ರಾಜಕೀಯ ಗದ್ದಲಗಳಿಗೆ ವೇದಿಕೆಯಾದ ಅಧಿವೇಶನ ಕಲಾಪಗಳು...

ಬೆಳಗಾವಿ(ಸುವರ್ಣವಿಧಾನಸೌಧ), ಡಿ.15: ಜನರ ಆಶೋತ್ತರಗಳಿಗೆ ಅನುಗುಣವಾಗಿ ಆಡಳಿತ ಮತ್ತು ವಿಪಕ್ಷಗಳು ಪರಸ್ಪರ ಚರ್ಚೆ ನಡೆಸಿ, ಅದಕ್ಕೆ ಸರಕಾರ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜರುಗುವ ಅಧಿವೇಶನಗಳು ಇತ್ತೀಚೆಗೆ ರಾಜಕೀಯ ಬಡಿದಾಟಗಳಿಗೆ ವೇದಿಕೆಗಳಾಗಿವೆ.
ಅದರಂತೆ ಈ ಬಾರಿಯ ಬೆಳಗಾವಿ ಚಳಿಗಾಲದ ಅಧಿವೇಶನವೇನೂ ಹೊರತಾಗಿಲ್ಲ. ಈಗಾಗಲೇ ಅಧಿವೇಶನದ ಅರ್ಧ ಭಾಗ ಪೂರ್ಣಗೊಂಡಿದ್ದು, ಇಲ್ಲಿಯವರೆಗೆ ಉಭಯ ಸದನದಲ್ಲಿ ನಡೆದ ಕೆಲವೇ ಕೆಲವು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತ ಚರ್ಚೆಗಳು ಆರೋಪ-ಪ್ರತ್ಯಾರೋಪಗಳಿಗಷ್ಟೇ ಸೀಮಿತವಾಗಿದ್ದು, ಉಳಿದಂತೆ ಸಿಎಂ ಕುರ್ಚಿ ಕಿತ್ತಾಟ, ಬಣ ಬಡಿದಾಟಗಳಂತಹ ರಾಜಕೀಯ ಗದ್ದಲಗಳಿಗೆ ಸದನ ಸಾಕ್ಷಿಯಾದಂತಾಗಿದೆ.
‘ಪ್ರಾದೇಶಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಪ್ರಾರಂಭವಾದ ಬೆಳಗಾವಿ ಚಳಿಗಾಲದ ಅಧಿವೇಶನ 2006ರಿಂದ ಈವರೆಗೆ 13 ಅಧಿವೇಶನಗಳು ನಡೆದಿವೆ. ಈಗ 14ನೇ ಅಧಿವೇಶನ ನಡೆಯುತ್ತಿದೆ. ಆದರೆ, ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಾದ ಕೃಷ್ಣಾ ಮೇಲ್ದಂಡೆ, ಮಹದಾಯಿ, ಕಳಸಾ ಬಂಡೂರಿಯಂಥಹ ನೀರಾವರಿ ಯೋಜನೆಗಳು, ಅರಣ್ಯ ಒತ್ತುವರಿ, ವಲಸೆ ಸಮಸ್ಯೆ, ಉದ್ಯೋಗ ಕೊರತೆ, ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಇಂದಿಗೂ ಶಾಶ್ವತ ಪರಿಹಾರ ನೀಡಲಾಗಿಲ್ಲ. ಯಾವ ಉದ್ದೇಶ ಇಟ್ಟುಕೊಂಡು ಸರಕಾರ ಸುವರ್ಣವಿಧಾನಸೌಧವನ್ನು ಬೆಳಗಾವಿಯಲ್ಲಿ ಕಟ್ಟಲಾಗಿದೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ. ಈ ಭಾಗದ ಸಮಸ್ಯೆಗಳಿಗೆ ಪರಿಹಾರ ನೀಡದ ಈ ಅಧಿವೇಶನ ಯಾಕೆ ಬೇಕು?’ ಎಂಬುದು ಇಲ್ಲಿನ ಜನಸಾಮಾನ್ಯರ ಒಕ್ಕೊರಲಿನ ಪ್ರಶ್ನೆ.
