ರಾಜ್ಯದಲ್ಲೇ ಹೆಚ್ಚು ಪ್ರವಾಸಿತಾಣಗಳ ಜಿಲ್ಲೆ ಮಂಡ್ಯ

ಹುಲಿಕೆರೆ ಸುರಂಗ|ವೇಣುಗೋಪಾಲಸ್ವಾಮಿ ದೇವಸ್ಥಾನ
ಮಂಡ್ಯ: ಅಪ್ಪಟ ಕೃಷಿಕರ ಜಿಲ್ಲೆ ಮಂಡ್ಯ, ಪ್ರವಾಸಿತಾಣಗಳಿಗೂ ಹೆಸರಾಗಿದೆ. ವಿಶ್ವವಿಖ್ಯಾತ ಕೆಆರ್ಎಸ್ ಬೃಂದಾವನ, ಟಿಪ್ಪುವಿನ ಶ್ರೀರಂಗಪಟ್ಟಣ, ಏಷ್ಯಾದಲ್ಲೇ ಮೊದಲ ವಿದ್ಯುತ್ ಉತ್ಪಾದನಾ ಘಟಕ ಶಿವನಸಮುದ್ರ, ಹೀಗೆ ಪ್ರಮುಖ ಪ್ರವಾಸಿತಾಣಗಳು ಇಲ್ಲಿವೆ. ಇದೀಗ ಹೆಚ್ಚು ಪ್ರವಾಸಿತಾಣಗಳನ್ನು ಒಳಗೊಂಡಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕರ್ನಾಟಕ ಪ್ರವಾಸೋದ್ಯಮ ನೀತಿ 2024-2029ರಡಿ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳ ಸಂಖ್ಯೆ 106ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಮೊದಲಿಗೆ 34 ತಾಣಗಳು ಪ್ರವಾಸೋದ್ಯಮ ಇಲಾಖೆಯ ಪಟ್ಟಿಯಲ್ಲಿದ್ದವು. ಈಗ ಹೊಸದಾಗಿ 72 ತಾಣಗಳು ಸೇರ್ಪಡೆಯಾಗಿದ್ದು, ಅವುಗಳ ಪೈಕಿ ಮಧ್ಯ ಏಷ್ಯಾದ ಮೊದಲ ಭೂಗತ ನೀರಾವರಿ ಸುರಂಗ ಎನಿಸಿರುವ ಹುಲಿಕೆರೆ ಟನಲ್, ಕೆಆರ್ಎಸ್ ಅಣೆಕಟ್ಟೆಯ ಹಿನ್ನೀರಿನಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯ, ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮ ಸ್ಥಳಕ್ಕೆ ಪ್ರವಾಸಿ ತಾಣಗಳ ಮಾನ್ಯತೆ ಸಿಕ್ಕಿದೆ.
ಜಲಪಾತ, ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳು, ಕೋಟೆಕೊತ್ತಲಗಳು, ಹೊಯ್ಸಳರ ಶಿಲ್ಪ ಕಲೆಗೆ ಹೆಸರಾದ ದೇಗುಲಗಳು, ಜೈನ ಬಸದಿಗಳು, ಪಕ್ಷಿಧಾಮ, ಚಾರಣಕ್ಕೆ ಪೂರಕವಾದ ಬೆಟ್ಟಗುಡ್ಡಗಳು, ನದಿ-ಹಳ್ಳ-ತೊರೆ, ಕೆರೆ-ಕಟ್ಟೆ, ಅಣೆಕಟ್ಟೆಗಳು, ಜಲಾಶಯಗಳ ಹಿನ್ನೀರು ಪ್ರದೇಶ... ಹೀಗೆ ಜಿಲ್ಲೆಯಲ್ಲಿ ಹಲವಾರು ಆಕರ್ಷಣೀಯ ಸ್ಥಳಗಳಿವೆ. ಇವುಗಳ ಪೈಕಿ ಬಹುತೇಕ ಸ್ಥಳಗಳು ಪ್ರವಾಸೋದ್ಯಮ ಇಲಾಖೆಯ ಪ್ರವಾಸಿತಾಣಗಳ ಪಟ್ಟಿಗೆ ಸೇರಿರಲಿಲ್ಲ. ಈಗ ಬಹುತೇಕ ಅವುಗಳಿಗೂ ಮಾನ್ಯತೆ ದೊರಕಿದೆ.
