ಅಪರಾಧ ನಿಯಂತ್ರಣಕ್ಕೆ ಧನಾತ್ಮಕ ಹೆಜ್ಜೆ ಮುನ್ನುಡಿಯಾಗಲಿ
ಅಪರಾಧ ಮುಕ್ತ ಗ್ರಾಮಗಳನ್ನು ಪ್ರಶಸ್ತಿ ನೀಡಿ ಗುರುತಿಸುವ ಕ್ರಮ ಆರಂಭವಾಗಲಿ

ಜನಸಂಖ್ಯೆ ಹೆಚ್ಚಿದಂತೆ, ಹೊಸ ಹೊಸ ಶೋಧನೆಗಳು, ಬದಲಾವಣೆಗಳು ಸಮಾಜದಲ್ಲಿ ತೀವ್ರವಾಗಿ ಗೋಚರಿಸಿದಂತೆ ಅಪರಾಧ ಚಟುವಟಿಕೆಗಳು ಕೂಡಾ ಕ್ಷಿಪ್ರಗತಿಯಲ್ಲಿ ಏರುತ್ತಿವೆ. ಕ್ರಿಮಿನಲ್ ಪ್ರಕರಣಗಳು ವ್ಯಾಪಕವಾಗಿ ದಾಖಲಾಗುತ್ತಿವೆ. ಹಣ, ಹೆಣ್ಣು ಈ ಎರಡು ವಿಷಯಗಳನ್ನು ಕೇಂದ್ರೀಕರಿಸಿ ಕೊಲೆ, ಸುಲಿಗೆ, ದರೋಡೆ, ಆತ್ಮಹತ್ಯೆ, ವಂಚನೆ, ಲೈಂಗಿಕ ದೌರ್ಜನ್ಯ, ಅಪಹರಣ, ಹನಿಟ್ರ್ಯಾಪ್ ಇತ್ಯಾದಿ ಕೃತ್ಯಗಳು ಹೆಚ್ಚುತ್ತಲೇ ಇವೆ. ಮೊಬೈಲ್ ಬಳಕೆ ತೀವ್ರವಾಗಿರುವ ಈ ಕಾಲದಲ್ಲಿ ಮೊಬೈಲ್ ಮೂಲಕವೇ ನವ ಅಪರಾಧಗಳು ದಿನನಿತ್ಯ ನಡೆಯುತ್ತಿವೆ. ಅಂತಹ ಜಾಲ ಬಹಳಷ್ಟು ಸಕ್ರಿಯವಾಗಿ ಕುಕೃತ್ಯ ನಡೆಸುತ್ತಲೇ ಇವೆ. ಏನೇ ಹೊಸ ಸಂಶೋಧನೆ ನಡೆದರೂ, ಹೊಸ ವಿನ್ಯಾಸದ ತಂತ್ರಜ್ಞಾನ ಬಂದರೂ, ನಾವೀನ್ಯಯುತ ಭದ್ರತಾ ವ್ಯವಸ್ಥೆ ಅನುಷ್ಠಾನಕ್ಕೆ ಬಂದರೂ ಅದನ್ನು ಮೀರಿಸುವ ದುಷ್ಕೃತ್ಯಗಳು ನಡೆಯುತ್ತಲೇ ಇವೆ. ಆಧುನಿಕ ತಂತ್ರಜ್ಞಾನ, ಸಿ.ಸಿ. ಕ್ಯಾಮರಾ ಕಣ್ಗಾವಲು, ವಿಧಿವಿಜ್ಞಾನ ಪ್ರಯೋಗಾಲಯ, ಅತಿವೇಗದ ಸಂಪರ್ಕ ಜಾಲ ಇವೆಲ್ಲವೂ ಇದ್ದರೂ ಅಪರಾಧಿಗಳನ್ನು ಪತ್ತೆ ಹಚ್ಚಲು ಇವು ಬಳಕೆಯಾ ಗುತ್ತಿವೆ ಬಿಟ್ಟರೆ ಅಪರಾಧಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ.
