ಅರಳಲಿ ಹೆಣ್ಣುಮಕ್ಕಳ ಕನಸುಗಳು
ಇಂದು ವಿಶ್ವ ಹೆಣ್ಣುಮಗುವಿನ ದಿನ

ಹೆಣ್ಣುಮಕ್ಕಳ ಹಕ್ಕುಗಳು, ಸಬಲೀಕರಣ ಮತ್ತು ಅವರು ಎದುರಿಸುತ್ತಿರುವ ಸವಾಲುಗಳ ಕುರಿತು ಜಾಗತಿಕ ಗಮನ ಸೆಳೆಯುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 11ರಂದು ಅಂತರ್‌ರಾಷ್ಟ್ರೀಯ ಹೆಣ್ಣುಮಗುವಿನ ದಿನವನ್ನು ಆಚರಿಸಲಾಗುತ್ತದೆ. ಹೆಣ್ಣುಮಕ್ಕಳನ್ನು ಕೇವಲ ರಕ್ಷಣೆಗೆ ಒಳಪಡಬೇಕಾದವರಾಗಿ ನೋಡುವುದಕ್ಕಿಂತ, ಹಕ್ಕುಗಳು, ಸಾಮರ್ಥ್ಯ, ನಾಯಕತ್ವ ಮತ್ತು ನಿರ್ಧಾರಶಕ್ತಿ ಹೊಂದಿರುವ ಪೂರ್ಣ ವ್ಯಕ್ತಿಗಳೆಂದು ಗುರುತಿಸುವುದು ಈ ದಿನದ ಮೂಲ ಆಶಯ.
2026ರ ಅಂತರ್‌ರಾಷ್ಟ್ರೀಯ ಹೆಣ್ಣುಮಗು ದಿನದ ಜಾಗತಿಕ ಸಂದೇಶ ‘End child marriage and invest in girls’ rights’ (ಬಾಲ್ಯವಿವಾಹಕ್ಕೆ ಅಂತ್ಯ ಹಾಡಿ, ಹೆಣ್ಣುಮಕ್ಕಳ ಹಕ್ಕುಗಳಲ್ಲಿ ಹೂಡಿಕೆ ಮಾಡಿ) ಎಂಬುದಾಗಿದೆ. ಈ ಸಂದೇಶವು ಹೆಣ್ಣುಮಕ್ಕಳ ಭವಿಷ್ಯವನ್ನು ರಕ್ಷಿಸುವಲ್ಲಿ ಶಿಕ್ಷಣ, ಹಕ್ಕುಗಳು ಮತ್ತು ಸಾಮಾಜಿಕ ಹೂಡಿಕೆಯ ಮಹತ್ವವನ್ನು ಸ್ಪಷ್ಟಪಡಿಸುತ್ತದೆ. ಬಾಲ್ಯವು ಮದುವೆಯ ಹೊರೆ ಹೊರುವ ಕಾಲವಲ್ಲ; ಅದು ಕಲಿಯುವ, ಆಡುವ, ಪ್ರಶ್ನಿಸುವ, ಕನಸು ಕಾಣುವ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳುವ ಅವಧಿ. ಬಾಲ್ಯವಿವಾಹವು ಹೆಣ್ಣುಮಗುವಿನ ಶಿಕ್ಷಣವನ್ನು ಸ್ಥಗಿತಗೊಳಿಸುವುದರ ಜೊತೆಗೆ ಆರೋಗ್ಯ, ಪೌಷ್ಟಿಕತೆ, ಆರ್ಥಿಕ ಸ್ವಾವಲಂಬನೆ ಮತ್ತು ಸ್ವತಂತ್ರ ನಿರ್ಧಾರಗಳ ಮೇಲೂ ದೀರ್ಘಕಾಲದ ಪರಿಣಾಮ ಬೀರುತ್ತದೆ. ಸಂಪ್ರದಾಯ, ಕುಟುಂಬದ ಗೌರವ, ಬಡತನ ಅಥವಾ ಸಾಮಾಜಿಕ ಒತ್ತಡ ಎಂಬ ಯಾವುದೇ ಕಾರಣವೂ ಮಗುವಿನ ಹಕ್ಕಿಗಿಂತ ದೊಡ್ಡದಾಗಬಾರದು. ಬಾಲ್ಯವಿವಾಹ ನಿರ್ಮೂಲನ ಕೇವಲ ಕಾನೂನು ಜಾರಿಯ ಪ್ರಶ್ನೆಯಲ್ಲ; ಬಡತನ ನಿವಾರಣೆ, ಶಿಕ್ಷಣದ ವಿಸ್ತರಣೆ, ಸಾಮಾಜಿಕ ಭದ್ರತೆ ಮತ್ತು ಹಾನಿಕಾರಕ ಸಾಮಾಜಿಕ ರೂಢಿಗಳ ಪರಿವರ್ತನೆಯೂ ಅದರ ಭಾಗವಾಗಬೇಕು.
