ಸರಕಾರಿ ಶಾಲೆಗಳ ಖಾಸಗೀಕರಣದ ಹಿಂದಿನ ಷಡ್ಯಂತ್ರ

ಈ ನವೆಂಬರ್ ತಿಂಗಳಿನಲ್ಲಿ ಕರ್ನಾಟಕದಲ್ಲಿ 71ನೇ ರಾಜ್ಯೋತ್ಸವವನ್ನು ಸಂಭ್ರಮಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲೇ ಸರಕಾರಿ ಶಾಲೆಗಳಿಗೆ ಸೂತಕ ಸುತ್ತಿಕೊಳ್ಳುತ್ತಿದೆ. ಕರ್ನಾಟಕದಾದ್ಯಂತ ಇರುವ 49 ಸಾವಿರದಷ್ಟು ಶಾಲೆಗಳಲ್ಲಿ 40 ಸಾವಿರ ಶಾಲೆಗಳು ಮುಚ್ಚಲ್ಪಡುವ ಆಘಾತಕಾರಿ ಸಂಗತಿ ಎದುರಾಗಿದೆ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಅಂದರೆ ಒಂದು ಸಾವಿರ ಕೆಪಿಎಸ್ ಶಾಲೆಗಳನ್ನು ಗ್ರಾಮೀಣ ಭಾಗದಲ್ಲಿ ಆರಂಭಿಸುವುದಾಗಿ ಸರಕಾರ ಘೋಷಿಸಿದೆ. ಎಲ್ಕೆಜಿಯಿಂದ ಪಿಯುಸಿವರೆಗೆ ಒಂದೇ ಕೆಪಿಎಸ್ ಶಾಲೆಯಲ್ಲಿ ಕಲಿಕೆಗೆ ವ್ಯವಸ್ಥೆ ಮಾಡಲಾಗುವುದು ಹಾಗೂ ಒಂದು ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಹೇಳಿದ್ದಾರೆ. ಆದರೆ ಎಷ್ಟು ಸಾವಿರ ಸರಕಾರಿ ಶಾಲೆಗಳ ಸಮಾಧಿಯ ಮೇಲೆ ಈ ಕೆಪಿಎಸ್ ಶಾಲೆಗಳು ತಲೆ ಎತ್ತುತ್ತಿವೆ ಎಂಬುದನ್ನು ಕೇಳಿದರೆ ಗಾಬರಿಯಾಗುತ್ತದೆ. ಸುತ್ತಮುತ್ತಲೂ ಇರುವ ಸರಕಾರಿ ಶಾಲೆಗಳನ್ನು ನುಂಗುತ್ತಲೇ ಒಂದು ಕೆಪಿಎಸ್ ಶಾಲೆ ಹುಟ್ಟುತ್ತದೆ. ಇದಕ್ಕೆ ಶಾಲೆಗಳ ವಿಲೀನ ಎಂದು ಕರೆಯಲಾಗುತ್ತದೆ. ಸುಮಾರು 40 ಸಾವಿರ ಶಾಲೆಗಳನ್ನು ಮುಚ್ಚಿ ಸಾವಿರಾರು ಕೆಪಿಎಸ್ ಶಾಲೆಗಳನ್ನು ಕಟ್ಟಲು ಕರ್ನಾಟಕ ಸರಕಾರ ಮುಂದಾಗಿದೆ.
ಇದರ ಜೊತೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಅವರು ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವುದಾಗಿ ಘೋಷಿಸಿದ್ದಾರೆ. ರಾಜ್ಯದ ಎಲ್ಲಾ ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಗರಿಷ್ಠ ಮೂರು ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಬೇಕು ಹಾಗೂ ಇದಕ್ಕೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಂದರೆ ಸಿಎಸ್ಆರ್ ಫಂಡ್ ಬಳಸಬೇಕು ಮತ್ತು ಗ್ರಾಮೀಣ ಶಾಲಾ ಮಕ್ಕಳನ್ನು ಖಾಸಗಿ ಶಾಲೆಗಳ ಮಕ್ಕಳೊಂದಿಗೆ ಸೇರಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ನವೆಂಬರ್ 5ರಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರತಿನಿಧಿಗಳ ಸಭೆಯಲ್ಲಿ ಘೋಷಿಸಿದ್ದು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ‘‘2,000 ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಚಿಂತನೆ ಇದ್ದು 6,000 ಪಂಚಾಯತ್ಗಳಲ್ಲಿ ಮೂರು ವಿಭಾಗ ಮಾಡಿದ್ದು ಆರಂಭದಲ್ಲಿ 1,000 ಸರಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಶಾಲೆಗಳನ್ನು ಜೋಡಿಸುವ ಗುರಿ ಹೊಂದಿದ್ದೇವೆ’’ ಎಂದೂ ಸಿಎಂ ಹೇಳಿದ್ದಾರೆ.
