವಾಗಿದೆ ಎಂದು ಹೇಳುತ್ತಲೇ, ಮತ್ತೊಂದಡೆ 1,00,843 ಹೆಚ್ಚು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿರುವುದು ನಮ್ಮ ವೈಫಲ್ಯತೆಗೆ ಕನ್ನಡಿಯಂತಿದೆ .
2025-26ರ ಯುಡೈಸ್+ ಪ್ರಕಾರ ದೇಶದ 1,00,843 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ಒಬ್ಬನೇ ಶಿಕ್ಷಕ ಎಲ್ಲಾ ತರಗತಿ, ಎಲ್ಲಾ ವಿಷಯ ಮತ್ತು ಶಾಲೆಯ ಸಂಪೂರ್ಣ ಆಡಳಿತವನ್ನು ನಿರ್ವಹಿಸುತ್ತಿರುವುದು ಸುಧಾರಣೆಯ ಸೂಚಕವಲ್ಲ. ಬದಲಿಗೆ ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಒಬ್ಬ ಶಿಕ್ಷಕ ಒಂದರಿಂದ ಐದು ಅಥವಾ ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ ಏಕಕಾಲದಲ್ಲಿ ಭಾಷೆ, ಗಣಿತ, ಪರಿಸರ ವಿಜ್ಞಾನ/ವಿಜ್ಞಾನ, ಸಮಾಜ ಪರಿಚಯ ಕಲಿಸಬೇಕು. ಜೊತೆಗೆ, ಹಾಜರಾತಿ, ದಾಖಲಾತಿ, ವಿದ್ಯಾರ್ಥಿವೇತನ, ಮಧ್ಯಾಹ್ನದ ಊಟ, ಪೋಷಕರ ಸಭೆ ಮತ್ತು ಇಲಾಖಾ ವರದಿಗಳನ್ನೂ ನಿರ್ವಹಿಸಬೇಕು. ಈ ಒಂಟಿ ಶಿಕ್ಷಕರೇನಾದರೂ ಅನಾರೋಗ್ಯಕ್ಕೊಳಗಾದರೆ, ತರಬೇತಿಗೆ ಅಥವಾ ಅಧಿಕೃತ ಸಭೆಗೆ ಹೋದರೆ ಅದು ಶೂನ್ಯ ಶಿಕ್ಷಕರ ಶಾಲೆಯಾಗುತ್ತದೆ. ನೀತಿ ಆಯೋಗ ಇಂತಹ ಶಾಲೆಗಳಲ್ಲಿ ಬಹುವರ್ಗ-ಬಹುಮಟ್ಟದ ಬೋಧನೆ, ಆಡಳಿತ, ದಾಖಲೆ ನಿರ್ವಹಣೆ ಮತ್ತು ಮಧ್ಯಾಹ್ನದ ಊಟದ ಹೊಣೆ ಒಬ್ಬರ ಮೇಲೆಯೇ ಬೀಳುವುದರಿಂದ ಮಕ್ಕಳ ಕಲಿಕೆ ಅತ್ಯಲ್ಪ ಅಥವಾ ಯಾವುದೇ ಮೌಲ್ಯವರ್ಧನೆಯಿಲ್ಲದ ಪರಿಸ್ಥಿತಿ ಉಂಟಾಗುತ್ತದೆ ಎಂದು ದಾಖಲಿಸಿದೆ(ನೀತಿ ಆಯೋಗ, 2026). ಏಕೋಪಾಧ್ಯಾಯ ಶಾಲೆಗಳು ಕೇವಲ ಸಂಖ್ಯೆಯ ಸಮಸ್ಯೆಯಲ್ಲ; ಅದು ಸಾಮಾಜಿಕ ನ್ಯಾಯ ಸಮಾನತೆಯ ಪ್ರಶ್ನೆ. ಯುನೆಸ್ಕೊ ಅಧ್ಯಯನದ ಪ್ರಕಾರ ಏಕೋಪಾಧ್ಯಾಯ ಶಾಲೆಗಳ ಶೇ.89ರಷ್ಟು ಗ್ರಾಮೀಣ ಪ್ರದೇಶಗಳಲ್ಲಿವೆ. ಅಂದರೆ ಶಿಕ್ಷಕರ ಕೊರತೆಯ ಪರಿಣಾಮವು ಬಡವರು, ಆದಿವಾಸಿಗಳು, ದಲಿತರು, ವಲಸೆ ಕಾರ್ಮಿಕರು ಮತ್ತು ದುರ್ಗಮ ಪ್ರದೇಶಗಳ ಮಕ್ಕಳ ಮೇಲೆಯೇ ಹೆಚ್ಚು ಬೀಳುತ್ತದೆ (ಯುನೆಸ್ಕೊ, 2021).
