ಮಂಗಳಗಂಗೋತ್ರಿಯಲ್ಲಿ ರಂಗು ಮೂಡಿಸಿದ ‘ಕಲಾದರ್ಪಣ’

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯ ವಿಜ್ಞಾನ ಸಂಕೀರ್ಣದ ಹೊರ ಆವರಣದ ಪ್ರಕೃತಿ ಸೌಂದರ್ಯದ ನಡುವೆ ಎರಡು ದಿನಗಳ ಕಾಲ ನಡೆದ ‘ಕಲಾದರ್ಪಣ’ ಭಾವಚಿತ್ರ ರಚನೆ ಹಾಗೂ ಸೃಜನಾತ್ಮಕ ಚಿತ್ರಕಲಾ ಶಿಬಿರವು ಕಲಾರಸಿಕರನ್ನು ಆಕರ್ಷಿತು. ಶಿಬಿರದಲ್ಲಿ ಖ್ಯಾತ ಕಲಾವಿದರ ಕುಂಚದಲ್ಲಿ ಅರಳಿದ ಬಣ್ಣ ಬಣ್ಣಗಳ ಕಲಾಕೃತಿಗಳು ಮಂಗಳಗಂಗೋತ್ರಿಯ ಆವರಣದಲ್ಲಿ ರಂಗುರಂಗಿನ ಬಣ್ಣದ ಲೋಕವನ್ನು ಸೃಷ್ಟಿಸಿದವು.
ಕಲಾ ಶಿಬಿರವನ್ನು ಮಂಗಳೂರು ವಿವಿಯ ಎನ್.ಜೆ. ಪಾವಂಜೆ ಲಲಿತಾ ಕಲಾ ಪೀಠ ಹಾಗೂ ಕರಾವಳಿ ಚಿತ್ರಕಲಾ ಚಾವಡಿ(ರಿ.), ಮಂಗಳೂರು ಅವರು ವಿನೂತನವಾಗಿ ಆಯೋಜಿಸುವ ಮೂಲಕ ಕಲಾ ಪ್ರೇಕ್ಷಕರ ಮನಗೆದ್ದರು.
ಮಂಗಳೂರು ವಿವಿಯಲ್ಲಿ ಜರುಗುವ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳು ಸಾಮಾನ್ಯವಾಗಿ ಸಭಾಂಗಣಗಳಲ್ಲಿ ನಡೆಯುತ್ತಿತ್ತು. ಆದರೆ ಈ ಚಿತ್ರಕಲಾ ಶಿಬಿರವು ವಿಜ್ಞಾನ ಸಂಕೀರ್ಣದ ಮುಂಭಾಗದ ಮರಗಿಡಗಳ ನೆರಳಿನಲ್ಲಿ ಆಯೋಜಿಸಿದ್ದು, ಕಲಾವಿದರ ಉತ್ಸಾಹವನ್ನೂ ಇಮ್ಮಡಿಗೊಳಿಸಿತ್ತು.
ಕಲಾಶಿಬಿರದಲ್ಲಿ ಮೂಡಿಬಂದ ಬಣ್ಣದ ಚಿತ್ತಾರ
ಎರಡು ದಿನಗಳ ‘ಕಲಾ ದರ್ಪಣ’ದಲ್ಲಿ ಭಾಗವಹಿಸಿದ್ದ ಹಿರಿಯ- ಕಿರಿಯ ಖ್ಯಾತ ಕಲಾವಿದರ ಕೈಯಲ್ಲಿ ಮೂಡಿ ಬಂದ ಭಾವಚಿತ್ರ, ಕಲಾಕೃತಿಗಳು ಕಲಾಪ್ರೇಮಿಗಳನ್ನು ಸುಂದರವಾದ ಬಣ್ಣದ ಲೊಕಕ್ಕೆ ಕರೆದೊಯ್ಯಿತು. ಯಕ್ಷಗಾನ ಸೇರಿದಂತೆ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳು, ಗ್ರಾಮೀಣ ಬದುಕಿನ ಸೊಗಡು, ಮರಗಿಡಗಳು, ಪರಿಸರ, ಪ್ರಕೃತಿ ಸೌಂದರ್ಯವನ್ನು ಬಿಂಬಿಸುವ ಚಿತ್ರಗಳು ಸೇರಿದಂತೆ ಬಗೆಬಗೆಯಲ್ಲಿ ಮೂಡಿಬಂದ ಕಲಾಕೃತಿಗಳು ಕಲಾವಿದರ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದ್ದವು.
