Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಲೈನ್ ಮನೆಗಳಲ್ಲಿ ಜೀತ ಮಾಡುತ್ತಿರುವ...

ಲೈನ್ ಮನೆಗಳಲ್ಲಿ ಜೀತ ಮಾಡುತ್ತಿರುವ ಎರವರು

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್4 Feb 2026 10:27 AM IST
share
ಲೈನ್ ಮನೆಗಳಲ್ಲಿ ಜೀತ ಮಾಡುತ್ತಿರುವ ಎರವರು

ಎರವರಲ್ಲಿ ಎರಡು ಪ್ರಧಾನ ಪಂಗಡಗಳಿವೆ 1. ಪಂಜರಿ ಎರವ, 2. ಫಣಿ ಎರವ. ಇವುಗಳೊಂದಿಗೆ ಕಾಕೆ ಎರವ, ಬಡಗ ಎರವ ಎಂಬ ಚಿಕ್ಕ ಪಂಗಡಗಳೂ ಇವೆ. ಇವರಲ್ಲಿ ಕುಲದ ಯಜಮಾನರಿದ್ದು, ಕುಲಪಂಚಾಯಿತಿಗಳು ಇನ್ನೂ ಜೀವಂತವಾಗಿವೆ. ಈ ಕುಲಪಂಚಾಯಿತಿಗಳು ಕಾಡೊಳಗೆ ಜೀವಿಸುವ ಎರವರಲ್ಲಿ ಮಾತ್ರ ಇವೆ. ಆದರೆ ಕಾಫಿ, ಟೀ ತೋಟಗಳಲ್ಲಿ ಜೀತ ಮಾಡುತ್ತಾ ಲೈನ್ ಮನೆಗಳಲ್ಲಿ ಕೂಲಿಯಾಳುಗಳಾಗಿರುವ ಎರವರಲ್ಲಿ ಇಲ್ಲ.

ದಾರಿದ್ರ್ಯ, ಗುಲಾಮಗಿರಿಗಳ ನಡುವೆ ಜೀವಿಸುತ್ತಿದ್ದರೂ ಎರವರು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತರು!

ದಪ್ಪ ತುಟಿಗಳ, ಅಗಲ ಹಣೆಯ, ನೀಳ ಮೂಗಿನ, ಗುಂಗುರು ಕೂದಲು, ಎತ್ತರದ ನಿಲುವಿನ ಎರವ ಸಮುದಾಯದವರು ‘ಅಸ್ಟ್ರಲಾಯ್ಡ್’ ದೈಹಿಕ ಲಕ್ಷಣಗಳನ್ನು ಹೊಂದಿದ್ದಾರೆ. ಎರವರ ದೈಹಿಕ ರಚನೆ, ಇವರ ಸಂಸ್ಕೃತಿ ಮತ್ತು ಜೀವನ ವಿಧಾನಗಳನ್ನು ಕಂಡರೆ ಇವರು ಅತ್ಯಂತ ಪ್ರಾಚೀನ ಆದಿಮ ಬುಡಕಟ್ಟಿಗೆ ಸೇರಿದವರೆಂದು ನಿಖರವಾಗಿ ಹೇಳಬಹುದು. ದಕ್ಷಿಣ ಭಾರತದ ಅನೇಕ ದ್ರಾವಿಡ ಬುಡಕಟ್ಟಿನ ಲಕ್ಷಣಗಳನ್ನು ಎರವರು ಹೊಂದಿದ್ದಾರೆ. ಎರವರನ್ನು ಕೇರಳದಲ್ಲಿ ಅಡಿಯನ್ ಎಂದೂ, ತಮಿಳುನಾಡಿನಲ್ಲಿ ಪಣಿಯನ್ ಎಂದೂ ಕರೆಯುತ್ತಾರೆ. ಎರವರು ಮಲಯಾಳಿ ಭಾಷಿಕ ಪ್ರದೇಶದಿಂದ ನೂರಾರು ವರ್ಷಗಳ ಹಿಂದೆ ಕನ್ನಡ ಭಾಷಿಕ ಪ್ರದೇಶಕ್ಕೆ ವಲಸೆ ಬಂದವರೆಂದು ಮಾನವಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.

