ನಿವೇಶನಕ್ಕಾಗಿ 17 ದಿನಗಳಿಂದ ಧರಣಿ ನಡೆಸುತ್ತಿರುವ ಲೈನ್‌ಮನೆ ನಿವಾಸಿಗಳು

ಮಡಿಕೇರಿ : ಕಳೆದ 17 ದಿನಗಳಿಂದ ಬಹುಜನ ಕಾರ್ಮಿಕ ಸಂಘ ಕೊಡಗು ಜಿಲ್ಲಾ ಸಮಿತಿ, ಭೂಮಿ ಹಾಗೂ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಅಮ್ಮತ್ತಿ ಹಾಗೂ ಕಾರ್ಮಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ 100ಕ್ಕೂ ಹೆಚ್ಚು ನಿವೇಶನ ರಹಿತರು ಅಮ್ಮತ್ತಿ ನಾಡ ಕಚೇರಿಯ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿರುವ, ತೋಟದ ಲೈನ್ ಮನೆಗಳಲ್ಲೇ ಜೀವನ ನಡೆಸುತ್ತಿರುವ 100 ಅಧಿಕ ಕುಟುಂಬಗಳು ತಮ್ಮ ದಿನನಿತ್ಯ ಕೂಲಿ ಕೆಲಸ ಎಲ್ಲವನ್ನೂ ಬಿಟ್ಟು ಸ್ವಂತ ಭೂಮಿಗಾಗಿ ಹೋರಾಟ ನಡೆಸುತ್ತಿದ್ದು, ಜಿಲ್ಲಾಡಳಿತ, ಸ್ಥಳೀಯ ಗ್ರಾಮ ಪಂಚಾಯತ್ ಸ್ಪಂದಿಸುತ್ತಿಲ್ಲ ಎಂದು ಧರಣಿನಿರತರು ಆರೋಪಿಸುತ್ತಿದ್ದಾರೆ.
‘ನಾವು ಹುಟ್ಟಿದ್ದು, ಬೆಳೆದಿದ್ದು ತೋಟದ ಲೈನ್ ಮನೆಗಳಲ್ಲೇ, ನಮ್ಮ ತಾತಂದಿರ ಕಾಲದಿಂದಲೂ ತೋಟದ ಲೈನ್ ಮನೆಗಳಲ್ಲಿ ಜೀವನ ನಡೆಸುತ್ತಿದ್ದೇವೆ. ಹಲವು ಬಾರಿ ನಿವೇಶನಕ್ಕಾಗಿ ಅರ್ಜಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ತೋಟದಲ್ಲಿ ಸಂಬಳವೂ ಹೆಚ್ಚು ಕೊಡಲ್ಲ. ನಮಗೆ ಸ್ವಂತ ಮನೆ ಮಾತ್ರ ಕೊಟ್ಟರೆ ಸಾಕು’ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು.
ಅಮ್ಮತ್ತಿ ಕಾರ್ಮಾಡು ಹೋಬಳಿಯ ಸರಕಾರಿ ಜಾಗದ ಸರ್ವೇ ನಂಬರ್ 151, 155, 1731, 33, 8811, 29512, 541, 2413, 1371, 2902ರಲ್ಲಿ ಕಂದಾಯ ಇಲಾಖೆ ಸರ್ವೇ ನಡೆಸಿ ಜಾಗವನ್ನು ಗುರುತಿಸಬೇಕೆಂದು ನಿವೇಶನ ರಹಿತರು ಒತ್ತಾಯಿಸಿದ್ದಾರೆ.
‘ಅಮ್ಮತ್ತಿ ಹೋಬಳಿಯಲ್ಲಿ, ತಲೆತಲಾಂತರದಿಂದಲೂ ದಲಿತರು, ಆದಿವಾಸಿಗಳು ಲೈನ್ ಮನೆಗಳಲ್ಲೇ ವಾಸಿಸುತ್ತಿದ್ದಾರೆ. ಭೂ ಮಾಲಕರು ನಿವೇಶನ ರಹಿತರಿಗೆ ಸೂರು ಕೊಡಲು ಬಿಡುತ್ತಿಲ್ಲ.