ಲೋಕಾಯುಕ್ತ ಶಕ್ತಿಯುತವಾಗಲಿ

ನಮ್ಮ ವ್ಯವಸ್ಥೆ, ಆಡಳಿತ, ಸರಕಾರ, ಜನಜೀವನ ಎಲ್ಲವೂ ಇಪ್ಪತ್ತೊಂದನೆಯ ಶತಮಾನದಲ್ಲಿ ಕಾಲು ಶತಮಾನ ಕಳೆದರೂ ದುರಸ್ತಿಗೊಂಡಿಲ್ಲವಷ್ಟೇ ಅಲ್ಲ ಆ ಸೂಚನೆಗಳೂ ಕಾಣುತ್ತಿಲ್ಲ ! ಮೇಲ್ನೋಟದ ವ್ಯವಸ್ಥೆಯಲ್ಲಿ ಎಲ್ಲವೂ ಇದೆ. ಲಂಚ, ಭ್ರಷ್ಟಾಚಾರ ನಿರ್ಮೂಲಕ್ಕೆ ಒಂದು ಲೋಕಾಯುಕ್ತವೂ ಇದೆ. ಅದು ಶುದ್ಧವಾಗಿದ್ದಾಗ ಮುಖ್ಯಮಂತ್ರಿಯೊಬ್ಬರ ಹುದ್ದೆ ಕಸಿದುಕೊಂಡು 2011ರಲ್ಲಿ ಜೈಲಿಗೂ ಅಟ್ಟಿತ್ತು! ನಂತರ ಅದನ್ನು ದುರ್ಬಲಗೊಳಿಸಲಾಯಿತು. ರಾಜಕಾರಣದ ಕೊಬ್ಬು ಹೆಚ್ಚುತ್ತಲೇ ಇದೆ.
ಆದರೂ ಪ್ರಜಾಪ್ರಭುತ್ವದಲ್ಲಿ ದಕ್ಷತೆ, ಪ್ರಾಮಾಣಿಕತೆ ಸಾವಿಗೀಡಾಗದೆ ಉಸಿರಾಡುವಂತೆ ಪ್ರಾಮಾಣಿಕ, ದಕ್ಷ ಶಕ್ತಿಗಳು ಕೆಲಸ ಮಾಡುತ್ತಿರುತ್ತವೆ. ಕೋಮುವಾದದ ಕಲೆಗಳನ್ನು ಒರೆಸಿ ಅಸಮಾನತೆಯತ್ತ ಕೆಂಗಣ್ಣು ಹರಿಸುವ ಶಕ್ತಿಗಳು ಕಾಣಿಸಿದಾಗ ನೆಮ್ಮದಿಯ ಮಿಂಚುಗಣ್ಣು ಹೊಳೆಯುತ್ತದೆ. ಹಾಗೊಬ್ಬರು ಈಗ ಕಾಣಿಸಿದ್ದಾರೆ. ಉಪಲೋಕಾಯುಕ್ತ ಬಿ. ವೀರಪ್ಪ. ಈ ವೀರಪ್ಪ ಕೆಲ ದಿನಗಳ ಹಿಂದೆ ಟ್ರಾನ್ಸ್ ಪರೆನ್ಸಿ ಇಂಟರ್‌ನ್ಯಾಷನಲ್ ಇಂಡಿಯಾ ಆಂಡ್ ಲೋಕಲ್ ಸರ್ಕಲ್ಸ್ ಪ್ರಕಟಿಸಿದ (2019ರ ದತ್ತಾಂಶ) ಕರ್ನಾಟಕದಲ್ಲಿ ಶೇ. 63 ಭ್ರಷ್ಟಾಚಾರ ಇದೆ ಎಂಬ ಅಂಶವನ್ನು ಹೇಳಿದಾಗ ಮತ್ತೆ ಕೆಸರೆರಚಾಟ ಪ್ರಾರಂಭವಾಗಿ ಸಿಎಂ-ಡಿಸಿಎಂ ಕುರ್ಚಿ ಕದನ ಎರಡು ದಿನ ತೆರೆಗೇ ಸರಿದು ಹೋಗಿತ್ತು! ವೀರಪ್ಪನವರು ಇದು ನನ್ನ ಸ್ವಂತ ಅಭಿಪ್ರಾಯವಲ್ಲ ಎಂದು ಮತ್ತೆ ಹೇಳಿದರು.
