ಹೊಲೆ-ಮಾದಿಗರ ಹಾಡು ಬನಿ ತಪ್ಪದಿರಲಿ...

ಮೂರು ದಶಕಗಳ ಕಾಲದ ಹೋರಾಟಕ್ಕೆ ಎಲ್ಲಾ ರಾಜಕೀಯ ಆಯಾಮಗಳನ್ನು ದಾಟಿ ಸುಪ್ರೀಂ ಕೋರ್ಟ್ ಮೂಲಕ ಒಂದು ನಿರ್ಣಾಯಕ ಫಲವೊಂದು ಸಿಕ್ಕಿದೆ. ಆದರೆ ಇದನ್ನು ಹಂಚಿ ಉಣ್ಣುವ ಉದಾತ್ತ ಗುಣಕ್ಕೆ ಈಗ ಬರ ಬಂದಂತೆ ಕಾಣುತ್ತಿದೆ.
ಈ ಒಳಮೀಸಲಾತಿ ಹೋರಾಟದ ವಿದ್ಯಮಾನಗಳನ್ನು ಗಮನಿಸಿದಾಗ ಸಹೋದರ ಜಾತಿಗಳ ನಡುವೆಯೇ ಹಗೆ ಬಿತ್ತುವ ಕೆಲಸ ನಡೆಯುತ್ತಿದೆ. ನ್ಯಾಯ, ಹಂಚುಣ್ಣುವ ವಿವೇಕವನ್ನು ತಿಳಿಹೇಳಲು ಬಂದವರನ್ನೇ, ದಲಿತ ಸಮಗ್ರತೆಯನ್ನು ಭೌತಿಕವಾಗಿ, ಬೌದ್ಧಿಕವಾಗಿ ದಶಕಗಳ ಕಾಲ ಹೋರಾಟದಿಂದ ಪೊರೆದ ಹಿರಿಯರನ್ನೇ ಲೇವಡಿ ಮಾಡುವ ಕೃತಘ್ನತೆ ಕಾಣುತ್ತಿರುವುದು ದುರಂತ.
ದಲಿತರ ನಡುವೆಯೇ ಕೂದಲು ಸೀಳುತ್ತಾ ಕುಳಿತವರು ಬಳಸುತ್ತಿರುವ ಪದ, ಭಾಷೆ ಅಸಹ್ಯ ಹುಟ್ಟಿಸುತ್ತಿದೆ. ತರ್ಕಕ್ಕೂ ಒಂದು ಘನತೆ ಇರುತ್ತದೆ. ಅದನ್ನು ಮೀರಿ ಕುತರ್ಕ ನಡೆಸುವವರನ್ನು ಕಂಡಾಗ ಚಾಡಿಮಾತಿಗೋ, ದುಶ್ಚಟಕ್ಕೋ ಬಿದ್ದು ಮನೆ ಮುರಿಯುವ ಅಣ್ಣತಮ್ಮಂದಿರಂತೆ ಕಾಣುತ್ತಾರೆ.
ಆಶ್ಚರ್ಯವೆಂದರೆ ಅಂಬೇಡ್ಕರ್, ಮತ್ತವರ ವಿಚಾರಧಾರೆಗಳನ್ನು ಮಂಡಿಸುತ್ತಾ ಹೊಸ ತಲೆಮಾರಿಗೆ ಸಮಗ್ರ ದಲಿತ ತತ್ವದ ಸಂವೇದನೆ ಕಟ್ಟಿಕೊಡುತ್ತಿದ್ದ ಪ್ರಜ್ಞಾವಂತ ಮಂದಿಯೇ ಈಗ ದಲಿತರ ಸಮಗ್ರತೆಯನ್ನು ಒಡೆದು ಚೂರಾಗಿಸುವ ಮಾತುಗಳನ್ನಾಡುತ್ತಿದ್ದಾರೆ. ಹಾಗಾದರೆ ಅವರು ಇದುವರೆಗೂ ಹೇಳಿದ, ಪ್ರತಿಪಾದಿಸಿದ ಅಂಬೇಡ್ಕರ್ ತತ್ವಕ್ಕೆ ಬೆಲೆ ಇದೆಯೇ?
ಅಂಬೇಡ್ಕರ್ ಅವರು ಎಲ್ಲರ ಅಂಬೇಡ್ಕರ್ ಆಗಿ ಉಳಿಯದಂತೆ ಪಾಲು ಮಾಡುವ ಅಥವಾ ಅಂಬೇಡ್ಕರ್ ‘ತಮ್ಮವರು’ ಮಾತ್ರವೇ ಆಗಿದ್ದಾರೆ, ‘ನಿಮ್ಮವರಲ್ಲ’ ಎಂಬ ಹೊಸ ವ್ಯಾಖ್ಯಾನ ಆಘಾತಕಾರಿ.
ದಲಿತತ್ವ, ದಲಿತ ಚಳವಳಿ, ದಲಿತ ಸಂವೇದನೆ ಎಲ್ಲದಕ್ಕೂ ಮೂಲ ತಾತ್ವಿಕತೆ ಎಂದರೆ ಅದುವೇ ಪರಸ್ಪರ ಕೈ ಕೈ ಹಿಡಿದು ನಡೆಯುವುದು. ತನಗಿಂತ ಕೆಳಗಿನವರನ್ನು ಕೈ ಹಿಡಿದು ಎತ್ತುವುದು, ನ್ಯಾಯ, ಸಮಾನತೆ ಎನ್ನುವುದು ಕೇವಲ ಬಲಾಢ್ಯ ಜಾತಿಗಳನ್ನು ಬಗ್ಗಿಸಲು ಮಾತ್ರವೇ ಇರುವುದಲ್ಲ. ಶೋಷಿತ ಸಮುದಾಯಗಳ ಅಂಚಿನ ವ್ಯಕ್ತಿಗೂ ಹರಿಸುವ ಅಮೃತಬಿಂದು.
