Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಒಂದು ಯುದ್ಧವು ಅನಾವರಣಗೊಳಿಸಿದ ಹಲವು...

ಒಂದು ಯುದ್ಧವು ಅನಾವರಣಗೊಳಿಸಿದ ಹಲವು ಸತ್ಯಗಳು

ಹಂಗಾಮಿ ಟಿಪ್ಪಣಿಗಳು

ವಾರ್ತಾಭಾರತಿವಾರ್ತಾಭಾರತಿ28 Jun 2025 11:30 AM IST
share
ಒಂದು ಯುದ್ಧವು ಅನಾವರಣಗೊಳಿಸಿದ ಹಲವು ಸತ್ಯಗಳು

✍️ ಹವ್ವಾ ಶುಕೂರ್

ಸದ್ಯಕ್ಕೆ ಇರಾನ್-ಇಸ್ರೇಲ್ ಯುದ್ಧ ನಿಂತಿದೆ. ಯಾರೂ ಇದನ್ನು ಶಾಂತಿ ಸ್ಥಾಪನೆ ಎಂದು ಕರೆಯುತ್ತಿಲ್ಲ. ಈ ಯುದ್ಧ ವಿರಾಮವು ಶಾಶ್ವತವೋ, ದೀರ್ಘಕಾಲೀನವೋ ಅಥವಾ ತೀರಾ ತಾತ್ಕಾಲಿಕವೋ ಎಂದು ಖಚಿತವಾಗಿ ಹೇಳಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಆದರೆ ಒಂದಂತೂ ಖಚಿತ. ಈ ಯುದ್ಧದೊಂದಿಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮತ್ತು ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಸಮೀಕರಣಗಳು ಗಣನೀಯವಾಗಿ ಬದಲಾಗಿವೆ. ಯುದ್ಧಕ್ಕಿಂತ ಮುನ್ನ ಇದ್ದ ಅನೇಕ ನಂಬಿಕೆಗಳು ಕುಸಿದು ಬಿದ್ದಿವೆ ಮತ್ತು ಹಲವು ಹೊಸ ನಂಬಿಕೆಗಳು ಹುಟ್ಟಿಕೊಂಡಿವೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹಲವು ಹೊಸ ಸಾಧ್ಯತೆಗಳು ತೆರೆದುಕೊಂಡಿವೆ. ಹೊಸ ಮೈತ್ರಿಗಳು ಚಿಗುರತೊಡಗಿವೆ. ಹಲವು ಬಂಡಾಯಗಳು ಮೊಳಕೆಯೊಡೆಯುತ್ತಿವೆ.

ಇಸ್ರೇಲ್‌ನ ಯುದ್ಧ ಸಾಮರ್ಥ್ಯದ ಬಗ್ಗೆ ಜೂನ್ 13ರ ತನಕ ಇದ್ದ ಲೆಕ್ಕಾಚಾರಗಳೆಲ್ಲಾ ತುಂಬಾ ಉತ್ಪ್ರೇಕ್ಷಿತವಾಗಿದ್ದವು ಎಂಬುದನ್ನು ಈಗ ಜಗತ್ತು ಒಪ್ಪಿಕೊಳ್ಳುತ್ತಿದೆ. ಇಸ್ರೇಲ್ ಅಣ್ವಸ್ತ್ರಗಳ ಒಂದು ದೊಡ್ಡ ರಾಶಿಯನ್ನೇ ಅಕ್ರಮವಾಗಿ ತನ್ನ ಬಳಿ ದಾಸ್ತಾನು ಮಾಡಿಟ್ಟುಕೊಂಡಿದೆ ಎಂಬುದು ಜಗತ್ತಿನ ಸರಕಾರಗಳಿಗೆಲ್ಲಾ ಹಿಂದೆಯೂ ತಿಳಿದಿತ್ತು. ಆದರೆ ಇಂದು ಎಲ್ಲಕಡೆಯ ಜನಸಾಮಾನ್ಯರಿಗೂ ಆ ವಿಷಯ ಸ್ಪಷ್ಟವಾಗಿದೆ. ಆದ್ದರಿಂದ ಮಧ್ಯಪ್ರಾಚ್ಯದ ಶಾಂತಿ ಮತ್ತು ಭದ್ರತೆಗೆ ನಿಜವಾದ ಅಪಾಯ ಇರುವುದು ಯಾರಿಂದ ಎಂಬುದು ಎಲ್ಲರಿಗೆ ಚೆನ್ನಾಗಿ ಮನವರಿಕೆಯಾಗಿದೆ. ಇಸ್ರೇಲ್, ಅಮೆರಿಕ ಮತ್ತು ಪಶ್ಚಿಮದ ಮಾಧ್ಯಮಗಳ ಅಬ್ಬರದ ಪ್ರಚಾರದಿಂದ ಪ್ರಭಾವಿತರಾಗಿ, ಇರಾನ್ ಬಳಿ ಅಕ್ರಮ ಅಣ್ವಸ್ತ್ರಗಳ ದಾಸ್ತಾನು ಇದೆ ಎಂದು ನಂಬಿಕೊಂಡಿದ್ದವರಿಗೆ, ಆ ನಂಬಿಕೆ ತಮ್ಮ ಮುಗ್ಧತೆಯ ಪರಿಣಾಮವಾಗಿತ್ತು ಮತ್ತು ತಾವು ಮೋಸಹೋಗಿದ್ದೆವು ಎಂಬುದು ಅರ್ಥವಾಗಿದೆ. ಅಮೆರಿಕದ ಹಲವು ಬೇಹುಗಾರಿಕಾ ಸಂಸ್ಥೆಗಳು ಕೆಲವು ದಶಕಗಳಿಂದ ತಾವು ನಡೆಸಿದ ಗುಪ್ತಚರ ತನಿಖೆಗಳ ಆಧಾರದಲ್ಲಿ, ಇರಾನ್ ಬಳಿ ಯಾವುದೇ ಅಣ್ವಸ್ತ್ರ ಇಲ್ಲ ಎಂದು ಹಲವು ಬಾರಿ ತಮ್ಮ ಸರಕಾರಕ್ಕೆ ಅಧಿಕೃತ ವರದಿ ನೀಡಿದ್ದವು. ಸಾಕ್ಷಾತ್ ಅಂತರ್‌ರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಅಧಿಕಾರಿಗಳು ಕೂಡ, ಪದೇ ಪದೇ ಇರಾನ್‌ನ ಎಲ್ಲ ಅಣುಸ್ಥಾವರಗಳ ಸವಿಸ್ತಾರ ಪರೀಕ್ಷೆ, ಅಧ್ಯಯನಗಳನ್ನು ನಡೆಸಿದ ಬಳಿಕ, ಇರಾನ್ ಬಳಿ ಯಾವುದೇ ಅಣ್ವಸ್ತ್ರ ಇಲ್ಲ ಎಂದು ಸ್ಪಷ್ಟವಾಗಿ ಜಗತ್ತಿಗೆ ತಿಳಿಸಿದ್ದವು. ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ದಾಳಿ ನಡೆಸಿದ ಬಳಿಕ, ಇರಾನ್‌ಗೆ ಕ್ಲೀನ್ ಚಿಟ್ ನೀಡಿದ, ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳ ಮತ್ತು IAEAಯ ಪ್ರಸ್ತುತ ವರದಿಗಳು, ಸಂಪೂರ್ಣ ಜಗತ್ತಿನ ಗಮನಕ್ಕೆ ಬಂದಿವೆ.