ಆ ನಂತರ ರಾಜಕಾರಣಿಗಳು ವೀರಪ್ಪನವರನ್ನು ಮರೆತು ಸ್ವಂತ ವಿಚಾರಗಳಲ್ಲಿ ಮಗ್ನರಾಗಿದ್ದರು. ವೀರಪ್ಪ ಬಹಳ ಮುಖ್ಯ ಮಾತೊಂದನ್ನು ಆಡಿದ್ದರು. ಈ ಭ್ರಷ್ಟತೆ ಶಾಲೆ-ಆಸ್ಪತ್ರೆಗಳಂತಹ ಮೂಲಗಳಲ್ಲಿ ಇರಬಾರದು, ಅಲ್ಲಿ ಭ್ರಷ್ಟಾಚಾರ ನಿರ್ಮೂಲವಾಗಲು ಕ್ರಮ ಕೈಗೊಂಡಿದ್ದೇನೆಂದು ಹೇಳುತ್ತ ಸಮಾಜ ಸುಧಾರಣೆ ಮತ್ತು ಭ್ರಷ್ಟಾಚಾರ ನಿರ್ಮೂಲ ಒಟ್ಟಿಗೆ ಆಗಬೇಕು ಎಂದೂ ಹೇಳಿದ್ದರು. ಸರಕಾರಿ ಶಾಲೆ, ಆಸ್ಪತ್ರೆಗಳು ಬಡವರ ಮೂಲಗಳು. ಅಲ್ಲಿಯೂ ಭ್ರಷ್ಟತೆ ಗೂಡುಕಟ್ಟಿಕೊಂಡರೆ ಕೆಳ ವರ್ಗಗಳ ಬದುಕೇ ನರಕವಲ್ಲವೇ? ಮಹಿಳೆಯರೂ ಭ್ರಷ್ಟಾಚಾರದಲ್ಲಿ ಭಾಗಿಗಳಾಗುತ್ತಿದ್ದಾರೆಂದು ನೋವಿನಿಂದ ಹೇಳಿದರು. ಆಗ ಹಿರಿಯ ವಕೀಲ ಎಂ.ಟಿ. ನಾಣಯ್ಯ ಪ್ರತೀ ಇಲಾಖೆಗೆ ಪ್ರತ್ಯೇಕ ಲೋಕಾಯುಕ್ತ ತೆರೆಯಬೇಕಾಗುತ್ತದೆ ಎಂದು ಭ್ರಷ್ಟತೆಯ ಆಳದ ಬಹುದೊಡ್ಡ ಬಲೂನಿಗೆ ಪಿನ್ನು ಚುಚ್ಚಿದರು.
ಬಿ. ವೀರಪ್ಪನವರ ವಿಶೇಷ ಆಸಕ್ತಿ ಬರೀ ಹೇಳಿಕೆ ಆಗಿರಲಿಲ್ಲ. ಅವರಿಗೆ ಭ್ರಷ್ಟಾಚಾರದ ನಿಜವಾದ ಆಳ ತಿಳಿಯಲು ಮನಸ್ಸಾಗಿ ತಮ್ಮ ಹುಟ್ಟು ತಾಲೂಕಾದ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ 25 ಗ್ರಾಮ ಪಂಚಾಯತ್‌ಗಳನ್ನು ಕೆದಕಿದರು, ಕಡತಗಳನ್ನು ತಿರುವಿದರು. ಪಿಡಿಒಗಳಿಗೆ ಕ್ಲಾಸ್ ಟೀಚರ್ ಬೆತ್ತ ಪ್ರಹಾರದಂತೆ ಬೆನ್ನಟ್ಟಿದರು. ಸತತ 3 ದಿನ ಕಡತಗಳನ್ನು ಪರಿಶೀಲಿಸಿದರು. ಕಾಲುಬುಡದ ಕಸದ ರಾಶಿ ಹುಡುಕಿದರು; ಸಿಕ್ಕೇ ಬಿಟ್ಟಿತು. ಕೊಳವೆ ಬಾವಿ, ರಸ್ತೆ, ಚರಂಡಿ, ಬೀದಿದೀಪ, ಸ್ವಚ್ಚತೆ ಅನುದಾನ ಪರಿಶೀಲಿಸಿದರು. ತಾಳೆಯಾಗಲೇ ಇಲ್ಲ! ಸಮರ್ಪಕ ಮಾಹಿತಿಯೇ ಇಲ್ಲ. ಬೋರ್‌ವೆಲ್ ದುರಸ್ತಿ ಹೆಸರಿನಲ್ಲಿ 68 ಲಕ್ಷ ರೂ. ದುರ್ಬಳಕೆ. ರಸ್ತೆ ಕಾಮಗಾರಿ ಆಗದೆ ಹಣ ಬಿಡುಗಡೆ. ಕುರಿ, ಮೇಕೆ ಶೆಡ್‌ಗಳ ಹಣ ಬಡವರಿಗೆ ಮುಟ್ಟಿಲ್ಲ, ಬದಲಿಗೆ ಶ್ರೀಮಂತರ ಪಾಲಿಗೆ ಹೋಗಿದೆ! ಒಳಚರಂಡಿ ಹೆಸರಿನಲ್ಲಿ ಅನುದಾನ ದುರ್ಬಳಕೆಯಾಗಿದೆ. ಬಲ್ಬ್‌ಗಳಿಗೆ ದುಬಾರಿ ಬಿಲ್-ಕಳಪೆ ಗುಣಮಟ್ಟ. 3 ಲಕ್ಷ ರೂ. ರಸ್ತೆ ನಿರ್ಮಾಣಕ್ಕೆ ಬಿಲ್ ಆಗಿದೆ-ರಸ್ತೆಯೇ ಇಲ್ಲ! ಚರಂಡಿಗೆ ಹಣ ಪಾವತಿಯಾಗಿದೆ-ತೆಗೆದೇ ಇಲ್ಲ ! ಎಲ್ಲಾ ಪಿಡಿಒಗಳು ಪೊಗದಸ್ತಾಗಿ ಮೇಯ್ದಿದ್ದಾರೆ! ಗ್ರಾಮೀಣ ಮಂತ್ರಿ ಪ್ರಿಯಾಂಕ್ ಖರ್ಗೆಯವರು ಅಪ್ಪಿತಪ್ಪಿಯೂ ರಾಜ್ಯದಲ್ಲಿ ಒಂದೇ ಒಂದು ದಿನವೂ ಹೀಗೆ ಸುತ್ತಿ ಪರಿಶೀಲಿಸಿ ಕ್ರಮ ಕೈಗೊಂಡಿಲ್ಲ. ಇದೆಲ್ಲ ಇರಲಿ. ಇಂತಹ ಅಭಿವೃದ್ದಿ ಕನಸು ಕಂಡು ಟಿ.ಪಿ., ಝಡ್‌ಪಿ ರೂಪಿಸಿದ್ದ ಅಬ್ದುಲ್ ನಝೀರ್‌ಸಾಬ್ ಅಕಸ್ಮಾತ್ ಬದುಕಿ ಇದನ್ನು ವೀಕ್ಷಿಸಿದ್ದರೆ? ನಾನು ಹೇಳಲಾರೆ.
ಈ ಶೋಧನೆ ನಡೆದದ್ದು ಪ್ರಕಟವಾಗಿದ್ದು, ಡಿಸೆಂಬರ್ ತಿಂಗಳ ಅಂತ್ಯದಲ್ಲಿ! ಈಗ 25 ಗ್ರಾಮಪಂಚಾಯತ್‌ಗಳ ಪಿಡಿಒಗಳು, ಬಿಲ್ ಕಲೆಕ್ಟರ್‌ಗಳು, ಕಾರ್ಯದರ್ಶಿಗಳು, ಟಿ.ಪಿ. ನಿರ್ವಹಣಾಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ. ಬಹುತೇಕ ಪತ್ರಿಕೆಗಳು ಇದನ್ನು ಸುದ್ದಿಯಾಗಿ ಪ್ರಕಟಿಸಿಯೇ ಇಲ್ಲ. ಇಲೆಕ್ಟ್ರಾನಿಕ್ ಮಾಧ್ಯಮ ಇತ್ತ ತಲೆ ಹಾಕಿಲ್ಲ. ನಮ್ಮ ರಾಜ್ಯದಲ್ಲಿ ಕಾಲು ಶತಮಾನದ ಭ್ರಷ್ಟಾಚಾರದ ಫಸಲನ್ನು ಎಷ್ಟು ದೇಶ ದ್ರೋಹಿಗಳು ಮೇಯ್ದಿದ್ದಾರೆ, ನುಂಗಿದ್ದಾರೆ, ಕಟಾವು ಮಾಡಿದ್ದಾರೆ, ಬಣವೆ ಹಾಕಿದ್ದಾರೆ-ಒಂದು ಅಂದಾಜು ಸಿಗುತ್ತದೆಯೇ?
