ಮಾರುಕಟ್ಟೆಗೆ ಮಾವು ಲಗ್ಗೆ, ತರಾವರಿ ದರ
ಮೇ 3ನೇ ವಾರ ಮಾವು ಮೇಳ ಆಯೋಜನೆಗೆ ಸಿದ್ಧತೆ

ಸಾಂದರ್ಭಿಕ ಚಿತ್ರ PC: istockphoto
ಮೈಸೂರು, ಮೇ 7: ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕೆ.ಜಿ.ಗೆ ಮಲಗೊಬಾ 200 ರೂ., ಬಾದಾಮಿ 160ರಿಂದ 180 ರೂ., ಮತ್ತು ರಸಪುರಿ 150 ರೂ. ದರ ಇದೆ. ತರಾವರಿ ದರದಿಂದ ಮಾವು ದುಬಾರಿಯಾಗಿದೆ.
ಮೈಸೂರಿನ ಮಾರುಕಟ್ಟೆ ಮತ್ತು ರಸ್ತೆ ಬದಿಗಳಲ್ಲಿ ಮಾವು ಹಣ್ಣಿನ ಮಾರಾಟವನ್ನು ಕಾಣಬಹುದು. ಆದರೆ, ಒಂದೊಂದು ಕಡೆ ಒಂದೊಂದು ದರ ನಿಗದಿ ಮಾಡಿದ್ದಾರೆ. ರಸ್ತೆಬದಿಗಿಂತ ಮಾಲ್ಗಳಲ್ಲಿ ತುಸು ಕಡಿಮೆ ಬೆಲೆಗೆ ಹಣ್ಣುಗಳು ಲಭ್ಯವಿವೆ.
ಎಪ್ರಿಲ್ ತಿಂಗಳ ಆರಂಭದಿಂದ ಮಾವು ಮಾರಾಟ ಆರಂಭಗೊಂಡಿತು. ಈಗಷ್ಟೇ ಕಾಯಿಯನ್ನು ಮಾಗಿಸಿ ಮಾರಾಟಕ್ಕೆ ಲಭ್ಯವಿದೆ. ಮೇ ತಿಂಗಳಾಂತ್ಯಕ್ಕೆ ಮಾವು ದರ ಕಡಿಮೆಯಾಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ದರ ಹೆಚ್ಚಾದರೂ ವ್ಯಾಪಾರ ಚೆನ್ನಾಗಿದೆ ಎಂಬುದು ವ್ಯಾಪಾರಿಗಳ ಮಾತಾಗಿದೆ.
ಮಾವು ಮೇಳ: ಮೇ 3ನೇ ವಾರದಲ್ಲಿ ಮಾವು ಮೇಳ ಆಯೋಜನೆಗೆ ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ. ರೈತರಿಂದ ಗ್ರಾಹಕರಿಗೆ ನೇರವಾಗಿ ಮಾವು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮೈಸೂರು, ಮಂಡ್ಯ, ರಾಮನಗರ, ಹಾಸನ ಜಿಲ್ಲೆಗಳಿಂದ ಮಾವು ಬೆಳೆಗಾರರು ಮಾವು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
35 ಟನ್ ಉತ್ಪಾದನೆ
ಮೈಸೂರು ಜಿಲ್ಲೆಯಲ್ಲಿ 1,500 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಪ್ರತೀ ವರ್ಷ 30 ರಿಂದ 35 ಟನ್ ಮಾವು ಉತ್ಪಾದನೆಯಾಗುತ್ತದೆ. ಮೇ-ಜೂನ್ ತಿಂಗಳಲ್ಲಿ ಮಾವಿನ ಹಣ್ಣು ಮಾರಾಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಮೇಳ ಆಯೋಜಿಸಿದರೆ ಗ್ರಾಹಕರಿಗೆ ಸುಧಾರಿತ ದರದಲ್ಲಿ ಹಣ್ಣು ಸಿಗುವಂತೆ ಮಾಡಬಹುದು.
