ಗಲ್ಲು ಶಿಕ್ಷೆಗೆ ಹಂಬಲಿಸಿದ್ದ ಮನ್ಮಥನಾಥ್ ಗುಪ್ತಾ!: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಭಾಗ - 17
1921ರಲ್ಲಿ ವೇಲ್ಸ್‌ನ ರಾಜಕುಮಾರ ಭಾರತಕ್ಕೆ ಬಂದಾಗ ಬನಾರಸ್‌ನ ರಾಜ ಆತನಿಗೆ ಭವ್ಯ ಸ್ವಾಗತ ಕೋರಿದ್ದ. ಆದರೆ ಗಾಂಧಿ ಬಹಿಷ್ಕಾರದ ಕರೆ ಕೊಟ್ಟಿದ್ದರು. ಆ ಸಮಯದಲ್ಲಿ 13ರ ಬಾಲಕನೊಬ್ಬ ಈ ಬಹಿಷ್ಕಾರದ ಕರೆ ಕೊಡುವ ಕರಪತ್ರ ವಿತರಿಸುತ್ತಿದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದ. ಆತನನ್ನು ಮ್ಯಾಜಿಸ್ಟ್ರೇಟ್ ಎದುರು ನಿಲ್ಲಿಸಲಾಯಿತು. ಮ್ಯಾಜಿಸ್ಟ್ರೇಟರ ಪ್ರಶ್ನೆಗಳಿಗೆ ಆ ಬಾಲಕ ದಿಟ್ಟವಾಗಿ ‘‘ನಾನು ನಿಮ್ಮೊಂದಿಗೆ ಸಹಕರಿಸಲ್ಲ!’’ ಎಂದ. ಮ್ಯಾಜಿಸ್ಟ್ರೇಟ್ ನಕ್ಕು, ‘‘ಹೂಂ, ಅರೆಸ್ಟ್ ಆದ ಉಳಿದವರೂ ಇದೇ ಉತ್ತರ ಕೊಟ್ಟಿದ್ದಾರೆ!’’ ಎಂದರು. ಈ ಕರಪತ್ರ ಹಂಚಿದ ಅಪರಾಧಕ್ಕೆ ಈ ಬಾಲಕನಿಗೆ ಮೂರು ತಿಂಗಳ ಜೈಲು ಶಿಕ್ಷೆ ಆಯಿತು.
ಈ ಬಾಲಕ ಮನ್ಮಥನಾಥ್ ಗುಪ್ತಾ.
ಮನ್ಮಥನಾಥ್ ಗುಪ್ತಾ ಫೆಬ್ರವರಿ 7, 1908ರಂದು ಬನಾರಸ್‌ನಲ್ಲಿ ಜನಿಸಿದರು. ಬಾಲ್ಯದ ಶಿಕ್ಷಣವನ್ನು ನೇಪಾಳದಲ್ಲಿ ಪೂರೈಸಿದರು. ಬಳಿಕ ಅವರನ್ನು ಅವರ ತಂದೆ ಕಾಶೀ ವಿದ್ಯಾಪೀಠಕ್ಕೆ ಸೇರಿಸಿದರು. 13ರ ಪ್ರಾಯದಲ್ಲೇ ಕಾಂಗ್ರೆಸ್‌ನ ಸ್ವಯಂಸೇವಕನಾಗಿ ಕರಪತ್ರ ಹಂಚಿದ್ದಕ್ಕೆ ಜೈಲು ಶಿಕ್ಷೆ ಅನುಭವಿಸಿದ ಗುಪ್ತಾ ಅವರಿಗೆ, ಗಾಂಧಿ ಮಾರ್ಗ ನಿಧಾನ ಅನ್ನಿಸಿತ್ತು. ಅಸಹಕಾರ ಚಳವಳಿ ಹಠಾತ್ತಾಗಿ ನಿಂತದ್ದು ಅವರನ್ನು ಇನ್ನಷ್ಟು ಕಸಿವಿಸಿಗೊಳಿಸಿತು.