ಜನರ ಬದುಕು ಬರಡು :
15 ಜಿಲ್ಲೆಗಳನ್ನು ಒಳಗೊಂಡಿರುವ ಉತ್ತರ ಕರ್ನಾಟಕ ಭಾಗದ ಬಹುತೇಕ ಕಡೆಗಳಲ್ಲಿ ಜನಸಾಮಾನ್ಯರು ಇಂದಿಗೂ ವಾಸಿಸಲು ಸೂರಿಲ್ಲದೆ, ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯವಿಲ್ಲದೇ ಬದುಕುವಂತಹ ದುಸ್ಥಿತಿ ಇದೆ. ನೂರಾರು ಊರುಗಳಿಗೆ ಸರಕಾರಿ ಬಸ್ ವ್ಯವಸ್ಥೆಯೇ ಇಲ್ಲ, ರಸ್ತೆ ಸಂಪರ್ಕ ಹದಗೆಟ್ಟಿದೆ. ಸೂಕ್ತ ನೀರಾವರಿ ವ್ಯವಸ್ಥೆಯಿಲ್ಲದೆ ಕೃಷಿಯನ್ನೇ ನಂಬಿಕೊಂಡ ಜನರ ಬದುಕು ಬರಡಾಗಿದೆ. ಕೆಲಸಕ್ಕಾಗಿ ಇಲ್ಲಿನ ಬಹುತೇಕ ಜನರು ವರ್ಷಾನುಗಟ್ಟಲೇ ವಲಸೆ ಹೋಗುತ್ತಾರೆ. ಹೀಗಿದ್ದಾಗ, ಈವರೆಗೂ ಹಲವು ಸರಕಾರಗಳು ಬೆಳಗಾವಿಯಲ್ಲಿ ಅಧಿವೇಶನ ನಡೆಸಿ ಉತ್ತರ ಕರ್ನಾಟಕಕ್ಕೆ ಏನು ಅನುಕೂಲ ಒದಗಿಸಿವೆ ಎಂಬುದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಅವರ ಪ್ರಶ್ನೆಯಾಗಿದೆ.
ಜಾತ್ರೆಗೆ ಬಂದಂತೆ ಸರಕಾರ ಬಂದು ಹೋಗುತ್ತದೆ :
ಈ ಭಾಗದ ಹಲವು ದಶಕಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದಲೇ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ಕಟ್ಟಿ, ಪ್ರತೀ ವರ್ಷವೂ ಇಲ್ಲಿ 10 ದಿನಗಳ ಕಾಲ ಚಳಿಗಾಲ ಅಧಿವೇಶನ ನಡೆಸಲಾಗುತ್ತದೆ. 2006ರಲ್ಲಿ ಮೊದಲ ಅಧಿವೇಶನ ನಡೆದಾಗ ಐದು ಕೋಟಿ ರೂ.ಖರ್ಚಾಗಿತ್ತು. ಈಗ 14ನೇ ಅಧಿವೇಶನಕ್ಕೆ ಸರಕಾರ ಬರೋಬ್ಬರಿ 21 ಕೋಟಿ ರೂ. ವ್ಯಯ ಮಾಡಿದೆ. ಆದರೆ, ಇದು ಕಾಟಾಚಾರದ ಅಧಿವೇಶನ, ಜಾತ್ರೆಗೆ ಬಂದ ರೀತಿಯಲ್ಲಿ ಸರಕಾರ ಬಂದು ಹೋಗುತ್ತದೆ. ಉತ್ತರ ಕರ್ನಾಟಕದ ಶಾಸಕರ ಹಾಜರಾತಿಯೇ ಕಡಿಮೆ ಇರುತ್ತದೆ. ಬೆಳಗ್ಗೆ ಸಹಿ ಮಾಡಿ ಹೋದವರು ವಾಪಸ್ ಸದನಕ್ಕೆ ಬರುವುದೇ ಇಲ್ಲ ಎಂಬ ದೂರುಗಳು ಪ್ರತಿವರ್ಷವೂ ಕೇಳಿ ಬರುತ್ತಿದೆ. ಈ ಸಲವೂ ಅದೇ ರೀತಿ ಆಗಿದೆ. ಅಧಿವೇಶನದ ಬಗ್ಗೆ ಯಾವ ನಿರೀಕ್ಷೆಗಳೂ ಉಳಿದಿಲ್ಲ ಎಂದು ಅಶೋಕ್ ಚಂದರಗಿಯವರ ಆರೋಪವಾಗಿದೆ.
