ಬಹಮನಿ ಸುಲ್ತಾನರನ್ನು ಗೆಲ್ಲೆಸಿದ ಮಲಿಕ್ ಇ ಮೈದಾನ್

ವಿಜಯಪುರ: ಮಧ್ಯಕಾಲೀನ ಭಾರತದ ಅತ್ಯಂತ ವಿಶಿಷ್ಟ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿರುವ ಐತಿಹಾಸಿಕ ಮಲಿಕ್ ಇ ಮೈದಾನ್ ಫಿರಂಗಿ ಜಗತ್ತಿನಾದ್ಯಂತ ಇರುವ ಪ್ರವಾಸಿಗರನ್ನು ಇಂದಿಗೂ ಕೈಬೀಸಿ ಕರೆಯುತ್ತಿದೆ. ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ‘ಶೆರ್ಜಾ ಬುರ್ಜ್ (ಸಿಂಹದ ಗೋಪುರ) ಮೇಲೆ ವಿರಾಜಮಾನವಾಗಿರುವ ಈ ಬೃಹತ್ ತೋಪು, ಅಂದಿನ ಕಾಲದ ಲೋಹಶಾಸ್ತ್ರ ಮತ್ತು ಯುದ್ಧ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸುಡುವ ಬಿಸಿಲಿನಲ್ಲೂ ತಂಪಾಗಿರುವ ಫಿರಂಗಿಗೆ ತನ್ನದೇಯಾದ ಇತಿಹಾಸವಿದೆ. ಭಾರತೀಯ ಪುರಾತತ್ವ ಇಲಾಖೆಯ ಉಸ್ತುವಾರಿಯಲ್ಲಿ ಸಂರಕ್ಷಿಸಲ್ಪಟ್ಟಿರುವ ಮಲಿಕ್ ಇ ಮೈದಾನ್, ಕೇವಲ ಒಂದು ಯುದ್ಧ ಸ್ಮಾರಕವಲ್ಲ. ಅದು ನಮ್ಮ ಹಿರಿಯರ ತಾಂತ್ರಿಕ ನೈಪುಣ್ಯದ ಪ್ರತೀಕ. ವಿಜಯಪುರಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಯೂ ತಪ್ಪದೇ ನೋಡಬೇಕಾದ ಅದ್ಭುತ ಸ್ಮಾರಕವಾಗಿದೆ.
55 ಟನ್ ತೂಕದ ಜಗತ್ಪ್ರಸಿದ್ಧ ಕಲಾಕೃತಿ:
ಮಲಿಕ್ ಈ ಮೈದಾನ್ ಫಿರಂಗಿಯು ಕೇವಲ ಯುದ್ಧ ಸಾಮಗ್ರಿಯಲ್ಲ. ಅದೊಂದು ಜಗತ್ತಿನ ಅಪರೂಪದ ಕಲಾಕೃತಿ. ಬರೋಬ್ಬರಿ 55 ಟನ್ ತೂಗುತ್ತದೆ. 4.45 ಮೀಟರ್ ಉದ್ದ ಹಾಗೂ 1.5 ಮೀಟರ್ ವ್ಯಾಸ ಹೊಂದಿದೆ. ಮಧ್ಯಕಾಲೀನ ಯುಗದಲ್ಲಿ ಪಂಚಲೋಹಗಳ ಮಿಶ್ರಣ ತಯಾರಿಸಲ್ಪಟ್ಟ ಜಗತ್ತಿನ ಅತಿ ದೊಡ್ಡ ಫಿರಂಗಿಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.
ಕಲಾತ್ಮಕ ವಿನ್ಯಾಸ ಮತ್ತು ಶಾಸನಗಳ ಉಲ್ಲೇಖ:
ಈ ಫಿರಂಗಿಯ ಮುಖಭಾಗವು (ನಳಿಕೆ) ಸಿಂಹವು ಬಾಯ್ತೆರದ ಆಕಾರದಲ್ಲಿದೆ. ಜತೆಗೆ ಪರ್ಷಿಯನ್ ಭಾಷೆಯಲ್ಲಿ ಮೂರು ಶಾಸನಗಳನ್ನು ಬರೆಸಲಾಗಿದೆ. ಮೊಘಲ್ ಚಕ್ರವರ್ತಿ ಔರಂಗಜೇಬ ವಿಜಯಪುರವನ್ನು ಗೆದ್ದಾಗ ಶಾಸನ ಕೆತ್ತಿಸಿದ್ದಾನೆ.
