ಉದ್ಘಾಟನೆ ಭಾಗ್ಯ ಕಾಣದ ಗ್ರಂಥಾಲಯ: ವಿದ್ಯಾರ್ಥಿಗಳಿಗೆ ನಿರಾಸೆ

ಯಾದಗಿರಿ, ನ.20: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) 2023-24ರ ಮೈಕೋ ಯೋಜನೆಯಡಿ ಯಾದಗಿರಿ ನಗರದಲ್ಲಿ ನಿರ್ಮಿಸಿರುವ ಮೆಟ್ರಿಕ್ ನಂತರದ ಎಸ್‌ಸಿ-ಎಸ್‌ಟಿ ಬಾಲಕರ ವಸತಿ ನಿಲಯದ ಹೊಸ ಗ್ರಂಥಾಲಯ ನಿರ್ಮಾಣವಾಗಿ ಒಂದು ವರ್ಷವಾದರೂ ಉದ್ಘಾಟನೆಯ ಭಾಗ್ಯ ಇಲ್ಲದೆ ಪಾಳುಬಿದ್ದಿದೆ.
ಸುತ್ತಮುತ್ತಲಿನ ವಿದ್ಯಾರ್ಥಿಗಳು ಗ್ರಂಥಾಲಯದ ಉದ್ಘಾಟನೆ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ಗ್ರಂಥಾಲಯದ ಕಟ್ಟಡಕ್ಕೆ 35 ಲಕ್ಷ ರೂ.
ಮತ್ತು ಶೌಚಾಲಯ-ಸ್ನಾನಗೃಹಕ್ಕಾಗಿ 26 ಲಕ್ಷ ರೂ. ಸೇರಿದಂತೆ ಒಟ್ಟು 61 ಲಕ್ಷ ರೂ.ಗೂ ಅಧಿಕ ಖರ್ಚು ಮಾಡಲಾಗಿದೆ
ಸಮೀಪದ ಎರಡು ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸ್ಪರ್ಧಾತ್ಮಕ ಎಸ್‌ಡಿಎ-ಎಫ್‌ಡಿಎ-ಪಿಡಿಒ-ಪೊಲೀಸ್ ಮತ್ತು ಇತರ ಪರೀಕ್ಷೆಗಳಿಗಾಗಿ ಈ ಗ್ರಂಥಾಲಯವು ಅಗತ್ಯವಿದ್ದು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಗ್ರಂಥಾಲಯ ಉದ್ಘಾಟನೆಯಾಗದೆ ನಿಂತಿದೆ.
ಲಕ್ಷಾಂತರ ರೂ. ಖರ್ಚು ಮಾಡಿ ಕಟ್ಟಿದ ಗ್ರಂಥಾಲಯ ಬಳಕೆಗೆ ಸಿಗದಿರುವುದರಿಂದ ಓದಿಗೆ ದೊಡ್ಡ ಅನನುಕೂಲವಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಮಗೆ ಇಲ್ಲಿ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಗ್ರಂಥಾಲಯ ಕಟ್ಟಡ ನಿರ್ಮಾಣವಾಗಿ ಒಂದು ವರ್ಷವಾದರೂ ಇನ್ನೂ ಉದ್ಘಾಟನೆಯೇ ಆಗಿಲ್ಲ. ಹಲವಾರು ಬಾರಿ ತಾಲೂಕು ಹಾಗೂ ಜಿಲ್ಲಾ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
-ಸಂತೋಷ, ವಸತಿ ನಿಲಯದ ವಿದ್ಯಾರ್ಥಿ
ದೂರದ ಗ್ರಂಥಾಲಯಕ್ಕೆ ಹೋಗಿ ಬರುವ ಪರಿಸ್ಥಿತಿ ನಮ್ಮದಾಗಿದೆ. ಪಕ್ಕದಲ್ಲೇ ಹೊಸ ಕಟ್ಟಡ ಇದ್ದರೂ ಉದ್ಘಾಟನೆಯಾಗದೆ ಬೀಗ ಹಾಕಿದ್ದಾರೆ. ಆದಷ್ಟು ಬೇಗ ಉದ್ಘಾಟನೆ ಮಾಡಿದರೆ ನಮಗೆ ಬಹಳಷ್ಟು ಅನುಕೂಲವಾಗುತ್ತದೆ.
-ಗೋವಿಂದ, ವಸತಿ ನಿಲಯದ ವಿದ್ಯಾರ್ಥಿ
ತಾಲೂಕು ಅಧಿಕಾರಿಗಳಿಗೆ ಈಗಾಗಲೇ ನಾನು ಹೇಳಿದ್ದೇನೆ. ಮೇಜು, ಕುರ್ಚಿ ಮತ್ತು ಗ್ರಂಥಾಲಯಕ್ಕೆ ಬೇಕಾದಂತಹ ಎಲ್ಲ ರೀತಿಯ ವಸ್ತುಗಳು ನಾವು ಅಳವಡಿಸಿ ಈ ತಿಂಗಳಲ್ಲಿ ಉದ್ಘಾಟನೆಗೆ ಮಾಡಲು ಸಿದ್ಧ್ದತೆ ಮಾಡುತ್ತೇವೆ.
-ಚನ್ನಬಸಪ್ಪ, ಸಮಾಜ ಕಲ್ಯಾಣ ಇಲಾಖೆ ಡಿಡಿ