ಗುಪ್ತಾ ಅದೇ ವೇಳೆಗೆ ಚಿಗುರಿದ್ದ ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್‌ಗೆ ಸೇರಿದರು. ಸನ್ಯಾಲ್ ಸ್ಥಾಪಿಸಿದ್ದ ಈ ಸಂಘಟನೆಯ ಮುಂದೆ ಭಗತ್ ನಾಯಕತ್ವದಲ್ಲಿ ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ(ಊSಖಂ) ಎಂಬ ಹೆಸರಿನೊಂದಿಗೆ ವಿಸ್ತಾರಗೊಂಡಿತು. ಭಾರತದ ಮೊದಲ ಕಮ್ಯುನಿಸ್ಟ್ ವಿಚಾರಧಾರೆಯ ಕ್ರಾಂತಿಕಾರಿ ಸಂಘಟನೆ ಇದು. ಚಂದ್ರಶೇಖರ ಆಝಾದ್ ಇದರ ಕಮಾಂಡರ್ ಅಥವಾ ಚೀಫ್ ಆಗಿದ್ದರು. ಎಚ್.ಎಸ್.ಆರ್.ಎ. ಚಟುವಟಿಕೆಗಳ ಸಂದರ್ಭದಲ್ಲೇ ಗುಪ್ತಾ ಅವರಿಗೆ ಚಂದ್ರಶೇಖರ್ ಆಝಾದ್ ಮುಂತಾದವರ ಸಾಂಗತ್ಯ ಸಿಕ್ಕಿದ್ದು. ಇದೇ ವೇಳೆಗೆ ಎಚ್.ಎಸ್.ಆರ್.ಎ. ಕ್ರಾಂತಿಯ ಚಟುವಟಿಕೆಗಳ ಅಂಗವಾಗಿ ಮಹಾ ಸಾಹಸವೊಂದಕ್ಕೆ ಕೈ ಹಾಕಿತು. ಬ್ರಿಟಿಷ್ ತೆರಿಗೆ ಹಣ ಸಾಗಿಸುತ್ತಿದ್ದ ರೈಲನ್ನು ದರೋಡೆ ಮಾಡಿದ ಪ್ರಕರಣ ಇದು.
ಕಾಕೋರಿ ರೈಲು ದರೋಡೆ ಎಂದು ಇದು ದೇಶದ ಚರಿತ್ರೆಯಲ್ಲಿ ದಾಖಲಾಗಿದೆ. ಆಗಸ್ಟ್ 9, 1925ರಂದು ಮನ್ಮಥನಾಥ್ ಗುಪ್ತಾ ಸಹಿತ ಹತ್ತು ಮಂದಿ ಕ್ರಾಂತಿಕಾರಿಗಳು ಕಾಕೋರಿ ಬಳಿ ರೈಲು ತಡೆದು ಅದರಲ್ಲಿ ಸಾಗಿಸುತ್ತಿದ್ದ ಸರಕಾರಿ ಖಜಾನೆಯ ಹಣವನ್ನು ಲೂಟಿ ಮಾಡಿದರು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಮನ್ಮಥನಾಥ್ ಗುಪ್ತಾ ಅವರ ರಿವಾಲ್ವರ್‌ನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ಪ್ರಯಾಣಿಕನೊಬ್ಬ ಬಲಿಯಾದ. ಈ ಪ್ರಕರಣದ ಎಲ್ಲರನ್ನೂ ಬ್ರಿಟಿಷ್ ಸರಕಾರ ಬಂಧಿಸಿತು. ಈ ಪ್ರಕರಣದಲ್ಲಿ ರಾಮಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಮುಂತಾದವರಿಗೆ ಗಲ್ಲು ಶಿಕ್ಷೆ ನೀಡಲಾಯಿತು. ಇನ್ನೂ ಹದಿಹರೆಯದವರಾಗಿದ್ದ ಕಾರಣ ಮನ್ಮಥನಾಥ್ ಅವರಿಗೆ ಗಲ್ಲು ಶಿಕ್ಷೆ ವಿಧಿಸುವ ಬದಲು 14 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಅವರನ್ನು ಅಂಡಮಾನ್‌ಗೆ ರವಾನಿಸಿತು. ಆ ಅವಧಿಯಲ್ಲಿ ಎಡ ಸಿದ್ಧಾಂತದ ಚರ್ಚೆ, ಓದು ನಡೆಸಿದ ಗುಪ್ತಾ ಭಗತ್ ಸಿಂಗ್‌ರಂತೆ ಎಡ ಸಿದ್ಧಾಂತಕ್ಕೊಲಿದರು. 