ಇತ್ತೀಚಿನ ದಶಕಗಳಲ್ಲಿ ಅಪರಾಧಗಳಲ್ಲಿ ಭಾಗಿಯಾದವರ ಮಾಹಿತಿಯನ್ನು ಮಾಧ್ಯಮಗಳಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಹೆಚ್ಚು ಕಡಿಮೆ ಒಂದು-ಒಂದರ ಅನುಪಾತದಲ್ಲಿ ಹೊಸ ಆರೋಪಿಗಳು ಮತ್ತು ಹಳೆಯ ಆರೋಪಿಗಳು ಪ್ರಸ್ತುತ ಅಪರಾಧ ಚಟುವಟಿಕೆಗಳಲ್ಲಿ ಬಂಧಿಸಲ್ಪಡುವುದನ್ನು ಗಮನಿಸಬಹುದು. ಅಂದರೆ ವರದಿಯಾಗುವ ಎರಡು ಹೊಸ ಕ್ರಿಮಿನಲ್ ಪ್ರಕರಣಗಳನ್ನು ಗಮನಿಸಿದಾಗ ಒಂದು ಪ್ರಕರಣದಲ್ಲಿ ಈವರೆಗೆ ಇಂತಹ ಪ್ರಕರಣದಲ್ಲಿ ಭಾಗಿಯಾಗದ ಹೊಸ ವ್ಯಕ್ತಿ ಮತ್ತು ಇನ್ನೊಂದು ಪ್ರಕರಣದಲ್ಲಿ ಈ ಹಿಂದೆಯೇ ಕೆಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ವ್ಯಕ್ತಿ ಮತ್ತೆ ಆರೋಪಿಯ ಸ್ಥಾನದಲ್ಲಿ ನಿಂತಿರುವುದನ್ನು ಗಮನಿಸಬಹುದು.
ಅದೇ ರೀತಿ ಒಂದಕ್ಕಿಂತ ಹೆಚ್ಚಿನ ಆರೋಪಿಗಳು ಭಾಗಿಯಾಗುವ ಪ್ರಕರಣಗಳಲ್ಲಿ ಕೂಡಾ ಸುಮಾರು ಅರ್ಧದಷ್ಟು ಅಥವಾ ಕೆಲವೊಮ್ಮೆ ತುಸು ಹೆಚ್ಚಿನ ಅನುಪಾತದಲ್ಲಿ ಈ ಹಿಂದೆ ಆರೋಪಿತರಾದವರು ಮತ್ತೆ ಜಾಮೀನಿನ ಮೇಲೆ ಹೊರಬಂದು ಅದೇ ರೀತಿಯ ದುಷ್ಟ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದನ್ನು ಗಮನಿಸಬಹುದು. ಅಂದರೆ ಒಂದು ಬಾರಿ ಅಪರಾಧ ಕೃತ್ಯಗಳ ಮೊಕದ್ದಮೆ ದಾಖಲಿಸಿಕೊಂಡು ಬಂದಿಖಾನೆಗೆ ಹೋದ ವ್ಯಕ್ತಿ ತಾನು ಧನಾತ್ಮಕವಾಗಿ ಬದಲಾಗುವ ಬದಲು ಮತ್ತೆ ಅದೇ ರೀತಿಯ ಚಟುವಟಿಕೆಗಳಲ್ಲಿ ಮುಂದುವರಿಯುವುದನ್ನು ಕಾಣಬಹುದು. ಬಂದಿಖಾನೆಯು ಸುಧಾರಣಾ ಕೇಂದ್ರವಾಗಬೇಕಿತ್ತು. ದಶಕಗಳ ಹಿಂದೆ ಅದೆಷ್ಟೋ ಜೈಲುವಾಸಿಗಳು ಜೈಲಿನಲ್ಲೇ ದೂರ ಶಿಕ್ಷಣ ಮೂಲಕ ಹೆಚ್ಚಿನ ಶಿಕ್ಷಣ ಪಡೆಯುವ, ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ, ಸಕಾರಾತ್ಮಕ ವ್ಯಕ್ತಿತ್ವ ರೂಪಿಸಿಕೊಳ್ಳುವ ಆಶಾದಾಯಕ ವರದಿಗಳು ಕಂಡು ಬರುತ್ತಿದ್ದವು. ಆದರೆ ಈಗ ಹಾಗಾಗುತ್ತಿಲ್ಲ. ಇದಕ್ಕೆ ಆರೋಪಿತ ಅಥವಾ ಅಪರಾಧಿಯ ಮನೋಸ್ಥಿತಿ, ಜೈಲಿನಲ್ಲಿ ಆತನಿಗೆ ಸಹವಾಸಿಗಳಾಗುವ ಆರೋಪಿಗಳು ಅಥವಾ ಅಪರಾಧಿಗಳ ದಟ್ಟ ಪ್ರಭಾವ ಅಥವಾ ನಕಾರಾತ್ಮಕ ನಾಯಕತ್ವದ ಮೇಲರಿಮೆ ಇತ್ಯಾದಿ ಅಂಶಗಳು ಕಾರಣಗಳಾಗುತ್ತಿವೆ. ಇದರಿಂದ ಅಪರಾಧ ಚಟುವಟಿಕೆಗಳ ಬೃಹತ್ ಜಾಲ ವ್ಯಾಪಕವಾಗಿ ಹರಡುತ್ತಿದೆ.
ಅಪ್ರಾಪ್ತ ವಯಸ್ಕರು ಮತ್ತು ಅಪರಾಧ ಜಗತ್ತು
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಅಪರಾಧ ಲೋಕಕ್ಕೆ ದಾಪುಗಾಲಿಡುತ್ತಿರುವ ಆತಂಕಕಾರಿ ಬೆಳವಣಿಗೆ ಕಂಡು ಬರುತ್ತಿವೆ. ತೀವ್ರವಾದ ಮೊಬೈಲ್ ಬಳಕೆ, ಸಹವಾಸಿಗಳ ಪ್ರಭಾವ, ಹಣದ ಮೇಲಿನ ವ್ಯಾಮೋಹ, ಪ್ರೀತಿ ಪ್ರೇಮದ ವಿಚಾರಗಳು, ಪ್ರಾಪ್ತ ಮತ್ತು ಅಪ್ರಾಪ್ತ ವಯಸ್ಕರ ಅನಪೇಕ್ಷಿತ ಸಹವಾಸ, ಗೆಳೆತನ, ಆಮಿಷಗಳು, ಕಾನೂನಿನ ಅರಿವಿನ ಕೊರತೆ, ಭವಿಷ್ಯದ ಬಗೆಗಿನ ಅನಿಶ್ಚಿತತೆ, ಪೋಷಕರ ಕಾಳಜಿರಹಿತ ಮನೋಭಾವ ಇತ್ಯಾದಿ ಕಾರಣಗಳಿಂದ ಹದಿಹರೆಯದ ಬಾಲಕರು ಹೆಚ್ಚಾಗಿ ಅಪರಾಧಲೋಕಕ್ಕೆ ಸಣ್ಣ ವಯಸ್ಸಿನಲ್ಲಿ ಕಾಲಿಡುತ್ತಿರುವುದನ್ನು ಕಾಣಬಹುದು. ಕೆಲವೊಮ್ಮೆ ವಯಸ್ಕ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ತಾವು ಕಾನೂನಿನ ಕುಣಿಕೆಯಿಂದ ಪಾರಾಗಲು ಅಪ್ರಾಪ್ತ ವಯಸ್ಕರನ್ನು ಅಪರಾಧ ಜಗತ್ತಿಗೆ ದೂಡುತ್ತಿರುವುದನ್ನು ಕಾಣಬಹುದು. ಇದರಿಂದಾಗಿ ಬಹಳಷ್ಟು ಕಾಲ ದುಡಿದು, ಬಾಳಿ ಬದುಕಬೇಕಾದ ಹದಿಹರೆಯದ ಬಾಲಕರು ಆರೋಪಿಗಳಾಗಿ ಕಾನೂನಿನ ಕಟಕಟೆಯಲ್ಲಿ ನಿಲ್ಲುತ್ತಿರುವುದು ಒಂದು ದೇಶಕ್ಕೆ ಅಪಾಯಕಾರಿಯಾದ ಅಂಶವಾಗಿದೆ.
