ಮಡಿಕೇರಿ: ಉದ್ಘಾಟನೆಗೆ ಸಜ್ಜುಗೊಂಡ ‘ಮಿನಿ ವಿಧಾನ ಸೌಧ’

ಮಡಿಕೇರಿ: ಕಳೆದ 9 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಕಂದಾಯ ಇಲಾಖೆಯ ವಿವಿಧ ಕಚೇರಿಗಳನ್ನು ಒಳಗೊಂಡಿರುವ ಮಿನಿ ವಿಧಾನ ಸೌಧ(ತಾಲೂಕು ಕಚೇರಿ ಸಂಕೀರ್ಣ) ಕಟ್ಟಡ ಕಾಮಗಾರಿ ಬರದಿಂದ ಸಾಗಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದೆ.
ಮಡಿಕೇರಿ ನಗರದ ಕೋಟೆ ಬಳಿಯಿರುವ ತಾಲೂಕು ಕಚೇರಿಯನ್ನು ತೆರವುಗೊಳಿಸಬೇಕೆಂದು ಪ್ರಾಚ್ಯವಸ್ತು ಇಲಾಖೆಯಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಕಾನ್ವೆಂಟ್ ಜಂಕ್ಷನ್‌ನ ಬಳಿ ಇರುವ ಖಾಲಿ ಜಾಗವನ್ನು ಗುರುತಿಸಿ ಅಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಯಿತು. ಅಲ್ಲದೆ, ತಾಲೂಕು ಆಡಳಿತ ಒಂದೇ ಸೂರಿನಡಿ ದೊರೆಯಲು ಸರಕಾರ ಯೋಜನೆ ರೂಪಿಸಿ ಪ್ರತಿ ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟಿತ್ತು. ಮೊದಲ ಹಂತದ ಕಾಮಗಾರಿ ಶೀಘ್ರದಲ್ಲಿಯೇ ಪೂರ್ಣ ಗೊಂಡಿತ್ತಾದರೂ ಮೇಲಂತಸ್ತಿನ ಕಾಮಗಾರಿ ಅನುದಾನದ ಕೊರತೆಯಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಅನುದಾನದ ಭರವಸೆ ದೊರೆತ ಮೇರೆಗೆ ಕಾಮಗಾರಿಯ ಗುತ್ತಿಗೆವಹಿಸಿಕೊಂಡಿರುವ ಗೃಹನಿರ್ಮಾಣ ಸಂಸ್ಥೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆಯಾದರೂ ಕಚೇರಿಗಳ ಒಳವಿನ್ಯಾಸ ಗುತ್ತಿಗೆಯ ಕರಾರಿನಲ್ಲಿ ಒಳಪಡದೇ ಇರುವುದರಿಂದ ಆ ಕೆಲಸ ಕಾರ್ಯಗಳನ್ನು ಸಂಬಂಧಿಸಿದ ಇಲಾಖೆ ಮಾಡಿಕೊಳ್ಳಬೇಕಾಗಿದೆ. ಕಿಟಕಿ, ಬಾಗಿಲು, ಮೆಟ್ಟಿಲುಗಳಿಗೆ ರೇಲಿಂಗ್ಸ್‌ಗಳನ್ನು ಗುತ್ತಿಗೆದಾರರು ಅಳವಡಿಸಿದ್ದಾರೆ. ಕಟ್ಟಡ ಶೀಘ್ರ ಉದ್ಘಾಟನೆಗೊಳ್ಳಲು ಸಜ್ಜುಗೊಳ್ಳುತ್ತಿದೆ.
ಕಟ್ಟಡದ ಮುಂಭಾಗದಲ್ಲಿ ಮುಖ್ಯರಸ್ತೆವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನುಳಿದಂತೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ದಾಣಕ್ಕೆ ಮೀಸಲಿಟ್ಟಿರುವ ಜಾಗ ಧೂಳುಮಯವಾಗಿದ್ದು, ಇದಕ್ಕೂ ಡಾಂಬಾರ್ ಅಥವಾ ಕಾಂಕ್ರಿಟ್ ಅನ್ನು ಕಂದಾಯ ಇಲಾಖೆಯೇ ಹಾಕಬೇಕಿದೆ.