*****

ಇತ್ತೀಚಿನ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಣ ಘರ್ಷಣೆಯ ವೇಳೆ ಮತ್ತು ಆ ಬಳಿಕ ಇಸ್ರೇಲ್ ಮತ್ತು ಇರಾನ್ ಕದನದ ವೇಳೆ ಭಾರತದ ಅಂಧಭಕ್ತ ಪಡೆಯವರು ಲಂಗು ಲಗಾಮಿಲ್ಲದೆ ಇಸ್ರೇಲ್ ಅನ್ನು ಬೆಂಬಲಿಸುವ ಮತ್ತು ವಿಪರೀತವಾಗಿ ಇಸ್ರೇಲ್ ಅನ್ನು ಹೊಗಳುವ ಕಾಯಕದಲ್ಲಿ ನಿರತರಾಗಿದ್ದರು. ಇಸ್ರೇಲ್ ಬಗ್ಗೆ ಅವರು ಅಷ್ಟೊಂದು ಕುರುಡು ವ್ಯಾಮೋಹ ಪ್ರಕಟಿಸುವುದಕ್ಕೆ ಕಾರಣವಿದೆ. ಅಂಧ ಭಕ್ತರಲ್ಲಿನ ಒಂದು ದೊಡ್ಡ ವರ್ಗಕ್ಕೆ ಒಂದು ಕಾಲದಲ್ಲಿ ತಾವು ಭಾರತಕ್ಕೆ ವಲಸೆ ಬಂದ ವಲಸಿಗರು ಎಂಬುದು ತಿಳಿದಿದೆ. ಇಸ್ರೇಲ್‌ನಲ್ಲಿರುವ ಯಹೂದಿಗಳು ಕೂಡಾ 106 ದೇಶಗಳಿಂದ ವಲಸೆ ಬಂದು, ಮೋಸ ಮತ್ತು ರಟ್ಟೆ ಬಲದ ಆಧಾರದಲ್ಲಿ ಸ್ಥಾಪಿಸಲಾದ ಇಸ್ರೇಲ್ ಎಂಬ ದೇಶದಲ್ಲಿ ನೆಲೆಸಿದವರು ಎಂಬುದೂ ಅವರಿಗೆ ಗೊತ್ತಿದೆ. ಆದ್ದರಿಂದ ಇದು ಹಳೆಯ ವಲಸಿಗರಿಗೆ ಹೊಸ ವಲಸಿಗರ ಬಗ್ಗೆ ಇರುವ ಸಹಜ ವ್ಯಾಮೋಹ. ಸಾಲದ್ದಕ್ಕೆ ನಮ್ಮಲ್ಲಿನ ಹಲವು ಪ್ರಾಚೀನ ವಲಸಿಗರು, ಇಸ್ರೇಲ್ ಅನ್ನು ವಲಸಿಗರ ಪಾಲಿನ ಆದರ್ಶ ದೇಶವಾಗಿ ಕಾಣುತ್ತಿದ್ದಾರೆ. ಜನಾಂಗ ಶುದ್ಧಿಯ ಪ್ರತಿಪಾದಕರೆಲ್ಲಾ ಸೇರಿ, ಇಸ್ರೇಲ್ ಮಾದರಿಯ ತಮ್ಮದೇ ಆದ ಪ್ರತ್ಯೇಕ ದೇಶವೊಂದನ್ನು ಕಟ್ಟಿಕೊಳ್ಳಬೇಕು ಎಂಬ ಆಶಯವು ಅವರ ಗುಪ್ತ ವಲಯಗಳಲ್ಲಿ ಬಹುಕಾಲದಿಂದ ಚರ್ಚೆಯಲ್ಲಿದೆ. ಆದ್ದರಿಂದಲೇ ಇಸ್ರೇಲ್ ಅನ್ನು ಎಷ್ಟು ಹೊಗಳಿದರೂ ಅವರು ತೃಪ್ತರಾಗುವುದಿಲ್ಲ.