-ಮಂಜುನಾಥ ಅಂಗಡಿ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ
2 ವರ್ಷಗಳಿಂದ ಮಾವಿನ ಫಸಲು ಕುಸಿತ
ಕಳೆದ ಎರಡು ವರ್ಷಗಳಿಂದ ಮೈಸೂರು ಜಿಲ್ಲೆಯಲ್ಲಿ ಮಾವಿನ ಫಸಲು ಕುಸಿತಗೊಳ್ಳುತ್ತಿದೆ. ಶೇ.60ರಷ್ಟು ಹಣ್ಣು ದೊರೆಯುತ್ತಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಮರಗಳು ಚಿಗುರುತ್ತದೆ. ಆ ವೇಳೆ ಮಳೆ ಬರಬಾರದು. ಒಣ ಹವೆ ಇರಬೇಕು. ಮಳೆ ಬಂದರೆ ಹೂ ಉದುರಿ ಫಸಲು ಕಚ್ಚುವುದಿಲ್ಲ. ಹಳೇ ಮರಗಳಲ್ಲಿ ಕಾಯಿ ಚೆನ್ನಾಗಿ ಇದೆ. ಮಲ್ಲಿಕಾ ಚೆನ್ನಾಗಿದೆ. ಬಾದಾಮಿ ಕಡಿಮೆ ಆಗಿದೆ. ಹೊಸ ತಳಿಗಳು ಫಲ ಕೊಟ್ಟಿವೆ. ಸಾಂಪ್ರದಾಯಿಕ ತಳಿಗಳಲ್ಲಿ ಅಷ್ಟೊಂದು ಫಲ ಬಂದಿಲ್ಲ. ಮೈಸೂರು, ಮಂಡ್ಯ, ಹಾಸನ, ರಾಮನಗರ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ.
-ರಾಮಕೃಷ್ಣಪ್ಪ, ಸಹಜ ಕೃಷಿಕ, ಬೆಳವಲ ಫೌಂಡೇಶನ್
ಗ್ರಾಹಕರಿಗೆ ರಾಸಾಯನಿಕ ಮುಕ್ತ ಹಣ್ಣನ್ನು ತಿನ್ನಲು ಅವಕಾಶ ಕಲ್ಪಿಸಬೇಕು ಹಾಗೂ ರೈತರಿಗೂ ಉತ್ತಮ ಬೆಲೆ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಮೇ ಮೂರನೇ ವಾರದಲ್ಲಿ ಮಾವು ಮೇಳ ಆಯೋಜಿಸಲು ಸಿದ್ಧತೆ ನಡೆಸಿದ್ದೇವೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಅಂಗಡಿ ಮಾಹಿತಿ ನೀಡಿದ್ದಾರೆ.
1185.11 ಹೆಕ್ಟರ್ನಲ್ಲಿ ಮಾವು ಬೆಳೆ
ಮೈಸೂರು ಜಿಲ್ಲೆಯಲ್ಲಿ 1,185.11 ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಮೈಸೂರು 305.33 ಹೆಕ್ಟರ್, ಹುಣಸೂರು 328.48 ಹೆಕ್ಟರ್, ಎಚ್.ಡಿ. ಕೋಟೆ 189.28 ಹೆಕ್ಟರ್, ಪಿರಿಯಾಪಟ್ಟಣ 7.92 ಹೆಕ್ಟರ್, ತಿ.ನರಸೀಪುರ 72.93 ಹೆಕ್ಟರ್, ನಂಜನಗೂಡು 232.45 ಹೆಕ್ಟರ್, ಕೆ.ಆರ್.ನಗರ 23.49 ಹೆಕ್ಟರ್, ಸರಗೂರು 10.37 ಹೆಕ್ಟರ್, ಸಾಲಿಗ್ರಾಮ 14.86 ಹೆಕ್ಟರ್.