ಅಂಗಡಿಗಳ ತೆರವು:
ಮಿನಿ ವಿಧಾನಸೌಧ ನಿರ್ಮಾಣವಾಗಿರುವ ಮುಂಭಾಗದಲ್ಲಿನ ರಸ್ತೆ ಬದಿಯಲ್ಲಿ ಹಲವಾರು ವರ್ಷಗಳಿಂದ ಕೆಲವು ಸಣ್ಣ ಸಣ್ಣ ಅಂಗಡಿ, ಹೊಟೇಲ್, ವರ್ಕ್‌ಶಾಪ್, ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಮಿನಿ ವಿಧಾನಸೌಧ ನಿರ್ಮಾಣ ಕಾರ್ಯ ಪೂರ್ಣಗೊಂಡು ಹಸ್ತಾಂತರ ಕಾರ್ಯವಾಗುತ್ತಿರುವುದರಿಂದ ಅಲ್ಲಿದ್ದ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಲಾಗಿದೆ.
ಈಗಾಗಲೇ ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡದ ಒಳವಿನ್ಯಾಸ ಕೆಲಸಗಳು ಬಾಕಿಯಿದೆ. ಒಳವಿನ್ಯಾಸ ಹಾಗೂ ಪೀಠೋಪಕರಣಕ್ಕಾಗಿ 40ಲಕ್ಷ ರೂ. ಮೊತ್ತದ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಪೈಕಿ ಒಳ ವಿನ್ಯಾಸಕ್ಕಾಗಿ 12.50 ಲಕ್ಷ ರೂ. ಮಂಜೂರಾಗಿದೆ. ಆದಷ್ಟು ಶೀಘ್ರದಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು. ಫೆಬ್ರವರಿ 2ನೇ ವಾರದಲ್ಲಿ ಕಂದಾಯ ಸಚಿವರು ಜಿಲ್ಲೆಗೆ ಆಗಮಿಸುವುದಾಗಿ ತಿಳಿಸಿದ್ದು, ಶೀಘ್ರದಲ್ಲಿ ಉದ್ಘಾಟಿಸಲಾಗುವುದು.
-ಪ್ರವೀಣ್ ಕುಮಾರ್, ತಹಶೀಲ್ದಾರ್, ಮಡಿಕೇರಿ ತಾಲೂಕು
ಏನೇನಿದೆ?
ಮೂರು ಅಂತಸ್ತು ಒಳಗೊಂಡಿರುವ ಕಟ್ಟಡ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕಚೇರಿ ಒಳಗೊಳ್ಳಲಿದೆ. ಮೀಟಿಂಗ್ ಹಾಲ್, ಸಬ್ ರಿಜಿಸ್ಟರ್ ಕಚೇರಿ, ಕಂದಾಯ ಇಲಾಖೆಯ ಖಜಾನೆ, ಪಹಣಿ ಕೇಂದ್ರ, ಶಾಸಕರ ಕಚೇರಿಗಳು, ಆರ್‌ಟಿಸಿ ನೀಡುವ ಸಿಬ್ಬಂದಿ ಕಚೇರಿ, ಚುನಾವಣೆ ಸಂದರ್ಭ ಸಭೆ ನಡೆಸಲು ಸಭಾಂಗಣ ನಿರ್ಮಾಣದ ಯೋಜನೆಯನ್ನು ಮಿನಿ ವಿಧಾನಸೌಧ ಒಳಗೊಂಡಿದೆ.
2016ರಲ್ಲಿ ಆರಂಭ
ಮಡಿಕೇರಿ ನಗರದ ಕಾನ್ವೆಂಟ್ ಜಂಕ್ಷನ್ ಬಳಿಯ 1.5 ಎಕರೆ ಪ್ರದೇಶದಲ್ಲಿ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ 2016ರಲ್ಲಿ ಆರಂಭಗೊಂಡಿತ್ತು. 5 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಮೊದಲ ಹಂತದಲ್ಲಿ ಕಟ್ಟಡ ತಲೆಎತ್ತಲು ಆರಂಭಿಸಿತು. ಸುತ್ತಲೂ ಗೋಡೆ, ಸ್ಲ್ಯಾಬಿಂಗ್ ಸೇರಿದಂತೆ ಇನ್ನಿತರ ಕೆಲಸಗಳು ನಡೆದಿದ್ದವು. ಉಳಿದ ಕಾಮಗಾರಿ ಕೆಲ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡು ಮಿನಿ ವಿಧಾನಸೌಧ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಇದೀಗ ಗೃಹನಿರ್ಮಾಣ ಸಂಸ್ಥೆ ವತಿಯಿಂದ ಕಟ್ಟಡದ ಸಂಪೂರ್ಣ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿದೆ.