ಶಿಕ್ಷಕರ ಖಾಲಿ ಹುದ್ದೆಗಳ ಕುರಿತಂತೆ ಗಂಭೀರ ಸಮಸ್ಯೆಯಿದೆ. ಅದೆಂದರೆ, ಪೂರ್ಣ ಮಾಹಿತಿಯನ್ನು ಬಚ್ಚಿಡುವುದು. ಉದಾಹರಣೆಗೆ, 2020-21ರ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಾಲೆಗಳಲ್ಲಿ ಮಂಜೂರಾಗಿದ್ದ 63.07 ಲಕ್ಷ ಹುದ್ದೆಗಳಲ್ಲಿ ಸುಮಾರು 11.09 ಲಕ್ಷ ಹುದ್ದೆಗಳು ಖಾಲಿ ಇದ್ದವು. ಅವುಗಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಸುಮಾರು 8.38 ಲಕ್ಷ ಖಾಲಿ ಇದ್ದವು (ಶಿಕ್ಷಣ ಮಂತ್ರಾಲಯ, 2021). ಆದರೆ, 2026ರ ಸಂಸತ್ತಿನ ಉತ್ತರದಲ್ಲಿ ಕೇಂದ್ರ ಸರಕಾರವು ರಾಜ್ಯವಾರು ಮಂಜೂರಾದ ಹುದ್ದೆಗಳು, ಭರ್ತಿಯಾದ ಹುದ್ದೆಗಳು ಮತ್ತು ಖಾಲಿ ಇರುವ ಹುದ್ದೆಗಳ ಸಮಗ್ರ ರಾಷ್ಟ್ರೀಯ ದತ್ತಾಂಶ ತನ್ನ ಬಳಿ ಇಲ್ಲ; ಅವುಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರ್ವಹಿಸುತ್ತವೆ ಎಂದು ತಿಳಿಸಿದೆ (ಶಿಕ್ಷಣ ಮಂತ್ರಾಲಯ, 2026). ಶಿಕ್ಷಕರ ಖಾಲಿ ಹುದ್ದೆಗಳ ಬಗ್ಗೆ ರಾಷ್ಟ್ರೀಯ ಲೆಕ್ಕವೇ ಇಲ್ಲದಿರುವುದು ಸಮಸ್ಯೆಯ ಗಾತ್ರವನ್ನು ಮಸುಕುಗೊಳಿಸುವುದಲ್ಲದೆ, ಕೇಂದ್ರ ಸರಕಾರ ತನ್ನ ಉತ್ತರದಾಯಿತ್ವದಿಂದ ನುಣುಚಿಕೊಳ್ಳುವ ಮಾರ್ಗವಾಗಿದೆ. ಇದು ಉದ್ದೇಶಪೂರ್ವಕವಾಗಿ ಮಾಹಿತಿ ನಿಗ್ರಹಿಸುವ ಕ್ರಮವಾಗಿದೆ.
