Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೊಪ್ಪಳ ಪರಿಸರದ ಭಾಷಾ ವೈಶಿಷ್ಟ್ಯ

ಕೊಪ್ಪಳ ಪರಿಸರದ ಭಾಷಾ ವೈಶಿಷ್ಟ್ಯ

ಡಾ.ಸಿದ್ಧಲಿಂಗಪ್ಪಕೊಟ್ನೆಕಲ್ಡಾ.ಸಿದ್ಧಲಿಂಗಪ್ಪಕೊಟ್ನೆಕಲ್10 Jan 2026 4:01 PM IST
share
ಕೊಪ್ಪಳ ಪರಿಸರದ ಭಾಷಾ ವೈಶಿಷ್ಟ್ಯ

ಕನ್ನಡ ಭಾಷೆ ಬಹಳ ವೈವಿಧ್ಯದಿಂದ ಕೂಡಿದೆ. ಸಾಹಿತ್ಯದ ಹಲವು ಪ್ರಕಾರಗಳಾದ ಕಥೆ, ಕಾವ್ಯ, ಕಾದಂಬರಿ, ನಾಟಕ, ಜೀವನಚರಿತ್ರೆ, ಆತ್ಮಚರಿತ್ರೆಗಳು ಕನ್ನಡದ ಹಿರಿಮೆ ಹೆಚ್ಚಿಸಿವೆ. ಮಹಾಕಾವ್ಯಗಳೂ ಕನ್ನಡ ಕಿರೀಟದಂತಿವೆ. ಇದರ ಜೊತೆ-ಜೊತೆಗೆ ಜನಪದ ಸಾಹಿತ್ಯ ಪ್ರಕಾರವಂತೂ ಕನ್ನಡದ ಭಾಷೆಯ ಮೂಲಬೇರಿನಂತಿದೆ.

ಕನ್ನಡ ಭಾಷೆಯಲ್ಲೇ ‘ಹಲವು ಕನ್ನಡಂಗಳ್’ ಎಂಬ ಮಾತು ಬಳಕೆಯಾಗುವುದನ್ನು ಗಮನಿಸಿದಾಗ ಕನ್ನಡ ನುಡಿಯಲ್ಲೇ ಹಲವು ವಿಭಿನ್ನ ಶೈಲಿಗಳಿವೆ ಎಂಬುದು ತಿಳಿಯುತ್ತದೆ. ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು ಹೀಗೆ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಲ್ಲಿ ಭಾಷಾ ಪ್ರಯೋಗವಾಗುತ್ತದೆ. ಅದರಲ್ಲೂ ಜನಪದ ಭಾಷೆಯಂತೂ ಅತ್ಯಂತ ವೈಶಿಷ್ಟ್ಯಗಳಿಂದ ಕೂಡಿದೆ. ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯದಲ್ಲಿ ಅನೇಕ ರೀತಿಯ ವ್ಯತ್ಯಾಸಗಳಿವೆ. ಅದರಂತೆ ಕೊಪ್ಪಳ ಪರಿಸರದ ಜನಪದ ಭಾಷೆಯಂತೂ ಭಾಷೆಯೂ ವಿಭಿನ್ನ, ವಿಶಿಷ್ಟವಾಗಿ ಕಾಣುತ್ತದೆ.

ಕೊಪ್ಪಳ ಭಾಗದಲ್ಲಿ ಮನೆ ಬಳಕೆ, ಅಡುಗೆಮನೆ, ಕೃಷಿ ಚಟುವಟಿಕೆಯಲ್ಲಿ ಬಳಸುವ ವಸ್ತುಗಳು, ಸಂಬಂಧಗಳು, ಗಾದೆಮಾತುಗಳು, ವಿಶಿಷ್ಟ ಶಬ್ಧಗಳು, ಬೈಯ್ಗಳು ಇತ್ಯಾದಿಗಳು ಇತರ ಪ್ರದೇಶಗಳಿಗಿಂತ ಬೇರೆಯಾಗಿವೆ. ಅವುಗಳಲ್ಲಿ ಕೆಲವುಗಳನ್ನು ಇಲ್ಲಿ ಗಮನಿಸಬಹುದು.

