ಮಲ್ಲಿಕಾರ್ಜುನ ಖರ್ಗೆಯವರೂ ಪ್ರಿಯಾಂಕ್ ಖರ್ಗೆಯವರಂತೆಯೇ ಆರೆಸ್ಸೆಸ್ ಬಗ್ಗೆ ಮಾತನಾಡಿದ್ದರು

‘‘ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯದ ಗೃಹ ಸಚಿವರಾಗಿದ್ದಾಗ ಆರೆಸ್ಸೆಸ್ ಪರವಾಗಿದ್ದರು’’ ಎಂದು ಬಿಂಬಿಸಿ ಈಗಾಗಲೇ ಮೃದು ಹಿಂದುತ್ವವನ್ನು ಹೊಂದಿರುವ ಕಾಂಗ್ರೆಸಿಗರನ್ನು ದಾರಿತಪ್ಪಿಸಲು ಆರೆಸ್ಸೆಸ್ ಹುನ್ನಾರ ನಡೆಸುತ್ತಿದೆ. ಕಾಂಗ್ರೆಸ್ ಇಂತಹ ಹುನ್ನಾರಗಳಿಗೆ ಸುಲಭವಾಗಿ ಬಲಿ ಬೀಳುತ್ತದೆ. ಆದರೆ, ದಾಖಲೆಗಳು ಮಲ್ಲಿಕಾರ್ಜುನ ಖರ್ಗೆಯವರಿಗೆ ಆರೆಸ್ಸೆಸ್ ಬಗೆಗಿದ್ದ ನಿಲುವು ಮತ್ತು ಅದನ್ನು ಬಹಿರಂಗವಾಗಿ ಗಟ್ಟಿಯಾಗಿ ಹೇಳುವ ಅವರ ಛಾತಿಯನ್ನು ಹೇಳುತ್ತದೆ.
ಪ್ರಿಯಾಂಕ್ ಖರ್ಗೆಯವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿಯೇ ಮಲ್ಲಿಕಾರ್ಜುನ ಖರ್ಗೆಯವರು ಆರೆಸ್ಸೆಸ್ ಕಾರ್ಯಚಟುವಟಿಕೆಯನ್ನು ಖಂಡಿಸಿದ್ದರು. ಈಗ ಪ್ರಿಯಾಂಕ್ ಖರ್ಗೆಗೆ ಪ್ರಶ್ನೆ ಕೇಳುತ್ತಿರುವ ಶಾಸಕ ಎಸ್. ಸುರೇಶ್ ಕುಮಾರ್ ಅಂದು ಮಲ್ಲಿಕಾರ್ಜುನ ಖರ್ಗೆಯವರಿಗೂ ಪ್ರಶ್ನೆ ಕೇಳಿದ್ದರು. ಅಂದು ಮಲ್ಲಿಕಾರ್ಜುನ ಖರ್ಗೆಯವರೂ ಬಗ್ಗಲಿಲ್ಲ, ಇಂದು ಪ್ರಿಯಾಂಕ್ ಖರ್ಗೆಯವರೂ ಬಗ್ಗುತ್ತಿಲ್ಲ.
