ಮಡಿಕೇರಿ: ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ಮಾರ್ಪಟ್ಟ ಮ್ಯೂಸಿಯಂ

ಮಡಿಕೇರಿ: ಕರ್ನಾಟಕ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ವೀರರ ನಾಡು ಖ್ಯಾತಿಯ ಕೊಡಗು ಅತ್ಯಂತ ಸಣ್ಣ ಪ್ರದೇಶವಾಗಿದ್ದು, ಜನಸಂಖ್ಯೆಯೂ 6ಲಕ್ಷ ಮೀರಿಲ್ಲ. ಈ ಪ್ರದೇಶದಲ್ಲೂ ಹಿಂದೆ ಅನೇಕ ಅರಸರು ಹಾಗೂ ಬ್ರಿಟಿಷರು ರಾಜ್ಯಭಾರ ಮಾಡಿ ಹೋಗಿದ್ದಾರೆ. ಕೊಡಗು ಜಿಲ್ಲೆಯ ವಿವಿಧೆಡೆ ಇದರ ಕುರುಹನ್ನು ಇಂದಿಗೂ ಕಾಣಬಹುದಾಗಿದೆ.
ಜಿಲ್ಲಾ ಕೇಂದ್ರಸ್ಥಾನವಾದ ಮಡಿಕೇರಿಯಲ್ಲಿರುವ ಕೋಟೆ ಮತ್ತು ಮ್ಯೂಸಿಯಂ ಇಂದು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿದೆ. ಹಾಲೇರಿ ವಂಶಸ್ಥ ಮುದ್ದುರಾಜನು ಎತ್ತರದ ಪ್ರದೇಶದಲ್ಲಿ ಮಣ್ಣಿನಿಂದ ನಿರ್ಮಿಸಿದ ಕೋಟೆಯನ್ನು ಟಿಪ್ಪುಸುಲ್ತಾನನು ಕಲ್ಲಿನಿಂದ ಪುನರ್‌ರಚಿಸಿ ಇದಕ್ಕೆ ‘ಜಾಫರಾಬಾದ್’ ಎಂದು ನಾಮಕರಣ ಮಾಡಿರುವ ಕುರಿತು ಇತಿಹಾಸ ವಿವರಿಸುತ್ತದೆ. 1790ರಲ್ಲಿ ದೊಡ್ಡ ವೀರರಾಜೇಂದ್ರನು ತನ್ನ ಪ್ರಬಲವಾದ ಸೈನ್ಯದಿಂದ ಸುತ್ತುವರಿದು ಕೋಟೆಯನ್ನು ವಶಕ್ಕೆ ಪಡೆಯುತ್ತಾನೆ. 1834ರಲ್ಲಿ ಮಡಿಕೇರಿಯ ಕೋಟೆಯು ಬ್ರಿಟಿಷರ ಹತೋಟಿಗೆ ಒಳಪಡುತ್ತದೆ.
ಅತ್ಯಂತ ಆಕರ್ಷಣೀಯವಾಗಿರುವ ಈ ಕೋಟೆಯ ಆವರಣದಲ್ಲಿ ಕಳೆದ ಅನೇಕ ವರ್ಷಗಳ ಕಾಲ ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಕೋಟೆ ಶಿಥಿಲಾವಸ್ಥೆಗೆ ತಲುಪಿದ ಹಿನ್ನೆಲೆ ಸರಕಾರಿ ಕಚೇರಿಗಳು ಜಿಲ್ಲಾಡಳಿತದ ನೂತನ ಭವನಕ್ಕೆ ಸ್ಥಳಾಂತರಗೊಂಡವು. ಪ್ರಸಕ್ತ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಕೋಟೆಯನ್ನು ತನ್ನ ಅಧೀನಕ್ಕೆ ಪಡೆದು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದೆ.
ಚರ್ಚ್ ಮ್ಯೂಸಿಯಂ ಆಯಿತು:
ಕೋಟೆಯ ಮಹಾದ್ವಾರ ಪೂರ್ವಾಭಿಮುಖವಾಗಿದ್ದು, ಬೃಹದಾಕಾರದ ಬಾಗಿಲುಗಳಿವೆ. ಕೋಟೆಯನ್ನು ಪ್ರವೇಶಿಸಿದಾಗ ದಕ್ಷಿಣಕ್ಕೆ ಒಂದು ಮ್ಯೂಸಿಯಂ ಅನ್ನು ಕಾಣಬಹುದಾಗಿದೆ. ಬ್ರಿಟಿಷರ ಆಡಳಿತದ ಕಾಲದಲ್ಲಿ ರೆ. ಎ.ಫೆನೆಲ್ ಎಂಬ ಪಾದ್ರಿಯು ಚರ್ಚ್ ಅನ್ನು ನಿರ್ಮಿಸಿದರು. ಆಂಗ್ಲರ ಚರ್ಚ್ ಕಟ್ಟಡವು ಕೋನಾಕಾರದ ಗಾಥಿಕ್ ಶೈಲಿಯ ಗೋಪುರಗಳನ್ನು ಹೊಂದಿದೆ. ಹಿಂಭಾಗದಲ್ಲಿ ಕೋನಾಕಾರದ ಕಮಾನುಗಳಿಂದ ಕೂಡಿರುವ ಕಿಟಕಿಯು ಅಲಂಕಾರ ಹೊಂದಿರುವ ಗಾಜಿನ ಚಿತ್ರಕಲೆಯಿಂದ ಅತ್ಯಂತ ಆಕರ್ಷಣೀಯವಾಗಿದೆ.
