ಖರ್ಗೆ ರ್ಯಾಲಿ ನಡೆಸಿದ 'ಸ್ಥಳ ಶುದ್ಧೀಕರಣ' | ರೋಗಗ್ರಸ್ತ ಜಾತಿ ಮನಸ್ಥಿತಿಗೆ ಕೈಗನ್ನಡಿ

ಮಲ್ಲಿಕಾರ್ಜುನ ಖರ್ಗೆ (Photo: PTI)
ಮಾನ್ಯರೇ,
ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಬಹಿರಂಗ ಸಭೆ ನಡೆಸಿದ ಸ್ಥಳವನ್ನು ಕೋಮುವಾದಿ ಸಂಘಟನೆಯವರು 'ಶುದ್ಧೀಕರಣ'ದ ಹೆಸರಿನಲ್ಲಿ ಹವನ ನಡೆಸುವ ಮೂಲಕ ಅಸ್ಪೃಶ್ಯತೆಯ ಆಚರಣೆ ಮೆರೆದಿದ್ದಾರೆ. ಇದು ಸಂವಿಧಾನ ವಿರೋಧಿ ಮತ್ತು ನಾಗರಿಕ ವಿರೋಧಿ ನಡೆಯಾಗಿದ್ದು,ಅತ್ಯಂತ ಖಂಡನೀಯ ಘಟನೆಯಾಗಿದೆ.
3,000 ವರ್ಷಗಳಿಂದ ಚಾತುರ್ವರ್ಣ ಶ್ರೇಷ್ಠತೆಯ ಮಲವನ್ನು ತಲೆಯಲ್ಲಿ ತುಂಬಿಕೊಂಡ ಈ ದೇಶದ ಜನ ಇಂದಿಗೂ ಅದರಿಂದ ಹೊರಬರದಿರುವುದು ಇಲ್ಲಿನ ದುರಂತವೇ ಸರಿ.
ರಾಷ್ಟ್ರೀಯ ಪಕ್ಷದ ಹಿರಿಯ ನಾಯಕರೊಬ್ಬರಿಗೆ ಮಾಡಿರುವ ಈ ಅಗೌರವ ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅಗೌರವವಲ್ಲ ಮಾತ್ರವಲ್ಲ, ಜೊತೆಗೆ ಸಂವಿಧಾನಕ್ಕೆ ಮಾಡಿದ ಘನ ಘೋರ ಅವಮಾನ, ಅಪರಾಧ. ಇದೇ ರೀತಿ ಹಿಂದೆಯೂ ರಾಷ್ಟ್ರೀಯ ನಾಯಕ ಜಗಜೀವನ್ ರಾಮ್ ಅವರು ವಾರಣಾಸಿಯಲ್ಲಿ ಉದ್ಘಾಟಿಸಿದ ಪುತ್ಥಳಿಯನ್ನು ಈ ಮತಾಂಧರು ತೊಳೆದು ಅವಮಾನ ಮಾಡಿದ್ದರು. ಈಗ ಮತ್ತೆ ಅದನ್ನೇ ಮುಂದುವರಿಸಿ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರಿಗೆ ಅವಮಾನ ಮಾಡಲಾಗಿದೆ. ಇಬ್ಬರೂ ದಲಿತ ಸಮುದಾಯದವರು ಆಗಿರುವುದು ಇಲ್ಲಿನ ರೋಗಗ್ರಸ್ತ ಜಾತಿ ಮನಸ್ಥಿತಿಯನ್ನು ತೋರಿಸುತ್ತದೆ.
ನಮ್ಮ ದೇಶ ಎಷ್ಟು ಶತಮಾನಗಳ ಹಿಂದೆ ಇದೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ. ಜಗತ್ತಿನ ಎದುರು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಕರೆದುಕೊಳ್ಳುವ ಘನತೆಯನ್ನು ನಾವು ಉಳಿಸಿಕೊಂಡಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟವಿದು.
ಮೊದಲು ಈ ದೇಶದಲ್ಲಿ ತುಂಬಿಕೊಂಡಿರುವ ಜಾತಿ ಶ್ರೇಷ್ಠತೆಯ ವ್ಯಸನದ ಕೊಳೆಯನ್ನು ಗುಡಿಸಿ ಎಸೆಯದ ಹೊರತು ದೇಶಕ್ಕೆ ಮುಕ್ತಿ ಇಲ್ಲ. ನಮ್ಮ ಸ್ವಾತಂತ್ರಕ್ಕೆ ಅರ್ಥವಿಲ್ಲ ಎಂದು ನಾವು ಭಾವಿಸುತ್ತೇವೆ.
ಈ ಹಿಂದೆ ನಮ್ಮ ರಾಜ್ಯದಲ್ಲೂ ಇಂತಹ ಘಟನೆಗಳು ನಡೆದ ಉದಾಹರಣೆಗಳಿವೆ. ಇವು ಈ ದೇಶ ಸನಾತನವಾದಿಗಳ ಆಡಂಬೋಲವಾಗುತ್ತಿರುವುದರ ಸೂಚನೆಯಾಗಿದ್ದು, ಇದನ್ನು ಪ್ರಜಾಪ್ರಭುತ್ವವನ್ನು ಗೌರವಿಸುವ ಯಾರೂ ಒಪ್ಪಲಾಗದು.
ಇಂಥ ಕೃತ್ಯಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾದುದು ಸರಕಾರದ ಆದ್ಯ ಕರ್ತವ್ಯ
-ಜಾಗೃತ ನಾಗರಿಕರು, ಕರ್ನಾಟಕದ ಪರವಾಗಿ
ಜಿ.ರಾಮಕೃಷ್ಣ
ಕೆ.ಮರಳುಸಿದ್ಧಪ್ಪ
ಎಸ್.ಜಿ.ಸಿದ್ದರಾಮಯ್ಯ
ಜಾಣಗೆರೆ ವೆಂಕಟರಾಮಯ್ಯ
ಮಾವಳ್ಳಿ ಶಂಕರ್
ಬಂಜಗೆರೆ ಜಯಪ್ರಕಾಶ್
ಬಿ.ಶ್ರೀಪಾದ ಭಟ್
ಕೆ.ಎಸ್.ವಿಮಲಾ
ಮೀನಾಕ್ಷಿ ಬಾಳಿ
ಟಿ.ಸುರೇಂದ್ರ
ವಸಂತ ರಾಜ
ವಸುಂಧರಾ ಭೂಪತಿ