ಮನೆ ಬಳಕೆಯ ವಸ್ತುಗಳು :

ಮನೆಯಲ್ಲಿ ಕುಟುಂಬದ ಜೊತೆಗೆ ಅಥವಾ ಹೊರಗಿನವರು ಬಂದಾಗ ಮನೆಯ ವಸ್ತುಗಳನ್ನು ಜನಪದರು ಪರಿಚಯಿಸುವಿಕೆ ಅಥವಾ ಗುರುತಿಸುವಿಕೆ ಭಿನ್ನವಾಗಿದೆ. ಅವುಗಳಲ್ಲಿ ಕೆಲವು ವಿಶಿಷ್ಟವಾದವುಗಳೆಂದರೆ ಅಂಕಣ, ಪಡಸಾಲಿ (ಮನೆಯೊಳಗಿನ ಕಟ್ಟೆ), ಜಂತಿ, ತೊಲೆ (ಛತ್ತಿನ ಕಟ್ಟಿಗೆಯ ತುಂಡು), ಗುಣ್ಣೆ, ಗುಣ್ಣೆವು, ಮಾಡು (ಆಧುನಿಕ ಶೆಲ್ಫ್), ಕಿಡಿಕಿ, ಕಿಟಕಿ (ಆಧುನಿಕ ವಿಂಡೊ), ಕುರ್ಚಿ (ಚೇರ್), ಬವಂಚಿ, ಗಬಾಕಲಿ (ಛತ್ತಿನ ಮೇಲಿರುವ ಬೆಳಕಿಂಡಿ), ಹಿತ್ಲ (ಹಿಂಬದಿ ಅಂಗಳ), ಬಚ್ಲಾ (ಬಾತ್‌ರೂಂ) ಮುಂತಾದ ಶಬ್ದಗಳನ್ನು ಬಳಸುತ್ತಾರೆ.

ಅಡುಗೆ ಮನೆ ಬಳಕೆಯ ವಸ್ತುಗಳು :

ಗಂಗಾಳ (ಪ್ಲೇಟ್), ತೆಂಬಿಗೆ, ಚರಿಗೆ, ಚೊಂಬು (ತಂಬಿಗೆ), ಜಾಂಬು (ಗ್ಲಾಸ್), ವಾಟಿಗಾ (ನೀರು ಕುಡಿಯುವ ಸಣ್ಣ ಗ್ಲಾಸ್), ತ್ಯಪಾಲಿ, ಗುಂಡ್ರಿಕಿ (ತಪಾಲಿ), ಬೋಗಾಣಿ, ಡಬರಿ (ಅಡುಗೆಯ ದೊಡ್ಡ ಪಾತ್ರೆ), ಸೌಟು (ಚಮಚ), ಉಟ್ಟು (ಅನ್ನ ಅಥವಾ ಸಾರು ಕಲೆಸುವ ಕಟ್ಟಿಗೆ ಸಾಧನ), ಈಳಿಗಿ (ಕಾಯಿಪಲ್ಲೆ ಕತ್ತರಿಸುವ ಸಾಧನ), ಅಡ್ಡಣಿಕೆ, ಅಡ್ಡಣಿಗೆ (ಕೂರುವ ಮಣೆ), ಕೊಣಿಗೆ (ರೊಟ್ಟಿ ಬಡೆಯುವ ಮಣೆ), ಲಟ್ಟಣಿಕೆ, ಲಟ್ಟಣಿಗೆ (ಚಪಾತಿ ಮಾಡುವ ಮಣೆ), ಇಕ್ಕಳ (ಬಿಸಿವಸ್ತು ಹಿಡಿಯುವ ಸಾಧನ), ಕಿತ್ಲಿ (ಚಹ ತುಂಬಿಸಿಡುವ ಪಾತ್ರೆ), ಗಿಂಡಿ (ನೀರು ಕುಡಿಯುವ ಸಣ್ಣ ಪಾತ್ರೆ), ಟಾಕಿ (ನೀರಿನ ಟ್ಯಾಂಕ್), ಕೊಳವಿ (ಊದುಗೊಳವಿ), ತುರಿಮಣೆ (ಕೊಬ್ಬರಿ, ಕಾಯಿಪಲ್ಲೆ ಸಣ್ಣಾಗಿ ತಿಕ್ಕುವ ಸಾಧನ).