ಖಾಸಗಿ ಶಾಲೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು, ರಾಜ್ಯದ ಕಂಪೆನಿಗಳು ಖಾಸಗಿ ಶಾಲೆಗಳ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಸಿಎಸ್ಆರ್ ನಿಧಿಯನ್ನು ವಿನಿಯೋಗಿಸಬೇಕು, ಈಗಾಗಲೇ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 30 ಶಾಲೆಗಳಲ್ಲಿ ಕಂಪೆನಿಗಳ ಸಿಎಸ್ಆರ್ ನಿಧಿ ಬಳಸಿ ಅಭಿವೃದ್ಧಿ ಕಾರ್ಯಗಳು ಆರಂಭಗೊಂಡಿದೆ. ಖಾಸಗಿ ಶಾಲೆಗಳು ತಮ್ಮ ಶಾಲೆಯ ಹೆಸರನ್ನು ಸರಕಾರಿ ಶಾಲೆಯ ಹೆಸರಿನೊಂದಿಗೆ ಸೇರಿಸಿಕೊಳ್ಳಬಹುದಾಗಿದೆ ಎಂದೂ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಸರಕಾರಿ ಶಾಲೆಗಳ ಖಾಸಗೀಕರಣದ ಕುರಿತು ಮುಖ್ಯಮಂತ್ರಿಗಳ ಹೇಳಿಕೆ ಹಾಗೂ ಕೆಪಿಎಸ್ ಶಾಲೆಗಳ ಜೊತೆಗೆ ಸರಕಾರಿ ಶಾಲೆಗಳ ವಿಲೀನೀಕರಣ ಕುರಿತು ಶಿಕ್ಷಣ ಸಚಿವರು ಕೊಟ್ಟ ಹೇಳಿಕೆಯ ಹಿಂದೆ ಬೇರೆಯದೇ ಲೆಕ್ಕಾಚಾರಗಳಿವೆ. ಇಡೀ ಸರಕಾರಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಕಾರ್ಪೋರೇಟ್ ಕಂಪೆನಿಗಳ ಪಾಲು ಮಾಡುವ ಹುನ್ನಾರವಾಗಿದೆ. ಅದಕ್ಕೆ ವಿಶ್ವಬ್ಯಾಂಕ್ ವಿಧಿಸಿರುವ ಷರತ್ತುಗಳೂ ಕಾರಣವಾಗಿವೆ. ಅದರ ಹಿನ್ನೆಲೆಯನ್ನು ಗಮನಿಸಲೇಬೇಕಿದೆ.
ಏಶ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಜೊತೆಗೆ ಕರ್ನಾಟಕ ಸರಕಾರ ಒಂದು ಒಪ್ಪಂದವನ್ನು ಮಾಡಿಕೊಂಡಿದೆ. ಕರ್ನಾಟಕದ ಶಿಕ್ಷಣ ವ್ಯವಸ್ಥೆಗಾಗಿ ಈ ಎಡಿಬಿ ಬ್ಯಾಂಕ್ ಒಟ್ಟು 7,500 ಕೋಟಿ ರೂ.ಗಳಷ್ಟು ಸಾಲವನ್ನು ಕರ್ನಾಟಕಕ್ಕೆ ಕೊಡುತ್ತದೆ. ಯಾವುದೇ ಜಾಗತಿಕ ಬ್ಯಾಂಕ್ ಸುಖಾ ಸುಮ್ಮನೆ ಬಡ್ಡಿರಹಿತ ಸಾಲ ಕೊಡಲು ಸಾಧ್ಯವೇ? ಈ ಎಡಿಬಿ ಬ್ಯಾಂಕ್ ಸಹ ಹಲವಾರು ಷರತ್ತುಗಳನ್ನು ವಿಧಿಸಿಯೇ ಮೊದಲ ಕಂತಿನ 2,000 ಕೋಟಿ ಹಣ ಬಿಡುಗಡೆ ಮಾಡುತ್ತಿದೆ. ಆ ಷರತ್ತುಗಳು ಎಡಿಬಿ ಬ್ಯಾಂಕ್ ವೆಬ್ಸೈಟಿನಲ್ಲೂ ಲಭ್ಯವಿವೆ.