ಹೊಸದಾಗಿ ಸೇರ್ಪಡೆಯಾದ ಸ್ಥಳಗಳು:
ಮಂಡ್ಯ ತಾಲೂಕು: ಸಾತನೂರು ಕಂಬದ ನರಸಿಂಹಸ್ವಾಮಿ, ಬಸರಾಳು ಮಲ್ಲಿಕಾರ್ಜುನಸ್ವಾಮಿ, ಹೊಳಲು ತಾಂಡವೇಶ್ವರ, ಹನಕೆರೆ ಆನಂದಭೈರವೇಶ್ವರ, ಕೆರಗೋಡು ಪಂಚಲಿಂಗೇಶ್ವರ ಮತ್ತು ಹುಲಿಕೆರೆ ಮಹದೇಶ್ವರಸ್ವಾಮಿ ದೇವಾಲಯಗಳು ಮತ್ತು ಎಚ್.ಕೋಡಿಹಳ್ಳಿ ಕೆರೆ.
ಮಳವಳ್ಳಿ ತಾಲೂಕು: ಕುಂದೂರು ಮಲ್ಲಿಕಾರ್ಜುನಸ್ವಾಮಿ, ಬಸವನಹಳ್ಳಿ ಬಸವೇಶ್ವರ, ಕಲ್ಲುವೀರನಹಳ್ಳಿ ಮತ್ತಿತಾಳೇಶ್ವರ, ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ, ಬೊಪ್ಪಗೌಡನಪುರ ಮಂಟೇಸ್ವಾಮಿ, ಯತ್ತಂಬಾಡಿ ಕಾಳೇಶ್ವರಸ್ವಾಮಿ ಹಾಗೂ ಗುಂಡಾಪುರ ಬೆಟ್ಟದರಸಮ್ಮ ದೇವಾಲಯಗಳು.
ಮದ್ದೂರು ತಾಲೂಕು: ವೈದ್ಯನಾಥಪುರದ ವೈದ್ಯನಾಥೇಶ್ವರ, ಅಬಲವಾಡಿ ತೋಪಿನ ತಿಮ್ಮಪ್ಪ, ಮದ್ದೂರು ಉಗ್ರ
ನರಸಿಂಹಸ್ವಾಮಿ, ಹೊಳೆ ಅಂಜನೇಯಸ್ವಾಮಿ, ಆತಗೂರು ಚಿಲ್ಲೇಶ್ವರ, ಹಳೇಹಳ್ಳಿ ಪ್ರಸನ್ನ ಲಕ್ಷ್ಮೀವೆಂಕಟೇಶ್ವರ, ಚಿಕ್ಕರಸಿನಕೆರೆ ಕಾಲಭೈರವೇಶ್ವರ, ಉಪ್ಪಿನಕೆರೆ ಪಟ್ಟಲದಮ್ಮ, ಚಿಕ್ಕಂಕನಹಳ್ಳಿ ನಂದಿಬಸವೇಶ್ವರ, ಮಾದನಾಯಕನಹಳ್ಳಿ ಸಿದ್ದರಾಮೇಶ್ವರ, ಕೆ.ಹೊನ್ನಲಗೆರೆ ಈಶ್ವರ ದೇವಾಲಯ, ನೀಲಕಂಠನಹಳ್ಳಿ ಬಸವೇಶ್ವರ, ಬ್ಯಾಡರಹಳ್ಳಿ ಆಂಜನೇಯಸ್ವಾಮಿ ಮತ್ತು ಕಾರ್ಕಹಳ್ಳಿ ಬಸವೇಶ್ವರ ದೇವಾಲಯ.