ಮದುವೆ ಉಡುಗೊರೆಯಾಗಿ ಬಂದ ಫಿರಂಗಿ :
ಫಿರಂಗಿಯನ್ನು ಕ್ರಿ.ಶ. 1549ರಲ್ಲಿ ಅಹಮದನಗರದ ಸುಲ್ತಾನ ಬುರ್ಹಾನ್ ನಿಜಾಂ ಶಾ ಆಸ್ಥಾನದಲ್ಲಿದ್ದ ಟರ್ಕಿ ದೇಶದ ಪ್ರಸಿದ್ಧ ಎಂಜಿನಿಯರ್ ಮುಹಮ್ಮದ್ ಬಿನ್ ಹುಸೇನ್ ರೂಮಿ ಸಿದ್ಧಪಡಿಸಿದ್ದ. ಸುಲ್ತಾನನು ತನ್ನ ಮಗಳು ಚಾಂದ್ ಬೀಬಿಯನ್ನು ವಿಜಯಪುರದ ಸುಲ್ತಾನ್ ಆಲಿ ಆದಿಲ್ ಶಾನಿಗೆ ಕೊಟ್ಟು ಮದುವೆ ಮಾಡುವಾಗ ಈ ಬೃಹತ್ ತೋಪನ್ನು ಉಡುಗೊರೆಯಾಗಿ ನೀಡಿದ್ದನೆಂಬ ಪ್ರತೀತಿಯಿದೆ. ಒಂದು ತಿಂಗಳು 10 ಆನೆಗಳು, 400 ಎತ್ತುಗಳು ಮತ್ತು ನೂರಾರು ಸೈನಿಕರನ್ನು ಬಳಸಿ ಇದನ್ನು ವಿಜಯಪುರಕ್ಕೆ ತರಲಾಗಿದೆ.
ಫಿರಂಗಿ ಮೇಲೆ ಬಿದ್ದಿತ್ತು ಬ್ರಿಟಿಷರ ಕಣ್ಣು:
ಭಾರತದ ಅಪಾರ ಸಂಪತ್ತನ್ನು ಕೊಳ್ಳೆಹೊಡೆದ ಬ್ರಿಟಿಷ್ ಈಷ್ಟ್ ಇಂಡಿಯಾ ಕಂಪನಿಯ ಕಣ್ಣು ಈ ಅಪರೂಪದ ಫಿರಂಗಿಯ ಮೇಲೂ ಬಿದ್ದಿತ್ತು. ಯುದ್ಧದ ಸ್ಮರಣಿಕೆಯಾಗಿ ಇಂಗ್ಲೆಂಡಿಗೆ ಸಾಗಿಸಲು ಪ್ರಯತ್ನಪಟ್ಟಿದ್ದರು. ಫಿರಂಗಿಯ ತೂಕ ಹೆಚ್ಚಾಗಿದ್ದರಿಂದ ಮತ್ತು ಸಮರ್ಪಕ ಸಾರಿಗೆ ಸೌಕರ್ಯ ಇಲ್ಲದ್ದಕ್ಕೆ ಇಂಗ್ಲೆಂಡಿಗೆ ಒಯ್ಯುವ ಆಲೋಚನೆಯನ್ನು ಬ್ರಿಟಿಷರು ಕೈಬಿಟ್ಟರು. ನಂತರ 150 ರೂಪಾಯಿಗಳಿಗೆ ಹರಾಜು ಹಾಕಲು ಯತ್ನಿಸಿದಾಗ ಸ್ಥಳೀಯ ಅಧಿಕಾರಿಗಳ ತೀವ್ರ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಈ ಐತಿಹಾಸಿಕ ಆಸ್ತಿ ನಮ್ಮ ವಿಜಯ ಪುರದಲ್ಲೇ ಉಳಿಯುವಂತಾಯಿತು.
ಕಿವಡು ಮಾಡುತ್ತಿದ್ದ ಶಬ್ದ ನೀರಿನ ಹೊಂಡ ಸೇರುತ್ತಿದ್ದ ಸೈನಿಕರು!
ಫಿರಂಗಿಯಿಂದ ಗುಂಡು ಹಾರಿಸಿದಾಗ ಹೊರಹೊಮ್ಮುತ್ತಿದ್ದ ಶಬ್ಧ ಭಯಾನಕವಾಗಿರುತ್ತಿತ್ತು. ಭೀಕರ ಸ್ಫೋಟದಿಂದ ಕಿವಿಯ ತಮಟೆ ಹರಿದುಹೋಗದಂತೆ ರಕ್ಷಿಸಿಕೊಳ್ಳಲು ಫಿರಂಗಿಗೆ ಕಿಡಿ ಇಟ್ಟ ತಕ್ಷಣವೇ ಸೈನಿಕ ಪಕ್ಕದಲ್ಲೇ ನಿರ್ಮಿಸಲಾಗಿದ್ದ ನೀರಿನ ಹೊಂಡದಲ್ಲಿ ಧುಮುಕುತ್ತಿದ್ದ. ಈ ಹೊಂಡವನ್ನು ಶೆರ್ಜಾ ಬುರ್ಜ್ ಮೇಲೆ ಕಾಣಬಹುದು. ಫಿರಂಗಿಯ ಗುಂಡು ಸುಮಾರು 50 ಮೀಟರ್‌ಗಿಂತಲೂ ದೂರ ಸಾಗುತ್ತಿತ್ತು.