ಪ್ರತ್ಯೇಕ ರಾಜ್ಯ ಕೊಡಿ ಎನ್ನುವುದನ್ನು ಬಿಟ್ಟು ಪ್ರತ್ಯೇಕ ಬಜೆಟ್ ತನ್ನಿ :
ಉತ್ತರ ಕರ್ನಾಟಕ ಭಾಗದ ಹಲವಾರು ಸಮಸ್ಯೆಗಳು ಇಂದಿಗೂ ಸಮಸ್ಯೆ ಆಗಿಯೇ ಉಳಿದಿರಲು ಮೂಲ ಕಾರಣ ಉತ್ತರ ಕರ್ನಾಟಕದ 96 ಶಾಸಕರು! ಎಲ್ಲ ಪಕ್ಷಗಳನ್ನು ಒಳಗೊಂಡ 96 ಶಾಸಕರಲ್ಲಿ ಕನಿಷ್ಠ 50 ಶಾಸಕರಾದರೂ ಒಗ್ಗಟ್ಟಿನಿಂದ ಉ.ಕ.ಭಾಗದ ಅಭಿವೃದ್ಧಿಗೆ ದಿಟ್ಟತನದಲ್ಲಿ ಧ್ವನಿ ಎತ್ತಿದ್ದರೆ ಬದಲಾವಣೆ ಕಾಣಬಹುದಾಗಿತ್ತು. ಅದನ್ನು ಬಿಟ್ಟು ಈ ಭಾಗದ ಜನರನ್ನು ಭಾವನಾತ್ಮಕವಾಗಿ ಮೂರ್ಖರನ್ನಾಗಿಸಲು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು ಎನ್ನುವ ಕೂಗನ್ನು ಆಗಾಗ ಮುನ್ನೆಲೆಗೆ ತರುತ್ತಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಇದೆಲ್ಲವೂ ಇಲ್ಲಿನ ಜನಪ್ರತಿನಿಧಿಗಳ ರಾಜಕೀಯ ಅಜೆಂಡಾ ಅಷ್ಟೇ. ಯಾವುದೇ ಪಕ್ಷದ ಸರಕಾರವಿರಲಿ ಈ ಭಾಗದ ಶಾಸಕರಲ್ಲಿ ಒಗ್ಗಟ್ಟು, ಧೈರ್ಯವಿದ್ದರೆ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ತನ್ನಿ ಎನ್ನುವುದು ಅಶೋಕ್ ಚಂದರಗಿಯವರ ಸವಾಲಾಗಿದೆ.
