Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯದ...

ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯದ ಅಭಿವೃದ್ಧಿ ಮೇಲೆ ‘ಮಂಗಳೂರು ಜಿಲ್ಲೆ’ ಚಪ್ಪಡಿ ಕಲ್ಲು!

► ಮೈಸೂರು ರಾಜ್ಯವನ್ನು ‘ಕರ್ನಾಟಕ’ ಮಾಡಿದ್ದೇಕೆ ? ► ನಗರ ಕೇಂದ್ರಿತ ಹೆಸರುಗಳ ಹಿಂದಿನ ರಾಜಕಾರಣವೇನು ? ►ಮಂಗಳೂರು ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಮ್ ಸಂಬಂಧಗಳಿಗೆ ನಿರ್ಬಂಧವಿಲ್ಲವೇ? ► ತುಳುನಾಡಿನ ಬಹುತ್ವ ವಿರೋಧಿ ‘ಮಂಗಳೂರು ಜಿಲ್ಲೆ’ ಅಭಿಯಾನ

ನವೀನ್ ಸೂರಿಂಜೆನವೀನ್ ಸೂರಿಂಜೆ10 July 2025 12:21 PM IST
share
ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯದ ಅಭಿವೃದ್ಧಿ ಮೇಲೆ ‘ಮಂಗಳೂರು ಜಿಲ್ಲೆ’ ಚಪ್ಪಡಿ ಕಲ್ಲು!
ಮಂಗಳೂರು ಮಲ್ಲಿಗೆ, ಮಂಗಳೂರು ಬನ್ಸ್, ಮಂಗಳೂರು ಇಟ್ಟಿಗೆ, ಮಂಗಳೂರು ಗೋಳಿಬಜೆಯ ಹೆಸರಿನ ಆಧಾರದಲ್ಲಿ ಬಹುತ್ವದ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡುವುದು ಮೂರ್ಖತನದ ಪರಮಾವಧಿ. ಇಂತಹ ಆಲೋಚನೆಗಳು ರಾಜಕಾರಣದ ಪೂರ್ವಸೂರಿಯ ಅರಿವಿಲ್ಲದ ಎಳಸು ವ್ಯಕ್ತಿಗಳಿಗೆ ಮಾತ್ರ ಬರುತ್ತದೆ. ಬಹುತ್ವದ ಕರ್ನಾಟಕ ರಾಜ್ಯಕ್ಕೆ ಯಾವ ನಗರಗಳ ಹೆಸರುಗಳನ್ನು ಇಟ್ಟಿಲ್ಲವೋ ಹಾಗೆಯೇ ಬಹುತ್ವದ ದಕ್ಷಿಣ ಕನ್ನಡ ಜಿಲ್ಲೆಗೆ ಯಾವ ನಗರದ ಹೆಸರುಗಳೂ ಅಗತ್ಯವಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ನಾಮಕರಣ ಮಾಡುವುದು ಎಂದರೆ ಬೆಳ್ತಂಗಡಿ ಸೇರಿದಂತೆ ಎಲ್ಲಾ ತಾಲೂಕುಗಳ ಮೇಲೆ ಚಪ್ಪಡಿ ಕಲ್ಲು ಎಳೆಯುವುದು ಎಂದರ್ಥ. ಈಗಾಗಲೇ ರಾಜಕೀಯವಾಗಿ, ಆರ್ಥಿಕವಾಗಿ ಅವಕಾಶ ವಂಚಿತವಾಗಿರುವ ಜಿಲ್ಲಾ ಕೇಂದ್ರದಿಂದ ದೂರವಿರುವ ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ, ಕಡಬ ತಾಲೂಕುಗಳನ್ನು ‘ಮಂಗಳೂರು ಜಿಲ್ಲೆ’ಯು ಇನ್ನಷ್ಟೂ ಅವಕಾಶ ವಂಚಿತರನ್ನಾಗಿಸಲಿದೆ.

ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಹಲವು ತಾಲೂಕುಗಳ ಒಂದು ಒಕ್ಕೂಟ. ತುಳುನಾಡು ಎಂದರೆ ಒಂದು ನಗರ ಕೇಂದ್ರಿತ ಜಿಲ್ಲೆಯಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷತೆ. ಮಂಗಳೂರಿನ ತುಳು ಭಾಷೆ, ಸಂಸ್ಕೃತಿಗೂ ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬದ ತುಳು ಭಾಷೆ ಮತ್ತು ಸಂಸ್ಕೃತಿಗೂ ವ್ಯತ್ಯಾಸಗಳಿವೆ. ಈ ವೈವಿಧ್ಯಮಯ ತುಳು ಭಾಷೆ, ಸಂಸ್ಕೃತಿಗಳ ಮೇಲೆ ‘ಮಂಗಳೂರು ಸಂಸ್ಕೃತಿ’ ಹೇರಿಕೆಯಾಗಲಿದೆ. ‘ತುಳು ಕೇಂದ್ರಿತ’ವಾಗಿ ನಡೆಯುತ್ತಿರುವ ಈ ಅಭಿಯಾನ ವಾಸ್ತವವಾಗಿ ತುಳುನಾಡಿನ ಬಹುತ್ವ ವಿರೋಧಿ ಅಭಿಯಾನವಾಗಿದೆ. ತುಳುನಾಡು ಎಂದರೆ ಬ್ಯಾರಿ, ಕೊಂಕಣಿ, ಕೊರ‌್ರ, ಕನ್ನಡ ಸೇರಿದಂತೆ ಬಹುಭಾಷೆಗಳಿಂದ ರೂಪಿತವಾದ ಪ್ರದೇಶ ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆತು ‘ತುಳು ಕೇಂದ್ರಿತ’ ಅಭಿಯಾನ ನಡೆಯುತ್ತಿದೆ. ಇದರ ಹಿಂದಿನ ಹುನ್ನಾರಗಳನ್ನೂ, ಅದು ಭವಿಷ್ಯದ ಮೇಲೆ ಬೀರುವ ಪರಿಣಾಮವನ್ನೂ ನಾವು ಅರ್ಥ ಮಾಡಿಕೊಳ್ಳಬೇಕು.

ತುಳುನಾಡಿಗೆ ಒಬ್ಬ ರಾಜ, ಒಂದು ರಾಜಧಾನಿ ಎಂಬುದು ಇತಿಹಾಸದಲ್ಲಿ ಇರಲೇ ಇಲ್ಲ. ಬಾರ್ಕೂರು ಅರಸರು, ಬಂಗರಸರು, ಅಜಿಲರು, ಚೌಟರು ಸೇರಿದಂತೆ ಹಲವು ರಾಜರುಗಳು ಕರಾವಳಿಯನ್ನು ಆಳ್ವಿಕೆ ಮಾಡಿದ್ದರೂ, ಅವರು ಅವರೂರುಗಳನ್ನೇ ರಾಜಧಾನಿ ಮಾಡಿಕೊಂಡಿದ್ದರು. ಉಳ್ಳಾಲ, ಬಾರ್ಕೂರು, ಬೆಳ್ತಂಗಡಿ, ಬಂಗಾಡಿ, ಮೂಡುಬಿದಿರೆ, ನಂದಾವರ, ಮೂಲ್ಕಿ, ಸುಳ್ಯ ಸೇರಿದಂತೆ ಹಲವು