ವಿಶ್ವಸಂಸ್ಥೆಯ ಈ ಎಡಿಬಿ ಬ್ಯಾಂಕ್ ಎರಡು ರೀತಿಯ ಸಾಲಗಳನ್ನು ಕೊಡಮಾಡುತ್ತದೆ. ಮೊದಲನೆಯದು ವೆಲ್ಫೇರ್ ಸ್ಕೀಮ್. ನೀರು, ರಸ್ತೆ, ಸಂಪರ್ಕ ಹೀಗೆ ಜನಕಲ್ಯಾಣ ಅಭಿವೃದ್ಧಿಗಾಗಿ ಕೊಡುವ ಸಾಲಕ್ಕೆ ಹೆಚ್ಚು ನಿರ್ಬಂಧಗಳು ಇರುವುದಿಲ್ಲ. ಆದರೆ ಕಂಡೀಶನಲ್ ಲೋನ್ ಎಂದು ಕೊಡಲಾಗುವುದನ್ನು ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ಕೊಡಲಾಗುತ್ತಿದೆ.
ಅದಕ್ಕಾಗಿ ಎಡಿಬಿ ಬ್ಯಾಂಕ್ ವಿಧಿಸಿದ ನಿರ್ಬಂಧಗಳು ನಮ್ಮ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಅಡಿಯಾಳಾಗಿಸುವಂತಿವೆ. ಅವುಗಳು ಯಾವುವೆಂದರೆ, ಕರ್ನಾಟಕ ಸರಕಾರ ಆರಂಭಿಸುತ್ತಿರುವ ಕೆಪಿಎಸ್ ಶಾಲೆಗಳಿಗೆ ಈ ಲೋನ್ ಬಳಕೆಯಾಗಬೇಕು. ಕೆಪಿಎಸ್ ಶಾಲೆಯ ಜೊತೆ ಸುತ್ತಲಿರುವ ಸರಕಾರಿ ಶಾಲೆಗಳನ್ನು ವಿಲೀನಗೊಳಿಸಬೇಕು. ಈ ಕೆಪಿಎಸ್ ಶಾಲೆಗಳಿಗೆ ಕಾರ್ಪೊರೇಟ್ ಕಂಪೆನಿಗಳಿಂದ ಬಂಡವಾಳ ತೊಡಗಿಸುವಂತೆ ಮಾಡಬೇಕು. ಆ ಕಾರ್ಪೊರೇಟ್ ಕಂಪೆನಿಗಳ ಅಗತ್ಯಕ್ಕೆ ತಕ್ಕಂತೆ ಸಿಲೆಬಸ್ನ್ನು ಆ ಕಂಪೆನಿಗಳೇ ನಿರ್ಧರಿಸಬೇಕು. ಮುಂದೆ ಸರಕಾರದಿಂದ ಆಗುವ ಶಿಕ್ಷಕರ ನೇಮಕಾತಿ ಕೆಪಿಎಸ್ ಶಾಲೆಗಳಿಗೆ ಮೀಸಲಾಗಿರಬೇಕು. ಹೀಗೆ ವಿಲೀನ ಮಾಡಲಾದ ಶಾಲೆಗಳಿಗೆ ಸರಕಾರ ಯಾವುದೇ ಅನುದಾನ ಕೊಡುವಂತಿಲ್ಲ. ಇದೆಲ್ಲಾ ನಿಬಂಧನೆಗಳನ್ನು ವ್ಯವಸ್ಥಿತವಾಗಿ 2030ರ ಒಳಗೆ ನಿರ್ವಹಿಸಿದರೆ ಎರಡನೇ ಕಂತಿನ 5,500 ಕೋಟಿ ರೂ. ಸಾಲವನ್ನು ಎಡಿಬಿ ಮಂಜೂರು ಮಾಡುತ್ತದೆ. ಒಟ್ಟು 4,038 ಕೆಪಿಎಸ್ ಶಾಲೆಗಳಿಗೆ ಈ ಸಾಲ ಕೊಡಲಾಗುತ್ತಿದೆ. ಉಳಿದ ಶಾಲೆಗಳ ನಿರ್ವಹಣೆಗೂ ನಮಗೂ ಸಂಬಂಧವಿಲ್ಲ ಎಂದು ಎಡಿಬಿ ಹೇಳಿದೆ. ಈ ಸಾಲದ ಒಪ್ಪಂದಕ್ಕೆ ಈಗಾಗಲೇ ಕರ್ನಾಟಕದ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಸಹಿ ಹಾಕಿದ್ದಾರೆ. ಹೀಗಾಗಿ 2030ರ ಒಳಗೆ ಅಂದರೆ ಇನ್ನು ಮೂರು ವರ್ಷಗಳಲ್ಲಿ 40 ಸಾವಿರದಷ್ಟು ಸರಕಾರಿ ಶಾಲೆಗಳ ಮರಣ ಶಾಸನಕ್ಕೆ ಸಹಿ ಹಾಕಿ ಬಂದಿದ್ದಾರೆ.
ಇದು ಕೆಪಿಎಸ್ ಶಾಲೆಗಳ ಆರಂಭ ಮತ್ತು ಸರಕಾರಿ ಶಾಲೆಗಳ ವಿಲೀನದ ಹಿಂದಿರುವ ಮಹಾತಂತ್ರ. ಕರ್ನಾಟಕ ಸರಕಾರ ಹಾಗೂ ವಿಶ್ವಸಂಸ್ಥೆ ಸೇರಿ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡಲು ಮಾಡುತ್ತಿರುವ ಜಾಗತಿಕ ಷಡ್ಯಂತ್ರ. ಸ್ವಾತಂತ್ರ್ಯ ಪೂರ್ವದಲ್ಲಿ ಮೆಕಾಲೆ ಎನ್ನುವ ಬ್ರಿಟಿಷ್ ಅಧಿಕಾರಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದ. ಅವರ ಉದ್ದೇಶ ಬ್ರಿಟಿಷ್ ಸರಕಾರಕ್ಕೆ ಪೂರಕವಾಗಿ ಸಹಾಯಕರನ್ನು ತಯಾರಿ ಮಾಡುವುದಾಗಿತ್ತು. ಅದೇ ರೀತಿ ಈಗ ಈ ದೇಶವನ್ನು ಪರೋಕ್ಷವಾಗಿ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಆಳುತ್ತಿರುವುದೇ ಕಾರ್ಪೊರೇಟ್ ಕಂಪೆನಿಗಳು. ಈ ಕಂಪೆನಿಗಳ ಅಗತ್ಯಕ್ಕೆ ತಕ್ಕಂತೆ ಬೇಕಾಗುವ ಪರಿಣಿತರನ್ನು ಸೃಷ್ಟಿಸುವ ಉದ್ದೇಶದಿಂದಲೇ ಕೆಪಿಎಸ್ ಕ್ಲಸ್ಟರ್ ಯೋಜನೆಯನ್ನು ರೂಪಿಸುತ್ತಿರುವುದು. ಕಾರ್ಪೊರೇಟ್ ಕಂಪೆನಿಗಳಿಂದ ಸಿಎಸ್ಆರ್ ಫಂಡ್ ವಿನಿಯೋಗಿಸುತ್ತಿರುವುದು ಹಾಗೂ ವಿಶ್ವಸಂಸ್ಥೆ ಕಂಡೀಷನಲ್ ಸಾಲ ಕೊಡುತ್ತಿರುವುದು.