ಶ್ರೀರಂಗಪಟ್ಟಣ ತಾಲೂಕು: ಕನಕ ಬಂಡೆ, ಗೆಂಡೆಹೊಸಹಳ್ಳಿ ಪಕ್ಷಿಧಾಮ, ಗುಂಬಜ್, ಅಬೆದುಬೆ ಚರ್ಚ್, ಗ್ಯಾರಿಸನ್ ಸಮಾಧಿ, ಬ್ರಿಟಿಷ್ ಸಮಾಧಿ, ಮುಮ್ಮಡಿ ಕೃಷ್ಣರಾಜಒಡೆಯರ್ ಜನಿಸಿದ ಅರಮನೆ, ಆಂಗ್ಲ-ಮೈಸೂರುಯುದ್ಧದಲ್ಲಿ ಸೆರೆಸಿಕ್ಕಿದ ಮರಾಠ ಕೈದಿಗಳನ್ನು ಬಂಧನಲ್ಲಿರಿಸಿದ್ದ ಸ್ಥಳ, ಶ್ರೀರಂಗಪಟ್ಟಣ ಕೋಟೆ ಪ್ರದೇಶ, ಟಿಪ್ಪುವಿನ ಕಾಲದ ಕ್ಷಿಪಣಿ ಉಡಾವಣೆ ಪ್ರದೇಶ, ಮಂಡ್ಯ ಕೊಪ್ಪಲು ಗ್ರಾಮದ ಬೋರೇದೇವರ ದೇವಾಲಯ, ದೊಡ್ಡಗೌಡನ ಕೊಪ್ಪಲು ಗ್ರಾಮದ ಗೌತಮ ಕ್ಷೇತ್ರ.
ಪಾಂಡವಪುರ ತಾಲೂಕು: ಹಾರೋಹಳ್ಳಿಯ ಫ್ರೆಂಚ್ ಸೈನಿಕರ ಸಮಾಧಿ ಮತ್ತು ಶಾಸನ, ಕನ್ನಂಬಾಡಿಯ ವೇಣುಗೋಪಾಲಸ್ವಾಮಿ, ಹರವು ಗ್ರಾಮದ ಶ್ರೀರಾಮ, ಮಹದೇಶ್ವರಪುರದ ಮಹದೇಶ್ವರ, ಬೇಬಿಬೆಟ್ಟ-ಗವಿಮಠ, ತೊಣ್ಣೂರು ನಂಬಿನಾರಾಯಣಸ್ವಾಮಿ, ತೊಣ್ಣೂರು ಸೈಯದ್ ಸಾಲರ್ ಮಕ್ಸೂದ್ ಗಾಝಿ, ಚಿನಕುರುಳಿಯ ರಾಮೇಶ್ವರ, ಗುಮ್ಮನಹಳ್ಳಿಯ ಸಪ್ತಮಾತೃಕೆ ಮತ್ತು ದುದ್ದಘಟ್ಟದ ಅಂಜನೇಯಸ್ವಾಮಿ ದೇವಾಲಯ. ನಾಗಮಂಗಲ ತಾಲೂಕು: ಮುಳುಕಟ್ಟಮ್ಮ, ಸೌಮ್ಯಕೇಶವ, ಮುದ್ದೇನಹಟ್ಟಮ್ಮ, ಎಚ್.ಎನ್.ಕಾವಲ್ನ ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ಮತ್ತು ಬಿಂಡಿಗನವಿಲೆಯ ಚನ್ನಕೇಶವ ದೇವಾಲಯಗಳು ಹಾಗೂ ಪಿ.ನೇರಳೇಕೆರೆಯ ಬಸವನಕಲ್ಲು ಬೆಟ್ಟ.
ಕೆ.ಆರ್.ಪೇಟೆ ತಾಲೂಕು: ಅಗ್ರಹಾರಬಾಚಹಳ್ಳಿಯ ಹುಣಸೇಶ್ವರ ಮತ್ತು ಈಶ್ವರ, ಕಲ್ಲಹಳ್ಳಿಯ ಭೂವರಹನಾಥಸ್ವಾಮಿ, ಅಂಬಿಗರಹಳ್ಳಿಯ ತ್ರಿವೇಣಿ ಸಂಗಮ, ಅಕ್ಕಿಹೆಬ್ಬಾಳು ಗ್ರಾಮದ ಲಕ್ಷ್ಮೀನರಸಿಂಹ ಮತ್ತು ಕೊಂಕಣೇಶ್ವರ, ಗೋವಿಂದನಹಳ್ಳಿಯ ಪಂಚಲಿಂಗೇಶ್ವರ, ಕಿಕ್ಕೇರಿಯ ಕಿಕ್ಕೇರಮ್ಮ, ಸಾಸಲು ಗ್ರಾಮದ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ, ಅಫಲಯದ ಮಲ್ಲೇಶ್ವರಸ್ವಾಮಿ, ಸಂತೇಬಾಚಹಳ್ಳಿಯ ಮಹಾಲಿಂಗೇಶ್ವರ ಬಿಲ್ಲೇನಹಳ್ಳಿಯ ಗವಿರಂಗಪ್ಪ, ಸಿಂದಘಟ್ಟದ ಲಕ್ಷ್ಮೀನಾರಾಯಣಸ್ವಾಮಿ, ರಾಯಸಮುದ್ರದ ನಾರಾಯಣಗಿರಿ ದುರ್ಗ, ಮೋದೂರಿನ ರಾಮಲಿಂಗೇಶ್ವರ ಮತ್ತು ಹಾಲೇನಹಳ್ಳಿಯ ಶಂಭುಲಿಂಗೇಶ್ವರ ದೇವಾಲಯ.