ರಾಜಧಾನಿಗಳು ಇದ್ದವು. ಟಿಪ್ಪು ಹುತಾತ್ಮರಾದ ಬಳಿಕ ಈ ರಾಜಧಾನಿಗಳು ಅವನತಿ ಹೊಂದಿದವು. ಹೈದರಲಿ ಮತ್ತು ಟಿಪ್ಪು ಸುಲ್ತಾನರು ‘ಕೆನರಾ ಜಿಲ್ಲೆ’ಯನ್ನು ಆಳ್ವಿಕೆ ಮಾಡುತ್ತಿದ್ದಾಗಲೂ ಅವರು ಮಂಗಳೂರು ಕೋಟೆಯಲ್ಲಿ ಕುಳಿತು ಆಳ್ವಿಕೆ ಮಾಡಲಿಲ್ಲ. ಹೈದರಲಿ ಮತ್ತು ಟಿಪ್ಪು ಸುಲ್ತಾನರ ಇನ್ನೊಂದು ವಿಶೇಷವೆಂದರೆ, ಇವರಿಬ್ಬರೂ ‘ಕೆನರಾ’ (ದಕ್ಷಿಣ ಕನ್ನಡ) ಜಿಲ್ಲೆಯ ಆಡಳಿತವನ್ನು ಮೂಡುಬಿದಿರೆಯ ಪೊನ್ನಚ್ಚಾರು ಮಠದಲ್ಲಿ ಕುಳಿತುಕೊಂಡು ಮಾಡುತ್ತಿದ್ದರು. ಹೈದರಲಿ ಮತ್ತು ಟಿಪ್ಪು ಸುಲ್ತಾನ್ ನಡೆಸಿದ ಸಾಮಂತ ರಾಜರುಗಳ ಎಲ್ಲಾ ಸಭೆಗಳು ನಡೆದಿದ್ದು ಮೂಡುಬಿದಿರೆಯ ಪೊನ್ನಚ್ಚಾರು ಮಠದಲ್ಲೇ ಹೊರತು ಅವರ ವ್ಯವಹಾರ ಕೇಂದ್ರವಾದ ಮಂಗಳೂರು ನಗರದಲ್ಲೋ, ಮಂಗಳೂರು ಕೋಟೆಯಲ್ಲೋ, ಮಂಗಳೂರು ಬಂದರಿನಲ್ಲೋ ಅಲ್ಲ. ಹಾಗಾಗಿ ‘ಮಂಗಳೂರು’ ಯಾವತ್ತೂ ತುಳುನಾಡಿನ ಇತಿಹಾಸದಲ್ಲೇ ಆಡಳಿತ ಕೇಂದ್ರವಾಗಿದ್ದಿಲ್ಲ. ಈಗ ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ನಾಮಕರಣ ಮಾಡುವುದು ತುಳುನಾಡಿನ ಇತಿಹಾಸಕ್ಕೆ ಬಗೆಯುವ ಅಪಚಾರವಾಗುತ್ತದೆ.

ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ಭೌಗೋಳಿಕವಾಗಿಯೂ ದಕ್ಷಿಣ ಕನ್ನಡದ ಎಲ್ಲಾ ತಾಲೂಕುಗಳು ಭಿನ್ನತೆಯನ್ನು ಹೊಂದಿದೆ. ಬಯಲು ಸೀಮೆ ಜಿಲ್ಲೆಗಳಂತೆ ಇಡೀ ಜಿಲ್ಲೆ ಒಂದೇ ಭೌಗೋಳಿಕ ಸ್ಥಿತಿಯನ್ನು ದಕ್ಷಿಣ ಕನ್ನಡ ಜಿಲ್ಲೆ ಹೊಂದಿಲ್ಲ. ಹಾಗಾಗಿಯೇ ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನ ಹಲವಾರು ಗ್ರಾಮಗಳು