*****

ಯುದ್ಧಕ್ಕೆ ಮುಂಚೆ ಯುಎಸ್‌ಎ, ಇಸ್ರೇಲ್ ಮತ್ತು ಇರಾನ್ - ಈ ಮೂರು ದೇಶಗಳ ನಡುವೆ ವ್ಯತ್ಯಾಸಗಳು ಎಷ್ಟೇ ಇರಲಿ, ಒಂದಂಶವಂತೂ ಸಮಾನವಾಗಿತ್ತು. ಮೂರೂ ಕಡೆ ಆಡಳಿತಗಾರರಿಗೆ, ತಮ್ಮ ದೇಶದಲ್ಲಿ ಕುಸಿಯುತ್ತಿರುವ ತಮ್ಮ ಜನಪ್ರಿಯತೆ ಮತ್ತು ತಮ್ಮ ವಿರುದ್ಧ ತಮ್ಮ ಜನತೆಯಲ್ಲಿ ಹೆಚ್ಚುತ್ತಿರುವ ಆಕ್ರೋಶದ ಬಗ್ಗೆ ಕಳವಳವಿದೆ. ಇಸ್ರೇಲ್ ಸರಕಾರ ಇರಾನ್ ಮೇಲೆ ದಾಳಿ ನಡೆಸಿದ್ದು ಜೂನ್ 13ರಂದು. ಅದಕ್ಕಿಂತ ಒಂದೇ ದಿನ ಮೊದಲು ಜೂನ್ 12ರಂದು ಇಸ್ರೇಲ್ ಸಂಸತ್ತಿನಲ್ಲಿ ನೆತನ್ಯಾಹು ಅವರ ಸಮ್ಮಿಶ್ರ ಸರಕಾರದ ವಿರುದ್ಧ ಅವಿಶ್ವಾಸ ಪ್ರಸ್ತಾವವನ್ನು ಮಂಡಿಸಲಾಗಿತ್ತು. ಅದು ಮಂಜೂರಾಗಿ ಇನ್ನೇನು ನೆತನ್ಯಾಹು ಸರಕಾರ ಕುಸಿದು ಬೀಳುತ್ತದೆ ಎಂಬಂತಹ ವಾತಾವರಣವಿತ್ತು. ಕೊನೆಯ ಕ್ಷಣದ ರಾಜಿ ಸೂತ್ರಗಳ ಮೂಲಕ ಕೆಲವು ಪಕ್ಷಗಳ ಮನವೊಲಿಸಿ ಹೇಗೂ ಸರಕಾರದ ಜೀವ ಉಳಿಸಲಾಗಿತ್ತು. ನಿಜವಾಗಿ ಇದಕ್ಕಿಂತ ಮುಂಚೆಯೂ ಇಸ್ರೇಲ್‌ನಲ್ಲಿ ಸರಕಾರದ ವಿರುದ್ಧ ಅಲ್ಲಲ್ಲಿ ತೀವ್ರ ಪ್ರತಿಭಟನೆಗಳ ಸರಣಿಯೇ ನಡೆಯುತ್ತಲಿತ್ತು. 2003 ಅಕ್ಟೊಬರ್ 7ರಂದು ಹಮಾಸ್ ನಡೆಸಿದ ವ್ಯಾಪಕ ದಾಳಿಯ ದಿನವೇ ನೆತನ್ಯಾಹು ಜನಪ್ರಿಯತೆ ಪಾತಾಳಕ್ಕೆ ಕುಸಿದಿತ್ತು. ಆ ಬಳಿಕ ಹಮಾಸ್‌ನಿಂದ ಅಪಹೃತ ಇಸ್ರೇಲಿ ಪ್ರಜೆಗಳ ಬಿಡುಗಡೆಯಲ್ಲಿ ನೆತನ್ಯಾಹು ಸರಕಾರದ ವೈಫಲ್ಯ ಮತ್ತು ಗಾಝಾ ಮೇಲೆ ಇಸ್ರೇಲ್ ಬಾಂಬು ದಾಳಿಗಳಲ್ಲಿ ಅಪಹೃತ ಇಸ್ರೇಲಿಗಳ ಜೀವಗಳೂ ಬಲಿಯಾಗುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ನೆತನ್ಯಾಹು ವಿರುದ್ಧ ಜನಾಭಿಪ್ರಾಯ ಬಲಗೊಳ್ಳತೊಡಗಿತ್ತು. ಈ ಮಧ್ಯೆ ಇಸ್ರೇಲ್ ನಾಗರಿಕರ ಒಂದು ಗಣ್ಯವರ್ಗವು, ಗಾಝಾದಲ್ಲಿ ಇಸ್ರೇಲ್ ಪಡೆಗಳು ನಡೆಸುತ್ತಿದ್ದ ನರಮೇಧದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಲಾರಂಭಿಸಿದ್ದರು. ಇಂತಹ ಸನ್ನಿವೇಶದಲ್ಲಿ ಹಠಾತ್ತಾಗಿ ಇರಾನ್ ಮೇಲೆ ದಾಳಿ ನಡೆಸುವ ಮೂಲಕ ನೆತನ್ಯಾಹು ರಾತ್ರಿ ಬೆಳಗಾಗುವುದರೊಳಗೆ, ತನ್ನ ದೇಶಬಾಂಧವರ ದೃಷ್ಟಿಯಲ್ಲಿ ವೀರ, ಶೂರ, ಪರಾಕ್ರಮಿಯಾಗಿ ಮೆರೆದು ಬಿಟ್ಟರು. ಕೆಲವೇ ದಿನಗಳ ಬಳಿಕ ಅವರ ಜನಪ್ರಿಯತೆ ಎಂತಹ ಗತಿಗೇಡಿಗೆ ಒಳಗಾಯಿತು ಎಂಬುದು ಬೇರೆ ವಿಷಯ.