ಖ್ಯಾತ ಕಲಾವಿದರ ಸಮ್ಮಿಳನ: ರಾಜ್ಯ, ರಾಷ್ಟ್ರ ಮಟ್ಟದ ಹಿರಿಯ ಕಲಾ ವಿದರು ಭಾಗವಹಿಸಿ ಕಲಾ ಶಿಬಿರಕ್ಕೆ ಹೊಸ ಮೆರುಗು ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಕಲಾವಿದರಾದ ರಮೇಶ್ ರಾವ್ ಉಡುಪಿ, ಬಾಬುರಾವ್ ನಾಡೋಣಿ, ಸೈಯದ್ ಆಸಿಫ್ ಅಲಿ, ಸಕು ಪಾಂಗಳ ಭಾಗವಹಿಸಿದ್ದರು. ಕರಾವಳಿ ಚಿತ್ರಕಲಾ ಚಾವಡಿಯ ಕಲಾವಿದ ರಾದ ಶರತ್ ಹೊಳ್ಳ, ಗಿಲಿಯಾಳ ಜಯರಾಮ ಭಟ್, ಗಣೇಶ್ ಸೋಮಯಾಜಿ, ಅನಂತ ಪದ್ಮನಾಭ ರಾವ್, ಮನೋರಂಜಿನಿ, ಸಪ್ನಾ ನೊರೋನ್ಹ, ಜಯಶ್ರೀ ಶರ್ಮ, ಖುರ್ಷಿದ್ ಯಾಕೂಬ್, ಡಾ.ಎಸ್.ಎಂ. ಶಿವಪ್ರಕಾಶ್, ಡಾ.ಸುಜೋತ ಧರ್ಮ, ರೂಪಾ ವಸುಂದರ ಆಚಾರ್ಯ, ನವೀನ್‌ಚಂದ್ರ ಬಂಗೇರ, ಡಾ.ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಶೀಘ್ರದಲ್ಲೇ ಮಂಗಳ ಬಯಲು ರಂಗ ವೇದಿಕೆ ಸಿದ್ಧ
ಪಾವಂಜೆ ಪೀಠವು ವಿಜ್ಞಾನ ಸಂಕೀರ್ಣದ ಮುಂಭಾಗದ ಪ್ರಾಕೃತಿಕ ಸೊಬಗಿನ ಮರಗಳ ನೆರಳಲ್ಲಿ ಆಯೋಜಿಸಿದ ಕಲಾ ಶಿಬಿರವನ್ನು ಕಂಡು ಸಂತಸಗೊಂಡ ಕುಲಪತಿ ಪ್ರೊ.ಪಿ.ಎಲ್.ಧರ್ಮ ಇದೇ ಸ್ಥಳವನ್ನು ಕಲಾ ಚಟುವಟಿಕೆಗಳಿಗೆ ಪೂರಕವಾಗಿ ‘ಮಂಗಳ ಬಯಲು ರಂಗ ವೇದಿಕೆ’ಯಾಗಿ ರೂಪಿಸಲಾಗುವುದು. ಇದಕ್ಕೆ ಅಗತ್ಯವಾದ ಕಾಮಗಾರಿಗಳು ಕೂಡಲೇ ಆರಂಭಿಸಲಾಗುವುದು ಎಂದರು.
ಒಟ್ಟಿನಲ್ಲಿ ಪಾವಂಜೆ ಪೀಠದ ಸಂಯೋಜಕ ಡಾ.ಧನಂಜಯ ಕುಂಬ್ಳೆ, ಚಿತ್ರಕಲಾ ಚಾವಡಿಯ ಡಾ.ಎಸ್. ಎಂ.ಶಿವಪ್ರಕಾಶ್ ಹಾಗೂ ಗಣೇಶ್ ಸೋಮಯಾಜಿ ನೇತೃತ್ವದಲ್ಲಿ ಕುಲಸಚಿವ ಕೆ.ರಾಜು ಮೊಗವೀರ ಅವರ ಹೊಸತನದ ಕಲ್ಪನೆಯಲ್ಲಿ ವಿವಿಯ ಅವರಣದಲ್ಲಿ ಮೂಡಿಬಂದ ಶಿಬಿರದಲ್ಲಿ ನೂರಾರು ಕಲಾ ಪ್ರೇಕ್ಷಕರು, ಕಲಾವಿದರು, ವಿದ್ಯಾರ್ಥಿಗಳು ಭಾಗವಹಿಸಿ ಕಲಾಸಕ್ತಿಯನ್ನು ಬೆಳೆಸುವ ಮೂಲಕ ಶಿಬಿರವು ಸಾರ್ಥಕತೆ ಕಂಡಿತು.
‘ಕಲಾದರ್ಪಣ’ ಕಲಾವಿದರು, ಕಲಾರಸಿಕರಿಗೆ ಕನ್ನಡಿಯಿದ್ದಂತೆ. ಎರಡು ದಿನಗಳ ಶಿಬಿರದಲ್ಲಿ ನೂರಾರು ಕಲಾಸಕ್ತರಿಗೆ ಕಲಿಯಲು ಅವಕಾಶ ವಾಯಿತು. ಪಾವಂಜೆ ಪೀಠದ ವತಿಯಿಂದ ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಲಾಗಿದೆ.
-ಡಾ.ಧನಂಜಯ ಕುಂಬ್ಳೆ, ಸಂಯೋಜಕ, ಎನ್.ಜೆ. ಪಾವಂಜೆ ಲಲಿತಾ ಕಲಾ ಪೀಠ
ಸುಮಾರು 40 ವರ್ಷಗಳಿಂದ ಚಿತ್ರಕಲೆ, ಶಿಲ್ಪಕಲೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ. ಕಲಾವಿದರು ಸೃಜನಾತ್ಮಕವಾಗಿ ಬೆಳೆಯಬೇಕು. ಕಲಾವಿದರು ಮತ್ತು ಕಲಾಸಕ್ತರು ಶಿಬಿರಕ್ಕೆ ಆಗಮಿಸಿ ಮೆರುಗು ನೀಡಿದ್ದಾರೆ.
-ಬಾಬುರಾವ್ ನಾಡೋಣಿ ಬೆಳಗಾವಿ, ಹಿರಿಯ ಕಲಾವಿದ