ಆದ್ದರಿಂದಲೇ ಈ ಶಾಲೆಗಳಿಗೆ ಕಾರ್ಪೊರೇಟ್ ಕಂಪೆನಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮಗಳನ್ನು ರೂಪಿಸಬಹುದಾಗಿದೆ, ಅವರ ಹಿತಾಸಕ್ತಿಗೆ ಪೂರಕವಾಗಿ ನೌಕರರನ್ನು ತಯಾರಿಸುವ ಕಾರ್ಯಕ್ಕೆ ಕೆಪಿಎಸ್ ಶಾಲೆಗಳು ಬಳಕೆಯಾಗುತ್ತವೆ. ಒಟ್ಟಾರೆಯಾಗಿ ನಮ್ಮ ಸರಕಾರಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಕೆಪಿಎಸ್ ಶಾಲಾ ಯೋಜನೆಯ ಹೆಸರಲ್ಲಿ, ಖಾಸಗಿ ಶಾಲೆಗಳ ಮೇಲ್ವಿಚಾರಣೆಯಲ್ಲಿ, ಕಾರ್ಪೊರೇಟ್ ಕಂಪೆನಿಗಳ ಅನುಕೂಲಕ್ಕೆ ತಕ್ಕಂತೆ ಬಳಕೆಯಾಗುವಂತಿದೆ.
ಸರಕಾರಿ ಶಾಲೆಗಳನ್ನು ಬಲಪಡಿಸುವ ಬದಲಾಗಿ ಸರಕಾರವು ವಿಲೀನದ ಹೆಸರಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚಲು ಈ ಕೆಪಿಎಸ್ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಕಾರ್ಪೊರೇಟ್ ಶಾಲೆಗಳಲ್ಲಿ ಜ್ಞಾನಕ್ಕಿಂತ ಕೌಶಲಾಭಿವೃದ್ಧಿಗೆ ಮಾತ್ರ ಪ್ರಾಮುಖ್ಯತೆ ಕೊಡಲಾಗುತ್ತದಂತೆ. 1ನೇ ಕ್ಲಾಸಿನ ಮಕ್ಕಳಿಗೆ ಕಂಪ್ಯೂಟರ್ ಅಂತೆ, 6ನೇ ಕ್ಲಾಸಿನ ಮಕ್ಕಳಿಗೆ ಕೌಶಲಾಭಿವೃದ್ಧಿ ತರಬೇತಿಯಂತೆ. ಇದಕ್ಕಾಗಿಯೇ ಕೆಪಿಎಸ್ ಶಾಲೆಗೆ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುತ್ತದಂತೆ.
ಕೌಶಲಾಭಿವೃದ್ಧಿ ಹೆಸರಲ್ಲಿ ಕೂಡಿ ಆಡಿ ಕಲಿತು ತಮ್ಮದೇ ಪರಿಸರದಲ್ಲಿ ಬೆಳೆಯುವ ಮಕ್ಕಳ ಬಾಲ್ಯವನ್ನು ಕಸಿದುಕೊಂಡು ಕಾರ್ಪೊರೇಟ್ ಕಂಪೆನಿಗಳಿಗೆ ಅಗತ್ಯವಿರುವ ತಾಂತ್ರಿಕ ಗುಲಾಮರನ್ನು ಸೃಷ್ಟಿಸುವ ಕೇಂದ್ರಗಳಾಗಿ ಕೆಪಿಎಸ್ ಶಾಲೆಗಳು ಪರಿವರ್ತನೆಯಾಗುತ್ತಿವೆ.
ಸಿಎಂ ಡಿ.ಕೆ. ಶಿವಕುಮಾರ್ರವರ ಪುತ್ರಿ ಐಶ್ವರ್ಯಾರವರು ಸರಕಾರಿ ಶಾಲೆಯ ಶಿಕ್ಷಕರು ಲಕ್ಷಗಳಷ್ಟು ಸಂಬಳ ಪಡೆದರೂ ವಾರಕ್ಕೆ ಐದು ದಿನ ನೆಟ್ಟಗೆ ಶಾಲೆಗೆ ಬರುವುದಿಲ್ಲ ಎಂದು ಆರೋಪಿಸಿ ಭಾಷಣ ಮಾಡಿದ್ದಾರೆ. ಇವರ ತಂದೆ ಇದೇ ಸರಕಾರಿ ಶಾಲೆಯಲ್ಲೇ ಓದಿದ್ದು ಎಂಬುದನ್ನು ಮರೆತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಓದಿದವರಲ್ಲಿ ಅನೇಕರು ವಿಜ್ಞಾನಿಗಳಾಗಿದ್ದಾರೆ, ನೇತಾರರಾಗಿದ್ದಾರೆ, ಇಂಜಿನಿಯರ್, ಡಾಕ್ಟರ್ಗಳಾಗಿದ್ದಾರೆ. ಸರಕಾರಿ ಶಾಲೆಗಳ ಶಿಕ್ಷಕರ ಮೇಲೆ ಆರೋಪಿಸುವುದು ಸುಲಭ. ಆದರೆ ಆ ಶಿಕ್ಷಕರನ್ನು ಕಲಿಸುವಿಕೆಯಿಂದ ಹೊರತು ಪಡಿಸಿ ಇತರ ಕೆಲಸಕ್ಕೆ ಈ ಸರಕಾರಿ ವ್ಯವಸ್ಥೆ ನಿರಂತರವಾಗಿ ಬಳಸಿಕೊಳ್ಳುತ್ತಿದೆ. ಜನ ಗಣತಿ, ಮತದಾರರ ಗಣತಿ, ಜಾತಿ ಗಣತಿ ಅಷ್ಟೇ ಯಾಕೆ ಬಿಸಿ ಊಟದ ವ್ಯವಸ್ಥೆಗೂ ಸರಕಾರಿ ಶಾಲೆಯ ಶಿಕ್ಷಕರೇ ಬಳಕೆಯಾಗುತ್ತಿದ್ದಾರೆ. ಇನ್ನು ಈ ಶಿಕ್ಷಕರಿಗೆ ಪಾಠ ಹೇಳಿಕೊಡಲು, ಪರಿಣಾಮಕಾರಿಯಾಗಿ ಪಠ್ಯಕ್ರಮವನ್ನು ಪೂರೈಸಲು ಸಮಯ ಎಲ್ಲಿರುತ್ತದೆ. ಸರಕಾರಿ ಶಾಲಾ ಶಿಕ್ಷಕರ ಮೇಲೆ ಹೇರಲಾಗುತ್ತಿರುವ ಶಿಕ್ಷಣೇತರ ಜವಾಬ್ದಾರಿಗಳನ್ನು ಮೊದಲು ಸರಕಾರ ನಿಲ್ಲಿಸಲಿ. ಶಿಕ್ಷಕರು ಪಾಠ ಹೇಳುವುದಕ್ಕೆ ಮಾತ್ರ ಇರಲಿ. ಆಗ ಶಿಕ್ಷಣದ ಗುಣಮಟ್ಟವೂ ಸುಧಾರಿಸುತ್ತದೆ. ಮಕ್ಕಳ ಜ್ಞಾನದ ಮಟ್ಟವೂ ಹೆಚ್ಚಾಗುತ್ತದೆ. ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಸರಿಹೋಗುತ್ತದೆ.
ಶಿಕ್ಷಕರನ್ನು ಪಾಠ ಮಾಡುವುದರಿಂದ ದೂರಮಾಡಿ, ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರ ನೇಮಕಾತಿಯನ್ನೇ ಮಾಡದೆ, ಅಗತ್ಯ ಅನುದಾನವನ್ನೂ ಒದಗಿಸದೆ ಸರಕಾರಿ ಶಾಲೆಗಳೇ ಸರಿ ಇಲ್ಲ, ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ ಎಂದೆಲ್ಲಾ ಆರೋಪಿಸುವುದರಲ್ಲಿ ಅರ್ಥವಿಲ್ಲ.