ಅಮೆರಿಕದ ಟ್ರಂಪ್ ಸರಕಾರ ಜೂನ್ 22ರಂದು ಇರಾನ್ ಮೇಲೆ ತೀವ್ರ ಸ್ವರೂಪದ ವಿಮಾನ ದಾಳಿ ನಡೆಸುವ ಮುನ್ನ ಅಮೆರಿಕದಲ್ಲಿ ಟ್ರಂಪ್ ಜನಪ್ರಿಯತೆ ಕ್ಷಿಪ್ರವಾಗಿ ಕುಸಿಯುತ್ತಿರುವುದನ್ನು ಸೂಚಿಸುವ ಹಲವು ಘಟನೆಗಳು ನಡೆದಿದ್ದವು. ಟಾರಿಫ್ ಹೆಸರಲ್ಲಿ ಟ್ರಂಪ್ ಹಾಕಿದ ತಿಪ್ಪರಲಾಗಗಳು ಅವರ ಇಮೇಜನ್ನು ವಿದೂಷಕನ ಮಟ್ಟಕ್ಕೆ ಇಳಿಸಿ ಬಿಟ್ಟಿದ್ದವು. ಇರಾನ್ ಮೇಲೆ ಅಮೆರಿಕ ದಾಳಿ ನಡೆಸುವುದಕ್ಕೆ ಕೇವಲ ಒಂದು ವಾರ ಮುನ್ನ, ಅಂದರೆ ಜೂನ್ 14ರ ದಿನವು ಹಲವು ಕಾರಣಗಳಿಂದ ಯುಎಸ್‌ಎ ಮಟ್ಟಿಗೆ ಬಹಳ ಮಹತ್ವದ್ದಾಗಿತ್ತು. ಒಂದೆಡೆ ಅದು ಅಮೆರಿಕ ಸೇನೆ ತನ್ನ 250ನೇ ವಾರ್ಷಿಕೋತ್ಸವ ಆಚರಿಸುವ ದಿನವಾಗಿತ್ತು. ಇನ್ನೊಂದೆಡೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 79ನೇ ಜನ್ಮದಿನವನ್ನೂ ಅದೇ ದಿನ ಆಚರಿಸಿದ್ದರು. ಆದರೆ ಅದು ಟ್ರಂಪ್ ಪಾಲಿಗೆ ಸಂಭ್ರಮದ ದಿನವಾಗಿರಲಿಲ್ಲ. ಏಕೆಂದರೆ ಅಮೆರಿಕದಲ್ಲಿ ಹಲವು ಕಡೆ, ಟ್ರಂಪ್ ಮತ್ತು ಅವರ ಸರಕಾರದ ಧೋರಣೆಗಳ ವಿರುದ್ಧ ಆಕ್ರೋಶ ಪ್ರಕಟಿಸುವ ಭಾರೀ ಬೃಹತ್ ಪ್ರತಿಭಟನಾ ರ್ಯಾಲಿಗಳು ಕೂಡಾ ಅದೇ ದಿನ ನಡೆದಿದ್ದವು. ರ್ಯಾಲಿಗಳ ಸಂಘಟಕರು ‘No Kings Day’ (ರಾಜ ವಿರೋಧಿ ದಿನ) ಎಂದು ಕರೆದಿದ್ದ ಈ ಪ್ರತಿಭಟನಾ ದಿನವನ್ನು ಜಾಗತಿಕ ಮಟ್ಟದಲ್ಲಿ ಓo Dictators Day (ಸರ್ವಾಧಿಕಾರ ವಿರೋಧಿ ದಿನ) ಅಥವಾ No Tyrant Day (ನಿರಂಕುಶಾಧಿಕಾರಿ ವಿರೋಧಿ ದಿನ) ಎಂದೂ ಗುರುತಿಸಲಾಗಿತ್ತು. ಟ್ರಂಪ್ ಅವರ ಸರ್ವಾಧಿಕಾರಿ ಶೈಲಿ ಮತ್ತು ಅವರ ಮಾತುಗಳಲ್ಲಿ ಎದ್ದುಕಾಣುತ್ತಿದ್ದ, ಪ್ರಾಚೀನ ಕಾಲದ ರಾಜಮಹಾರಾಜರ ಧಾಟಿಯನ್ನು ವಿರೋಧಿಸುವುದೇ ಆ ರ್ಯಾಲಿಗಳ ಉದ್ದೇಶವಾಗಿತ್ತು. ಅದರ ಮುಖ್ಯ ಕಾರ್ಯಕ್ರಮವು ಫಿಲಡೆಲ್ಫಿಯಾದಲ್ಲಿ ನಡೆದಿತ್ತು ಮತ್ತು ಅಮೆರಿಕದ 2,100ಕ್ಕೂ ಹೆಚ್ಚಿನ ನಗರ ಮತ್ತು ಪಟ್ಟಣಗಳಲ್ಲಿ ಅದಕ್ಕೆ ಬೆಂಬಲವಾಗಿ ಸಭೆ, ಮೆರವಣಿಗೆ, ಮತಪ್ರದರ್ಶನ ಇತ್ಯಾದಿಗಳು ನಡೆದಿದ್ದವು. ಒಂದು ಅಂದಾಜಿನಂತೆ ಸುಮಾರು 50ರಿಂದ 60 ಲಕ್ಷ ನಾಗರಿಕರು ಈ ಪ್ರತಿಭಟನೆಗಳಲ್ಲಿ ಭಾಗವಹಿಸಿ ಟ್ರಂಪ್ ಮತ್ತವರ ಸರಕಾರದ ಧೋರಣೆಗಳು ಮತ್ತು ಕಾರ್ಯ ಶೈಲಿಯ ಬಗ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರು. ‘ದಿ ಗಾರ್ಡಿಯನ್’ ಪ್ರಕಾರ ‘ನೋ ಕಿಂಗ್ ಡೇ’ ಅಮೆರಿಕದ ಇತಿಹಾಸದಲ್ಲಿ ಈ ತನಕ ನಡೆದ ಎಲ್ಲ ಪ್ರತಿಭಟನೆಗಳ ಪೈಕಿ, ಒಂದೇ ದಿನದಲ್ಲಿ ನಡೆದ ಅತಿದೊಡ್ಡ ಪ್ರತಿಭಟನೆಯಾಗಿತ್ತು. ಅಮೆರಿಕದ ಹೊರಗೆ ಕೂಡಾ ಕೆನಡಾ, ಜಪಾನ್, ಮೆಕ್ಸಿಕೋಗಳಲ್ಲಿ ಮತ್ತು ಯುರೋಪ್ ಖಂಡದ ಹಲವು ನಗರಗಳು ಸೇರಿದಂತೆ ಕನಿಷ್ಠ 20 ದೇಶಗಳಲ್ಲಿ ಈ ಪ್ರತಿಭಟನೆಗೆ ಬೆಂಬಲ ಸೂಚಿಸುವಂತಹ ಕಾರ್ಯಕ್ರಮಗಳು ನಡೆದಿದ್ದವು. ಇಂತಹ ಸನ್ನಿವೇಶದಲ್ಲಿ ಟ್ರಂಪ್, ಇಸ್ರೇಲ್-ಇರಾನ್ ಘರ್ಷಣೆಯ ಕುರಿತು ಮಾತನಾಡುತ್ತಾ, ತಾನೇ ಸಂಪೂರ್ಣ ಜಗತ್ತಿನ ಪ್ರಶ್ನಾತೀತ ಮಾಲಕ ಎಂಬಂತಹ ಧಾಟಿಯಲ್ಲಿ ಕೆಲವು ಏಕಪಕ್ಷೀಯ ಆದೇಶಗಳನ್ನು ಹೊರಡಿಸಿದರು. ಇರಾನ್ ಸರಕಾರ ಈ ಆದೇಶಗಳಿಗೆ ಚಿಕ್ಕಾಸಿನ ಬೆಲೆ ಕೊಡದೆ ಇದ್ದಾಗ, ಹತಾಶರಾದ ಟ್ರಂಪ್, ಹಠಾತ್ತಾಗಿ ಇರಾನ್ ಮೇಲೆ ಬಾಂಬ್ ಸುರಿಸುವ ಮೂಲಕ, ತಾನು ಕಳೆದುಕೊಂಡ ಜನಪ್ರಿಯತೆಯನ್ನು ಮರಳಿಗಳಿಸಲು ಬಯಸಿದ್ದರು. ಕೆಲವೇ ದಿನಗಳಲ್ಲಿ ಅವರ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿ ಅವರ ಪ್ರತಿಷ್ಠೆಯೇ ಸ್ಫೋಟಗೊಂಡಿತೆಂಬುದು ಬೇರೆ ವಿಷಯ.

*****

ಇರಾನ್‌ನಲ್ಲಿ ಆಯತುಲ್ಲಾ ರೂಹುಲ್ಲಾ ಖುಮೈನಿ (1963-1979) ಅವರ ನೇತೃತ್ವದಲ್ಲಿ ನಡೆದ ಜನಪ್ರಿಯ ಕ್ರಾಂತಿಕಾರಿ ಹೋರಾಟದ ಬಳಿಕ 1979ರಲ್ಲಿ, 2,500 ವರ್ಷಗಳ ದೀರ್ಘ ಇತಿಹಾಸವಿದ್ದ ಸರ್ವಾಧಿಕಾರಿ ರಾಜಾಳ್ವಿಕೆಯನ್ನು ಕಿತ್ತೊಗೆದು ಒಂದು ಧರ್ಮಪ್ರಧಾನ ಸರಕಾರವನ್ನು ಸ್ಥಾಪಿಸಲಾಗಿತ್ತು. ಆರಂಭಿಕ ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭಾವುಕ ಜನಬೆಂಬಲ ಪಡೆದಿದ್ದ ಆ ಸರಕಾರ ಇದೀಗ ನಾಲ್ಕೂವರೆ ದಶಕಗಳಷ್ಟು ಹಳೆಯದಾಗಿದ್ದು ಹೊಸ ತಲೆಮಾರಿನವರ ಮಧ್ಯೆ ಅದರ ಜನಪ್ರಿಯತೆ ತೀರಾ ಸೀಮಿತವಾಗಿದೆ. ನಮ್ಮಲ್ಲಿ ಬಿಜೆಪಿ ಸರಕಾರ ಬರುವ ಮುನ್ನ, ದೇಶದ ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್ ಸರಕಾರವೇ ಹೊಣೆ, ಆ ಸರಕಾರವೊಂದು ತೊಲಗಿ ಬಿಟ್ಟರೆ ಅದರ ಜೊತೆ ದೇಶದ ಎಲ್ಲ ಸಮಸ್ಯೆಗಳೂ ತೊಲಗಿ ಬಿಡುತ್ತವೆ ಎಂಬ ನಂಬಿಕೆ ಸಾರ್ವತ್ರಿಕವಾಗಿತ್ತಲ್ಲವೇ? ಹಾಗೆಯೇ ಅಲ್ಲೂ ಇಂದಿನ ಸರಕಾರದ ವಿರುದ್ಧ ಹಲವರಲ್ಲಿ ತೀವ್ರ ಆಕ್ರೋಶವಿದೆ. ಭ್ರಷ್ಟ ಧಾರ್ಮಿಕ ನಾಯಕರು ಸರಕಾರ ನಡೆಸುವುದಕ್ಕೆ ಲಾಯಕ್ಕಲ್ಲ ಎಂಬ ಅಭಿಪ್ರಾಯ ದಟ್ಟವಾಗಿದೆ. ಸರಕಾರದ ತಪ್ಪು ಧೋರಣೆಗಳಿಂದಾಗಿ ಜಗತ್ತಿನೆಲ್ಲೆಡೆ ಇರಾನ್‌ನ ಹೆಸರು ಹಾಳಾಗಿದ್ದು ಎಲ್ಲೆಡೆಯಿಂದ ಬಹಿಷ್ಕಾರ, ದಿಗ್ಬಂಧನಗಳನ್ನು ಎದುರಿಸಬೇಕಾಗಿ ಬಂದಿದೆ. ಈ ಸರಕಾರ ತೊಲಗಿ ಬಿಟ್ಟರೆ ಸದ್ಯದ ಎಲ್ಲ ಸಮಸ್ಯೆಗಳಿಂದ ಮುಕ್ತಿ ಸಿಕ್ಕಿ ಬಿಡುತ್ತದೆ ಮತ್ತು ತಮಗೆ ಸುಭದ್ರ, ಸಂಪನ್ನ ಜೀವನ ಪ್ರಾಪ್ತವಾಗಿ ಬಿಡುತ್ತದೆ ಎಂದು ನಂಬುವವರು ಇಂದಿನ ಇರಾನ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ಮಾಡುವ ಮೂಲಕ ಇರಾನ್ ಸರಕಾರಕ್ಕೆ ಭಾರೀ ಉಪಕಾರ ಮಾಡಿವೆ. ಇರಾನ್ ಜನತೆಗೆ ತಮ್ಮ ಸರಕಾರದ ಮೇಲೆ ಎಷ್ಟೇ ಕೋಪವಿದ್ದರೂ, ಇಸ್ರೇಲ್ ಮತ್ತು ಅಮೆರಿಕ ತಮ್ಮ ನೈಜ ಶತ್ರುಗಳೆಂಬುದನ್ನು ಗುರುತಿಸುವಷ್ಟು ಪ್ರಬುದ್ಧತೆ ಅವರಲ್ಲಿದೆ. ಆದ್ದರಿಂದ ಇರಾನ್ ಸರಕಾರಕ್ಕೆ ತನ್ನ ಜನತೆಯ ವಿಶ್ವಾಸವನ್ನು ಮರಳಿ ಪಡೆಯಲಿಕ್ಕಾಗಿ ಇನ್ನಾವುದಾದರೂ ದೇಶದ ಮೇಲೆ ದಾಳಿ ಮಾಡಬೇಕಾದ ಅಗತ್ಯವೇ ಉಂಟಾಗಲಿಲ್ಲ. ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ನಡೆಸುವ ಮೂಲಕ ಇರಾನ್ ಸರಕಾರದ ಜನಪ್ರಿಯತೆಯ ಸಮಸ್ಯೆಯನ್ನು ಬಗೆಹರಿಸಿಬಿಟ್ಟವು. ಇರಾನ್‌ನಲ್ಲಿ ಸರಕಾರವನ್ನು ವಿರೋಧಿಸುತ್ತಿದ್ದ ಎಲ್ಲ ಪಕ್ಷ, ಸಂಘಟನೆಗಳು ತಾವಾಗಿಯೇ ಮುಂದೆ ಬಂದು ತಾವೆಲ್ಲಾ ಸರಕಾರದ ಜೊತೆಗಿದ್ದೇವೆ ಮತ್ತು ಸರಕಾರದ ಎಲ್ಲ ನಿರ್ಧಾರಗಳನ್ನು ಪ್ರಶ್ನಾತೀತವಾಗಿ ಬೆಂಬಲಿಸುತ್ತೇವೆ ಎಂಬ ಆಶ್ವಾಸನೆ ನೀಡಿದವು. ಯುದ್ಧ ಕೊನೆಗೊಳ್ಳುವ ಹೊತ್ತಿಗೆ ತನ್ನ ದೇಶದೊಳಗೆ ಇರಾನ್ ಸರಕಾರದ ಜನಪ್ರಿಯತೆ ಸಾಕಷ್ಟು ಹೆಚ್ಚಿದ್ದು ಮಾತ್ರವಲ್ಲ, ಜಾಗತಿಕ ಮಟ್ಟದಲ್ಲೂ ಹಲವಾರು ವಲಯಗಳಲ್ಲಿ ಇರಾನ್‌ನ ಗೌರವ ಮತ್ತು ಪ್ರತಿಷ್ಠೆ ಬಹಳಷ್ಟು ವೃದ್ಧಿಸಿದೆ. ಈ ಜೀವದಾನಕ್ಕಾಗಿ ಇರಾನ್ ಸರಕಾರವು ಇಸ್ರೇಲ್ ಮತ್ತು ಯುಎಸ್‌ಎಗಳಿಗೆ ಬಹುಕಾಲ ಋಣಿಯಾಗಿರಬೇಕು.