ಹೆಣ್ಣುಮಗುವಿನ ಶಿಕ್ಷಣ ಎಂದರೆ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವುದಲ್ಲ. ಅದು ಆತ್ಮವಿಶ್ವಾಸ, ಪ್ರಶ್ನಿಸುವ ಸಾಮರ್ಥ್ಯ, ನಿರ್ಧಾರಶಕ್ತಿ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆಯ ದಾರಿಗೆ ಕರೆದೊಯ್ಯುತ್ತದೆ. ಶಾಲೆಯಿಂದ ಹೊರಗುಳಿಯುವ ಪ್ರತಿಯೊಂದು ಹೆಣ್ಣುಮಗುವೂ ತನ್ನ ವೈಯಕ್ತಿಕ ಅವಕಾಶವನ್ನು ಮಾತ್ರ ಕಳೆದುಕೊಳ್ಳುವುದಿಲ್ಲ; ಸಮಾಜವೂ ಒಂದು ಸಾಧ್ಯತೆಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬ ಹೆಣ್ಣುಮಗುವಿಗೂ ಗುಣಮಟ್ಟದ ಶಿಕ್ಷಣದ ಜೊತೆಗೆ ಸುರಕ್ಷಿತ ಶಾಲಾ ವಾತಾವರಣ, ಆರೋಗ್ಯ ಮತ್ತು ಪೌಷ್ಟಿಕತೆ, ಸುರಕ್ಷಿತ ಸಾರಿಗೆ, ಕ್ರೀಡೆ, ಕೌಶಲ್ಯಾಭಿವೃದ್ಧಿ ಹಾಗೂ ಡಿಜಿಟಲ್ ಕಲಿಕೆಯ ಅವಕಾಶಗಳು ದೊರೆಯಬೇಕು. ಬಡತನ ಅಥವಾ ಸಾಮಾಜಿಕ ಹಿಂದುಳಿಯುವಿಕೆ ಶಿಕ್ಷಣಕ್ಕೆ ಅಡ್ಡಿಯಾಗದಂತೆ ವಿದ್ಯಾರ್ಥಿವೇತನ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ತಲುಪಬೇಕು. ಹೆಣ್ಣುಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಅವರ ಸ್ವಾತಂತ್ರ್ಯವನ್ನು ಸೀಮಿತಗೊಳಿಸುವುದು ಶಾಶ್ವತ ಪರಿಹಾರವಲ್ಲ. ದೌರ್ಜನ್ಯಕ್ಕೆ ಒಳಗಾದ ಮಗುವನ್ನೇ ತಪ್ಪಿತಸ್ಥಳನ್ನಾಗಿ ಮಾಡುವ ಮನೋಭಾವ ಬದಲಾಗಬೇಕು. ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸಲು ಭಾರತದಲ್ಲಿ POCSO ಕಾಯ್ದೆ, 2012 ಜಾರಿಯಲ್ಲಿದೆ. ಆದರೆ ಕಾನೂನು ಮಾತ್ರ ಸಾಕಾಗುವುದಿಲ್ಲ. ಕಾನೂನು ಅರಿವು, ಸಮಯೋಚಿತ ದೂರು, ಸಂವೇದನಾಶೀಲ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ, ಕುಟುಂಬದ ಬೆಂಬಲ ಹಾಗೂ ಮಗುವಿನ ಮಾತನ್ನು ನಂಬುವ ಸಾಮಾಜಿಕ ಮನೋಭಾವ ಅಗತ್ಯ. ಸಂಕಷ್ಟದಲ್ಲಿರುವ ಮಗುವಿಗೆ ‘‘ನೀನು ಏಕೆ ಹೋದೆ?’’ ಎನ್ನುವುದಕ್ಕಿಂತ ‘‘ನಿನಗೆ ಏನಾಯಿತು? ನಾವು ನಿನ್ನೊಂದಿಗಿದ್ದೇವೆ’’ ಎಂಬ ಭರವಸೆ ದೊರೆಯಬೇಕು.