2003 ಜುಲೈ27ರಂದು ಬಿಜಾಪುರದಲ್ಲಿ ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗಿತ್ತು. ಪ್ರಚೋದನಾತ್ಮಕವಾಗಿ ಭಾಷಣ ಮಾಡಿ ಕೋಮುಗಲಭೆಗೆ ಕಾರಣವಾಗುವ ಆರೆಸ್ಸೆಸ್‌ನ ಪ್ರಧಾನ ಅಂಗವಾಗಿರುವ ವಿಶ್ವ ಹಿಂದೂ ಪರಿಷತ್ತಿನ ಅಂತರ್‌ರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಭಾಯಿ ತೊಗಾಡಿಯಾ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದರು. ಆದರೆ, ಅಂದು ಗೃಹಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಪ್ರವೀಣ್ ಭಾಯಿ ತೊಗಾಡಿಯಾಗೆ ಬಿಜಾಪುರ ಪ್ರವೇಶಕ್ಕೆ ಜಿಲ್ಲಾಧಿಕಾರಿ ಮೂಲಕ ನಿರ್ಬಂಧ ಹೇರಿದರು. ಅಷ್ಟು ಮಾತ್ರವಲ್ಲ, ಹಿಂದೂ ಸಮಾಜೋತ್ಸವದ ಅಂಗವಾಗಿ ನಡೆಯಲಿದ್ದ ‘ತ್ರಿಶೂಲ ಮೆರವಣಿಗೆ’ಯನ್ನೂ ಮಲ್ಲಿಕಾರ್ಜುನ ಖರ್ಗೆ ನಿಷೇಧಿಸಿದರು. ಇದು 25 ಜುಲೈ 2003ರ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಗೆ ಕಾರಣವಾಗಿತ್ತು. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಎತ್ತಿದ ಪ್ರಶ್ನೆಗೆ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಖಡಕ್ ಉತ್ತರ ನೀಡಿದ್ದರು. ಅದರ ಸಾರಾಂಶ ಇಲ್ಲಿದೆ:
ಮಲ್ಲಿಕಾರ್ಜುನ ಖರ್ಗೆ (ಗೃಹ ಸಚಿವರು):
ಮಾನ್ಯ ಅಧ್ಯಕ್ಷರೇ, ಬಿಜಾಪುರದಲ್ಲಿ 27ನೇ ತಾರೀಕಿಗೆ ಒಂದು ಸಾರ್ವಜನಿಕ ಕಾರ್ಯಕ್ರಮ ಇದೆ. ಆ ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಅಂತರ್‌ರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಭಾಯಿ ತೊಗಾಡಿಯಾ ಅವರು ಭಾಗವಹಿಸುವುದಕ್ಕೆ ಬರುತ್ತಿದ್ದಾರೆ. ಆದರೆ ಪ್ರವೀಣ್ ಭಾಯಿ ತೊಗಾಡಿಯಾ ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಬಿಜಾಪುರ ಜಿಲ್ಲಾಧಿಕಾರಿಗಳು ಜುಲೈ 26ರಿಂದ ಆಗಸ್ಟ್ 2ನೇ ತಾರೀಕಿನವರೆಗೆ ನಿರ್ಬಂಧವನ್ನು ಹೇರಿದ್ದಾರೆ. ಅಲ್ಲಿಯವರೆಗೆ ಪ್ರವೀಣ್ ಭಾಯಿ ತೊಗಾಡಿಯಾ ಅವರು ಆ ಜಿಲ್ಲೆಯ ಗಡಿಯನ್ನು ಪ್ರವೇಶ ಮಾಡಬಾರದು ಎಂದು ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದಾರೆ.