ಇನ್ನೊಂದೆಡೆ, ಖಾಲಿ ಇರುವ ಶಿಕ್ಷಕರ ಕೊರತೆಯನ್ನು ನಿಯಮಿತ ನೇಮಕಾತಿಯಿಂದ ಪರಿಹರಿಸುವ ಬದಲು ಅತಿಥಿ/ ಗುತ್ತಿಗೆ ಶಿಕ್ಷಕರು, ಶಿಕ್ಷಣಮಿತ್ರ, ಪ್ಯಾರಾ-ಟೀಚರ್ ಮುಂತಾದ ಅಸ್ಥಿರ ನೇಮಕಾತಿಗಳಿಂದ ತರಗತಿ ನಡೆಸುವ ಪ್ರವೃತ್ತಿಯೂ ಬೆಳೆದಿದೆ. ಯುನೆಸ್ಕೋದ ‘ನೋ ಟೀಚರ್, ನೋ ಕ್ಲಾಸ್’ ವರದಿಯು ಭಾರತದ ಶಿಕ್ಷಕ ವೃತ್ತಿಯಲ್ಲಿ ನೇಮಕಾತಿ ಮತ್ತು ಸೇವಾ ಷರತ್ತುಗಳ ತೀವ್ರ ಅಸಮಾನತೆಯನ್ನು ದಾಖಲಿಸಿದೆ. ಸಮೀಕ್ಷೆಗೆ ಒಳಪಟ್ಟ ಶಿಕ್ಷಕರಲ್ಲಿ ಶೇ.35ರಷ್ಟು ಮಂದಿ ಲಿಖಿತ ಉದ್ಯೋಗ ಒಪ್ಪಂದವಿಲ್ಲದೆ ಕೆಲಸ ಮಾಡುತ್ತಿದ್ದರೆ, ಬಾಲ್ಯಪೂರ್ವ ಶಿಕ್ಷಕರಲ್ಲಿ ಈ ಪ್ರಮಾಣ ಶೇ.58ರಷ್ಟಿದೆ (ಯುನೆಸ್ಕೊ, 2021). ಒಂದೇ ಶಾಲೆಯಲ್ಲಿ ಒಂದೇ ಕೆಲಸ ಮಾಡುವ ಇಬ್ಬರು ಶಿಕ್ಷಕರಿಗೆ ವೇತನ, ಉದ್ಯೋಗ ಭದ್ರತೆ, ರಜೆ, ಪಿಂಚಣಿ ಮತ್ತು ಭಡ್ತಿಯಲ್ಲಿ ಸಂಪೂರ್ಣ ಭಿನ್ನ ಪರಿಸ್ಥಿತಿ ಇದೆ. ಇದು ಸಂವಿಧಾನದ ‘ಸಮಾನ ಕೆಲಸಕ್ಕೆ ಸಮಾನ ವೇತನ’ದ ತತ್ವಕ್ಕೆ ವಿರುದ್ಧವಾಗಿದೆ. ಅವರ ಸೇವೆ ಬೇಕು. ಆದರೆ, ಸೇವಾ ಭದ್ರತೆ ಅಥವಾ ಸ್ಥಾನಮಾನವಿಲ್ಲ. ಇದು ಹೊಸ ಬಗೆಯ ಜೀತ ಪದ್ಧತಿಯಲ್ಲವೇ!