ಸಮಾನತೆಯ ಪಾಠ ಮೊದಲು ಮನೆಯಿಂದಲೇ ಆರಂಭವಾಗಬೇಕು. ಮಗನಿಗೆ ದೊರೆಯುವ ಆಹಾರ, ಶಿಕ್ಷಣ, ಆರೋಗ್ಯ, ಸ್ವಾತಂತ್ರ್ಯ ಮತ್ತು ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ಅವಕಾಶ ಮಗಳಿಗೂ ಸಮಾನವಾಗಿ ದೊರೆಯಬೇಕು. ಮನೆಯ ಕೆಲಸ ಹೆಣ್ಣುಮಕ್ಕಳ ಕರ್ತವ್ಯ ಮಾತ್ರ ಎಂಬ ಮನೋಭಾವ ಬದಲಾಗಬೇಕು. ಮಗನಿಗೆ ಅಧಿಕಾರ ಮತ್ತು ಮಗಳಿಗೆ ವಿಧೇಯತೆಯನ್ನು ಮಾತ್ರ ಕಲಿಸುವ ಕುಟುಂಬ ವ್ಯವಸ್ಥೆಯೂ ಬದಲಾಗಬೇಕಾಗಿದೆ. ಹೆಣ್ಣುಮಗುವಿನ ಮೌಲ್ಯ ಅವಳ ರೂಪ, ಉಡುಪು ಅಥವಾ ದೇಹದಲ್ಲಿ ಅಳೆಯಬಾರದು. ಅವಳ ಮೌಲ್ಯ ವ್ಯಕ್ತಿತ್ವದಲ್ಲಿ; ಅವಳ ಶಕ್ತಿ ಜ್ಞಾನದಲ್ಲಿ; ಅವಳ ಗೌರವ ಹಕ್ಕಿನಲ್ಲಿ; ಅವಳ ಭವಿಷ್ಯ ಅವಳ ಕನಸುಗಳಲ್ಲಿ ಇದೆ. ನಿಜವಾದ ಸಬಲೀಕರಣವೆಂದರೆ ಅವಳ ಪರವಾಗಿ ಎಲ್ಲವನ್ನೂ ನಿರ್ಧರಿಸುವುದಲ್ಲ; ಅವಳ ಮಾತನ್ನು ಕೇಳುವುದು, ಅಭಿಪ್ರಾಯಕ್ಕೆ ಗೌರವ ನೀಡುವುದು ಮತ್ತು ತನ್ನ ಬದುಕಿನ ನಿರ್ಧಾರಗಳಲ್ಲಿ ಅವಳನ್ನೂ ಭಾಗಿಯಾಗಿಸುವುದಾಗಿದೆ.
ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ಸುರಕ್ಷತೆ, ಕೌಶಲ್ಯಾಭಿವೃದ್ಧಿ ಮತ್ತು ಸಾಮಾಜಿಕ ಭದ್ರತೆಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಯೋಜನೆಗಳ ಸಂಖ್ಯೆ ಹೆಚ್ಚುವುದಕ್ಕಿಂತ ಅವು ನಿಜವಾಗಿಯೂ ಅಗತ್ಯವಿರುವ ಮಗುವಿನವರೆಗೆ ತಲುಪುತ್ತಿವೆಯೇ ಎಂಬುದು ಮುಖ್ಯ. ಎಷ್ಟು ಯೋಜನೆಗಳಿವೆ? ಎಂಬುದಕ್ಕಿಂತ ಎಷ್ಟು ಹೆಣ್ಣುಮಕ್ಕಳ ಬದುಕಿನಲ್ಲಿ ನೈಜ ಬದಲಾವಣೆ ಬಂದಿದೆ? ಎಂಬ ಪ್ರಶ್ನೆಯೇ ಆಡಳಿತದ ಯಶಸ್ಸಿನ ಮಾನದಂಡವಾಗಬೇಕು. ಪೊಲೀಸ್, ಮಕ್ಕಳ ರಕ್ಷಣಾ ಘಟಕಗಳು, ಶಾಲೆಗಳು, ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಮತ್ತು ಮಹಿಳಾ-ಮಕ್ಕಳ ಅಭಿವೃದ್ಧಿ ವ್ಯವಸ್ಥೆಗಳ ನಡುವೆ ಸಮನ್ವಯವೂ ಬಲವಾಗಬೇಕು. ಮಗುವಿನ ಗುರುತು, ಗೌಪ್ಯತೆ ಮತ್ತು ಘನತೆಯ ರಕ್ಷಣೆಗೆ ಮೊದಲ ಆದ್ಯತೆ ದೊರೆಯಬೇಕು.