ಇದನ್ನು ಹಂಚಿಕೊಳ್ಳುವಾಗ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗಿದ್ದ ಅಪಾರ ಕಾರುಣ್ಯ, ನ್ಯಾಯಪ್ರಜ್ಞೆಯೇ ನಮಗೆ ಆದರ್ಶ ಮಾದರಿಯಾಗಬೇಕು.
ದಲಿತರನ್ನು ಇಬ್ಭಾಗವಾಗಿಸದೆ ಉಳಿಗಾಲವಿಲ್ಲ ಎಂಬ ಬಲಾಢ್ಯ ಜಾತಿಗಳ ಷಡ್ಯಂತ್ರ ಎಲ್ಲಾ ಕಾಲದಲ್ಲೂ ನಡೆಯುತ್ತಲೇ ಬಂದಿದೆ. ಒಳಮೀಸಲಾತಿ ವಿಚಾರ ಅದಕ್ಕೊಂದು ಅಸ್ತ್ರವಾಗಿ ಬಳಕೆಯಾಗುತ್ತಿರುವುದು ಅಪಾಯಕಾರಿ.
ಎಲ್ಲವೂ ಖಾಸಗೀಕರಣಗೊಂಡು ಮೀಸಲಾತಿ ಕೊನೆ ಉಸಿರು ತೆಗೆಯುತ್ತಿದೆ. ನಾವೀಗ ಸಾಮಾಜಿಕ ನ್ಯಾಯವನ್ನು ನುಂಗಿನೊಣೆವ ಖಾಸಗೀಕರಣವನ್ನು ವಿರೋಧಿಸುವ ಅಥವಾ ಖಾಸಗೀಕ್ಷೇತ್ರದಲ್ಲೂ ಮೀಸಲಾತಿ ಜಾರಿಗೆ ಒತ್ತಾಯಿಸಿ ಹೋರಾಡಲೇಬೇಕಾದ ಕಾಲಘಟ್ಟದಲ್ಲಿದ್ದೇವೆ.
ಮೇಲ್ಜಾತಿಗಳು ಸಲೀಸಾಗಿ ಮೀಸಲಾತಿಯ ಆವರಣಕ್ಕೆ ಬಂದು ಮೀಸಲಾತಿಯನ್ನೇ ಅಪ್ರಸ್ತುತಗೊಳಿಸುವ ದೊಡ್ಡ ಹುನ್ನಾರವನ್ನೇ ನಡೆಸುತ್ತಿರುವಾಗ ಎಚ್ಚರವೇ ಇಲ್ಲದ ನಾವೇ ನಮ್ಮ ಮನೆಗೆ ಬೆಂಕಿ ಹಚ್ಚಿಕೊಂಡು ಬೆಳಕು ಕಾಣುವುದು ಮೂರ್ಖತನ ಎನಿಸುವುದಿಲ್ಲವೇ?
ಆನೆಯೇ ಹೋಗಿದೆ, ಅದರ ಬಾಲ ಹಿಡಿದು ನಾವು ಈಗ ಕಚ್ಚಾಡುತ್ತಿದ್ದೇವೆ. ದಲಿತರ ಮನೆ ಉರಿಯುವುದನ್ನೇ ಕಾದು ಕುಳಿತವರು ‘ಗಳ’ ಹಿರಿಯುವ ಪಾತಕ ಸಡಗರದಲ್ಲಿದ್ದಾರೆ.
ಇಂತಹ ವಿಷಮ ಸ್ಥಿತಿಯಲ್ಲಿ ಸರಕಾರ ಕೂಡ ಸಂದರ್ಭದ ಲಾಭ ಪಡೆಯಲು ಅವಕಾಶವಾಗದಂತೆ ಮೊದಲು ಒಳಮೀಸಲಾತಿಯನ್ನು ಅಳವಡಿಸಿಕೊಳ್ಳುವಂತೆ ಎಲ್ಲರೂ ನೋಡಿಕೊಳ್ಳಬೇಕು. ನಂತರದ ದಿನಗಳಲ್ಲಿ ಆಗಿರಬಹುದಾದ ವ್ಯತ್ಯಾಸಗಳನ್ನು ಗುರುತಿಸಿ ಸರಿಪಡಿಸಿಕೊಳ್ಳುವ ಅವಕಾಶವಂತೂ ಇದ್ದೇ ಇರುತ್ತದೆ. ನಾವು ನಾವೇ ಕುಳಿತು ಮಾತಾಡುವುದು ಇದ್ದೇ ಇರುತ್ತದೆ.
ನಮ್ಮ ಪರವಾಗಿ ಹೋರಾಡಲು, ನ್ಯಾಯ ಪಂಚಾಯಿತಿ ಮಾಡಲು ಜಾತಿವಾದಿ ಶಾನುಭೋಗ, ಊರ ಪಟೇಲ, ಗೌಡರು ಬರಬೇಕೆ? ವಿಮೋಚನೆಗೆ ಹೋರಾಡುವವರಿಗೆ ಶತ್ರು ಯಾರು? ಗುರಿ ಏನು? ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕು.
ಇಲ್ಲದೆ ಹೋದರೆ ಹೊಲೆ-ಮಾದಿಗರ ಹಾಡು ಬನಿ ತಪ್ಪಿ ಕರ್ಕಶವಾಗಲಿದೆ.