ಶಿಕ್ಷಕರನ್ನು ಕಲಿಕೇತರ ಕೆಲಸಗಳಿಗೆ ಬಳಸುವುದು ಶಿಕ್ಷಣ ವ್ಯವಸ್ಥೆಯನ್ನು ಕಲಿಕಾ ಬಡತನಕ್ಕೆ ನೂಕಿದೆ. ಕಲಿಕಾ ಬಡತನ (Learning Poverty) ಎಂದರೆ, ಒಂದು ಮಗು ತನ್ನ 10ನೇ ವಯಸ್ಸಿನ ವೇಳೆಗೆ ಒಂದು ಸರಳವಾದ ಪಠ್ಯವನ್ನು ಓದಲು ಮತ್ತು ಅದರ ಅರ್ಥವನ್ನು ಗ್ರಹಿಸಲು ವಿಫಲವಾಗುವ ಸ್ಥಿತಿಯಾಗಿದೆ. ಈ ಪರಿಕಲ್ಪನೆಯನ್ನು ವಿಶ್ವಬ್ಯಾಂಕ್ ಮತ್ತು ಯುನೆಸ್ಕೋ ಜಂಟಿಯಾಗಿ ಪರಿಚಯಿಸಿವೆ.
ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 24 ಶಿಕ್ಷಕರಿಗೆ ಪಠ್ಯಕ್ರಮ ಪೂರ್ಣಗೊಳಿಸುವುದು, ಪ್ರತೀ ಮಗುವಿನ ಕಲಿಕಾ ಸಾಮರ್ಥ್ಯವನ್ನು ಗುರುತಿಸಿ ಹೆಚ್ಚುವರಿ ನೆರವು ನೀಡುವುದು ಮತ್ತು ಪೋಷಕರೊಂದಿಗೆ ನಿಯಮಿತವಾಗಿ ಸಂವಾದ ನಡೆಸುವ ಹೊಣೆ ನೀಡುತ್ತದೆ. ಸೆಕ್ಷನ್ 25ರ ಅನ್ವಯ ಶಿಕ್ಷಕ-ವಿದ್ಯಾರ್ಥಿ ಅನುಪಾತವನ್ನು ಪ್ರತಿಯೊಂದು ಶಾಲೆಯ ಮಟ್ಟದಲ್ಲಿಯೇ ಕಾಪಾಡಬೇಕೆಂದು ಹೇಳುತ್ತದೆ. ಸೆಕ್ಷನ್ 27 ಜನಗಣತಿ, ವಿಪತ್ತು ಪರಿಹಾರ ಮತ್ತು ಚುನಾವಣೆಗಳನ್ನು ಹೊರತುಪಡಿಸಿ ಶಿಕ್ಷಕರನ್ನು ಇತರ ಕಲಿಕೇತರ ಕೆಲಸಗಳಿಗೆ ನಿಯೋಜಿಸುವುದನ್ನು ನಿಷೇಧಿಸುತ್ತದೆ (ಶಿಕ್ಷಣ ಹಕ್ಕು ಕಾಯ್ದೆ, ಭಾರತ ಸರಕಾರ, 2009). ಆದರೆ ವಾಸ್ತವದಲ್ಲಿ ಶಿಕ್ಷಕರು ದತ್ತಾಂಶ ನಮೂದು, ಸಮೀಕ್ಷೆ, ಯೋಜನೆಗಳ ಪ್ರಚಾರ, ಪ್ರಮಾಣಪತ್ರ ಪರಿಶೀಲನೆ ಮತ್ತು ಹಲವು ಇಲಾಖೆಗಳ ವರದಿ ಕಾರ್ಯದಲ್ಲಿ ಸಿಲುಕಿ ನರಳುತ್ತಿದ್ದಾರೆ. ಮೂಲಭೂತ ಕಾನೂನು ಶಿಕ್ಷಕರಿಗೆ ಕಲಿಸಲು ಅವಕಾಶ ನೀಡಿದರೆ, ಶಿಕ್ಷಣ ಇಲಾಖೆ ಅವರಿಗೆ ಆನ್‌ಲೈನ್‌ನಲ್ಲಿ ಮಾಹಿತಿ ಹಾಗೂ ದತ್ತಾಂಶ ತುಂಬಲು ಮತ್ತು ಕಡತಗಳನ್ನು ಗಮನಿಸಲು ಹೇಳುತ್ತದೆ. ಇದು ಈ ಕಾಲಘಟ್ಟದ ಅಣಕವಾಗಿದೆ. ಶಿಕ್ಷಕರು ಈ ಎರಡರ ನಡುವೆ ಹೈರಾಣವಾಗಿದ್ದಾರೆ.