ಇನ್ನೂ ಕುಗ್ರಾಮಗಳ ಸ್ಥಿತಿಯಲ್ಲಿದೆ. ಮಂಗಳೂರು ನಗರ ಕೇಂದ್ರಿತ ಅಭಿವೃದ್ಧಿ ನೋಟವು ಬೆಳ್ತಂಗಡಿ, ಸುಳ್ಯ, ಕಡಬವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಆಡಳಿತ ವಿಕೇಂದ್ರೀಕರಣಗೊಂಡಿದ್ದರೂ ನಗರ ಕೇಂದ್ರಿತ ಮನಸ್ಥಿತಿಯಿಂದಾಗಿ ಬೆಳ್ತಂಗಡಿ, ಸುಳ್ಯ, ಕಡಬದ ಹಳ್ಳಿಗಳಿಗೆ ಆಡಳಿತದ ಗಮನ ಅಷ್ಟಕ್ಕಷ್ಟೆ. ಆ ಕಾರಣದಿಂದಲೇ ಬೆಳ್ತಂಗಡಿಯಲ್ಲಿ ಕುಸಿದು ಬಿದ್ದ ಮೂರ್ನಾಲ್ಕು ಸೇತುವೆಗಳನ್ನು ಇನ್ನೂ ಪುನರ್ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ನಗರ ಕೇಂದ್ರಿತ ಅಭಿವೃದ್ಧಿಯಿಂದಾಗಿಯೇ ಇನ್ನೂ ಹಲವು ಗ್ರಾಮಗಳಲ್ಲಿ ಆಸ್ಪತ್ರೆಗಳಿಗೆ ಜನರನ್ನು ಹೊತ್ತುಕೊಂಡು ಹೋಗಬೇಕಾದ, ನದಿ ದಾಟಬೇಕಾದ ಸ್ಥಿತಿ ಇದೆ. ದಕ್ಷಿಣ ಕನ್ನಡ ಜಿಲ್ಲೆ ಎಂಬ ವಿಕೇಂದ್ರೀಕರಣ ಸೂಚಕ ಹೆಸರಿದ್ದಾಗ್ಯೂ ಅನುದಾನ, ಕಣ್ಣೋಟಗಳು ಈ ಗ್ರಾಮಗಳನ್ನು ತಲುಪಿಲ್ಲ ಎಂದರೆ, ಮಂಗಳೂರು ನಗರ ಕೇಂದ್ರಿತವಾಗಿ ಜಿಲ್ಲೆಯ ಹೆಸರು ಬದಲಾವಣೆಯಾದರೆ ಇನ್ನೆಂಥ ಸ್ಥಿತಿ ಬರಬಹುದು ಯೋಚಿಸಿ. ಇದಲ್ಲದೆ ಮಂಗಳೂರು ಜಿಲ್ಲೆ ಎನ್ನುವುದು ಪುತ್ತೂರು, ಬೆಳ್ತಂಗಡಿ ಸೇರಿದಂತೆ ಎಲ್ಲಾ ತಾಲೂಕುಗಳ ರಾಜಕೀಯ ಅವಕಾಶವನ್ನು ಕಸಿದುಕೊಳ್ಳುತ್ತದೆ. ರಾಜಕೀಯ ನೇಮಕಾತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ (quota, ಮೀಸಲು ಹಂಚಿಕೆ) ಎನ್ನುವುದಕ್ಕೂ, ಮಂಗಳೂರು ಕೋಟಾ ಎನ್ನುವುದಕ್ಕೂ ವ್ಯತ್ಯಾಸವಿದೆ. ಇದು ಯಾರಿಗೆ ಲಾಭ? ಯಾರಿಗೆ ನಷ್ಟ ಎಂಬುದಕ್ಕೆ ಪ್ರತ್ಯೇಕ ವಿವರಣೆ ಬೇಕಾಗಿಲ್ಲ.