ಹದಿಹರೆಯದವರಲ್ಲಿ ಆಕ್ರಮಣಶೀಲತೆ ಹೆಚ್ಚಾಗುತ್ತಿದೆ. ಎಳೆಯ ವಯಸ್ಸಿನಲ್ಲೇ ಅಂದರೆ ಶಾಲಾಕಾಲೇಜು ಹಂತದಲ್ಲೇ ಹೊಡಿಬಡಿ ಸಂಸ್ಕೃತಿಯನ್ನು ಅಪ್ರಾಪ್ತ ವಯಸ್ಕರು ಖುಷಿಪಡುವುದನ್ನು ಕಾಣಬಹುದು. ಇಂದು ಎಳೆಯ ವಯಸ್ಸಿನಲ್ಲೇ ನಾನಾ ಪ್ರಭಾವಗಳಿಂದ ಪ್ರೀತಿಯ ಜಾಗದಲ್ಲಿ ದ್ವೇಷ, ಸಹಕಾರದ ಜಾಗದಲ್ಲಿ ಅಸೂಯೆ, ಸ್ನೇಹತ್ವದ ಜಾಗದಲ್ಲಿ ಶತ್ರುತ್ವ, ರಕ್ಷಣೆಯ ಜಾಗದಲ್ಲಿ ಆಕ್ರಮಣದಂತಹ ಅವಗುಣಗಳನ್ನು ಬೆಳೆಸಿಕೊಳ್ಳುವುದನ್ನು ಕಾಣುತ್ತೇವೆ. ಇಂತಹ ಪ್ರವೃತ್ತಿಗಳು ಒಂದು ಹಂತದಲ್ಲಿ ಬದಲಾವಣೆಯಾದರೆ ಒಳಿತು ಒಂದು ವೇಳೆ ಅದಕ್ಕೆ ಕಡಿವಾಣ ಬೀಳದಿದ್ದಲ್ಲಿ ಆದೇ ಅಪ್ರಾಪ್ತ ವಯಸ್ಕರು ಮುಂದೆ ವಯಸ್ಕರಾಗಿ ಅಪರಾಧ ಜಗತ್ತಿಗೆ ಕಾಲಿಟ್ಟರೆ ಅದರಿಂದ ಸಮಾಜ ಮತ್ತು ದೇಶಕ್ಕೆ ಉಂಟಾಗುವ ಪರಿಣಾಮ ಗಂಭೀರವಾಗಲಿದೆ.
ಆದುದರಿಂದ ಕಾನೂನಿನ ಕುಣಿಕೆ, ನ್ಯಾಯಾಲಯದ ಕಟಕಟೆ, ಶಿಕ್ಷೆ, ದಂಡನೆ, ಮನಪರಿವರ್ತನೆ ಇವುಗಳು ಒಂದು ಕಡೆಯಿಂದ ಹಲವು ವರ್ಷಗಳಿಂದ ಅಪರಾಧ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿವೆ.