ಶಿಕ್ಷಕರ ಶಿಕ್ಷಣದ ಗುಣಮಟ್ಟ ಸಮಸ್ಯೆಯ ಮತ್ತೊಂದು ಮುಖ. ನ್ಯಾಯಮೂರ್ತಿ ಜೆ.ಎಸ್. ವರ್ಮಾ ಆಯೋಗವು ಶಿಕ್ಷಕರ ಶಿಕ್ಷಣವನ್ನು ಅಲ್ಪಾವಧಿಯ ಪ್ರಮಾಣಪತ್ರ ಉತ್ಪಾದಿಸುವ ವ್ಯಾಪಾರವನ್ನಾಗಿ ನೋಡದೆ, ವಿಶ್ವವಿದ್ಯಾನಿಲಯಾಧಾರಿತ, ಗಂಭೀರ ಜ್ಞಾನಬೋಧನಾ ಸಿದ್ಧತೆಯ ವೃತ್ತಿಪರ ಶಿಕ್ಷಣವನ್ನಾಗಿ ಪರಿವರ್ತಿಸಬೇಕೆಂದು ಹೇಳಿತ್ತು. ಶಿಕ್ಷಕರು ಕೇವಲ ಪಠ್ಯಪುಸ್ತಕದ ಪಾಠ ಹೇಳುವ ನೌಕರರಲ್ಲ; ಮಕ್ಕಳ ಸಾಮಾಜಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವ, ಪ್ರಶ್ನೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುವ ಹಾಗೂ ಸಂವಿಧಾನದ ಮೌಲ್ಯಗಳನ್ನು ಜೀವಂತಗೊಳಿಸುವ ವೃತ್ತಿಪರರು ಎಂದು ಆಯೋಗ ಪ್ರತಿಪಾದಿಸಿತು (ಶಿಕ್ಷಕರ ಶಿಕ್ಷಣ ಕುರಿತ ಉನ್ನತ ಮಟ್ಟದ ಆಯೋಗ, 2012). ಆದರೆ, ತರಬೇತಿಯ ಹೆಸರಿನಲ್ಲಿ ಮೇಲಿನಿಂದ ಕೆಳಗೆ ಹರಿಯುವ ಏಕರೂಪದ ಮಾಡ್ಯೂಲ್‌ಗಳು, ಕಡ್ಡಾಯ ಆನ್‌ಲೈನ್ ಕೋರ್ಸ್‌ಗಳು ಮತ್ತು ಪರೀಕ್ಷೆಗಳು ಹೆಚ್ಚುತ್ತಿವೆ; ಶಿಕ್ಷಕರ ಅನುಭವ, ಸ್ಥಳೀಯ ಜ್ಞಾನ ಮತ್ತು ತರಗತಿಯ ವಾಸ್ತವಕ್ಕೆ ನೀತಿ ರೂಪಣೆಯಲ್ಲಿ ದೊರೆಯುವ ಸ್ಥಾನ ಮಾತ್ರ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.