ರಾಜ್ಯ ಪ್ರಾಚ್ಯವಸ್ತು ಇಲಾಖೆ ಇದೇ ಕಟ್ಟಡದಲ್ಲಿ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದೆ. ಮಡಿಕೇರಿ ತಾಲೂಕಿನ ಬೆಟ್ಟಗೇರಿಯ ಜೈನ ಬಸದಿಯ ಎರಡು ತೀರ್ಥಂಕರುಗಳು, ಕುಬೇರ, ಪದ್ಮಾವತಿ ಯಕ್ಷಿ, ಶಾಂತಿನಾಥ ತೀರ್ಥಂಕರ, ವಿಷ್ಣು ಮುಂತಾದ ಶಿಲ್ಪಗಳು ಹಾಗೂ ಹೊಯ್ಸಳರ ಶೈಲಿಯ ಕೆತ್ತನೆಯುಳ್ಳ ಬಾಗಿಲು ಈ ವಸ್ತು ಸಂಗ್ರಹಾಲಯದಲ್ಲಿ ಗಮನ ಸೆಳೆಯುತ್ತಿವೆ. 11ನೇ ಶತಮಾನದ ಹಲವು ಶಿಲ್ಪಗಳು ಈ ಮ್ಯೂಸಿಯಂನಲ್ಲಿದ್ದು, ನೋಡಲು ಅತ್ಯಾಕರ್ಷಕವಾಗಿವೆ. 10ನೇ ಶತಮಾನದ ದೇವಿಯ ವಿಗ್ರಹ, 12ನೇ ಶತಮಾನದ ತೀರ್ಥಂಕರ, ಶಾಂತಿನಾಥ ಮುಂತಾದ ವಿಗ್ರಹಗಳನ್ನೂ ಕಾಣಬಹುದಾಗಿದೆ.
ಬ್ರಿಟಿಷರು ಬಳಸುತ್ತಿದ್ದ ಒಂಟಿ ನಳಿಗೆ, ಜೋಡಿ ನಳಿಗೆಗಳ ಬಂದೂಕುಗಳು, ಪಿಸ್ತೂಲ್‌ಗಳು, ರಿವಾಲ್ವರ್‌ಗಳು, ಕಂಚಿನ ಗಣೇಶನ ಮೂರ್ತಿ, ಈಟಿಯಂತಹ ಆಯುಧಗಳು, 1841ರ ಪಿರಂಗಿಗಳು ಮತ್ತು ತಾಳೆಗರಿಗಳು ಇಲ್ಲಿವೆ. ದೇಶದ ಮೊದಲ ಸೇನಾ ಮಹಾ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪಅವರಿಗೆ ಉಡುಗೊರೆಯಾಗಿ ಬಂದಿರುವ ವಸ್ತುಗಳನ್ನು ಕೂಡ ಇಲ್ಲಿ ಇಡಲಾಗಿದೆ. ಕಾರ್ಯಪ್ಪ ಅವರಿಗೆ ದೊರೆತ ಸನ್ಮಾನ ಪತ್ರಗಳು, ನೆನಪಿನ ಕಾಣಿಕೆಗಳಿವೆ. ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ 1911ರಲ್ಲಿ ಆಗಿನ ಕೊಡಗಿನ ಜಿಲ್ಲಾಧಿಕಾರಿ ಕಾರ್ಯಪ್ಪ ಅವರಿಗೆ ನೀಡಿದ ಆಸನ. ಇದು ಹಳೆಯ ಕಾಲದ ಶೈಲಿಯಲ್ಲಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.
ಅರಸರ ಆಯುಧ, ವಸ್ತ್ರ, ವೇಷ-ಭೂಷಣ, ಕೊಡಗಿನ ಜನರ ಸಂಸ್ಕೃತಿಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಮ್ಯೂಸಿಯಂನ ಹೊರ ಭಾಗದಲ್ಲಿ ಅನೇಕ ವೀರಗಲ್ಲುಗಳನ್ನು ತಂದು ಸ್ಥಾಪಿಸಲಾಗಿದೆ. ಕೋಟೆಯ ಒಳಗಿರುವ ಆಕರ್ಷಕ ಅರಮನೆಯನ್ನು ನೋಡಲು ಬರುವ ಅಸಂಖ್ಯಾತ ಪ್ರವಾಸಿಗರು ಈ ಮ್ಯೂಸಿಯಂಗೂ ಭೇಟಿ ನೀಡಿ ಇತಿಹಾಸದ ಕುರುಹುಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಇಲ್ಲಿರುವ ಅರಮನೆ ಎರಡನೇಯ ಲಿಂಗರಾಜೇಂದ್ರನ ಕಾಲದಲ್ಲಿ 1812ರಿಂದ 1814ರ ಅವಧಿಯಲ್ಲಿ ಪುನರಚನೆಗೊಂಡಿದೆ. ಅರಮನೆಯ ಬಾಗಿಲೊಂದರ ಮೇಲ್ಭಾಗದಲ್ಲಿರುವ ಹಿತ್ತಾಳೆಯ ಫಲಕದ ಮೇಲಿರುವ ಶಾಸನವು ಅರಮನೆಯ ನಿರ್ಮಾಣದ ಆರಂಭ ಹಾಗೂ ಮುಕ್ತಾಯದ ಕುರಿತು ವಿವರಿಸುತ್ತದೆ.