ಆದರೆ ಇಲ್ಲಿ ಒಂದು ಅಪರಾಧ ಚಟುವಟಿಕೆ ಇತ್ಯರ್ಥವಾಗುವ ಸಮಯದಲ್ಲಿ ಬಹಳಷ್ಟು ವಿಚಾರಣೆಗಳು ನಡೆದು ದಂಡನೆ ಅಥವಾ ದೋಷಮುಕ್ತವಾಗುವಾಗ ಸರಕಾರದ ಬೊಕ್ಕಸಕ್ಕೆ ಬಹಳಷ್ಟು ಹೊರೆಯಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಸರಕಾರದ ಜವಾಬ್ದಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬಹಳಷ್ಟು ಸಂಪನ್ಮೂಲವನ್ನು ಪ್ರತೀ ವರ್ಷ ಸರಕಾರಗಳು ಆಯವ್ಯಯದಲ್ಲಿ ತೆಗೆದಿಡುತ್ತವೆ. ಸಾಮೂಹಿಕ ಅಪರಾಧ ಚಟುವಟಿಕೆಗಳು ಅಥವಾ ಹಿಂಸಾತ್ಮಕ ಘಟನೆಗಳನ್ನು ನಿಯಂತ್ರಿಸಲು ಸರಕಾರದ ದೊಡ್ಡ ಮೊತ್ತ ಖರ್ಚಾಗುತ್ತದೆ.ಇದರ ಅಂತಿಮ ಫಲಶ್ರುತಿ ಒಂದಷ್ಟು ಜನರು ಜೈಲು ಪಾಲು, ಕಾನೂನಿನ ಹೋರಾಟ, ಆರೋಪ- ಪ್ರತ್ಯಾರೋಪ, ಮತ್ತೆ ವೈಯಕ್ತಿಕ ಸಂಪನ್ಮೂಲಗಳ ವ್ಯಯ, ಹಗೆತನ, ದುಡಿಮೆ ರಹಿತ ಸ್ಥಿತಿ, ಅಲೆದಾಟ.... ಇತ್ಯಾದಿ ಇತ್ಯಾದಿ ದೇಶ ಮತ್ತು ಸುಂದರ ಸಮಾಜದ ದೃಷ್ಟಿಯಿಂದ ಅಡ್ಡ ಪರಿಣಾಮಗಳೇ ಹೊರತು ಉತ್ತಮ ಅಂಶಗಳಲ್ಲ.
ಕನಸಿನ ಗ್ರಾಮ-ಅಪರಾಧ ಮುಕ್ತ ಗ್ರಾಮ
ಇದನ್ನು ದೂರದೃಷ್ಟಿಯಿಂದ ಅವಲೋಕನ ಮಾಡಿದಾಗ ನಮ್ಮ ಸಮಾಜದ ಕೆಳ ಹಂತದ ಗ್ರಾಮ ಎಂಬ ಘಟಕವನ್ನು ಒಂದು ಸುಂದರ ಘಟಕವಾಗಿ ಪರಿವರ್ತಿಸಿದರೆ ಅಲ್ಲಿಂದ ಉತ್ತಮ ಸಮಾಜದ ಕನಸಿಗೆ ರೆಕ್ಕೆ ಮೂಡಲು ಸಾಧ್ಯ. ಗ್ರಾಮ ಎನ್ನುವುದು ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಪರಿಣಾಮಕಾರಿಯಾದ ಘಟಕ. ಹಿಂದಿನ ರಾಜರುಗಳ ಆಡಳಿತದ ಕಾಲದಲ್ಲೂ ಗ್ರಾಮಾಡಳಿತ ಎನ್ನುವುದು ಜನರ ಸಂಪರ್ಕ, ಮೇಲ್ವಿಚಾರಣೆ, ಕರಸಂಗ್ರಹ, ಕಾನೂನು ಅನುಷ್ಠಾನ, ಜನಕಲ್ಯಾಣ ಇತ್ಯಾದಿ ದೃಷ್ಟಿಯಿಂದ ಸುಲಭಸಾಧ್ಯವಾದ ಆಡಳಿತ ಘಟಕವಾಗಿತ್ತು. ಇಂದು ದಿಲ್ಲಿಯಿಂದ ಅಥವಾ ರಾಜ್ಯ ರಾಜಧಾನಿಯಿಂದ ಒಂದು ಗ್ರಾಮವನ್ನು ಸಂಪರ್ಕಿಸುವುದು ಅತ್ಯಂತ ಸುಲಭ. ಇಂದಿನ ಸಂಪರ್ಕ ಜಾಲದ ಮೂಲಕ ಗ್ರಾಮಗಳು ಕೂಡಾ ಅತ್ಯಂತ ವೇಗವಾಗಿ ಬೆಳೆಯುತ್ತಿವೆ.