ಎರವರು ಪ್ರಮುಖವಾಗಿ ಮೈಸೂರು, ಕೊಡಗು ಜಿಲ್ಲೆಗಳಲ್ಲಿ ವಾಸಿಸುತ್ತಾರೆ. ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ, ಗುಂಡ್ಲುಪೇಟೆ ಮತ್ತು ಹುಣಸೂರು ತಾಲೂಕುಗಳಲ್ಲಿ ಹೆಚ್ಚಾಗಿ ವಾಸಿಸಿದರೆ, ಕೊಡಗು ಜಿಲ್ಲೆಯ ವಿರಾಜಪೇಟೆ, ಪಿರಿಯಾಪಟ್ಟಣ ತಾಲೂಕುಗಳಲ್ಲಿ ಅತಿಹೆಚ್ಚಾಗಿ ವಾಸಿಸುತ್ತಾರೆ.

ಎರವರ ಮೂಲ ಸೃಷ್ಟಿ ಹೇಗೆ ಬಂತೆಂಬುದಕ್ಕೆ ಅನೇಕ ಪೌರಾಣಿಕ ದಂತ ಕತೆಗಳಿವೆ. ಅದರಲ್ಲಿ ತಂಬೀರ ಎಂಬ ರಾಜ ಮತ್ತು ಅಂಜಿಲಾತು ಅಪ್ಪೆ, ಪಾಪಲತ್ತು ಅಮ್ಮಮತ್ತಿ ಎಂಬ ಮೂಲಪುರುಷರ ದಂತ ಕತೆ ತುಂಬಾ ಜನಪ್ರಿಯವಾದುದು.

ಇಪ್ಪಿಮಲೆ ಎಂಬ ಊರಿನಲ್ಲಿ ತಂಬೀರ ಎಂಬ ರಾಜನಿದ್ದ. ತನ್ನ ಪ್ರದೇಶದ ಫಲವತ್ತಾದ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಲು ಆಳುಗಳನ್ನು ಹುಡುಕುತ್ತಾ ಕಾಡಲ್ಲಿ ಅಲೆಯುತ್ತಿದ್ದಾಗ ಇಬ್ಬರು ಬೆತ್ತಲೆ ಗಂಡುಹೆಣ್ಣುಗಳು ಸಿಕ್ಕರು. ಅವರನ್ನು ಬಲೆಬೀಸಿ ಹಿಡಿಸಿ ವಿಚಾರಿಸಲಾಗಿ ಅವರಿಬ್ಬರು ಅಣ್ಣ ತಂಗಿಯರೆಂದು ತಿಳಿಯಿತು. ತಪ್ಪಿಸಿಕೊಳ್ಳಲು ಅವಕಾಶ ನೀಡದಂತೆ ಅವರಿಬ್ಬರಿಗೂ ಸುತ್ತಿಕೊಳ್ಳಲು ಏಳು ಮೊಳ ಬಟ್ಟೆಯನ್ನು ಕೊಟ್ಟನು. ಇಬ್ಬರೂ ಒಂದೇ ಬಟ್ಟೆಯನ್ನು ಸುತ್ತಿಕೊಂಡು ಕೃಷಿ ಕೆಲಸ ಮಾಡುವುದು ಕಷ್ಟವೆಂದು ಅರಿತ ತಂಬೀರನ ಹೆಂಡತಿ ತಂಬೀರಾಟೆ ಒಬ್ಬೊಬ್ಬರಿಗೂ ಪ್ರತ್ಯೇಕವಾಗಿ ಏಳೇಳು ಮೊಳೆ ಬಟ್ಟೆ ನೀಡಿ ಕೃಷಿ ಕೆಲಸಕ್ಕೆ ಹಚ್ಚಿದಳು. ಅಂದಿನಿಂದ ಇವರು ಅರೆಬೆತ್ತಲೆ ಗುಲಾಮ ಜೀತದಾಳುಗಳಾಗಿ ಬದುಕತೊಡಗಿದರು. ಈ ಅಣ್ಣತಂಗಿ ಗುಲಾಮರನ್ನು ಮದುವೆಯಾಗಲು ಇತರ ಜೀತಗಾರರು ನಿರಾಕರಿಸಿದ್ದರಿಂದ ರಾಜ ತಂಬೀರನು ಇವರಿಬ್ಬರು ದೇಹದ ಮೇಲುಭಾಗಕ್ಕೆ ಅಣ್ಣತಂಗಿಯರು, ಸೊಂಟದ ಕೆಳಗಿನ ಭಾಗಕ್ಕೆ ಗಂಡಹೆಂಡತಿಯರು ಎಂದು ಆಜ್ಞಾಪಿಸಿ ಆ ಅಣ್ಣತಂಗಿ ದಂಪತಿಗೆ ‘ಅಂಜಿಲಾತು ಅಪ್ಪೆ ಮುತ್ತಿ’ ಮತ್ತು ‘ಪಾಪಲತ್ತು ಅಮ್ಮಮತ್ತಿ’ ಎಂದು ಹೆಸರಿಟ್ಟನು. ಈ ಅಣ್ಣತಂಗಿ ದಂಪತಿಗೆ ಐದು ಜನ ಗಂಡು ಮತ್ತು ಐದು ಜನ ಹೆಣ್ಣು ಮಕ್ಕಳಾಗಿ ಇವರ ಸಂತಾನ ಮುಂದೆ ಎರವ ಸಮುದಾಯವಾಯಿತಂತೆ.

