ಗಣತಿ ನಮೂನೆಯಲ್ಲಿ ಸರಿಯಾದ ಮಾಹಿತಿ ತುಂಬಿದ್ದರೂ ತಾರ್ಕಿಕ ವ್ಯತ್ಯಾಸದ ನೋಟಿಸ್
2002-2025ರ ಮತಪಟ್ಟಿಯಲ್ಲಿ ಒಂದೇ ಹೆಸರು; ಆದರೂ ವ್ಯತ್ಯಾಸವಿದೆ ಎಂದು ನೋಟಿಸ್ ನೀಡಿದ ಆರೋಪ

Photo Credit : ANI
ಬೆಂಗಳೂರು : ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಗಣತಿ ನಮೂನೆಯಲ್ಲಿ ಸರಿಯಾದ ಮಾಹಿತಿ ನೀಡಿದ್ದರೂ, ಚುನಾವಣಾ ಆಯೋಗದ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ (ತಾರ್ಕಿಕ ವ್ಯತ್ಯಾಸ) ಪ್ರಕ್ರಿಯೆಯಡಿ ಅನಗತ್ಯವಾಗಿ ನೋಟಿಸ್ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮದ್ದೂರು ವಿಧಾನಸಭಾ ಕ್ಷೇತ್ರದ ಮತದಾರರೊಬ್ಬರಿಗೆ ಇಂತಹ ನೋಟಿಸ್ ನೀಡಿರುವುದು ಬೆಳಕಿಗೆ ಬಂದಿದೆ. ಸಂಬಂಧಪಟ್ಟ ಮತದಾರರ ಹೆಸರು 2002ರ ಮತದಾರರ ಪಟ್ಟಿಯಲ್ಲೂ ಹಾಗೂ 2025ರ ಮತದಾರರ ಪಟ್ಟಿಯಲ್ಲೂ ಒಂದೇ ರೀತಿಯಲ್ಲಿದೆ. ಅಲ್ಲದೆ, ಎಸ್ಐಆರ್ ಗಣತಿ ನಮೂನೆಯಲ್ಲಿಯೂ ಮತದಾರರು ತಮ್ಮ ಮಾಹಿತಿಯನ್ನು ಸರಿಯಾಗಿ ನಮೂದಿಸಿದ್ದಾರೆ ಎಂದು ಎಸ್ಐಆರ್ ನೋಟಿಸ್ ಸಂತ್ರಸ್ತ ಮತದಾರ ತಿಳಿಸಿದ್ದಾರೆ.
ಆದರೂ ಚುನಾವಣಾ ಆಯೋಗದಿಂದ ನೀಡಲಾಗಿರುವ ನೋಟಿಸ್ನಲ್ಲಿ, ‘ಪ್ರಸ್ತುತ ಮತದಾರರ ಪಟ್ಟಿಯಲ್ಲಿ ನಮೂದಿಸಿರುವ ನಿಮ್ಮ ಹೆಸರು ಮತ್ತು ಹಿಂದಿನ ಎಸ್ಐಆರ್ ನಲ್ಲಿ ನಮೂದಿಸಿರುವ ನಿಮ್ಮ ಹೆಸರಿನ ನಡುವೆ ವ್ಯತ್ಯಾಸವಿದೆ’ ಎಂದು ಉಲ್ಲೇಖಿಸಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ಮತದಾರರು, ತಮ್ಮ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲದಿದ್ದರೂ ಕೇವಲ ತಾಂತ್ರಿಕ ಅಥವಾ ಸಾಫ್ಟ್ ವೇರ್ ಆಧಾರಿತ ಪರಿಶೀಲನೆಯ ಕಾರಣಕ್ಕೆ ವಿಚಾರಣೆಗೆ ಹಾಜರಾಗುವಂತೆ ಮಾಡುತ್ತಿರುವುದು ಅನಗತ್ಯ ಕಿರಿಕಿರಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಾನು ಗಣತಿ ನಮೂನೆಯಲ್ಲಿ ಕೇಳಲಾಗಿದ್ದ ಮಾಹಿತಿಯನ್ನು ಸರಿಯಾಗಿ ತುಂಬಿದ್ದೇನೆ. 2002ರ ಪಟ್ಟಿಯಲ್ಲಿರುವ ಹೆಸರು ಮತ್ತು ಈಗಿನ ಪಟ್ಟಿಯಲ್ಲಿರುವ ಹೆಸರು ಕೂಡ ಒಂದೇ ಇದೆ. ಹೀಗಿರುವಾಗ ಬಿಎಲ್ಒ ಅವರು ಮಾಹಿತಿ ನಮೂದಿಸುವಾಗ ತಪ್ಪು ಮಾಡಿದ್ದರೆ ಅದಕ್ಕಾಗಿ ನಾನು ನನ್ನ ಕೆಲಸ ಬಿಟ್ಟು ವಿಚಾರಣೆಗೆ ಏಕೆ ಹೋಗಬೇಕು?. ನೈಜವಾಗಿ ಯಾವುದೇ ವ್ಯತ್ಯಾಸವಿಲ್ಲದ ಪ್ರಕರಣಗಳಿಗೂ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಎಂದು ಗುರುತಿಸಿ ನೋಟಿಸ್ ನೀಡುವುದರಿಂದ ನಾಗರಿಕರಿಗೆ ಅನಗತ್ಯ ಆತಂಕ, ಸಮಯದ ನಷ್ಟ ಮತ್ತು ಮಾನಸಿಕ ಒತ್ತಡ ಉಂಟಾಗುತ್ತಿದೆ ಎಂದು ಎದ್ದೇಳು ಕರ್ನಾಟಕದ ಮೈಸೂರು ಜಿಲ್ಲಾ ಸಂಯೋಜಕ ಬಸವರಾಜು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಪರಿಶೀಲನಾ ಪ್ರಕ್ರಿಯೆ ವೈಜ್ಞಾನಿಕ, ಪಾರದರ್ಶಕ ಮತ್ತು ಮತದಾರ ಸ್ನೇಹಿಯಾಗಿರಬೇಕು. ಯಾವುದೇ ತಪ್ಪಿಲ್ಲದ ಮತದಾರರನ್ನು ಕೇವಲ ಸಾಫ್ಟ್ವೇರ್ ಸೃಷ್ಟಿಸುವ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಆಧಾರದಲ್ಲಿ ವಿಚಾರಣೆಗೆ ಕರೆಯುವ ಬದಲು, ಮೊದಲು ಸಂಬಂಧಪಟ್ಟ ಮಾಹಿತಿಯನ್ನು ಅಧಿಕಾರಿಗಳೇ ಮರುಪರಿಶೀಲಿಸಬೇಕು. ಎಸ್ಐಆರ್ನ ಉದ್ದೇಶ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದೇ ಹೊರತು, ಸರಿಯಾದ ದಾಖಲೆ ಹೊಂದಿರುವ ಮತದಾರರಿಗೆ ಅನಗತ್ಯ ನೋಟಿಸ್ ನೀಡಿ ಕಚೇರಿಗಳಿಗೆ ಅಲೆದಾಡಿಸುವುದಲ್ಲ.
-ನಿಸಾರ್ ಅಹ್ಮದ್, ಸಾಮಾಜಿಕ ಹೋರಾಟಗಾರ