ಬಾಂಧವ್ಯಗಳು :

ನೆಗೆಣ್ಣಿ (ಮಹಿಳೆಯ ಗಂಡನ ಅಣ್ಣ ಅಥವಾ ತಮ್ಮನ ಹೆಂಡತಿ), ನಾದಿನಿ (ಗಂಡನ ತಂಗಿ ಅಥವಾ ಅಕ್ಕ), ಚಿಗವ್ವ, ಚಿಕ್ಕವ್ವ, ಚಿಕ್ಕಿ, ಸಣ್ಣವ್ವ, ಸಣ್ಣಮ್ಮ (ಚಿಕ್ಕಮ್ಮ), ಕಾಕಾ, ಚಿಗಪ್ಪ, ಸಣ್ಣಪ್ಪ (ಚಿಕ್ಕಪ್ಪ), ದೊಡವ್ವ, ದೊಡಮ್ಮ, ದೊಡ್ಡಿ (ದೊಡ್ಡಮ್ಮ), ದೊಡಪ್ಪ, ದೊಡ್ಡಯ್ಯ (ದೊಡ್ಡಪ್ಪ), ಭಾವ (ಮಾಮಾ), ಮೈದ್ನಾ (ಗಂಡನ ತಮ್ಮ), ವೈನಿ (ಅತ್ತಿಗೆ), ಭಾಮೈದ (ಹೆಂಡತಿಯ ತಮ್ಮ), ಇಂತಹ ಸಂಬಂಧಿಕರನ್ನು ಜನರು ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ.

ಕೃಷಿ ಚಟುವಟಿಕೆಯಲ್ಲಿ ಬಳಸುವ ವಸ್ತುಗಳು :