1937ರಲ್ಲಿ ಗುಪ್ತಾ ಅವರನ್ನು ಬಿಡುಗಡೆಗೊಳಿಸಲಾಯಿತು. ಮತ್ತೆ ಬ್ರಿಟಿಷ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಕ್ಕೆ ಬ್ರಿಟಿಷ್ ಸರಕಾರ ಅವರನ್ನು 1939ರಲ್ಲಿ ಬಂಧಿಸಿ ಜೈಲಿಗೆ ಕಳಿಸಿತು. 1946ರಲ್ಲಷ್ಟೇ ಗುಪ್ತಾ ಅವರ ಬಿಡುಗಡೆಯಾಯಿತು.
ಸ್ವಾತಂತ್ರ್ಯಾನಂತರ ಅವರು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಾದರು. ಒಂದಷ್ಟು ವರ್ಷಗಳ ಬಳಿಕ ಅವರು ಭಾರತ ಸರಕಾರದ ಯೋಜನಾ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು. ‘ಬಾಲ ಭಾರತಿ’ ಎಂಬ ಮಕ್ಕಳ ಮ್ಯಾಗಝಿನ್ ಮತ್ತು ‘ಆಜ್‌ಕಲ್’ ಎಂಬ ಹಿಂದಿ ಸಾಹಿತ್ಯಿಕ ಪತ್ರಿಕೆಗಳ ಸಂಪಾದಕರಾಗಿಯೂ ಅವರು ಕೆಲಸ ಮಾಡಿದರು.
ತಮ್ಮ ಸಂಗಾತಿಗಳಾಗಿದ್ದ ಹಲವಾರು ಕ್ರಾಂತಿಕಾರಿಗಳ ಬಗ್ಗೆ ಆಪ್ತ ವಿವರಗಳೊಂದಿಗೆ ಅವರು ಬರೆದ ಕೃತಿ ‘ಖಿheಥಿ ಐiveಜ ಆಚಿಟಿgeಡಿousಟಥಿ’ ಅಪೂರ್ವ ಚಾರಿತ್ರಿಕ ದಾಖಲೆ. ಹಿಂದಿಯಲ್ಲಿ ಸ್ವಾತಂತ್ರ್ಯ ಹೋರಾಟ ಗಾಥೆಗಳ ಸಹಿತ 120 ಕೃತಿಗಳನ್ನು ಗುಪ್ತಾ ರಚಿಸಿದ್ದಾರೆ.
ಅಕ್ಟೋಬರ್ 26, 2000ದಂದು ಗುಪ್ತಾ ತಮ್ಮ ದಿಲ್ಲಿಯ ನಿವಾಸದಲ್ಲಿ ಕೊನೆ ಉಸಿರೆಳೆದರು.
ಕೊನೆಯವರೆಗೂ ತಾವು ಈ ಕಾರ್ಯಾಚರಣೆಯ ವೇಳೆಯಲ್ಲಿ ಆಕಸ್ಮಿಕವಾಗಿ ಮಾಡಿದ ತಪ್ಪಿಗೆ ನೊಂದು ಕೊಂಡಿದ್ದರು. ತಮಗೆ ತನ್ನ ಪ್ರಾಣಪ್ರಿಯ ಸಂಗಾತಿಗಳಾದ ರಾಮಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಜೊತೆಗೆ ಗಲ್ಲು ಶಿಕ್ಷೆ ಪ್ರಾಪ್ತವಾಗಲಿಲ್ಲ ಎಂಬ ಕೊರಗು ಅವರಿಗಿತ್ತು.
