ಗ್ರಾಮೀಣ ಭಾಗದ ಹಲವು ಬಿಎಲ್‌ಒ-ಮತದಾರರಿಗೆ ಎಸ್‌ಐಆರ್ ಅವಧಿ ವಿಸ್ತರಣೆಯ ಮಾಹಿತಿಯೇ ಇಲ್ಲ

ಬೆಂಗಳೂರು : ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಅವಧಿಯನ್ನು ಚುನಾವಣಾ ಆಯೋಗವೂ ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಗಳು ಮನೆಮನೆ ಭೇಟಿ ಅವಧಿಯನ್ನು ಆ.8ರ ವರೆಗೂ ವಿಸ್ತರಿಸಿದರೂ, ಈ ಕುರಿತು ರಾಜ್ಯದ ಗ್ರಾಮೀಣ ಭಾಗದ ಹಲವು ಬಿಎಲ್‌ಒಗಳಿಗೆ ಮಾಹಿತಿಯೇ ಇಲ್ಲ ಎನ್ನುವುದು ಕಂಡು ಬಂದಿದೆ.
‘ನಾಗರಿಕ ಮತಕಾವಲು ಸಮಿತಿ’ ವತಿಯಿಂದ ರಾಜ್ಯದ ವಿವಿಧ ಭಾಗಗಳ ಬಿಎಲ್‌ಒಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ, ಅವಧಿ ವಿಸ್ತರಣೆಯ ಕುರಿತು ಯಾವುದೇ ಸ್ಪಷ್ಟ ನಿರ್ದೇಶನ ತಮಗೆ ಲಭ್ಯವಾಗಿಲ್ಲ ಎಂದು ಹಲವರು ತಿಳಿಸಿದ್ದಾರೆ. ಕೆಲವರು ಹಳೆಯ ವೇಳಾಪಟ್ಟಿಯಂತೆ ಮನೆ-ಮನೆಗೆ ತೆರಳಿ ನಮೂನೆಗಳನ್ನು ವಿತರಿಸಿ ಸಂಗ್ರಹಿಸುತ್ತಿದ್ದರೆ, ಇನ್ನೂ ಕೆಲವರಿಗೆ ಹೊಸ ದಿನಾಂಕದ ಬಗ್ಗೆ ಖಚಿತತೆ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ನಾಯಕ ಭುವನ್ ಕುಮಾರ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.
ಎಸ್‌ಐಆರ್‌ನಂತಹ ಮಹತ್ವದ ಪ್ರಕ್ರಿಯೆಯಲ್ಲಿ ದಿನಾಂಕ ವಿಸ್ತರಣೆ ಘೋಷಣೆಯಾದ ತಕ್ಷಣವೇ ಜಿಲ್ಲಾಡಳಿತ, ತಾಲೂಕು ಅಧಿಕಾರಿಗಳು ಹಾಗೂ ಬಿಎಲ್‌ಒಗಳಿಗೆ ಏಕರೂಪದ ಮಾಹಿತಿ ತಲುಪಬೇಕಾಗಿತ್ತು. ಆದರೆ, ಮಾಹಿತಿ ರವಾನೆಯಲ್ಲಿ ಉಂಟಾದ ವಿಳಂಬದಿಂದ ಮತದಾರರಿಗೂ ಗೊಂದಲ ಉಂಟಾಗಿದೆ. ಯಾವ ದಿನಾಂಕದವರೆಗೆ ನಮೂನೆ ಸಲ್ಲಿಸಬಹುದು ಎಂಬ ಪ್ರಶ್ನೆಗೆ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಉತ್ತರಗಳು ಕೇಳಿಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಪ್ರತಿಯೊಂದು ಕಾರ್ಯವೂ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ನಡೆಯಬೇಕೆಂಬ ನಿರೀಕ್ಷೆ ಇರುವಾಗ, ನಗರಗಳಲ್ಲಿ ಕೆಲಸ ಮಾಡುತ್ತಿರುವ ಬಿಎಲ್‌ಒಗಳಿಗೆ ಅಧಿಕಾರಿಗಳಿಂದ ಮಾಹಿತಿ ದೊರಕುತ್ತಿದ್ದರೂ, ಗ್ರಾಮೀಣ ಭಾಗದ ಬೂತ್‌ಮಟ್ಟದ ಅಧಿಕಾರಿಗಳಿಗೆ/ ಮತದಾರರಿಗೆ ಸ್ಪಷ್ಟ ಮಾಹಿತಿ ತಲುಪದಿರುವುದು, ಚುನಾವಣಾ ಆಯೋಗದ ಆಡಳಿತಾತ್ಮಕ ಸಮನ್ವಯದ ಕೊರತೆಯನ್ನು ಬಹಿರಂಗಪಡಿಸುತ್ತದೆ. ಇದು ಕೇವಲ ಆಡಳಿತಾತ್ಮಕ ಲೋಪವೇ ಅಥವಾ ಮಾಹಿತಿ ಹಂಚಿಕೆಯ ವ್ಯವಸ್ಥೆಯಲ್ಲಿನ ವೈಫಲ್ಯವೇ? ಎಂದು ಭುವನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕರ ವಿಶ್ವಾಸ ಉಳಿಸಬೇಕಾದರೆ, ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲ ಬದಲಾವಣೆಗಳ ಬಗ್ಗೆ ಬಿಎಲ್‌ಒಗಳು ಹಾಗೂ ಮತದಾರರಿಗೆ ಒಂದೇ ಸಮಯದಲ್ಲಿ, ಸ್ಪಷ್ಟವಾಗಿ ಮಾಹಿತಿ ತಲುಪಿಸುವ ವ್ಯವಸ್ಥೆ ಅತ್ಯಗತ್ಯವಾಗಿದೆ. ಇಲ್ಲದಿದ್ದರೆ, ಅನಗತ್ಯ ಗೊಂದಲದಿಂದ ಮತದಾರರ ಭಾಗವಹಿಸುವಿಕೆಯ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇದೆ ಮತದಾರರೊಬ್ಬರು ಹೇಳಿದ್ದಾರೆ.