ಮೈಸೂರು ರಾಜ್ಯ ಎಂಬ ಹೆಸರನ್ನು ‘ಕರ್ನಾಟಕ ರಾಜ್ಯ’ ಎಂದು ನಾಮಕರಣ ಮಾಡಲು ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಸುತಾರಾಂ ಒಪ್ಪಿರಲಿಲ್ಲ. ‘‘ಮೈಸೂರು ರಾಜ್ಯ ಎಂಬ ಹೆಸರಿಗೆ ಐತಿಹಾಸಿಕ ಹಿನ್ನೆಲೆಯಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಾವು ಮೈಸೂರು ರಾಜ್ಯವೆಂದು ಗುರುತಿಸಲ್ಪಟ್ಟಿದ್ದೇವೆ. ಶಾಸನಗಳೆಲ್ಲವೂ ಮೈಸೂರು ರಾಜ್ಯದ ಹೆಸರಿನಲ್ಲಿದೆ. ಒಡೆಯರ್, ಟಿಪ್ಪು, ಬ್ರಿಟಿಷರು ಕೂಡಾ ಮೈಸೂರು ರಾಜ್ಯ ಎಂದು ಕರೆದಿದ್ದರು. ರಾಜ್ಯ, ರಾಷ್ಟ್ರದ ಗೆಜೆಟಿಯರ್‌ನಲ್ಲಿ ಮೈಸೂರು ರಾಜ್ಯದ ಹೆಸರಿದೆ. ಜನಪದ, ಇತಿಹಾಸ, ವರ್ತಮಾನದಲ್ಲಿ ಮೈಸೂರು ರಾಜ್ಯ ಎಂಬುದು ಅಜರಾಮರ ಆಗಿರುವುದರಿಂದ ಮೈಸೂರು ರಾಜ್ಯ ಎಂಬ ಹೆಸರೇ ಇರಲಿ’’ ಎಂದು ಬಲವಾಗಿ ವಾದಿಸುತ್ತಲೇ ಬರುತ್ತಾರೆ. ಆದರೆ ವಾಟಾಳ್ ನಾಗರಾಜ್ ಮತ್ತು ಸಿಪಿಐ, ಸಿಪಿಎಂ ಶಾಸಕರುಗಳು ರಾಜಪ್ರಭುತ್ವವನ್ನು ಸಂಕೇತಿಸುವ ಮೈಸೂರು ರಾಜ್ಯದ ಹೆಸರನ್ನು ಬಲವಾಗಿ ವಿರೋಧಿಸುತ್ತಾರೆ. ಮೈಸೂರು ರಾಜ್ಯದ ಅಸೆಂಬ್ಲಿಯಲ್ಲೇ ಈ ಬಗ್ಗೆ ಚರ್ಚೆಗಳು ನಡೆಯುತ್ತದೆ. ‘‘ಒಂದು ಜಿಲ್ಲೆ/ನಗರದ ಹೆಸರನ್ನು ರಾಜ್ಯಕ್ಕೆ ಇಟ್ಟರೆ ಅದು ರಾಜ್ಯದ ಬಹುಸಂಸ್ಕೃತಿಯನ್ನು ಕೊಲ್ಲುತ್ತದೆ. ಮೈಸೂರಿನ ಸಾಂಸ್ಕೃತಿಕ ಶ್ರೀಮಂತಿಕೆ, ಇತಿಹಾಸವನ್ನು ಗೌರವಿಸೋಣ. ಹಾಗಂತ ಅದನ್ನು ರಾಜ್ಯದ ಇತರ ಜಿಲ್ಲೆಗಳ ಸಂಸ್ಕೃತಿ, ಇತಿಹಾಸಕ್ಕಿಂತ ಶ್ರೇಷ್ಠ ಎನ್ನಲಾಗುವುದಿಲ್ಲ. ನಗರದ ಹೆಸರನ್ನು ರಾಜ್ಯಕ್ಕೆ ಇಟ್ಟರೆ ಆ ನಗರದ ಸಂಸ್ಕೃತಿಯೇ ರಾಜ್ಯದ ಸಂಸ್ಕೃತಿಯಾಗುವ ಅಪಾಯವಿದೆ. ಹಾಗಾಗಿ ರಾಜ್ಯವನ್ನು ‘ಕರ್ನಾಟಕ ರಾಜ್ಯ’ ಎಂದು ಬದಲಾಯಿಸಬೇಕು’’ ಎಂದು ಪಟ್ಟು ಹಿಡಿಯುತ್ತಾರೆ. ಅಂತಿಮವಾಗಿ ದೇವರಾಜ ಅರಸುರವರು ಕರ್ನಾಟಕ ರಾಜ್ಯ ಎಂಬ ಹೆಸರಿನ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸುತ್ತಾರೆ. ಇದನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯಿಸಿ ಓದಬೇಕು.