ಈ ಎಲ್ಲಾ ಸಮಸ್ಯೆಗಳ ಮೂಲ ಸಾರ್ವಜನಿಕ ಶಿಕ್ಷಣಕ್ಕೆ ಸಾಕಷ್ಟು ಹಣ ನೀಡದಿರುವುದು. ಕೊಠಾರಿ ಆಯೋಗವು 1966ರಲ್ಲಿಯೇ ಸಾರ್ವಜನಿಕ ಶಿಕ್ಷಣಕ್ಕೆ ರಾಷ್ಟ್ರೀಯ ಆದಾಯದ ಶೇ.6ರಷ್ಟನ್ನು ಮೀಸಲಿಡಬೇಕೆಂದು ಶಿಫಾರಸು ಮಾಡಿತ್ತು; 1968ರ ರಾಷ್ಟ್ರೀಯ ಶಿಕ್ಷಣ ನೀತಿಯಿಂದ 2020ರ ನೀತಿಯವರೆಗೆ ಈ ಗುರಿಯನ್ನು ಮರುಪ್ರತಿಪಾದಿಸಲಾಯಿತೇ ಹೊರತು ಹಣ ಮೀಸಲಿಡಲಿಲ್ಲ. ಅದು ಇಂದಿಗೂ ಸಾಧನೆಯಾಗಿಲ್ಲ. ಶಾಲೆಗೆ ಶಿಕ್ಷಕರಿಲ್ಲದೆ ಸ್ಮಾರ್ಟ್‌ಬೋರ್ಡ್ ನೀಡುವುದು, ವಿಷಯ ಶಿಕ್ಷಕರಿಲ್ಲದೆ ಪ್ರಯೋಗಾಲಯ ನಿರ್ಮಿಸುವುದು, ಶೌಚಾಲಯವಿಲ್ಲದ ಶಾಲೆಗೆ ಕಂಪ್ಯೂಟರ್ ಒದಗಿಸುವುದು, ಕುಸಿದು ಬೀಳುವ ಛಾವಣಿಯ ಮಧ್ಯೆ ಶಾಲೆಗಳಿಗೆ ಮುಖ ಗುರುತಿಸುವಿಕೆ ತಂತ್ರಜ್ಞಾನ ವ್ಯವಸ್ಥೆ ಅಳವಡಿಸುವುದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ‘ಕಲಿಕಾ ಫಲಿತಾಂಶ’ಕ್ಕೆ ಶಿಕ್ಷಕರನ್ನೇ ಉತ್ತರದಾಯಿಗಳನ್ನಾಗಿಸುವುದು, ಇತ್ಯಾದಿಗಳು ಒಂದು ಬಗೆಯ ನಗೆಪಾಟಲಿನ ಸುಧಾರಣೆಗಳಾಗಿವೆ. ಸಾರ್ವಜನಿಕ ಹೂಡಿಕೆಯನ್ನು ಕಡಿಮೆ ಮಾಡಿ, ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಆ ದುರ್ಬಲತೆಯ ಹೊಣೆಯನ್ನು ಶಿಕ್ಷಕರ ಮೇಲೆ ಹಾಕಿ, ಕೊನೆಗೆ ಖಾಸಗೀಕರಣವೇ ಪರಿಹಾರವೆಂದು ಪ್ರತಿಪಾದಿಸುವುದು ಶಿಕ್ಷಣದಲ್ಲಿ ಒಂದು ವಿಷವರ್ತುಲವಾಗಿದೆ.