ಎರವರು ಭೂಮಾಲಕರಾಗಿಯೂ ಬದುಕಿದ್ದರು ಮತ್ತು ಗುಲಾಮರಾಗಿಯೂ ಬದುಕಿದ್ದರು ಎನ್ನಲಿಕ್ಕೆ ಅನೇಕ ಚಾರಿತ್ರಿಕ ದಾಖಲೆಗಳಿವೆ. ಇದಕ್ಕೆ ಆಧಾರವೆಂಬಂತೆ ಕೊಡಗಿನ 28 ನಾಡುಗಳಲ್ಲಿ ‘ಎರವನಾಡು’ ಇದ್ದದ್ದನ್ನು ಪ್ರೊ. ವಿಜಯ ಪೂಣಚ್ಚ ತಂಬಂಡ ಅವರು ತಮ್ಮ ‘ಅಮರಸುಳ್ಯ ಸಂಗ್ರಾಮ 1837’ ಸಂಶೋಧಕ ಗ್ರಂಥದಲ್ಲಿ ದಾಖಲಿಸಿದ್ದಾರೆ. ಅಂತೆಯೇ 1843ರಲ್ಲಿ ಕೊಡಗಿನ ಸೂಪರಿಡೆಂಟನು ತಯಾರಿಸಿದ ‘ಗುಲಾಮರ ದರಪಟ್ಟಿ’ಯಂತೆ ಎರವ ಗಂಡಸಿಗೆ 6 ರೂಪಾಯಿ ಮತ್ತು ಯರವ ಹೆಂಗಸಿಗೆ 4 ರೂಪಾಯಿ ಮಾರುವ ಬೆಲೆಯನ್ನು ನಿಗದಿಪಡಿಸಿರುವುದನ್ನೂ ದಾಖಲಿಸಿದ್ದಾರೆ.

ಎರವರಲ್ಲಿ ಎರಡು ಪ್ರಧಾನ ಪಂಗಡಗಳಿವೆ 1. ಪಂಜರಿ ಎರವ, 2. ಫಣಿ ಎರವ. ಇವುಗಳೊಂದಿಗೆ ಕಾಕೆ ಎರವ, ಬಡಗ ಎರವ ಎಂಬ ಚಿಕ್ಕ ಪಂಗಡಗಳೂ ಇವೆ. ಇವರಲ್ಲಿ ಕುಲದ ಯಜಮಾನರಿದ್ದು, ಕುಲಪಂಚಾಯಿತಿಗಳು ಇನ್ನೂ ಜೀವಂತವಾಗಿವೆ. ಈ ಕುಲಪಂಚಾಯಿತಿಗಳು ಕಾಡೊಳಗೆ ಜೀವಿಸುವ ಎರವರಲ್ಲಿ ಮಾತ್ರ ಇವೆ. ಆದರೆ ಕಾಫಿ, ಟೀ ತೋಟಗಳಲ್ಲಿ ಜೀತ ಮಾಡುತ್ತಾ ಲೈನ್ ಮನೆಗಳಲ್ಲಿ ಕೂಲಿಯಾಳುಗಳಾಗಿರುವ ಎರವರಲ್ಲಿ ಇಲ್ಲ.

ಇಷ್ಟೆಲ್ಲಾ ದಾರಿದ್ರ್ಯ, ಗುಲಾಮಗಿರಿಗಳ ನಡುವೆ ಜೀವಿಸುತ್ತಿದ್ದರೂ ಎರವರು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತರು! ಇವರಲ್ಲಿ ವಿಶಿಷ್ಟವಾದ ನೃತ್ಯಗಳಿವೆ, ‘ಚೀನಿ’ ಮತ್ತು ‘ತುಟಿಗಳು’ ವಿಶಿಷ್ಟ ವಾದ್ಯಗಳು. ಎರವರ ತರುಣ, ತರುಣಿಯರು ವಾದ್ಯ ನುಡಿಸುತ್ತಾ ಸುಂದರವಾಗಿ ನೃತ್ಯ ಮಾಡುತ್ತಾರೆ. ಎರವರು ತಮ್ಮ ಆದಿಮ ಸ್ವರೂಪದ ಆಚರಣೆಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಗೃಹ ಮಟ್ಟದ್ದು, ಕುಂಜಿನ ಮಟ್ಟದ್ದು, ಕೃಷಿ ಮತ್ತು ತೆರ, ಗದ್ದಿಗೆ ಕಟ್ಟುವುದು ಇತ್ಯಾದಿ. ಇವರ ಗುಡಿಗೆ ‘ಅಂಬಾಲ’ ಎನ್ನುತ್ತಾರೆ. ಇವರ ಮೂಲ ದೈವಗಳು ನಾಗರ ಬೆತ್ತಗಳು, ಅಚ್ಚರಂಡಿ ಬಡಿ, ನವಿಲುಗರಿ, ತ್ರಿಶೂಲ, ಕಪ್ಪು ಬಳೆ, ಹಿತ್ತಾಳೆ ಬಳೆ, ಹೊಳೆ ಬದಿಯ ಕಲ್ಲುಗಳು, ಮಣ್ಣಿನ ಮಡಿಕೆ ಮತ್ತು ಕೇರುವ ಮೊರ. ಇವರ ಗುಡಿಯಲ್ಲಿ ಸ್ತ್ರೀದೈವ ಅಥವಾ ಭೂತ ಇರುತ್ತದೆ. ಈ ಗುಡಿಯಲ್ಲಿ ಪೂಜೆ ಮಾಡುವವನನ್ನು ತಮ್ಮಡಿ ಎನ್ನುತ್ತಾರೆ.

ಈ ಎರವ ಸಮುದಾಯದಲ್ಲಿ ನನಗೊಬ್ಬ ‘ಮುತಾ ಎರವ’ ಎಂಬ ಸ್ನೇಹಿತರಿದ್ದಾರೆ. ಈತ ಒಂದು ಸಂಘ ಕಟ್ಟಿಕೊಂಡು ಎರವರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುತ್ತಾರೆ. ಈತ ತನ್ನ ಸಮುದಾಯದ ಅನೇಕ ಸಮಸ್ಯೆಗಳನ್ನು ನನಗೆ ಹೇಳಿದ್ದಾರೆ. ಇವನ್ನೆಲ್ಲಾ ಎಲ್ಲಾ ಹಂತಗಳಲ್ಲೂ ಸರಕಾರದ ಮುಂದೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ದುರಂತವೆಂದರೆ ಇದರಲ್ಲಿ ಒಂದೇ ಒಂದು ಸಮಸ್ಯೆಯನ್ನೂ ಪರಿಹರಿಸಲು ನನ್ನಿಂದ ಸಾಧ್ಯವಾಗಿಲ್ಲ. ಇಂತಹ ಅತಿಸೂಕ್ಷ್ಮ ಸಮುದಾಯಗಳಿಗೆ ಸಿದ್ದರಾಮಯ್ಯನವರ ಸರಕಾರ ಎಂದೂ ಸ್ಪಂದಿಸಲಿಲ್ಲ!