ಮಾನ್ಯ ಅಧ್ಯಕ್ಷರೆ, ಈ ವಿಚಾರವನ್ನು ವಿರೋಧ ಪಕ್ಷದ ನಾಯಕರು ಪ್ರಸ್ತಾವ ಮಾಡಿದ್ದಾರೆ. ‘ಪ್ರವೀಣ್ ಭಾಯಿ ತೊಗಾಡಿಯಾ ಅವರು ಬಿಜಾಪುರಕ್ಕೆ ಬರುತ್ತಿದ್ದಾರೆ. ಅಲ್ಲಿನ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಿದ್ದಾರೆ. ಅದನ್ನು ಸಡಿಲಗೊಳಿಸಬೇಕು’ ಎನ್ನುವ ಪ್ರಸ್ತಾವವನ್ನು ಸದನದಲ್ಲಿ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮಾತನಾಡುವಂತಹ ಹಕ್ಕು ಎಲ್ಲರಿಗೂ ಇದೆ. ಎಲ್ಲರಿಗೂ ಫ್ರೀಡಂ ಆಫ್ ಎಕ್ಸ್‌ಪ್ರೆಷನ್ ಇದೆ. ಆದರೆ ಫ್ರೀಡಂ ಆಫ್ ಎಕ್ಸ್‌ಪ್ರೆಷನ್ ಇದೆ ಎಂದು ತಿಳಿದುಕೊಂಡು ಇನ್ನೊಬ್ಬರಿಗೆ ನೋವಾಗುವ ರೀತಿಯಲ್ಲಿ, ಪ್ರಚೋದನೆ ಮಾಡುವಂತಹ ರೀತಿಯಲ್ಲಿ ನಾವು ಮಾತನಾಡಿ ಜನರನ್ನು ಮತ್ತೊಂದು ಧರ್ಮದ ವಿರುದ್ಧ ಪ್ರಚೋದಿಸಿದರೆ ಅದು ಪ್ರಜಾಪ್ರಭುತ್ವದ ತತ್ವಕ್ಕೆ ವಿರುದ್ಧವಾಗುತ್ತದೆ. ಈ ರೀತಿ ಧರ್ಮಗಳನ್ನು ಎತ್ತಿಕಟ್ಟುವುದು ಪ್ರಜಾಪ್ರಭುತ್ವದ ತತ್ವಕ್ಕೆ ವಿರುದ್ಧವಾದ ನೀತಿಯೇ ಹೊರತು, ಪ್ರಜಾಪ್ರಭುತ್ವವನ್ನು ಬೆಳೆಸುವ ರೀತಿಯಾಗಲೀ ಅಥವಾ ದೇಶವನ್ನು ಏಕತೆಯಿಂದ ಇಡುವಂತಹ ರೀತಿಯಾಗಲೀ ಅಲ್ಲ.
ಪ್ರವೀಣ್ ಭಾಯಿ ತೊಗಾಡಿಯಾ ಅವರು ಇಡೀ ದೇಶದಲ್ಲಿ ಓಡಾಡಿ ಏನೇನು ಮಾತಾಡುತ್ತಿದ್ದಾರೆ, ಏನೇನು ಮಾತಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರಿಗೂ ಈ ಬಗ್ಗೆ ಸ್ಪಷ್ಟವಾಗಿ ಗೊತ್ತಿದೆ. ಪತ್ರಿಕೆ, ಮಾಧ್ಯಮಗಳು ಪ್ರವೀಣ್ ಭಾಯಿ ತೊಗಾಡಿಯಾ ಅವರ ಪ್ರಚೋದನಾತ್ಮಕ ಭಾಷಣವನ್ನು ವರದಿ ಮಾಡಿವೆ. ಅವರು ಮಾತನಾಡುವ ಪ್ರತೀ ಭಾಷಣ ಮತೀಯ ಭಾವನೆ ಕೆರಳಿಸುತ್ತದೆ, ಅವರ ಪ್ರತೀ ಭಾಷಣ ಇನ್ನೊಬ್ಬರ ಧಾರ್ಮಿಕ ಭಾವನೆಯನ್ನು ಕೆರಳಿಸುತ್ತದೆ. ಈ ರೀತಿ ಇನ್ನೊಬ್ಬರ ಧಾರ್ಮಿಕ ಭಾವನೆಯನ್ನು ಕೆರಳಿಸಿ ಅವರು ಏನನ್ನು ಸಾಧಿಸಬೇಕಿದೆ?
ವಿಶ್ವ ಹಿಂದೂ ಪರಿಷತ್ತಿನ ಅಂತರ್‌ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಪ್ರವೀಣ್ ಭಾಯಿ ತೊಗಾಡಿಯಾ ಅವರು ದೇಶದ ಹಲವು ಭಾಗಗಳಲ್ಲಿ ಮತೀಯ ಪ್ರಚೋಧಾನಾತ್ಮಕ ಭಾಷಣ ಮಾಡಿದ್ದಾರೆ. ಕರ್ನಾಟಕದಲ್ಲೂ ಕೂಡಾ ಈ ಹಿಂದೆ ಹಲವು ಬಾರಿ ಬಂದು ಭಾಷಣ ಮಾಡಿದ್ದಾರೆ. ತಾವುಗಳು ಪ್ರವೀಣ್ ಭಾಯಿ ತೊಗಾಡಿಯಾ ಈ ಹಿಂದೆ ಕರ್ನಾಟಕದಲ್ಲಿ ಮಾಡಿರುವ ಭಾಷಣವನ್ನು ಒಮ್ಮೆ ಗಮನಿಸಿ. ಹಿಂದಿನ ಇತಿಹಾಸವನ್ನು ತಾವುಗಳು ಗಮನಿಸಬೇಕು.