ಕುರ್ಚಿ ಕದನಕ್ಕೆ ಸದನ ಸೀಮಿತ :
ಚಳಿಗಾಲದ ಅಧಿವೇಶನ ಮಧ್ಯೆಯೂ ಬೆಳಗಾವಿ ಹೊರವಲಯದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮತ್ತವರ ಬಣದವರು ಸಿಎಂ ಬದಲಾವಣೆ ವಿಚಾರದಲ್ಲಿ ಶಾಸಕರನ್ನು ಸೇರಿಸಿ ಅಭಿಪ್ರಾಯ ಸಂಗ್ರಹಿಸುವ ಯತ್ನದಲ್ಲಿ ತೊಡಗಿದ್ದು, ಈ ಗದ್ದಲ ಸದನಲ್ಲೂ ಮುಂದುವರಿದಿದೆ. ಆಡಳಿತರೂಢ ಕಾಂಗ್ರೆಸ್‌ನ ಕುರ್ಚಿ ಕಿತ್ತಾಟ, ವಿಪಕ್ಷಗಳ ಟೀಕೆಗೆ ಆಹಾರವಾಗಿ ಒಟ್ಟಾರೆ ಸದನ ಗದ್ದಲಗೂಡಾಗಿದೆ. ಇದರ ನಡುವೆ ಉತ್ತರ ಭಾಗದ ಸಮಸ್ಯೆಗಳು ಗೌಣವಾಗಿವೆ. ಇನ್ನರ್ಧದ ಅಧಿವೇಶನದಲ್ಲಿಯಾದರೂ ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿ. ಚರ್ಚೆಗಳು ತಾರ್ಕಿಕ ಅಂತ್ಯಕಾಣಲಿ.
-ಅಶೋಕ್ ಚಂದರಗಿ, ಅಧ್ಯಕ್ಷ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ
ಬೆಳಗಾವಿ ಅಧಿವೇಶನ ಎಂಬುದು ಟೂರಿಂಗ್ ಟಾಕೀಸ್ ಎಂಬ ಹಣೆಪಟ್ಟಿ ಪಡೆದುಕೊಂಡಿದೆ. ಬೆಂಗಳೂರಿನಿಂದ ಬೆಳಗಾವಿಗೆ ಬರುವ ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಸುತ್ತಲಿನ ಜಿಲ್ಲೆಗಳಲ್ಲಿರುವ ಪರಿಸ್ಥಿತಿ ಅವಲೋಕಿಸಿ ಸರಕಾರಕ್ಕೆ ವರದಿ ಒಪ್ಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಲ್ಲಿ ಇಲ್ಲಿನ ಜನರ ನಿಜವಾದ ಬದುಕು ಅನಾವರಣಗೊಳ್ಳುತ್ತದೆ. ಹಾಗಾದಾಗ ಸೂಕ್ತ ಬದಲಾವಣೆ ತರಲು ಸಾಧ್ಯ.
-ರಮೇಶ್ ಕತ್ತಿ, ಮಾಜಿ ಸಂಸದ
100ಕ್ಕೂ ಅಧಿಕ ಪ್ರಶ್ನೆಗಳಿಗಿಲ್ಲ ಉತ್ತರ? :
ಇಲ್ಲಿಯವರೆಗೆ ವಿಧಾನ ಪರಿಷತ್‌ನಲ್ಲಿ 100ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಲಿಖಿತ ಉತ್ತರವೇ ಬಂದಿಲ್ಲ ಎಂದು ಜೆಡಿಎಸ್‌ನ ಭೋಜೇಗೌಡ ಶುಕ್ರವಾರ(ಡಿ.12)ದ ಕಲಾಪದಲ್ಲಿ ಆಕ್ರೋಶ ಹೊರಹಾಕಿದರು. ಇದು ಸರಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಜನರ ಸಮಸ್ಯೆಗಳ ಕುರಿತ ಪ್ರಶ್ನೆಗಳಿಗೆ ಉತ್ತರ ಕೊಡಲಾಗದಿದ್ದರೆ ಕೋಟ್ಯಂತರ ರೂ.ಗಳನ್ನು ದುಂದುವೆಚ್ಚ ಮಾಡಿ ಅಧಿವೇಶನಗಳೇಕೆ ನಡೆಸಬೇಕು? ಎಂಬುದು ಸಾಮಾಜಿಕ ಕಾರ್ಯಕರ್ತ ಸತೀಶ್ ಅವರ ಅಭಿಪ್ರಾಯ.