ಎರವರನ್ನು ರಾಷ್ಟ್ರೀಯ ಉದ್ಯಾನ ಮತ್ತು ವನ್ಯ ಜೀವಿ ಕಾಯ್ದೆಯ ಪ್ರಕಾರ ಒಕ್ಕಲೆಬ್ಬಿಸಲಾಗಿ ಬಹಳ ವರ್ಷಗಳೇ ಕಳೆದಿವೆ. ಸ್ಥಳಾಂತರಗೊಂಡ ಎರವರಿಗೆ ಈವರೆಗೂ ಪುನರ್ ವಸತಿ ಸಿಕ್ಕಿಲ್ಲ.

2013, ಅಂದರೆ ಸುಮಾರು ಹದಿಮೂರು ವರ್ಷಗಳ ಹಿಂದೆ ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ಅವರು ‘ಕರ್ನಾಟಕ ಬುಡಕಟ್ಟು ಸಚಿತ್ರ ಕೋಶ’ ಎಂಬ ಅತ್ಯಂತ ಸುಂದರ ಮತ್ತು ಬೆಲೆಬಾಳುವ ಪುಸ್ತಕವೊಂದನ್ನು ತಂದಿದ್ದಾರೆ. ಈ ಪುಸ್ತಕವನ್ನು ಡಾ. ಹಿ.ಚಿ. ಬೋರಲಿಂಗಯ್ಯ ಮತ್ತು ಡಾ. ಎ.ಎಸ್. ಪ್ರಭಾಕರ್ ಅವರು ಸಂಪಾದಿಸಿದ್ದಾರೆ. ಇದರಲ್ಲಿ ಕರ್ನಾಟಕದ ಬುಡಕಟ್ಟುಗಳ ದಾರಿದ್ರ್ಯ ಮತ್ತು ನಿರ್ಗತಿಕ ಬಡತನದ ಬದುಕನ್ನು ತೋರುವ ಅತ್ಯಂತ ‘ಶ್ರೀಮಂತ’ ಚಿತ್ರಗಳಿವೆ! ಈ ಪುಸ್ತಕದಲ್ಲಿ ದಾಖಲಾಗಿರುವ ‘ಎರವ’ ಸಮುದಾಯದ ಪರಿಚಯದ ಪುಟ 205ರಲ್ಲಿ ದಾಖಲಿಸಿರುವಂತೆ.. ‘‘ಮೈಸೂರಿನ ಮಾನಂತವಾಡಿ ರಸ್ತೆಯ ಇಕ್ಕೆಲಗಳಲ್ಲಿ ಎರವರನ್ನು ಪ್ರಾಣಿಗಳಂತೆ ತಂದು ಗುಡ್ಡೆ ಹಾಕಲಾಗಿದೆ. ರಸ್ತೆಯಂಚಿನಲ್ಲಿ ನಿಂತು ವಾಹನಗಳನ್ನು ನೋಡುವ ಮಕ್ಕಳನ್ನು ನೋಡಿದರೆ ಎಂಥವರೂ ಮರುಕ ಪಡುತ್ತಾರೆ. ಅಲ್ಲಿ ಎರವರಿಗೆ ಕಟ್ಟಿಕೊಟ್ಟ ಮನೆಗಳು ಪ್ರಾಣಿಗಳೂ ವಾಸಮಾಡಲು ಯೋಗ್ಯವಾಗಿಲ್ಲ, ಇನ್ನು 2006ರ ಅರಣ್ಯ ಕಾಯ್ದೆಯ ಪ್ರಕಾರ ಇವರಿಗೆ ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಇವರ ರಾಜಕೀಯ ಮೀಸಲಾತಿಯನ್ನು ಅನ್ಯರು ತಮ್ಮ ಹಣ ಮತ್ತು ತೋಳ್ಬಲಗಳಿಂದ ಕಬಳಿಸುತಿದ್ದಾರೆ. ಈ ಹತಭಾಗ್ಯ ಆದಿವಾಸಿ ಸಮುದಾಯವನ್ನು ಸರಕಾರ ಆಮೂಲಾಗ್ರವಾಗಿ ಸಬಲೀಕರಿಸುವ ಅಗತ್ಯವಿದೆ’’ ಎಂಬ ಮಾತುಗಳನ್ನು ಹೇಳಿರುವುದು ಸರಕಾರದ ಒಂದು ಭಾಗವಾಗಿರುವ ಒಂದು ವಿಶ್ವವಿದ್ಯಾನಿಲಯ. ಈ ಪುಸ್ತಕವನ್ನು ಸರಕಾರದ ಲಕ್ಷಾಂತರ ಹಣದಿಂದಲೇ ಮುದ್ರಿಸಲಾಗಿದೆ. ಇದು ಪ್ರಕಟವಾಗಿದ್ದು ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯನವರ ಕಾಲದಲ್ಲಿ. ಬಹುತೇಕ ಎರವರು ಜೀತ ಮಾಡುತ್ತಿರುವುದು ಮೈಸೂರು ಮತ್ತು ಅದಕ್ಕೆ ಅಂಟಿಕೊಂಡ ಕೊಡಗು ಜಿಲ್ಲೆಗಳಲ್ಲಿ. ಅಂದರೆ ಸಿದ್ದರಾಮಯ್ಯನವರ ಕಣ್ಣಳತೆಯಲ್ಲಿ. ಆದರೂ ಈ ನತದೃಷ್ಟರು ಅರಸು ದಾಖಲೆಯನ್ನು ಮುರಿದ ‘ಸಾಹಸಿ’ ಸಿದ್ದರಾಮಯ್ಯನವರಿಗೆ ಕಾಣಿಸಲಿಲ್ಲ!