ಹೆಣ್ಣುಮಗುವಿನ ರಕ್ಷಣೆ ಕೇವಲ ಸರಕಾರ ಅಥವಾ ಮಹಿಳಾ ಮತ್ತು ಮಕ್ಕಳ ಇಲಾಖೆಯ ಜವಾಬ್ದಾರಿಯಲ್ಲ. ಕುಟುಂಬ, ಶಾಲೆ, ಪೊಲೀಸ್, ನ್ಯಾಯಾಂಗ, ಮಾಧ್ಯಮ, ಸ್ವಯಂಸೇವಾ ಸಂಸ್ಥೆಗಳು, ಯುವಜನರು ಮತ್ತು ಪ್ರತಿಯೊಬ್ಬ ನಾಗರಿಕರೂ ತಮ್ಮ ಪಾತ್ರವನ್ನು ನಿರ್ವಹಿಸಬೇಕು.
ಒಂದು ಹೆಣ್ಣುಮಗುವನ್ನು ಶಾಲೆಯಲ್ಲಿ ಉಳಿಸುವುದು ಕೇವಲ ಒಬ್ಬ ವಿದ್ಯಾರ್ಥಿನಿಯನ್ನು ಉಳಿಸುವುದಲ್ಲ; ಒಂದು ಕುಟುಂಬದ ಭವಿಷ್ಯವನ್ನು ಬದಲಿಸುವುದು. ಅವಳಿಗೆ ಕೌಶಲ್ಯ ನೀಡುವುದು ಆರ್ಥಿಕ ಸ್ವಾವಲಂಬನೆಯ ದಾರಿಗೆ ಕರೆದೊಯ್ಯುವುದು. ಅವಳ ಧ್ವನಿಗೆ ಗೌರವ ನೀಡುವುದು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸು ವುದು. ಅವಳಿಗೆ ಸುರಕ್ಷತೆ ನೀಡುವುದು ಮಾನವೀಯ ಸಮಾಜವನ್ನು ನಿರ್ಮಿಸುವುದು. ಹೀಗಾಗಿ ಈ ಅಂತರ್‌ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಸಂಕಲ್ಪ ಸ್ಪಷ್ಟವಾಗಿರಲಿ-ಹೆಣ್ಣುಮಕ್ಕನ್ನು ರಕ್ಷಿಸುವುದಷ್ಟೇ ಅಲ್ಲ, ಸುರಕ್ಷಿತವಾಗಿ ಬದುಕುವ ಹಕ್ಕನ್ನು ಖಚಿತಪಡಿಸೋಣ. ಅವಳಿಗೆ ಅವಕಾಶ ನೀಡುವುದಷ್ಟೇ ಅಲ್ಲ, ಸಮಾನ ಅವಕಾಶವನ್ನು ಹಕ್ಕಾಗಿ ಒದಗಿಸೋಣ. ಅವಳ ಕಣ್ಣೀರಲ್ಲ, ಕನಸುಗಳಲ್ಲಿ ಅರಳಲಿ ನಾಳೆಯ ಭಾರತ. ಅವಳ ಭವಿಷ್ಯವನ್ನು ಬದಲಿಸುವುದು ಎಂದರೆ ಭಾರತದ ಭವಿಷ್ಯವನ್ನು ಬದಲಿಸುವುದೇ ಆಗಿದೆ.