ಎರಡನೆಯದಾಗಿ, ಬಿಜಾಪುರ ಹಿಂದೂ ಸಮಾಜೋತ್ಸವದಲ್ಲಿ ತ್ರಿಶೂಲವನ್ನು ಹಂಚುವ ಕಾರ್ಯಕ್ರಮ ಮತ್ತು ಮೆರವಣಿಗೆ ಇದೆ ಎಂದು ಘೋಷಿಸಿದ್ದಾರೆ. ತ್ರಿಶೂಲ ಅನ್ನೋದು ಒಂದು ವೆಪನ್. ತ್ರಿಶೂಲವನ್ನು ಹಂಚುವ ಕಾರ್ಯಕ್ರಮ ಮಾಡಿದರೆ ಸಮಾಜದಲ್ಲಿ ಭೀತಿ ಉಂಟಾಗುವುದಿಲ್ಲವೇ? ಸಮಾಜದಲ್ಲಿ ಭಯ ಹುಟ್ಟಿಸುವುದು ಸರಿಯೇ? ನಮ್ಮ ಸಮಾಜದಲ್ಲಿ ಸಂವಿಧಾನ, ಕಾನೂನು ಜಾರಿಯಲ್ಲಿದೆ. ಸಂವಿಧಾನದ ಪ್ರಕಾರ, ಈ ನೆಲದಲ್ಲಿ ತ್ರಿಶೂಲದಂತಹ ವೆಪನ್‌ಗಳನ್ನು ಹಂಚುವುದು, ವೆಪನ್ ಗಳನ್ನು ಹಿಡಿದು ತಿರುಗಾಡುವುದಕ್ಕೆ ಅವಕಾಶ ಇಲ್ಲ. ಈ ರೀತಿ ವೆಪನ್‌ಗಳ ಜೊತೆ ಮೆರವಣಿಗೆ ಮಾಡುತ್ತೀರಿ ಎಂದರೆ, ಅದು ಕಾನೂನು ಪಾಲನೆಯ ಮಾಡುವವರ ವಿರುದ್ಧದ ಕಾರ್ಯಕ್ರಮ ಎಂದು ಅರ್ಥ. ಹಾಗಾಗಿ ಕಾನೂನು ಪಾಲನೆ ಮಾಡುವ ಸರಕಾರವಾಗಿ ನಾವು ನಮ್ಮ ರಾಜ್ಯದಲ್ಲಿ ವೆಪನ್ ಗಳ ಜೊತೆ ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ.
ಮಾನ್ಯ ಅಧ್ಯಕ್ಷರೇ, ತಮಗೆ ಗೊತ್ತಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ಮೂರು ವರ್ಷ ಹತ್ತು ತಿಂಗಳಿನಲ್ಲಿ ಒಂದೂ ಕೋಮುಗಲಭೆ ಸಹ ಆಗಿಲ್ಲ. ಗಮನಾರ್ಹ ಮಟ್ಟದಲ್ಲಿ ಹಿಂದೂ-ಮುಸ್ಲಿಮ್-ಕ್ರಿಶ್ಚಿಯನ್ ಮಧ್ಯೆ ಕೋಮುಗಲಭೆಗಳು ನಡೆದಿಲ್ಲ. ಸಣ್ಣಪುಟ್ಟ ಘಟನೆಗಳು ನಡೆದಿರಬಹುದು. ನಾನು ಇಲ್ಲ ಎಂದು ಹೇಳುವುದಿಲ್ಲ. ಆದರೆ ಬೇರೆ ರಾಜ್ಯಗಳಿಗೆ ಹೋಲಿಸಿದಾಗ ಅಥವಾ ನಮ್ಮ ರಾಜ್ಯದ್ದೇ ಹಿಂದಿನ ಇತಿಹಾಸವನ್ನು ತೆಗೆದುಕೊಂಡು ನೋಡಿದರೆ, ನಮ್ಮ ಸರಕಾರದಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಕೋಮುಗಲಭೆಗಳು ನಡೆದಿಲ್ಲ. ಈ ಮೂರು ವರ್ಷ ಹತ್ತು ತಿಂಗಳಲ್ಲಿ ಯಾವುದೇ ಮತೀಯ ಭಾವನೆಯನ್ನು ಕೆರಳಿಸಿ ಅದರಿಂದ ಪ್ರಚೋದನೆಗೊಂಡ ಯಾವುದೇ ಅನಾಹುತ ನಮ್ಮಲ್ಲಿ ಆಗಿಲ್ಲ. ಆದ್ದರಿಂದ ಯಾರು ಇಂಥ ಭಾವನೆಗಳನ್ನು ಕೆರಳಿಸುವಂಥ ಪ್ರಯತ್ನವನ್ನು ಮಾಡುತ್ತಾರೋ ಅಥವಾ ಅಂತಹ ಉದ್ದೇಶಕ್ಕಾಗಿ ನಮ್ಮ ರಾಜ್ಯಕ್ಕೆ ಬರುತ್ತಾರೋ ಅಂತವರಿಗೆ ನಾವು ನಿರ್ಬಂಧ ಹೇರಿಯೇ ಹೇರುತ್ತೇವೆ.