ಸರಕಾರದ ಮಟ್ಟದಲ್ಲಿ ಪ್ರಭಾವ ಬೀರುತ್ತಿದ್ದಾರೆ. ಲೈನ್ ಮನೆಗಳಲ್ಲಿ ಜನರು ಇರುವುದಿಲ್ಲ ಎಂಬ ಕಾರಣದಿಂದಾಗಿ ಭೂ ಮಾಲಕರು ಸೂರು ಕೊಡಲು ಬಿಡುತ್ತಿಲ್ಲ. ಸರಕಾರಿ ಪೈಸಾರಿ ಭೂಮಿ ನೀಡಲು ನೂರೊಂದು ಕಾರಣ ಹೇಳುತ್ತಾರೆ. ಬಡವರಿಗೆ ನಿವೇಶನ ಕೊಟ್ಟರೆ ಶ್ರೀಮಂತರ ಹಿಡಿತದಲ್ಲಿ ಕಾರ್ಮಿಕರು ಇರುವುದಿಲ್ಲ ಎಂಬ ಭಾವನೆ ಇಟ್ಟುಕೊಂಡು, ದಲಿತರನ್ನು ಕೇವಲ ಮತಕ್ಕಾಗಿ ಬಳಸುತ್ತಿದ್ದಾರೆ. ದಲಿತರ ಕೂಗು ಜಿಲ್ಲಾಡಳಿತಕ್ಕೆ ಕೇಳುತ್ತಿಲ್ಲ. ಎಕರೆಗಟ್ಟಲೆ ಭೂಮಿ ಸರಕಾರ ಶ್ರೀಮಂತರಿಗೆ ಕೊಡುತ್ತಿದೆ. ಜೀತ ಮುಕ್ತವಾಗಬೇಕೆಂದು ಹೇಳುತ್ತಾರೆ ಆದರೆ ಇನ್ನೂ ಕೊಡಗಿನಲ್ಲಿ ಜೀತ ಪದ್ಧತಿ ಜೀವಂತವಾಗಿದೆ. ಅಮ್ಮತ್ತಿ ಹೋಬಳಿ ವ್ಯಾಪ್ತಿಯಲ್ಲಿ ಎಕರೆಗಟ್ಟಲೆ ಸರಕಾರಿ ಪೈಸಾರಿ ಜಾಗವನ್ನು ಅತಿಕ್ರಮಿಸಿದ್ದಾರೆ. ಆದರೆ ನಿವೇಶನ ಇಲ್ಲದವರಿಗೆ ಕೊಡುತ್ತಿಲ್ಲ. ಸೂರು ನೀಡದೆ ನಾವು ಇಲ್ಲಿಂದ ಕದಲುವುದಿಲ್ಲ. ಇಲ್ಲಿಂದ ಹೋಗಬೇಕೆಂದರೆ ನಮಗೆ ಭೂಮಿ ಕೊಡಬೇಕು’ ಎಂದು ಬಹುಜನ ಕಾರ್ಮಿಕ ಸಂಘದ ಜಿಲ್ಲಾ ಪದಾಧಿಕಾರಿ ಮಹದೇಶ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಸ್ಥಳೀಯ ಗ್ರಾಮ ಪಂಚಾಯತ್‌ಗೆ ನಿವೇಶನ ನೀಡುವಂತೆ ಒತ್ತಾಯಿಸಿ ಹಲವು ಬಾರಿ ನಾವು ಮನವಿ ಸಲ್ಲಿಸಿದ್ದೇವೆ. ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಅಮ್ಮತ್ತಿ ಕಾರ್ಮಾಡು ಹೋಬಳಿಯ 541 ಸರಕಾರಿ ಕಂದಾಯ ಪೈಸಾರಿ ಜಾಗದಲ್ಲಿ ಟೆಂಡ್ ಹಾಕಿ ನಿವೇಶನ ನೀಡುವಂತೆ ಒತ್ತಾಯಿಸಿ ಅಲ್ಲಿಯೇ ಇದ್ದೆವು. ಏಕಾಏಕಿ ಉಪತಹಶೀಲ್ದಾರ್ ಟೆಂಡ್ ತೆರವುಗೊಳಿಸಿ ನೀರಿನ ಟ್ಯಾಂಕ್ ಒಡೆದುಹಾಕಿದ್ದಾರೆ. ಇದೀಗ ನಾವು 17 ದಿನಗಳಿಂದ ಧರಣಿ ನಡೆಸುತ್ತಿದ್ದೇವೆ. ನಿವೇಶನ ರಹಿತರಿಗೆ ಭೂಮಿ ಗುರುತಿಸಿ, ನಿವೇಶನ ನೀಡುವವರೆಗೆ ನಾವು ಇಲ್ಲಿಂದ ತೆರಳುವುದಿಲ್ಲ.ಜಿಲ್ಲಾಡಳಿತ ಭೂಮಾಲಕರ ಪರವಾಗಿ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ. ಆದಿವಾಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಜೀತದಾಳುವಾಗಿ ದುಡಿಸಿಕೊಳ್ಳುತ್ತಿದ್ದಾರೆ.
- ಪಾಪಣ್ಣ ಅಮ್ಮತ್ತಿ, ನಿವೇಶನ ರಹಿತ ಹೋರಾಟ ಸಮಿತಿ ಪ್ರಮುಖ
ತೋಟದ ಲೈನ್ ಮನೆಗಳಲ್ಲಿ ಜೀವನ ನಡೆಸಲು ಸ್ವಾತಂತ್ರ್ಯವೇ ಇಲ್ಲದ ಪರಿಸ್ಥಿತಿ ನಮ್ಮದು. ನನಗೆ ತಂದೆ ಇಲ್ಲ. ತಾಯಿ ಒಬ್ಬಳೇ ಆಸರೆ. ತೋಟದ ಲೈನ್ ಮನೆಯಲ್ಲಿ ವಾಸಮಾಡುತ್ತಿದ್ದೇವೆ. ನಮಗೆ ಸರಕಾರ ಸ್ವಂತ ನಿವೇಶನ ಕೊಡಬೇಕು.
- ಗಗನ, ಅಮ್ಮತ್ತಿ ಕಾರ್ಮಾಡು