ಇಂದಿಗೂ ಈ ಎರವರು ಕಾಫಿ ತೋಟಗಳ ಶ್ರೀಮಂತ ಮಾಲಕರ ಲೈನ್ ಮನೆಗಳಲ್ಲಿ ಪ್ರಾಣಿಗಳಿಗಿಂತಲೂ ಹೀನಾಯವಾಗಿ ಬದುಕುತ್ತಿದ್ದಾರೆ. ಎರವರ ಹದಿಹರೆಯದ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗಿರುವ ಅನೇಕ ದಾರುಣ ಸಂಗತಿಗಳು, ಅಲ್ಲಿನ ಎಳೆಯ ಯುವಕರು ಭೂಮಾಲಕರ ಬಂದೂಕಿನ ಗುಂಡುಗಳಿಗೆ ಆಹುತಿಯಾದ ವಾಸ್ತವಗಳು, ಇವನ್ನೆಲ್ಲ ಅಸಹಾಯಕರಾಗಿ ನೋಡಲಾರದೆ ಕುಡಿತಕ್ಕೆ, ಭೀಕರ ಕಾಯಿಲೆಗಳಿಗೆ, ರಕ್ತಹೀನತೆ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗಿರುವ ಎರವ ಸಮುದಾಯದವರು ಕೇವಲ ನಲುವತ್ತು ವರ್ಷ ವಯಸ್ಸಿಗೇ ಸಾಯುತ್ತಿರುವ ದೃಶ್ಯಗಳು ಕಣ್ಣ ಮುಂದಿವೆ. ಗುಲಾಮಗಿರಿ, ಜೀತಗಳು ಇಲ್ಲಿ ಇನ್ನೂ ಜೀವಂತವಾಗಿವೆ. ಈ ಕಾನೂನು ಬಾಹಿರ ಕೃತ್ಯವನ್ನು ತಡೆಯುವ ಯಾವುದೇ ಸರಕಾರ ಈವರೆಗೂ ಬಂದಿಲ್ಲ! ಪ್ಲಾಂಟರ್‌ಗಳ ಹಂಗಿನಲ್ಲಿರುವ ಸರಕಾರಗಳಿಗೆ ಈ ಪ್ರಭಾವಿ ಶ್ರೀಮಂತರನ್ನು ಮುಟ್ಟುವ ತಾಕತ್ತು ಎಲ್ಲಿಂದ ಬಂದೀತು? ಇದನ್ನು ತಡೆಯಲು ಒಬ್ಬ ಟಿಪ್ಪು, ಒಬ್ಬ ನಾಲ್ವಡಿ, ಒಬ್ಬ ಅರಸು ಹುಟ್ಟಿ ಬರಬೇಕಷ್ಟೆ.

Tags

slavery
share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X