ತ್ರಿಶೂಲ ಹಂಚುತ್ತೇವೆ ಎಂದು ಓಪನ್ ಡಿಕ್ಲೇರ್ ಮಾಡಿದರೆ ಒಂದು ರಾಜ್ಯ ಸರಕಾರವಾಗಿ ನಾವು ಸುಮ್ಮನಿರಬೇಕೇ? ಅಂಥವರ ವಿರುದ್ಧ ನಾವು ಕ್ರಮ ಕೈಗೊಳ್ಳುವುದಲ್ಲದೆ ಅಂತಹ ಅಜೆಂಡಾ ಹೊಂದಿರುವವರನ್ನು ರಾಜ್ಯದೊಳಗೆ ಬರಲೂ ಬಿಡುವುದಿಲ್ಲ. ಇದು ಸ್ಪಷ್ಟ!
ದೇಶದ ಸಂವಿಧಾನ, ನೆಲದ ಕಾನೂನಿಗೆ ಗೌರವ ಕೊಡುವವರು ಯಾರು ಬೇಕಾದರೂ ಯಾವಾಗ ಬೇಕಾದರೂ ಕರ್ನಾಟಕ ರಾಜ್ಯಕ್ಕೆ ಬರಬಹುದು; ಸಭೆ ನಡೆಸಬಹುದು; ಎಲ್ಲಿ ಬೇಕಾದರೂ ಮೆರವಣಿಗೆ ಹೋಗಬಹುದು. ಕಾನೂನಿನ ಪ್ರಕಾರ ನಾವು ಎಲ್ಲರಿಗೂ ಅವಕಾಶ ಮಾಡಿಕೊಡುತ್ತೇವೆ. ಈ ಹಿಂದೆ ವಿಶ್ವ ಹಿಂದೂ ಪರಿಷತ್‌ನವರು ಹಲವು ಕಾರ್ಯಕ್ರಮ ಮಾಡಿದ್ದಾರೆ. ಮುಸ್ಲಿಮ್ ಲೀಗ್‌ನವರೂ ಮಾಡಿದ್ದಾರೆ. ಬಿಜೆಪಿಯವರ ಸಭೆಗಳೂ ಆಗಿವೆ. ರೈತರ ಕಾನ್ಫರೆನ್ಸ್‌ಗಳೂ ಆಗಿವೆ. ವರ್ಲ್ಡ್ ಕಾನ್ಫರೆನ್ಸ್, ಐಟಿ ಕಾನ್ಫರೆನ್ಸ್ ಗಳೂ ಆಗಿ ಹೋಗಿವೆ. ಪ್ರಪಂಚದಲ್ಲಿ ಯಾವ್ಯಾವ ಕಾನ್ಫರೆನ್ಸ್ ನಡೆಯಬೇಕೋ ಅವೆಲ್ಲಾ ಬೆಂಗಳೂರಿನಲ್ಲಿ, ಕರ್ನಾಟಕ ರಾಜ್ಯದಲ್ಲಿ ನಡೆದಿದೆ. ಈ ಎಲ್ಲಾ ಸಭೆಗಳಲ್ಲಿ ಸಾವಿರಾರು ಜನ ಸೇರಿದ್ದಾರೆ. ಆದರೆ ಈ ಕಾನ್ಫರೆನ್ಸ್‌ಗಳಿಂದ ರಾಜ್ಯದಲ್ಲಿ ಒಂದೇ ಒಂದು ಅಹಿತಕರ ಘಟನೆ ನಡೆದಿಲ್ಲ. ಆದರೆ ವಿಶ್ವ ಹಿಂದೂ ಪರಿಷತ್‌ನವರು ಏನು ಮಾಡುತ್ತಾರೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ.