ರೈತರೇ ಜನಪದರು. ಜನಪದರೇ ರೈತರು ಎಂದರೆ ತಪ್ಪಾಗಲಾರದು. ಕುಡುಗೋಲು (ಬೆಳೆ ಕತ್ತರಿಸುವ ಸಾಧನ), ಕುರ್ಚಿಗಿ (ಕಳೆ ತೆಗೆಯುವ ಸಾಧನ), ಗುದ್ಲಿ (ಮಣ್ಣು ಅಗೆಯುವ ಕಬ್ಬಿಣದ ಸಾಧನ), ಪಿಕಾಸಿ (ಎರಡೂ ಬದಿಯಿಂದ ಮಣ್ಣು ಅಗೆಯುವ ಕಬ್ಬಿಣದ ಸಾಧನ) ಬಾರಕೋಲು (ಚಾಟಿ), ಸಲಿಕಿ (ಮಣ್ಣು ಎತ್ತುವ ಸಾಧನ), ಕಾವು (ಹಿಡಿಕೆ), ಕುಂಟೆ (ಭೂಮಿ ಹರಗಲು ಬಳಸುವ ಸಾಧನ), ತಾಳು (ಬಿತ್ತುವಾಗ ಬಳಸುವ ಕಬ್ಬಿಣದ ಹಿಡಿಕೆ), ಮಡಿಕೆ (ನೇಗಿಲು), ಮೇಳಿ (ಕೂರಿಗೆಯ ಕಟ್ಟಿಗೆ ಹಿಡಿಕೆ ಭಾಗ), ನೊಗ (ಎತ್ತಿನ ಹೆಗಲು ಕಟ್ಟಲು ಬಳಸುವ ಉಪಕರಣ), ಕೊಳಕಣ್ಣಿ (ದನ ಕಟ್ಟಲು ಬಳಸುವ ಹಗ್ಗದ ಹಿಡಿಕೆ), ಕಣ್ಣಿ (ಅಗ್ಗದ ಸಾಧನ), ಕೂರಿಗಿ (ಬಿತ್ತುವ ಸಾಧನ), ಎಡಿಕುಂಟಿ (ಚಿಕ್ಕಕುಂಟೆ), ಬುಕ್ಕ (ಬಿತ್ತುವ ಕೊಳವೆ), ಪಲಗ (ಕುಂಟೆ ಕಬ್ಬಿಣ), ಮೂಗುದಾಣ (ಮೂಗುದಾರ), ಗ್ವಾದ್ಲಿ (ಗೋದಲಿ), ಅಟ್ಟ (ಸಜ್ಜ), ಬಣವಿ (ಹುಲ್ಲಿನ ಕುಪ್ಪೆ), ಕಣ (ರಾಶಿಮಾಡುವ ಜಾಗ), ಮ್ಯಾರಿ, ಬದುವು (ಹೊಲದ ಸೀಮೆ), ಮಡಿ (ಬೆಳೆಸಾಲು), ಈಸು (ಕುಂಟೆಯ ಉದ್ದನ ಕಟ್ಟಿಗೆ), ಮೇಟಿ (ಕಣದ ಮಧ್ಯದಲ್ಲಿ ಹಂತಿಗಾಗಿ ನಿಲ್ಲಿಸಿದ ಕಂಬ), ಚಿಕ್ಕ (ದನದ ಬಾಯಿಕಟ್ಟು), ಗಗ್ಗರಿ (ಎತ್ತಿನ ಅಲಂಕಾರದ ವಸ್ತು), ಗುದಿಗೆ (ದನಗಳ ನಿಯಂತ್ರಣಕ್ಕೆ ಕೊರಳಲ್ಲಿ ಕಟ್ಟುವ ಕಟ್ಟಿಗೆ) ಮುಂತಾದ ವಸ್ತುಗಳ ಹೆಸರುಗಳನ್ನು ವಿಶಿಷ್ಟವಾಗಿ ಕರೆಯಲಾಗುತ್ತದೆ.

ಉಡುಪುಗಳು :

ಲುಂಗಿ, ಪಂಜೆ (ಪಂಚೆ), ಟವಲ್ಲು, ಟುವಲ್ಲು (ಟವೆಲ್), ಚಡ್ಡಿ, ಚೊಣ್ಣ (ಪುರುಷರ ಒಳಉಡುಪು), ಕುಬುಸ (ಕುಪ್ಪಸ), ಪಟಗ, ರುಮಾಲು (ತಲೆಸುತ್ತಲು ಬಳಸುವ ಬಟ್ಟೆ), ಬೊಕ್ಣ (ಜೋಬು), ದಸ್ತಿ, ಕರ್ಚಿಪ್ಪು (ಕರವಸ್ತ್ರ), ಬನಿನ (ಪುರುಷರ ಒಳಅಂಗಿ), ಲಂಗೋಟಿ (ಪುರುಷನ ಒಳತುಂಡುಡುಪು), ದೋತರ (ದೊಡ್ಡ ಪಂಚೆ) ಮುಂತಾದವು.

ಪಲ್ಲಟಗಳು :