ಶಿಕ್ಷಕರ ದಿನಾಚರಣೆಯಲ್ಲಿ ಈ ಸಂದರ್ಭದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಶಿಕ್ಷಕರನ್ನು ಒದಗಿಸುವ ಒಂದು ರಾಷ್ಟ್ರೀಯ ಯೋಜನೆ ರೂಪಿಸಬೇಕಿದೆ. ಮಂಜೂರಾದ ಮತ್ತು ಖಾಲಿ ಹುದ್ದೆಗಳ ಶಾಲೆವಾರು ಸಾರ್ವಜನಿಕ ದತ್ತಾಂಶ ಪ್ರಕಟಣೆ; ಪ್ರಾಥಮಿಕ ಹಂತದ ಏಕೋಪಾಧ್ಯಾಯ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ನಿಗದಿತ ಅವಧಿಯಲ್ಲಿ ಕನಿಷ್ಠ ಇಬ್ಬರು ಶಿಕ್ಷಕರು ಮತ್ತು ಏಕೋಪಾಧ್ಯಾಯ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕನಿಷ್ಠ ಐದು ಜನ ಶಿಕ್ಷಕರ ನೇಮಕ; ಪ್ರತಿಯೊಂದು ಶಾಲೆಯಲ್ಲೂ ತರಗತಿ ಮತ್ತು ವಿಷಯವಾರು ಶಿಕ್ಷಕರ ನೇಮಕ; ಗುತ್ತಿಗೆ ಮತ್ತು ಅತಿಥಿ ಶಿಕ್ಷಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆ; ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 27ನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿ ಕಲಿಕೇತರ ಕೆಲಸಕ್ಕೆ ಪ್ರತ್ಯೇಕ ಆಡಳಿತ ಸಿಬ್ಬಂದಿಯ ನೇಮಕ; ವಿಶೇಷ ಶಿಕ್ಷಕರು ಹಾಗೂ ಸಮಾಲೋಚಕರ ಹುದ್ದೆಗಳ ಭರ್ತಿ; ಶಿಕ್ಷಕರ ವರ್ಗಾವಣೆ, ಭಡ್ತಿಯಲ್ಲಿ ಪಾರದರ್ಶಕತೆ ಮತ್ತು ಶಿಕ್ಷಕರ ಸಂಘಗಳು ಮತ್ತು ತರಗತಿ ಶಿಕ್ಷಕರಿಗೆ ನೀತಿ ನಿರೂಪಣೆಯಲ್ಲಿ ಪ್ರಜಾಸತ್ತಾತ್ಮಕ ಸ್ಥಾನ ನೀಡಬೇಕು.
ಶಿಕ್ಷಕರಿಗೆ ನಿಜವಾದ ಗೌರವವೆಂದರೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು. ಹೂಗುಚ್ಛ ನೀಡುವುದರ ಜೊತೆಗೆ ಶಾಲೆಗಳಿಗೆ ಅಗತ್ಯ ಸಂಖ್ಕೆಯ ಶಿಕ್ಷಕರನ್ನು ನೀಡುವುದು. ಭಾಷಣದಲ್ಲಿ ‘ಗುರುದೇವೋ ಭವ’ ಎನ್ನುವುದಕ್ಕಿಂತ ಶಿಕ್ಷಕರನ್ನು ಗುಮಾಸ್ತಗಿರಿಯಿಂದ ಮುಕ್ತಗೊಳಿಸುವುದು. ಪ್ರತಿಯೊಂದು ಸಾರ್ವಜನಿಕ ಶಾಲೆಯು ಸಂವಿಧಾನದ ತೊಟ್ಟಿಲು. ಆ ತೊಟ್ಟಿಲನ್ನು ತೂಗಬೇಕಾದ ಶಿಕ್ಷಕರನ್ನು, ಅಭದ್ರತೆಯ ಉದ್ಯೋಗ, ಕಲಿಕೇತರ ಹೊರೆ, ಆಡಳಿತಾತ್ಮಕ ಕೆಲಸ ಮತ್ತು ದಿನನಿತ್ಯ ಮಾಹಿತಿ ರವಾನಿಸುವ ಕಿರುಕುಳ-ಅವಮಾನಗಳಿಂದ ಹಿಂಸಿಸಿದರೆ ಭಾರತದ ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ. ಶಿಕ್ಷಕರನ್ನು ಗೌರವಿಸುವುದು ಕೇವಲ ಅವರ ಹಿತರಕ್ಷಣೆಯಲ್ಲ. ಬದಲಿಗೆ, ಪ್ರತಿಯೊಂದು ಮಗುವಿನ ಶಿಕ್ಷಣದ ಮೂಲಭೂತ ಹಕ್ಕು, ಸಮಸಮಾಜದ ನಿರ್ಮಾಣ ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸಲು ಅವರೊಂದಿಗೆ ಸಮಾನವಾಗಿ ಹೆಜ್ಜೆ ಹಾಕುವುದು.