ಬಹುಶಃ ಸರಕಾರಿ ಶಾಲೆಗಳನ್ನು ಮುಚ್ಚಿಸಿ ಖಾಸಗಿ ಶಾಲೆಗಳನ್ನು ಹೆಚ್ಚಿಸುವುದೇ ಆಳುವ ಸರಕಾರಗಳ ಉದ್ದೇಶವಾಗಿದೆ. ಈಗ ಕಾರ್ಪೊರೇಟ್ ಕಂಪೆನಿಗಳ ಸುಪರ್ದಿಗೆ ಸರಕಾರಿ ಶಾಲೆಗಳನ್ನು ಈಡುಮಾಡುತ್ತಿರುವುದರ ಹಿಂದೆ ಕಾರ್ಪೊರೇಟ್ ಶಕ್ತಿಗಳ ಹಿತಾಸಕ್ತಿಯ ಹುನ್ನಾರವಿದೆ. ರಾಜ್ಯದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಆಳುವ ವರ್ಗಗಳ ಮಾಲಕತ್ವದಲ್ಲಿವೆ. ಹೀಗಾಗಿ ವಿಶ್ವಸಂಸ್ಥೆಯ ಸಾಲವನ್ನು ಬಳಸಿಕೊಂಡು, ಕಾರ್ಪೊರೇಟ್ ಕಂಪೆನಿಗಳ ಸಿಎಸ್ಆರ್ ಫಂಡ್ ಉಪಯೋಗಿಸಿಕೊಂಡು, ಈ ಖಾಸಗಿ ಶಾಲೆಗಳು ಕಾರ್ಪೊರೇಟ್ ಕಂಪೆನಿಗಳಿಗೆ ಅಗತ್ಯವಾದ ಪರಿಣಿತರನ್ನು ತಯಾರಿಸುವ ಹಾಗೂ ಆ ಮೂಲಕ ತಮ್ಮ ಶಿಕ್ಷಣೋದ್ಯಮದ ವ್ಯಾಪಾರೀಕರಣವನ್ನು ವಿಸ್ತರಿಸಿಕೊಳ್ಳುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ತಮಿಳುನಾಡು ಗಡಿಯಲ್ಲಿರುವ ಹೆಗ್ಗನೂರು ಶಾಲೆ ಜೊತೆಗೆ 14 ಸರಕಾರಿ ಶಾಲೆಗಳನ್ನು ವಿಲೀನಗೊಳಿಸಿ ಹೆಗ್ಗನೂರು ಸರಕಾರಿ ಟೊಯೋಟಾ ಶಾಲೆ ಎಂದು ಹೆಸರಿಡುವುದಕ್ಕೆ ಸರಕಾರ ಅನುಮತಿ ಕೊಟ್ಟಾಗಿದೆ. ಇದೇ ಟ್ರೆಂಡ್ ಮುಂದುವರಿಯಲಿದೆ.
ಇದು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ಯಲ್ಲ, ಖಾಸಗಿ ಶಾಲೆ, ಕಾರ್ಪೊರೇಟ್ ಕಂಪೆನಿ ಜವಾಬ್ದಾರಿ ಎನ್ನುವಂತಾಗಿದೆ. ಕರ್ನಾಟಕದ ಪ್ರಜ್ಞಾವಂತರು ಈ ಕಾರ್ಪೊರೇಟ್ ಶೈಕ್ಷಣಿಕ ಗುಲಾಮತನದ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಸರಕಾರಿ ಶಾಲೆಗಳ ವಿಲೀನದ ಬದಲು ಬಲಪಡಿಸಬೇಕು ಎಂದು ಆಗ್ರಹಿಸಬೇಕಿದೆ. ಶಾಲಾ ಶಿಕ್ಷಕರನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಕೂಡದು ಹಾಗೂ ಪ್ರತೀ ಶಾಲೆಗೂ ಅಗತ್ಯವಿರುವಷ್ಟು ಶಿಕ್ಷಕರ ನೇಮಕಾತಿಯನ್ನು ಕೂಡಲೇ ಮಾಡಬೇಕೆಂದು ಸರಕಾರವನ್ನು ಒತ್ತಾಯಿಸಬೇಕಿದೆ. ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯ ಖಾಸಗೀಕರಣ ಹಾಗೂ ಕಾರ್ಪೊರೇಟೀಕರಣದ ವಿರುದ್ಧ ಪ್ರತಿಭಟಿಸಬೇಕಿದೆ.
ಲೇಖಕರು: ರಂಗನಿರ್ದೇಶಕ, ವಿಮರ್ಶಕ