ಮೈಸೂರಿಗೆ ನೂರಾರು ಶಾಸನ, ಇತಿಹಾಸ, ಮೈಸೂರು ಅಸೆಂಬ್ಲಿ, ಮೈಸೂರು ಕೌನ್ಸಿಲ್, ವಿಶ್ವವಿಖ್ಯಾತ ಅರಮನೆ, ನೂರಾರು ಗೆಜೆಟಿಯರ್‌ಗಳ ಆಧಾರ ಇದ್ದರೂ ಬಹುತ್ವದ ರಾಜ್ಯದಿಂದ ‘ಮೈಸೂರು ರಾಜ್ಯ’ ಎಂಬ ಹೆಸರನ್ನು ಕಿತ್ತು ಹಾಕಲಾಯಿತು. ಅಂತದರಲ್ಲಿ ಮಂಗಳೂರು ಮಲ್ಲಿಗೆ, ಮಂಗಳೂರು ಬನ್ಸ್, ಮಂಗಳೂರು ಇಟ್ಟಿಗೆ, ಮಂಗಳೂರು ಗೋಳಿಬಜೆಯ ಹೆಸರಿನ ಆಧಾರದಲ್ಲಿ ಬಹುತ್ವದ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡುವುದು ಮೂರ್ಖತನದ ಪರಮಾವಧಿ. ಇಂತಹ ಆಲೋಚನೆಗಳು ರಾಜಕಾರಣದ ಪೂರ್ವಸೂರಿಯ ಅರಿವಿಲ್ಲದ ಎಳಸು ವ್ಯಕ್ತಿಗಳಿಗೆ ಮಾತ್ರ ಬರುತ್ತದೆ. ಬಹುತ್ವದ ಕರ್ನಾಟಕ ರಾಜ್ಯಕ್ಕೆ ಯಾವ ನಗರಗಳ ಹೆಸರುಗಳನ್ನು ಇಟ್ಟಿಲ್ಲವೋ ಹಾಗೆಯೇ ಬಹುತ್ವದ ದಕ್ಷಿಣ ಕನ್ನಡ ಜಿಲ್ಲೆಗೆ ಯಾವ ನಗರದ ಹೆಸರುಗಳೂ ಅಗತ್ಯವಿಲ್ಲ.

ಮಂಗಳಾದೇವಿ ದೇವಸ್ಥಾನ ಇರುವುದರಿಂದ ಮಂಗಳೂರು ಜಿಲ್ಲೆ ಎಂಬ ಹೆಸರೇ ಸೂಕ್ತ ಎಂದು ಈಗಾಗಲೇ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ. ಮಂಗಳೂರಿಗೂ ಮಂಗಳಾದೇವಿ ದೇವಸ್ಥಾನಕ್ಕೂ ಏನು ಸಂಬಂಧ? ಜಿಲ್ಲೆಯ ಹೆಸರಿಗೆ ಧಾರ್ಮಿಕ ಲೇಪನ ಕೊಡುವ ಅಗತ್ಯವಾದರೂ ಏನಿದೆ? ಭಾಷೆ ಮತ್ತು ನೆಲದ ಅಸ್ಮಿತೆಯ ಆಧಾರದಲ್ಲಿ ಜಿಲ್ಲೆ/ಪ್ರದೇಶದ ಹೆಸರುಗಳು ಇರಬೇಕು ಎಂಬುದೇ ಅಭಿಯಾನದ ಪ್ರಾಮಾಣಿಕ ಆಶಯವಾಗಿದ್ದರೆ ಜಿಲ್ಲೆಯ ಹೆಸರಿಗೆ ಧರ್ಮವನ್ನು ಥಳಕು ಹಾಕಬಾರದು. ತುಳುನಾಡಿನ ಅಸ್ಮಿತೆ(ಐಡೆಂಟಿಟಿ) ಮತ್ತು ಕೋಮುವಾದ/ಜಾತಿವಾದ ಎಂದಿಗೂ ಜೊತೆಜೊತೆಗೇ ಇರಲು ಸಾದ್ಯವಿಲ್ಲ. ಹಲವು ಭಾಷೆಗಳು, ಹಲವು ಸಂಸ್ಕೃತಿಗಳು, ವಿಭಿನ್ನ ಜನಪದ ಐತಿಹ್ಯಗಳು ಮತ್ತು ಶ್ರೀಮಂತ ಇತಿಹಾಸವೇ ತುಳುನಾಡಿನ ಅಸ್ಮಿತೆಯಾಗಿದೆ. ಧರ್ಮಾಧಾರಿತ ಚಿಂತನೆ, ಪ್ರತ್ಯೇಕತಾವಾದ, ವಿಭಜನೆ, ಮತೀಯ ಸಂಘರ್ಷಗಳು ತುಳುನಾಡಿನ ಐಡೆಂಟಿಟಿಯನ್ನೇ ನಾಶ ಮಾಡುತ್ತಿದೆ. ಹಾಗಾಗಿ ನಾವು ಹೆಸರು ಬದಲಾವಣೆಗೂ ಮುನ್ನ ನಮ್ಮ ತುಳುನಾಡಿನ ಐಡೆಂಟಿಟಿಯನ್ನು ಉಳಿಸಿಕೊಳ್ಳಬೇಕು. ದಕ್ಷಿಣ ಕನ್ನಡದ ಹೆಸರು ಬದಲಾವಣೆ ಮಾಡಲು ಒಟ್ಟು ಸೇರಿದ ಕಾಂಗ್ರೆಸ್, ಬಿಜೆಪಿಯ ಸಣ್ಣಪುಟ್ಟ ರಾಜಕಾರಣಿಗಳು ಕೋಮು ಸಂಘರ್ಷದ ಸಂದರ್ಭದಲ್ಲಿ ಒಟ್ಟಾಗಿ ‘ತುಳುನಾಡಿನ ಅಸ್ಮಿತೆ ಉಳಿಸೋಣ’ ಎಂದು ಒಟ್ಟು ಸೇರಿದ ಉದಾಹರಣೆ ಇದೆಯೇ? ಹೊಸ ಮಂಗಳೂರು ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಮ್ ಹುಡುಗ, ಹುಡುಗಿ ಕೈ ಕೈ ಹಿಡಿದುಕೊಂಡು ನಗರದಲ್ಲಿ ಓಡಾಡುವ ಸ್ವಾತಂತ್ರ್ಯ ಇರುತ್ತದೆಯೇ? ಹೊಸ ಮಂಗಳೂರು ಜಿಲ್ಲೆಯಲ್ಲಿ ಅಶ್ರಫ್, ರಹಮಾನ್‌ರಂತಹ ಅಮಾಯಕರು ಪ್ರಾಣ ಕಳೆದುಕೊಳ್ಳುವ, ಹಿಂದುಳಿದ ವರ್ಗದ ಹುಡುಗರು ಕೊಲೆಯಾಗಿ, ಜೈಲು ಸೇರುವ ಪರಿಸ್ಥಿತಿಗಳು ಇಲ್ಲವಾಗುತ್ತದೆಯೇ? ಬಡತನ, ನಿರುದ್ಯೋಗ, ಮೋರಲ್ ಪೊಲೀಸಿಂಗ್, ನೇಮಕಾತಿಯಲ್ಲಿ ತಾರತಮ್ಯ, ಬೀಡಿ ಕಾರ್ಮಿಕರ ಸಮಸ್ಯೆಗಳು, ದಲಿತ, ಆದಿವಾಸಿಗಳ ಮೇಲಿನ ದೌರ್ಜನ್ಯ ಸಮಸ್ಯೆಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಎಂದು ಬದಲಾಯಿಸಿದಾಕ್ಷಣ ಪರಿಹಾರ ಕಾಣುತ್ತವೆಯೇ?