ವಿಶ್ವ ಹಿಂದೂ ಪರಿಷತ್‌ನ ಮುಖಂಡರು ತ್ರಿಶೂಲ ಹಂಚಿ ಸಮಾಜವನ್ನು ಏನು ಮಾಡಲು ಹೊರಟಿದ್ದಾರೆ? ಸಂಘಟನೆಯ ಹೆಸರಲ್ಲಿ ಮೆರವಣಿಗೆ ಮಾಡಿ ವಿಶ್ವ ಹಿಂದೂ ಪರಿಷತ್ ಏನು ಮಾಡುತ್ತದೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ವಿಶ್ವ ಹಿಂದೂ ಪರಿಷತ್ ಪ್ರಚೋದನೆ ಮಾಡಿ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದೆ. ವಿಶ್ವ ಹಿಂದೂ ಪರಿಷತ್ ಎನ್ನುವುದು ಸಮಾಜದಲ್ಲಿ ಒಡಕು ಉಂಟು ಮಾಡಿ ನಮ್ಮ ದೇಶವನ್ನು ಛಿದ್ರ ಛಿದ್ರ ಮಾಡುವ ಶಕ್ತಿಗಳು. ನಾವೆಲ್ಲ ಒಂದು ಎಂದು ಹೇಳುತ್ತಲೇ ಈ ದೇಶವನ್ನು ಛಿದ್ರ ಛಿದ್ರ ಮಾಡಿದರು. ಇಂಥ ವಿಚ್ಛಿದ್ರಕಾರಿ ಶಕ್ತಿಗಳಿಗೆ ನಮ್ಮ ಕರ್ನಾಟಕ ಸರಕಾರ ಆಸ್ಪದವನ್ನು ಕೊಡುವುದಿಲ್ಲ. ಅದು ಏನೇ ಬರಲಿ, ಯಾವ ಬೆಲೆಯನ್ನೂ ಕೂಡ ಕೊಡಲು ನಾವು ತಯಾರಿದ್ದೇವೆ. ಇಂತಹ ಮೆರವಣಿಗೆ, ಸಭೆ, ಭಾಷಣಕ್ಕೆ ಆಸ್ಪದ ಕೊಡುವುದಿಲ್ಲ. ಆದೇನಾದರೂ ಆಗಲಿ.
ಎಸ್. ಸುರೇಶ್ ಕುಮಾರ್:
ಮಾನ್ಯ ಮಂತ್ರಿಗಳಿಗೆ ಒಂದು ಪ್ರಶ್ನೆ. ಈ ದೇಶವನ್ನು ಛಿದ್ರ ಮಾಡಿದವರು ಯಾರು?
ಮಲ್ಲಿಕಾರ್ಜುನ ಖರ್ಗೆ:
ಪ್ರವೀಣ್ ಭಾಯಿ ತೊಗಾಡಿಯಾ ಕರ್ನಾಟಕಕ್ಕೆ ಯಾಕೆ ಬರುತ್ತಿದ್ದಾರೆ? ಕರ್ನಾಟಕದಲ್ಲೇನಾದರೂ ಕ್ರಿಕೆಟ್ ಮ್ಯಾಚ್ ನಡೀತಿದ್ಯಾ? ಅವರೇನು ಮ್ಯಾಚ್ ನೋಡೋಕೆ ಬರ್ತಿಲ್ಲ. ಅವರು ಬರ್ತಿರೋದು ಕರ್ನಾಟಕಕ್ಕೆ ಬೆಂಕಿ ಹಚ್ಚಲು!.