ಕೊನೆಯ ವರೆಗೂ ಗುಪ್ತಾ ಎಡಪಂಥೀಯರಾಗಿದ್ದು; ಕ್ರಿಯಾಶೀಲರಾಗಿದ್ದರು. ಅರ್ಥಪೂರ್ಣವಾಗಿ ಬದುಕಿದ್ದರು. ಲೇಖಕರಾಗಿ ತಮ್ಮ ಕಾಲದ ವಿವರಗಳನ್ನು ದಾಖಲಿಸಿದ ಹಿರಿಮೆ ಗುಪ್ತಾ ಅವರದು.
ಅಂದ ಹಾಗೆ ಇವರ ಬಗ್ಗೆ ಆರೆಸ್ಸೆಸ್‌ನ ಫೇಸ್ ಬುಕ್ ಖಾತೆಯಲ್ಲಿ ಪುಟ್ಟ ಉಲ್ಲೇಖ ಇದೆ. ಈ ಪುಟ್ಟ ಲೇಖನದಲ್ಲಿ ಅವರ ಸೈದ್ಧಾಂತಿಕ ನಿಲುವಿನ ಬಗ್ಗೆ ಯಾವ ಪ್ರಸ್ತಾಪವೂ ಇಲ್ಲ. ಏನೋ ಪ್ರವಾಸಿಗರಾಗಿ ಅಂಡಮಾನ್‌ಗೆ ಹೋಗಿದ್ದರೇನೋ ಎಂಬಂತೆ ‘‘ಗುಪ್ತಾ ಕೆಲವು ಕಾಲ ಅಂಡಮಾನ್‌ನಲ್ಲಿದ್ದರು’’ ಎಂದು ಬರೆಯಲಾಗಿದೆ. 12 ವರ್ಷ ಕಾಲ ಅಂಡಮಾನ್‌ನಲ್ಲಿ, ಮತ್ತೆ 7 ವರ್ಷ ಕಾಲ ಭಾರತದ ಜೈಲುಗಳಲ್ಲಿ ಗುಪ್ತಾ ಜೈಲು ವಾಸ ಅನುಭವಿಸಿದ್ದರು. ಅವರೆಂದೂ ಕ್ಷಮೆ ಕೇಳಲಿಲ್ಲ! ಅಲ್ಲಿಂದ ಬಿಡುಗಡೆಯಾದ ಬಳಿಕವೂ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮತ್ತೆ ಜೈಲು ಪಾಲಾದರು!!
ಸಾವರ್ಕರ್ ಅವರ ಅಂಡಮಾನ್‌ನ ವಾಸವನ್ನು ಇನ್ನಿಲ್ಲದಂತೆ ವರ್ಣಿಸುವ ಆರೆಸ್ಸೆಸ್ ಅಂಥದ್ದೇ ಶಿಕ್ಷೆ ಅನುಭವಿಸಿದ ಉಳಿದ ಕ್ರಾಂತಿಕಾರಿಗಳ ಜೈಲು ವಾಸದ ಬಗ್ಗೆ, ಮತ್ತೆ ಮತ್ತೆ ಅವರು ಹೋರಾಟಕ್ಕೆ ಧುಮುಕಿದ ಬಗ್ಗೆ, ಅವರ ಸೈದ್ಧಾಂತಿಕ ನಿಲುಮೆಯ ಬಗ್ಗೆ ಮಾತೇ ಆಡುವುದಿಲ್ಲ. ಚುಟುಕು ಪ್ರಸ್ತಾಪ ದಾಖಲಿಸಿದಾಗಲೂ ಈ ಕ್ರಾಂತಿಕಾರಿಗಳ ಸೈದ್ಧಾಂತಿಕ ನಿಲುವನ್ನು ಜಾಣವಾಗಿ ಮರೆಮಾಚಿ ದಾಖಲಿಸುತ್ತದೆ.