ಇಂತಹ ಗ್ರಾಮಗಳನ್ನು ಅಪರಾಧ ಮುಕ್ತ ಗ್ರಾಮಗಳನ್ನಾಗಿ ಮಾಡುವ ದಿಟ್ಟ ಮತ್ತು ನಿರಂತರ ಹೆಜ್ಜೆಯನ್ನು ಈವರೆಗೆ ಇಡದಿರುವುದು ಖೇದಕರ ಸಂಗತಿ. ಪೊಲೀಸ್ ಇಲಾಖೆಯಲ್ಲಿ ಪ್ರತೀ ಗ್ರಾಮಕ್ಕೆ ಬೀಟ್ ಪೊಲೀಸ್ ಎಂಬ ವ್ಯವಸ್ಥೆ ಇದ್ದರೂ ಕೂಡಾ ಅದು ಹೆಚ್ಚಾಗಿ ಇಲಾಖೆಯ ಆಡಳಿತದ ದೃಷ್ಟಿಯಿಂದ ಬಳಕೆಯಾಗುತ್ತಿದೆ. ಅಪರಾಧ ಲೋಕದ ಬಗ್ಗೆ ಸಾಕಷ್ಟು ಮಾಹಿತಿ ವಿನಿಮಯ ಕಾರ್ಯ ಇಲಾಖೆಯಿಂದ ನಡೆಯುತ್ತಿದ್ದರೂ ಅಪರಾಧಿ ಮನಸ್ಥಿತಿಯ ಜನರು ಇಂತಹ ಕಾರ್ಯಕ್ರಮಗಳಿಂದ ಬದಲಾಗುವುದು ಕಡಿಮೆ. ಅದಕ್ಕಾಗಿ ಸರಕಾರವು ಅಪರಾಧ ಮುಕ್ತ ಗ್ರಾಮಗಳನ್ನು ಪ್ರತೀ ವರ್ಷ ಘೋಷಿಸುವ ಮತ್ತು ಅದಕ್ಕೆ ಇಲಾಖಾ ಪ್ರಶಸ್ತಿ ನೀಡುವ ನಿರಂತರ ಕಾರ್ಯಕ್ಕೆ ಮುಂದಡಿ ಇಡಬೇಕು.
ಪ್ರತೀ ವರ್ಷ ಜನವರಿಯಿಂದ ಡಿಸೆಂಬರ್ ಅವಧಿ ಅಥವಾ ಎಪ್ರಿಲ್‌ನಿಂದ ಮಾರ್ಚ್ ಮಾಹೆಯವರೆಗಿನ ಅಂಕಿ ಅಂಶಗಳನ್ನು ತೆಗೆದು ಆಯಾಯ ಗ್ರಾಮದಲ್ಲಿ ಒಂದೇ ಒಂದು ಅಪರಾಧ ಪ್ರಕರಣಗಳು ಆ ನಿರ್ದಿಷ್ಟ ವರ್ಷದಲ್ಲಿ ದಾಖಲಾಗದೆ ಇದ್ದ ಪಕ್ಷದಲ್ಲಿ ಅಂತಹ ಗ್ರಾಮಗಳನ್ನು ವರ್ಷದ ಅಪರಾಧ ಮುಕ್ತ ಗ್ರಾಮವೆಂದು ಘೋಷಿಸಿ ಪ್ರಶಸ್ತಿ ನೀಡುವ ಕೆಲಸವಾಗಬೇಕು. ಈಗಾಗಲೇ ವ್ವಕ್ತಿಗತವಾಗಿ ನೀಡುವ ನೂರಾರು ಪ್ರಶಸ್ತಿ-ಪುರಸ್ಕಾರಗಳು ಸರಕಾರ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ನಡೆಯುತ್ತಲೇ ಇವೆ. ಗಾಂಧೀ ಗ್ರಾಮ ಪುರಸ್ಕಾರ, ಸ್ವಚ್ಛತಾ ಪ್ರಶಸ್ತಿ ಇತ್ಯಾದಿ ಪುರಸ್ಕಾರಗಳು ಗ್ರಾಮಪಂಚಾಯತ್‌ನ ಆಡಳಿತವನ್ನು ಉತ್ತೇಜಿಸುವಲ್ಲಿ ಯಶಸ್ವಿಯಾಗಿವೆ. ಇವುಗಳ ಜೊತೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆಯನ್ನು ಹೊಂದಿರುವ ರಾಜ್ಯ ಸರಕಾರ ಪ್ರತೀ ವರ್ಷ ನೀಡಬಹುದಾದ ಅಪರಾಧ ಮುಕ್ತ ಗ್ರಾಮ ಪ್ರಶಸ್ತಿಯ ಸಕಾರಾತ್ಮಕ ತೀರ್ಮಾನವು ಎಳೆಯ ಮತ್ತು ಯುವ ಮನಸ್ಸುಗಳನ್ನು ನಿಶ್ಚಯವಾಗಿಯೂ ಪ್ರಭಾವಿಸಬಲ್ಲುದು.
ಅಪರಾಧಮುಕ್ತ ಗ್ರಾಮ ಪ್ರಶಸ್ತಿಯ ಧನಾತ್ಮಕ ನಿರೀಕ್ಷಿತ ಪರಿಣಾಮಗಳು
* ಗ್ರಾಮದ ಜನರಲ್ಲಿ ಅಪರಾಧಗಳ ಬಗ್ಗೆ ಸದಾ ಜಾಗೃತ ಮನಸ್ಸು.
* ಅಪ್ರಾಪ್ತ ವಯಸ್ಕ ಮತ್ತು ಯುವ ಜನರಲ್ಲಿ ಆಯಾಯ ಗ್ರಾಮ ವ್ಯಾಪ್ತಿಯ ಶಾಲಾ ಕಾಲೇಜು, ಗ್ರಾಮಪಂಚಾಯತ್, ಸಂಘ ಸಂಸ್ಥೆಗಳ ಮೂಲಕ ಜಾಗೃತಿ ಕಾರ್ಯಕ್ರಮಗಳು.
* ಜನರಲ್ಲಿ ರಚನಾತ್ಮಕ ಕೆಲಸ ಕಾರ್ಯಗಳ ಉತ್ತೇಜನ.
* ಯುವಜನರಲ್ಲಿ ಪದವಿ, ಉನ್ನತ ಶಿಕ್ಷಣಕ್ಕೆ ಪರೋಕ್ಷ ಉತ್ತೇಜನ.
* ಸ್ಥಳೀಯಾಡಳಿತ ಮೂಲಕ ಗ್ರಾಮವಾಸಿಗಳ ಸಂಪರ್ಕ ಜಾಗೃತಿ ಕಾರ್ಯಕ್ರಮ.
* ಅಪರಾಧ ಮುಕ್ತ ಗ್ರಾಮ ಪ್ರಶಸ್ತಿಗಾಗಿನ ಸ್ಫೂರ್ತಿಯುತ ಸ್ಪರ್ಧೆ...
ಇವೇ ಮೊದಲಾದ ಅಂಶಗಳನ್ನು ಇಂತಹ ಪ್ರಶಸ್ತಿಯಿಂದ ನಿರೀಕ್ಷಿಸಬಹುದು.