ಬೇಸಿಗೆಯಲ್ಲೂ ತಂಪಾಗಿರುವ ಫಿರಂಗಿ :
ವಿಜಯಪುರದಲ್ಲಿ ಹೆಚ್ಚು ಬಿಸಿಲಿದ್ದರೂ ಈ ಫಿರಂಗಿ ತಂಪಾಗಿಯೇ ಇರುತ್ತದೆ. ಅಲ್ಲದೆ ಮೆಲ್ಲನೆ ತಟ್ಟಿದರೆ ಮಧುರ ಧ್ವನಿ ಹೊರಹೊಮ್ಮುತ್ತದೆ. ಅಂದಿನ ಲೋಹಶಾಸ್ತ್ರದ ಪ್ರಗತಿಗೆ ಇದು ಸಾಕ್ಷಿಯಾಗಿದೆ.
ಇಂದು ಪ್ರವಾಸಿ ತಾಣವಾಗಿ, ಇತಿಹಾಸದ ಮೂಕಸಾಕ್ಷಿಯಾಗಿ ನಿಂತಿರುವ ಮಲಿಕ್-ಇ-ಮೈದಾನ್ ಫಿರಂಗಿಯ ಹಿಂದೆ ದಕ್ಷಿಣ ಭಾರತದ ಮಹಾ ಸಾಮ್ರಾಜ್ಯವೊಂದರ ಏಳು-ಬೀಳಿನ ಇತಿಹಾಸ ಅಡಗಿದೆ. ಆ ರಣರಂಗದ ಒಡೆಯ ಇಂದು ವಿಜಯಪುರಕ್ಕೆ ಬರುವ ಪ್ರವಾಸಿಗರಿಗೆ ಇತಿಹಾಸದ ರೋಚಕ ಕಥೆಗಳನ್ನು ಹೇಳುತ್ತಿದ್ದಾನೆ. ಅದನ್ನು ವಿಸ್ಮಯದಿಂದ ಆಲಿಸುವ ಕಿವಿಗಳಿರಬೇಕು ಎನ್ನುವುದು ಸ್ಥಳೀಯರ ಅಭಿಮತ.
ತಾಳಿಕೋಟೆ ಯುದ್ಧದಲ್ಲಿ ಘರ್ಜಿಸಿದ ಫಿರಂಗಿ
ಕ್ರಿ.ಶ. 1565 ರಲ್ಲಿ ನಡೆದ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ತಾಳಿಕೋಟೆ ಯುದ್ಧ (ರಕ್ಕಸ-ತಂಗಡಗಿ ಕದನ) ಇಡೀ ದಕ್ಷಿಣ ಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿತ್ತು. ಈ ಮಹಾವಿನಾಶಕಾರಿ ಯುದ್ಧದಲ್ಲಿ ಈ ಫಿರಂಗಿ ಸಮರ್ಥವಾಗಿ ಬಳಸಿಕೊಳ್ಳಲಾಗಿತ್ತು. ಯುದ್ಧದ ಆರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ದಂಡನಾಯಕ ಅಳಿಯ ರಾಮರಾಯನ ನೇತೃತ್ವದ ಸೈನ್ಯವು ಬಲಿಷ್ಠವಾಗಿ ಮುನ್ನುಗ್ಗುತ್ತಿತ್ತು. ಆಗ ಶಾಹಿ ಸುಲ್ತಾನರ ಒಕ್ಕೂಟದ ಸೈನ್ಯವು ಸೋಲೊಪ್ಪುವ ಹಂತ ತಲುಪಿತ್ತು. ಈ ಸಂದರ್ಭದಲ್ಲಿ ಸುಲ್ತಾನರು ವಿನಾಶ
ಕಾರಿ ಅಸ್ತ್ರವಾದ ‘ಮಲಿಕ್-ಇ-ಮೈದಾನ್’ ಸೇರಿ ಬೃಹತ್ ಫಿರಂಗಿಗಳನ್ನು ಬಳಸಿ ಯುದ್ಧ ಮುನ್ನಡೆಸಿದರು. ಫಿರಂಗಿ ಭೀಕರ ಸ್ಫೋಟದಿಂದ ಉಂಟಾದ ಶಬ್ಧ ಮತ್ತು ಬೆಂಕಿಯ ಉಂಡೆಗಳಿಗೆ ಹೆದರಿದ ವಿಜಯನಗರ ಸೈನ್ಯದ ನೂರಾರು ಆನೆಗಳು ಮದವೇರಿ, ದಿಕ್ಕಾಪಾಲಾಗಿ ಓಡಿದ್ದರಿಂದ ಪರಿಸ್ಥಿತಿಯ ಲಾಭ ಪಡೆದ ಸುಲ್ತಾನರು ಯುದ್ಧದಲ್ಲಿ ಗೆಲುವು ಸಾಧಿಸಿದರು.