ಕೊಪ್ಪಳ ಜನರು ಮಾತನಾಡುವ ಭಾಷೆಯಲ್ಲಿ ಅನೇಕ ವ್ಯತ್ಯಾಸಗಳು, ಪಲ್ಲಟಗಳು, ವಾಕ್ಯಗಳನ್ನು ಹಿಂದು-ಮುಂದು ಮಾಡಿ ಮಾತನಾಡುವುದನ್ನು ಕಾಣುತ್ತೇವೆ. ಆದರೆ ಅವು ಅಭಾಸ ಎನಿಸುವುದಿಲ್ಲ. ಕಿರಿಕಿರಿಗೆ ‘ಉಪಟಳ’ದ ಬದಲಾಗಿ ‘ಉಪಳಾಟ’ ಎಂದರೆ, ‘ಹೊಟ್ಟೆಕಿಚ್ಚು’ ಎನ್ನುವುದಕ್ಕೆ ‘ಹೊಚ್ಚೆಕಿಟ್ಟು’ ಎನ್ನುತ್ತಾರೆ. ‘ನಿಲುಕು’ ಎನ್ನುವುದನ್ನು ‘ನಿಕುಲು’ ಎಂದರೆ, ‘ಕಾಗದ’ಕ್ಕೆ ‘ಕಾದಗ’ ಎನ್ನುತ್ತಾರೆ. ‘ಎಲುಬು’ ಎನ್ನುವುದನ್ನು ’ಎಬುಲು’ ಎಂದು ಕೆಲ ಶಬ್ದಗಳನ್ನು ಪಲ್ಲಟೀಕರಿಸಿ ಮಾತನಾಡುತ್ತಾರೆ.

ವಿಶಿಷ್ಟ ಪದಗಳು :

ನೆನಪಿಗೆ ‘ಧ್ಯಾಸ’ ಎನ್ನುತ್ತಾರೆ. ‘ಧ್ಯಾನ’ ಎಂದರೆ ಒಂದು ನೆನಪು ಅಥವಾ ಒಂದು ಕೆಲಸದಲ್ಲಿ ಸದಾ ಧ್ಯಾನದಲ್ಲಿರಬೇಕು. ಇಂತಹ ಶಬ್ಧ ಬಳಸುತ್ತಿರುವುದು ಈ ಭಾಗದ ವಿಶೇಷ ಎನ್ನಬಹುದು. ರಕ್ತಸಂಬಂಧಿಗಳನ್ನು ‘ಕಳ್ಳು-ಬಳ್ಳಿ’ ಎಂದು ಕರೆಯುತ್ತಾರೆ. ಸಂಬಂಧಗಳು ‘ಬಳ್ಳಿ’ಯಂತೆ ಹರಡಿಕೊಂಡಿದ್ದಕ್ಕೆ ಹೀಗೇ ಬಳಸಿರಬಹುದು. ಬಡಿಯುವ ಕ್ರಿಯೆಗೆ ‘ನಾದು’ ಎನ್ನುತ್ತಾರೆ. ನಾದು ಎಂದರೆ ಹಿಟ್ಟನ್ನು ಕಲಸು, ಹದಮಾಡು ಎಂಬರ್ಥ ಬಂದರೂ ಒಬ್ಬ ವ್ಯಕ್ತಿಯನ್ನು ಚೆನ್ನಾಗಿ ನಾದಿದಾಗ ಅಥವಾ ಬಡಿದಾಗ ಸರಿದಾರಿಗೆ ಬರುತ್ತಾನೆ. ಅದಕ್ಕಾಗಿಯೇ ಈ ಶಬ್ದ ಬಳಸಿರಬಹುದು.

ಹೀಗೆ ಕೊಪ್ಪಳ ಪರಿಸರದಲ್ಲಿ ಜನಪದ ಭಾಷೆ ವೈಶಿಷ್ಟ್ಯದಿಂದ ಕೂಡಿದೆ. ಅದು ಇತರ ಪ್ರಾಂತ್ಯ, ಪ್ರದೇಶಗಳಿಗಿಂತ ಭಿನ್ನವಾಗಿದೆ. ಈ ಭಾಷಾ ಪ್ರಯೋಗ ಬೇರೆಯವರಿಗೆ ಅರ್ಥವಾಗದೆ ಅಥವಾ ಗೊಂದಲ ಎನಿಸಲೂಬಹುದು. ಆದರೂ ಅವು ಸ್ವಂತಿಕೆ ಉಳಿಸಿಕೊಂಡು ಬಂದಿವೆ.

Tags

Koppala
share
ಡಾ.ಸಿದ್ಧಲಿಂಗಪ್ಪಕೊಟ್ನೆಕಲ್
ಡಾ.ಸಿದ್ಧಲಿಂಗಪ್ಪಕೊಟ್ನೆಕಲ್
Next Story
X