ಇದುವರೆಗಿದ್ದ ಪ್ರವಾಸಿ ಸ್ಥಳಗಳು: ಕೆಆರ್ಎಸ್ ಜಲಾಶಯ ಮತ್ತು ಬೃಂದಾ ವನ, ರಂಗನತಿಟ್ಟು, ಹುಲಿಕೆರೆ ಟನಲ್, ಶ್ರೀರಂಗಪಟ್ಟಣ ನಿಮಿಷಾಂಭ ದೇವಾಲಯ, ದರಿಯಾ ದೌಲತ್, ಆರತಿ ಉಕ್ಕಡ, ಬಲಮುರಿ ಮತ್ತು ಎಡಮುರಿ, ಸಂಗಮ, ಗೋಸಾಯಿಘಾಟ್, ಕರಿಘಟ್ಟ, ಮಹದೇವಪುರ, ಶಿವನಸಮುದ್ರ, ಅಂತರವಳ್ಳಿ ಬೆಟ್ಟ, ಮುತ್ತತ್ತಿ, ಚಿಕ್ಕಮುತ್ತತ್ತಿ, ಆದಿಚುಂಚನಗಿರಿ, ಕಂಬದಹಳ್ಳಿ, ಕೋಟೆಬೆಟ್ಟ, ಮೇಲುಕೋಟೆ, ತೊಣ್ಣೂರು ಕೆರೆ, ಕುಂತಿಬೆಟ್ಟ, ಕೊಕ್ಕರೆ ಬೆಳ್ಳೂರು, ಶಿವಪುರ ಧ್ವಜಸತ್ಯಾಗ್ರಹ ಸೌಧ, ಅರೆತಿಪ್ಪೂರಿನ ಜೈನಬಸದಿ, ಹನುಮಂತನಗರದ ಎಕೋಪಾರ್ಕ್, ಗಾಣದಾಳು, ಹೊಸಬೂದನೂರು, ಗುತ್ತಲು ಕೆರೆ, ಕೋಣನಹಳ್ಳಿ ಕೆರೆ, ಹೊಸಹೊಳಲು, ಕಿಕ್ಕೇರಿ, ಹೇಮಗಿರಿ ಫಾಲ್ಸ್.
ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಖ್ಯಾತಿ ಮಂಡ್ಯ ಜಿಲ್ಲೆಗೆ ಸಿಕ್ಕಿದೆ. ಜಿಲ್ಲೆಯಲ್ಲಿ ಈವರೆಗೆ ಅಧಿಕೃತವಾಗಿ 34 ಪ್ರವಾಸಿ ತಾಣಗಳಿದ್ದವು. ಸರಕಾರ ಜನಾಕರ್ಷಣೆಯ ಪ್ರಮುಖ ಸ್ಥಳಗಳನ್ನು ಪಟ್ಟಿಮಾಡಿ ಕಳುಹಿಸುವಂತೆ ಸೂಚಿಸಿತ್ತು. ಅದರಂತೆ ಹಾಲಿ ಇದ್ದ ಸ್ಥಳಗಳ ಜತೆಗೆ 72 ಸ್ಥಳಗಳನ್ನು ಗುರುತಿಸಿ ಸರಕಾರಕ್ಕೆ ಕಳುಹಿಸಲಾಗಿತ್ತು. ಇದೀಗ ಒಟ್ಟು 106 ಸ್ಥಳಗಳು ಪ್ರವಾಸಿ ತಾಣಗಳ ಪಟ್ಟಿಸೇರಿವೆ. ಅನುದಾನ ಲಭ್ಯತೆ ಮೇರೆಗೆ ಈ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು.
-ಎಚ್.ಬಿ.ರಾಘವೇಂದ್ರ, ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಮಂಡ್ಯ