ತುಳುನಾಡು ಉಳಿಯಲು ಬೇಕಿರುವುದು ‘ತುಳುವಪ್ಪೆ ಜೋಕುಲೆಗು ಮಲ್ಲ ಪಾಲ್’ ಎಂಬ ಘೋಷ ವಾಕ್ಯದಲ್ಲಿ ನಡೆದ ಎಡ ಹೋರಾಟದ ಮಾದರಿಯೇ ಹೊರತು ಹೆಸರು ಬದಲಾವಣೆಯಲ್ಲ. ತುಳುವನ್ನು ಎಂಟನೇ ಪರಿಚ್ಛೇಧದಲ್ಲಿ ಸೇರಿಸಲು ಕಾಸರಗೋಡು ಸಿಪಿಐಎಂ ಸಂಸದ ಕರುಣಾಕರ್ ಅವರು ದೇಶದ ಸಂಸತ್ತಿನಲ್ಲಿ ದೀರ್ಘ ಭಾಷಣ ಮಾಡಿದಾಗ ಕರಾವಳಿ ಜಿಲ್ಲೆಗಳ ಯಾವ ಸಂಸದರೂ ಕನಿಷ್ಠ ಮೇಜು ಕುಟ್ಟುವ ಔದಾರ್ಯವನ್ನೂ ತೋರುವುದಿಲ್ಲ. ತುಳುನಾಡಿಗೆ ಬೇಕಾಗಿರುವುದು ಕುರುಣಾಕರನ್ ಮಾದರಿಯ ರಾಜಕಾರಣವೇ ಹೊರತು ಬನ್ಸ್, ಗೋಳಿಬಜೆ ಮಾದರಿಯ ರಾಜಕಾರಣವಲ್ಲ. ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯ ವಲಯದಲ್ಲಿ ಸಂಪನ್ನವಾಗಿರುವ ತುಳು ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾಗಲು ದಕ್ಷಿಣ ಕನ್ನಡ ಜಿಲ್ಲೆಯ ರಾಜಕಾರಣಿಗಳು ಕಾರಣವೇ ಹೊರತು ದಕ್ಷಿಣ ಕನ್ನಡ ಎಂಬ ಹೆಸರಲ್ಲ! ಈ ರಾಜಕಾರಣಿಗಳ ವಿರುದ್ಧ ಹೋರಾಡಿ ತುಳುವರ ಹಕ್ಕು ದಕ್ಕಿಸಿಕೊಳ್ಳಲಾಗದವರು ಮಾತ್ರ ಜಿಲ್ಲೆಯ ಹೆಸರು ಬದಲಾವಣೆ ಮಾಡಿ ಎಂದು ಆಗ್ರಹಿಸಬಹುದು.

ಸಾಂಸ್ಕೃತಿಕವಾಗಿ, ಜನಪದ ಐತಿಹ್ಯವಾಗಿ, ಇತಿಹಾಸವಾಗಿಯೂ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಾಯಿಸುವುದು ‘ಬಹುತ್ವದ ತುಳುನಾಡು’ಗೆ ಮಾಡುವ ಅಪಚಾರವಾಗುತ್ತದೆ. ಆಡಳಿತಾತ್ಮಕವಾಗಿ ದಕ್ಷಿಣ ಕನ್ನಡ ಎಂಬ ತಾಲೂಕುಗಳ ಒಕ್ಕೂಟವನ್ನು ಮಂಗಳೂರು ನಗರ ಕೇಂದ್ರಿತ ಜಿಲ್ಲೆಯನ್ನಾಗಿಸುವುದು ಈಗಾಗಲೇ ಅವಕಾಶ ವಂಚಿತವಾಗಿರುವ ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯದ ಅಭಿವೃದ್ಧಿ ಮೇಲೆ ಚಪ್ಪಡಿ ಕಲ್ಲು ಎಳೆದಂತಾಗುತ್ತದೆ.

share
ನವೀನ್ ಸೂರಿಂಜೆ
ನವೀನ್ ಸೂರಿಂಜೆ
Next Story
X