ಈ ದೇಶದ ಬಗ್ಗೆ ನಮಗೆ ಅಭಿಮಾನ ಇದೆ. ಹಾಗಾಗಿ ಈ ದೇಶವನ್ನು ಯಾರೋ ಬೆಂಕಿ ಹಚ್ಚಿ ಹಾಳು ಮಾಡಲು ನಾವು ಬಿಡುವುದಿಲ್ಲ. ತೊಗಾಡಿಯಾರವರಂತೆ ಇಲ್ಲಿಗೆ ಬಂದು ಯಾರೂ ಕೂಡಾ ಬಂದು ಬೆಂಕಿ ಹಚ್ಚುವಂತಹ ಕೆಲಸವನ್ನು ಯಾರೂ ಮಾಡಬಾರದು. ತೊಗಾಡಿಯಾ ಕಾರ್ಯಕ್ರಮದಲ್ಲಿ ತ್ರಿಶೂಲ ಹಂಚುತ್ತಾರಂತೆ. ಏನಿದು? ಬೀದಿ ಬೀದಿಯಲ್ಲಿ, ಜಿಲ್ಲೆ ಜಿಲ್ಲೆಯಲ್ಲಿ, ತಾಲೂಕು ತಾಲೂಕು ಅಡ್ಡಾಡಿ ಜನರಿಗೆ ಪ್ರಚೋದನೆ ಮಾಡಿ ಮತೀಯ ಭಾವನೆಯನ್ನು ಕೆರಳಿಸುವಂಥವರಿಗೆ ಕರ್ನಾಟಕದಲ್ಲಿ ಸ್ಥಾನವಿಲ್ಲ. ನಾವು ಅಂತವರನ್ನು ನಮ್ಮ ರಾಜ್ಯಕ್ಕೆ ಬರಲು ಬಿಡುವುದಿಲ್ಲ. ಅಧಿಕಾರಿಗಳು ಸರಿಯಾಗಿಯೇ ಪ್ರವೀಣ್ ಭಾಯಿ ತೊಗಾಡಿಯಾಗೆ ನಿರ್ಬಂಧ ಹಾಕಿದ್ದಾರೆ.
(ಗೊಂದಲ)
(ಬಿಜೆಪಿ ಸದಸ್ಯರು ಬಾವಿಯಲ್ಲಿ ಘೋಷಣೆ ಕೂಗುತ್ತಿದ್ದರು)
ಮಲ್ಲಿಕಾರ್ಜುನ ಖರ್ಗೆ:
ಶಾಂತಿ ಕದಡುವ ಸಂಘಟನೆ ಮತ್ತು ವ್ಯಕ್ತಿಗಳ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣವಾದ ಅಧಿಕಾರವಿದೆ. ಲಾ ಆಂಡ್ ಆರ್ಡರ್ ಪರಿಸ್ಥಿತಿಯನ್ನು ನೋಡಿಕೊಂಡು ಅವರು ಆದೇಶ ಹೊರಡಿಸಿದ್ದಾರೆ. ಸದನದಲ್ಲಿ ಪ್ರತಿಯೊಂದನ್ನೂ ಪ್ರಶ್ನೆ ಮಾಡಿಕೊಂಡು ಹೋದರೆ ಹೇಗೆ? ಈ ರೀತಿ ರಾಜ್ಯಕ್ಕೆ, ಜಿಲ್ಲೆಗೆ ಬೆಂಕಿ ಹಚ್ಚುವ ಜನರು, ತ್ರಿಶೂಲ ಸೇರಿದಂತೆ ಯಾವುದೇ ಆಯುಧ ಹಿಡಿದುಕೊಂಡು ಮೆರವಣಿಗೆ ಮಾಡುವ ಜನರಿಗೆ ನಾವು ಅವಕಾಶ ಕೊಡುವುದಿಲ್ಲ. ಹಾಗಾಗಿ ನಿರ್ಬಂಧ ಹಿಂಪಡೆಯುವ ಪ್ರಶ್ನೆಯೇ ಇಲ್ಲ.







