‘ಮದ್ರಸ ಶಿಕ್ಷಣ ಯೋಜನೆ’ ಸುಧಾರಣೆ ಬದಲು ಸ್ಥಗಿತ
5 ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರ

ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿದ್ದ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಮದ್ರಸಾ ವಿದ್ಯಾರ್ಥಿಗಳಿಗಾಗಿ ರೂಪಿಸಿದ್ದ ಈ ಯೋಜನೆಗೆ ಸಂಬಂಧಿಸಿದಂತೆ ಮದ್ರಸಾ ಸಮಿತಿಗಳ ಮುಖ್ಯಸ್ಥರಿಗೆ ಮಾಹಿತಿ ನೀಡುತ್ತಿರುವುದು.
ಬೆಂಗಳೂರು : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ 2024ರಲ್ಲಿ ಭಾರೀ ಪ್ರಚಾರದೊಂದಿಗೆ ಆರಂಭಿಸಲಾಗಿದ್ದ ಮದ್ರಸ ಶಿಕ್ಷಣ ಯೋಜನೆಯನ್ನು ರಾಜ್ಯ ಸರಕಾರ ಯಾವುದೇ ಅಧಿಕೃತ ಸ್ಪಷ್ಟನೆ ನೀಡದೇ ಸ್ಥಗಿತಗೊಳಿಸಿರುವುದರಿಂದ, ಮದ್ರಸಗಳ ಸುಮಾರು 5 ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ.
ಮದ್ರಸಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಯೊಂದಿಗೆ ಜೋಡಿಸುವ ಉದ್ದೇಶದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಈ ಯೋಜನೆಗೆ ಚಾಲನೆ ನೀಡಲಾಗಿತ್ತು.
ಇದೀಗ, ಏಕಾಏಕಿ ಈ ಯೋಜನೆಯನ್ನು ಸ್ಥಗಿತಗೊಳಿಸಿರುವ ರಾಜ್ಯ ಸರಕಾರದ ಕ್ರಮವು, ಅಲ್ಪಸಂಖ್ಯಾತರ ಶೈಕ್ಷಣಿಕ ಸಬಲೀಕರಣದ ಬಗ್ಗೆ ಯಾವ ಬಗೆಯ ಬದ್ಧತೆಯನ್ನು ಹೊಂದಿದೆ ಎಂಬ ಚರ್ಚೆಗಳು ಹುಟ್ಟುಹಾಕಿದೆ. ಮದ್ರಸಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಔಪಚಾರಿಕ ಶಿಕ್ಷಣದ ಅವಕಾಶ ಕಲ್ಪಿಸಿ, ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ (ಎನ್ಐಒಎಸ್) ಮೂಲಕ ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧಪಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು.
ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸುವ ಗುರಿಯನ್ನೂ ಈ ಯೋಜನೆ ಹೊಂದಿತ್ತು. ರಾಜ್ಯದ ಆಯ್ದ 100 ಮದ್ರಸಗಳ 5 ಸಾವಿರ ವಿದ್ಯಾರ್ಥಿಗಳಿಗೆ 9 ಮತ್ತು 10ನೇ ತರಗತಿಗಳ ಪಠ್ಯಕ್ರಮದ ತರಬೇತಿ ನೀಡಲು ಯೋಜಿಸಲಾಗಿತ್ತು. ಇದಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 10 ಕೋಟಿ ರೂ.ಮೊತ್ತದ ಟೆಂಡರ್ ಆಹ್ವಾನಿಸಲಾಗಿತ್ತು.
ತಾಂತ್ರಿಕ ಪರಿಶೀಲನೆಯ ಬಳಿಕ ಬೀದರ್ ಮೂಲದ ಶಾಹೀನ್ ಗ್ರೂಪ್ಗೆ ಯೋಜನೆಯ ಜವಾಬ್ದಾರಿ ವಹಿಸಲಾಗಿತ್ತು. ಪ್ರತೀ ಮದ್ರಸಗೆ ಇಬ್ಬರು ಶಿಕ್ಷಕರು, ಆನ್ಲೈನ್ ತರಗತಿಗಳು, ಕಂಪ್ಯೂಟರ್ಗಳು ಹಾಗೂ ಡಿಜಿಟಲ್ ಬೋರ್ಡ್ಗಳ ವ್ಯವಸ್ಥೆ ಕಲ್ಪಿಸುವುದಾಗಿತ್ತು.
ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದ 5 ಸಾವಿರ ವಿದ್ಯಾರ್ಥಿಗಳ ಪೈಕಿ ಸುಮಾರು 4,370 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಎನ್ನಲಾಗಿದೆ. ಆದರೆ, ಮೊದಲ ಪ್ರಯತ್ನದಲ್ಲಿ ಕೇವಲ ಶೇ.30ರಷ್ಟು ವಿದ್ಯಾರ್ಥಿಗಳು ಮಾತ್ರ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ವರದಿಗಳು ಯೋಜನೆಯ ಅನುಷ್ಠಾನ ಮತ್ತು ಬೋಧನೆಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಕಡಿಮೆ ಫಲಿತಾಂಶಕ್ಕೆ ಕಾರಣವೇನು, ಬೋಧನಾ ವ್ಯವಸ್ಥೆಯಲ್ಲಿ ಲೋಪಗಳಿದ್ದವೇ, ಮದ್ರಸಗಳ ಸಹಕಾರ ಸಮರ್ಪಕವಾಗಿತ್ತೇ ಎಂಬ ಅಂಶಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕಿತ್ತು. ಆದರೆ, ಲೋಪಗಳನ್ನು ಗುರುತಿಸಿ ಸರಿಪಡಿಸುವ ಬದಲು ಸರಕಾರ ಯೋಜನೆಯನ್ನೆ ಸ್ಥಗಿತಗೊಳಿಸಿರುವುದು ಟೀಕೆಗೆ ಗುರಿಯಾಗಿದೆ. ಯೋಜನೆಯ ಫಲಿತಾಂಶಗಳನ್ನು ಸರಕಾರ ಅಧಿಕೃತವಾಗಿ ಸಾರ್ವಜನಿಕರಿಗೆ ಏಕೆ ಪ್ರಕಟಿಸಿಲ್ಲ? ಎಂಬುದು ಸಮುದಾಯದ ಪ್ರಶ್ನೆಯಾಗಿದೆ.10 ಕೋಟಿ ರೂ. ವೆಚ್ಚದ ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ವತಂತ್ರ ಮೌಲ್ಯಮಾಪನ ನಡೆಸಲಾಗಿದೆಯೇ? ಕಳಪೆ ಫಲಿತಾಂಶಕ್ಕೆ ಹೊಣೆಗಾರರು ಯಾರು? ಯೋಜನೆ ಸ್ಥಗಿತಗೊಳಿಸುವ ಮೊದಲು ಮದ್ರಸ ಆಡಳಿತ ಮಂಡಳಿಗಳು, ಶಿಕ್ಷಕರು ಹಾಗೂ ಸಮುದಾಯದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ ಎಂಬ ಪ್ರಶ್ನೆಗಳಿಗೆ ಸರಕಾರದ ಉತ್ತರವನ್ನು ಸಮುದಾಯ ನಿರೀಕ್ಷಿಸುತ್ತಿದೆ. ಮೊದಲ ಹಂತದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯದಿದ್ದ ಮಾತ್ರಕ್ಕೆ ಇಂತಹ ಮಹತ್ವದ ಯೋಜನೆಯನ್ನು ಕೈಬಿಡುವುದು ಸೂಕ್ತವಲ್ಲ. ಬದಲಾಗಿ, ಸ್ವತಂತ್ರ ಪರಿಶೀಲನೆ ನಡೆಸಿ, ಲೋಪಗಳನ್ನು ಸರಿಪಡಿಸಿ, ಅಗತ್ಯ ಬದಲಾವಣೆಗಳೊಂದಿಗೆ ಯೋಜನೆಯನ್ನು ಮುಂದುವರಿಸುವ ಪ್ರಯತ್ನ ಮಾಡಬೇಕಿತ್ತು. ಮದ್ರಸ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಸರಕಾರ ಮೌನ ಮುರಿದು ಯೋಜನೆಯ ಸ್ಥಗಿತಕ್ಕೆ ಕಾರಣ, ವೆಚ್ಚದ ವಿವರ ಹಾಗೂ ಹೊಣೆಗಾರಿಕೆಯ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂಬುದು ಸಮುದಾಯದ ನಿರೀಕ್ಷೆಯಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಶೈಕ್ಷಣಿಕ ಸಬಲೀಕರಣದ ಬಗ್ಗೆ ಪದೇಪದೇ ಮಾತನಾಡುವ ಸರಕಾರ, ಸಾವಿರಾರು ಮದ್ರಸ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಯೋಜನೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಯೋಜನೆ ಏಕೆ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ ಎಂಬುದಷ್ಟೇ ಅಲ್ಲ, ಅದರ ಲೋಪಗಳಿಂದ ಪಾಠ ಕಲಿತು ಸುಧಾರಿಸುವ ಬದಲು ಅದನ್ನೇ ಏಕೆ ಕೈಬಿಡಲಾಯಿತು ಎಂಬುದಕ್ಕೆ ಸರಕಾರ ಸಮುದಾಯಕ್ಕೆ ಉತ್ತರ ನೀಡಬೇಕಿದೆ.