ಇನ್ನು ಇಂತಹ ಕ್ರಮಗಳನ್ನು ತೆಗೆದುಕೊಳ್ಳುವಾಗ ಕೆಲವು ಅಡೆತಡೆಗಳು ಉಂಟಾಗುತ್ತವೆ. ಉದಾಹರಣೆಗೆ ಇದರ ಮಾನದಂಡಗಳ ಬಗ್ಗೆ ಅನೇಕ ಪ್ರಶ್ನೆಗಳು ಏಳಬಹುದು.
ಅಪರಾಧ ಮುಕ್ತ ಗ್ರಾಮ ಎಂದು ಪರಿಗಣಿಸಬೇಕಾ ದರೆ ಯಾವ ಅಪರಾಧಗಳನ್ನು ಪರಿಗಣಿಸಬೇಕು ಎಂಬ ಜಿಜ್ಞಾಸೆ ತಲೆದೋರಬಹುದು. ಬೇರೊಂದು ಊರಿನ ವ್ಯಕ್ತಿ/ಗಳು ಮತ್ತೊಂದು ಗ್ರಾಮ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಯಾವ ಗ್ರಾಮದ ವ್ಯಾಪ್ತಿಗೆ ಆ ಅಪರಾಧ ಚಟುವಟಿಕೆಯನ್ನು ಸೇರಿಸಬೇಕು ಎಂಬ ಜಿಜ್ಞಾಸೆ.
ಹೊರ ರಾಜ್ಯ ಅಥವಾ ವಿದೇಶಗಳಲ್ಲೂ ಒಂದು ಗ್ರಾಮದ ವ್ಯಕ್ತಿ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಆ ವ್ಯಕ್ತಿಯ ಕೃತ್ಯವನ್ನು ಆ ಗ್ರಾಮಕ್ಕೆ ಸಂಬಂಧಿಸಿ ಹೇಗೆ ಪರಿಗಣಿಸಬೇಕು ಎಂಬ ಪ್ರಶ್ನೆ ಕಾಡಲಿದೆ. ಆ ಗ್ರಾಮ ವ್ಯಾಪ್ತಿಯಲ್ಲಿ ಯಾವುದೇ ಅಪರಾಧ ಪ್ರಕರಣಗಳು ನಡೆದಿಲ್ಲವಾದರೆ ಅಂತಹ ಗ್ರಾಮಗಳನ್ನು ಅಪರಾಧ ಮುಕ್ತ ಎಂದು ಪರಿಗಣಿಸಬೇಕೇ ಎಂಬ ಪ್ರಶ್ನೆ.
ಪ್ರಶಸ್ತಿಯು ಯಾವ ರೂಪದಲ್ಲಿರಬೇಕು? ಯಾವ ಮಟ್ಟದಲ್ಲಿರಬೇಕು ? ಯಾರು ಇಂತಹ ಪ್ರಶಸ್ತಿಗಳನ್ನು ಸ್ವೀಕರಿಸಲು ಅರ್ಹರು? ಈ ಪ್ರಶ್ನೆಗಳಿಗೆ ಕೂಡಾ ಉತ್ತರ ಕಂಡುಕೊಳ್ಳಬೇಕಾಗುತ್ತದೆ.
ಆದರೆ ಪ್ರಶಸ್ತಿಯ ನೆಪದಲ್ಲಿ ಅರ್ಹ ಪ್ರಕರಣಗಳು ಬೆಳಕಿಗೆ ಬಾರದೇ ರಾಜಿ ಸಂಧಾನದಲ್ಲಿ ಮುಗಿದುಹೋಗಬಹುದೇ ಎಂಬ ಆತಂಕವೂ ಕೂಡಾ ಇಲ್ಲಿದೆ. ಒಟ್ಟಾರೆಯಾಗಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನವೀನ ಜಾಗೃತಿಯ ಮೂಲಕ ಕಡಿಮೆ ಮಾಡಲು ಇಂತಹ ಒಂದು ಪ್ರಯತ್ನವನ್ನು ಪ್ರಯೋಗ ಮಾಡಿ ನೋಡಬಹುದು.







