ಮಾತನಾಡುವ ಅಪರಾಧ ಎಸಗೋಣ, ಬನ್ನಿ

ಉರ್ದು ಕವಿ ರಾಜಿಂದರ್ ಪಾಲ್ ಸಿಂಗ್ ಹರ್ಯಾಣದ ಪಂಜಾಬ್‌ನ ಅಂಬಾಲಾ ದವರು. ಅವರ ಕಾವ್ಯನಾಮ - ಸದಾ ಅಂಬಾಲವಿ.
ಕೆಲವು ವರ್ಷಗಳ ಹಿಂದೆ ಅವರು ಬರೆದ ‘‘ಆವೋ ಕೆ ಅಬ್ ತೊ ಜುರ್ ಅತೆ ಜುರ್ಮೆ ಸುಖನ್ ಕರೇಂ’’ ಎಂಬ ಶೀರ್ಷಿಕೆಯ ಘಝಲ್ ಸಾಮಾಜಿಕ ಹೋರಾಟಗಾರರಿಗೆ ಹೊಸ ಹುಮ್ಮಸ್ಸು ನೀಡಿತ್ತು.
ಈ ಹಾಡು ಖ್ಯಾತ ಗಾಯಕ ಉಸ್ತಾದ್ ಗುಲಾಂ ಅಬ್ಬಾಸ್ ಖಾನ್ ಅವರ ಮಧುರ ಧ್ವನಿಯಲ್ಲಿ ಮೊಳಗಿದಾಗ ಮತ್ತಷ್ಟು ವಿಶಾಲ ವಲಯವನ್ನು ತಲುಪಿತ್ತು.
ಇನ್ನಾದರೂ ಮಾತನಾಡುವ ಅಪರಾಧ ಎಸಗೋಣ, ಬನ್ನಿ,
ಪರಿಣಾಮಗಳ ಚಿಂತೆ ಬಿಟ್ಟು, ಉದ್ಯಾನ ರಕ್ಷಿಸೋಣ!
ಹೂವುಗಳು ಛಿದ್ರವಾಗಿವೆ, ಮೊಗ್ಗುಗಳು ಬಾಡಿವೆ,
ಸುಮ್ಮನಿದ್ದು ಇನ್ನೆಷ್ಟು ಕಾಲ ಈ ಕ್ರೌರ್ಯ ಸಹಿಸೋಣ?
ಇಲ್ಲಿ ನಿಷಿದ್ಧವಾಗಿದೆ ಚಲನೆ, ಚಕಾರಕ್ಕೂ ಇದೆ ನಿರ್ಬಂಧವಿಲ್ಲಿ,
ಉದ್ಯಾನದ ಈ ಕರಾಳ ವ್ಯವಸ್ಥೆಯಲ್ಲಿ ಇನ್ನೆಷ್ಟು ನರಳೋಣ?
ಬರಹ, ಭಾಷಣಗಳ ಸೇವೆ ಸಾಕು, ಧಾರಾಳವಾಯಿತು,
ಇನ್ನಾದರೂ ಗಲ್ಲು, ಸರಪಣಿಗಳ ಸೇವೆ ಆರಂಭಿಸೋಣ,
ಮೌಢ್ಯಗಳ ಕತ್ತಲೆಯನು ಬುಡಸಹಿತ ಕಿತ್ತೊಗೆದು,
ನಾಡಿನಲಿ ಸತ್ಯದ, ಜ್ಞಾನದ, ದೀಪವನು ಬೆಳಗೋಣ,
ಶವಗಳ ರಾಶಿಯ ಮೇಲೆ ರಾಜಕೀಯದ ಆಟವಾಡುವ,
ಕಟುಕರ ಕಾಟದಿಂದ ನಾಡಿಗೆ ಮುಕ್ತಿ ಕೊಡಿಸೋಣ!
ಋಷಿಗಳ ನಾಡಿನಲಿ ಮೆರೆದಿದೆ ಲೂಟಿಕೋರರ ಆಡಳಿತ,
ಬನ್ನಿ, ಗಂಗೆ-ಯಮುನೆಯ ನಾಡನು ಮುಕ್ತಗೊಳಿಸೋಣ
ರಕ್ತಸಿಕ್ತವಾಗಿಬಿಟ್ಟಿದೆ ಈ ನಮ್ಮ ನೆಚ್ಚಿನ ಕಲ್ಪವೃಕ್ಷ
ಮತ್ತೆ ಈ ನಾಡಿನಲಿ ಶಾಂತಿಯ ಸ್ವರ್ಗವನು ಕಟ್ಟೋಣ!
ನಮ್ಮವರ ವಿರುದ್ಧ ನಮ್ಮ ಜಗಳ ಇನ್ನೆಷ್ಟು ಕಾಲ ಮಿತ್ರರೇ,
ಹಳೆಯ ಎಲ್ಲ ಕಲಹ ನಿಲ್ಲಿಸಿ, ಪರಮಾಪ್ತರಾಗೋಣ!
ಒಂಟಿಯಾಗಿ ಸೋಲಿಸಲಾಗದು ದೈತ್ಯ ಶತ್ರುವನು,
ಬನ್ನಿ ಎಲ್ಲರೂ ಜೊತೆಯಾಗಿ, ವೈರಿಯ ಮುಗಿಸೋಣ!
ದಮನಿತನ ಪರ ಹೋರಾಟವೇ ನೈಜ ಧರ್ಮಯುದ್ಧ,
ಪ್ರಾಣದ ಬಲಿ ಅರ್ಪಿಸಲು, ಬನ್ನಿ, ಸಿದ್ಧರಾಗೋಣ!
ಹೋರಾಟದ ಹುಮ್ಮಸ್ಸು ತಣಿಯದಿರಲಿ ಎಂದೆಂದೂ,
ಹನಿ ನೆತ್ತರು ಉಳಿದಿರುವ ತನಕವೂ ಕಾದುತ್ತಲೇ ಇರೋಣ!