ಕೋಮು ದ್ವೇಷ ರಾಜ್ಯವನ್ನು ಒಂದು ರೀತಿಯಲ್ಲಿ ಸುಡುತ್ತಿದ್ದರೆ ಈ ಭ್ರಷ್ಟತೆ ನಾಗರ ವಿಷದಂತೆ ಹರಡಿದೆ. ಇದನ್ನು ತಹಬದಿಗೆ ತರುವವರು ಯಾರು? ಬರೀ ಗ್ರಾಮಪಂಚಾಯತ್‌ಗಳಷ್ಟರ ಹುಲ್ಲು ಬಣವೆ ಮೇವಿನ ರುಚಿಯೇ ಇಷ್ಟಾದರೆ ಇನ್ನು ಇಡೀ ವ್ಯವಸ್ಥೆ, ಇಲಾಖೆಗಳು, ಸಂಸ್ಥೆಗಳು, ಶಾಖೆಗಳು, ಪಕ್ಷಗಳು, ಕಚೇರಿಗಳು, ಅನುದಾನಗಳು, ಬಜೆಟ್ ಮಂಜೂರಾತಿಗಳು ಹೇಗಿದ್ದಾವು?
ಇಷ್ಟೊಂದು ಕೊಳೆ ಅಂಟಿರುವ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವೇ? ಒಂದು ಪಕ್ಷ ಬೇಡವಾದರೆ, ಮತ್ತೊಂದು ಪಕ್ಷ ಪ್ರಾಮಾಣಿಕವಾಗಿರಬೇಕಲ್ಲವೇ? ಎಲ್ಲರೂ ಹೀಗೆಯೇ ಆದರೆ ಕೆಳವರ್ಗ, ಒಬಿಸಿಗಳು, ಅಹಿಂದ- ನಾಳೆ ಏನಾದಾರು? ಜಾತಿ ಎಂದೂ ನಾಶವಾಗುವ ಸೂಚನೆ ಸಿಗದ ಈ ದೇಶದಲ್ಲಿ, ಕರ್ನಾಟಕದಲ್ಲಿ ನಾಳಿನ ದಿನಗಳು ಹೇಗಿದ್ದಾವು? ನಮ್ಮ ರಾಜಕಾರಣಿಗಳಿಗೆ ಸೂಕ್ಷ್ಮ ಸಂವೇದನೆ ಯಾಕೆ ನಾಶವಾಗಿದೆ?
ಉಪಲೋಕಾಯುಕ್ತ ಬಿ. ವೀರಪ್ಪನವರು ಒಳ್ಳೆ ಕೆಲಸ ಮಾಡಿ ತೋರಿಸಿದ್ದಾರೆ. ಅವರನ್ನು ಸರಕಾರ ಪ್ರೋತ್ಸಾಹಿಸಿ ತಮ್ಮ ಪ್ರಾಮಾಣಿಕತೆಯ ದಾರಿಗಳನ್ನು ತೋರಿಸಬೇಕಾಗಿದೆ.
ಕರ್ನಾಟಕದ ರಾಜಕಾರಣದ ದಿಕ್ಕುದೆಸೆಗಳನ್ನು ಸರಿಪಡಿಸುವುದು ಯಾರ ಕೈಲಿದೆ? ಸರಕಾರವೇ ಮಾಡಬೇಕು. ಅದು ಪ್ರಾಮಾಣಿಕವಾಗಿದ್ದರೆ, ರಾಜ್ಯವೂ ಪ್ರಾಮಾಣಿಕವಾಗಿರುತ್ತದೆ. ಜಾತ್ಯತೀತ ನಿಲುವಿನ ರಕ್ಷಣೆಯೊಂದೇ ಸಾಲದು. ಸಮಾಜವನ್ನು ಪ್ರೀತಿಸಬೇಕು. ಅಂದರೆ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಶಕ್ತಿಯನ್ನು ಲೋಕಾಯುಕ್ತಕ್ಕೆ ಪುನಃ ನೀಡಬೇಕು. 2022ರಲ್ಲಿ ಹೈಕೋರ್ಟ್ ಲೋಕಾಯುಕ್ತಕ್ಕೆ ಪುನಃ ಶಕ್ತಿ ಕೊಡಿ ಎಂದು ಹೇಳಿದೆ. ಆದರೆ ಕೊಟ್ಟಿಲ್ಲ. ಅದಕ್ಕೆ ಹೆಚ್ಚಿನ ಶಕ್ತಿ ನೀಡಬೇಕು. ಯಾರೇ ಮುಖ್ಯಮಂತ್ರಿ ಆಗಲಿ ಅದನ್ನು ಮಾಡಬೇಕು. ಮಾಡಿಯಾರೇ? ಕರ್ನಾಟಕದ ಕೀರ್ತಿಯನ್ನು ಎತ್ತಿ ಹಿಡಿಯಬಲ್ಲರೇ?