*****

ಇಸ್ರೇಲ್ ದಾಳಿಯಿಂದಾಗಿ ಇರಾನ್ ಮತ್ತು ಅಲ್ಲಿನ ಶಿಯಾ ಮುಸ್ಲಿಮರಿಗೆ ಇನ್ನೊಂದು ದೊಡ್ಡ ಉಪಕಾರವಾಗಿದೆ.

ಇರಾನ್ ಜನತೆ, ತಮ್ಮ ದೇಶದಲ್ಲಿದ್ದ ರಾಜಾಳ್ವಿಕೆಯ ವಿರುದ್ಧ ಬಂಡೆದ್ದು, ದೀರ್ಘಕಾಲ ಹೋರಾಡಿ, ರಾಜನನ್ನು ದೇಶದಿಂದಲೇ ಹೊರದಬ್ಬಿ ಅರಮನೆ ಆಡಳಿತದಿಂದ ಮುಕ್ತಿ ಪಡೆದವರು. ಆದ್ದರಿಂದಲೇ, ಮಧ್ಯಪ್ರಾಚ್ಯದ ಹೆಚ್ಚಿನ ದೇಶಗಳಲ್ಲಿ ಈಗಲೂ ಜನತೆಯ ಇಚ್ಛೆಗೆ ವಿರುದ್ಧವಾಗಿ ತಮ್ಮನ್ನು ಜನತೆಯ ಮೇಲೆ ಹೇರಿಕೊಂಡಿರುವ ಜನವಿರೋಧಿ ರಾಜಕುಟುಂಬಗಳಿಗೆ ಇರಾನ್ ನ ಹೆಸರು ಕೇಳಿದೊಡನೆ ದಿಗಿಲು. ರಾಜರನ್ನು ಖಳನಾಯಕರಂತೆ ಕಾಣುವ ಮತ್ತು ರಾಜಾಳ್ವಿಕೆಯ ವಿರುದ್ಧ ಬಂಡಾಯವೇಳುವುದು ತಮ್ಮ ಧಾರ್ಮಿಕ ಕರ್ತವ್ಯ ಎಂದು ನಂಬುವ ಇರಾನ್ ಸಂಸ್ಕೃತಿ, ಅದೆಲ್ಲಿ ತಮ್ಮ ದೇಶಕ್ಕೆ ಬಂದು ಬಿಡುತ್ತದೋ ಎಂಬ ಭಯ ಅವರಿಗೆ. ಇದಕ್ಕೆ ಪರಿಹಾರವಾಗಿ ಅವರು ಇರಾನ್ ಸರಕಾರ ಮತ್ತು ಶಿಯಾ ಪಂಥದ ಮುಸ್ಲಿಮರ ವಿರುದ್ಧ ಹಲವು ಬಗೆಯ ಅಪಪ್ರಚಾರಗಳನ್ನು ಮಾಡಿದ್ದರು. ಇರಾನ್‌ನವರು ಮತ್ತು ಶಿಯಾಗಳು ಇಸ್ರೇಲ್ ವಿರುದ್ಧ ಎಷ್ಟೇ ಮಾತನಾಡಿದರೂ ಒಳಗೊಳಗೇ ಅವರು ಪರಸ್ಪರ ಪಾರ್ಟ್ನರ್‌ಗಳು ಎಂದು ಜನರನ್ನು ನಂಬಿಸಲು ಅವರು ದೊಡ್ಡ ಮಟ್ಟದ ಅಭಿಯಾನವನ್ನೇ ನಡೆಸಿದ್ದರು. ಈ ವಿಷಯದಲ್ಲಿ ವಿಶೇಷವಾಗಿ ಸೌದಿ ದೊರೆಗಳು ಮತ್ತು ಅವರ ಬಾಲಬಡುಕರು ಮುಂಚೂಣಿಯಲ್ಲಿದ್ದರು. 1979ರ ಇರಾನ್ ಕ್ರಾಂತಿಯ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಈ ಅಪಪ್ರಚಾರದ ಸೌಧವು, 1990ರಲ್ಲಿ ಕುವೈತ್ ಮೇಲೆ ಇರಾಕ್‌ನ ಸದ್ದಾಮ್ ಹುಸೈನ್ ನಡೆಸಿದ ಆಕ್ರಮಣದೊಂದಿಗೆ ಕುಸಿದು ಬಿದ್ದಿತ್ತು. ಆವರೆಗೂ ಇರಾನ್ ತಮ್ಮ ಶತ್ರು ಎಂದು ನಂಬಿ ಇರಾನನ್ನು ಮುಗಿಸುವುದಕ್ಕಾಗಿ ಇರಾಕ್‌ನ ಅರಬ್ ಸರ್ವಾಧಿಕಾರಿ ಸದ್ದಾಮ್‌ರನ್ನು ಹಾಲೆರೆದು ಪೋಷಿಸಿದ್ದ ಅರಬ್ ದೊರೆಗಳಿಗೆ ಅದೊಂದು ಭೀಕರ ಆಘಾತವಾಗಿತ್ತು. ಮುಂದೆ, ಸದ್ದಾಮ್ ಯುಗ ಮುಗಿದ ಬಳಿಕ ಮತ್ತೆ ‘ಇಸ್ರೇಲ್ ಮತ್ತು ಇರಾನ್ ಒಂದೇ ಒರೆಯ ಎರಡು ಖಡ್ಗಗಳು’ ಎಂಬ ಅಪಪ್ರಚಾರ ಆರಂಭವಾಗಿತ್ತು. ಬಹುಕಾಲದಿಂದ ಇಸ್ರೇಲ್ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿರುವ ಲೆಬನಾನ್‌ನ ಹಿಜ್ಬುಲ್ಲಾ ಮತ್ತು ಯಮನ್‌ನ ಹೂತಿ ಪಡೆಗಳು ಇರಾನ್ ಬೆಂಬಲಿತ ಶಿಯಾ ಪಂಥೀಯರ ಪಡೆಗಳೆಂಬುದೇ, ‘ಶಿಯಾ-ಇಸ್ರೇಲ್ ಮೈತ್ರಿ’ ಯ ಆರೋಪ ಪೊಳ್ಳು ಎಂಬುದಕ್ಕೆ ಪರ್ಯಾಪ್ತ ಪುರಾವೆಯಾಗಿತ್ತು. ಇದೀಗ ಇರಾನ್ ಮತ್ತು ಇಸ್ರೇಲ್‌ಗಳ ನಡುವೆ ನಿಜಕ್ಕೂ ನೇರ ಮತ್ತು ಭೀಕರ ಯುದ್ಧ ನಡೆಯುವ ಮೂಲಕ, ಮುಂದಿನ ಕೆಲವು ವರ್ಷಗಳ ಮಟ್ಟಿಗಾದರೂ ಇರಾನ್ ಮತ್ತು ಶಿಯಾಗಳಿಗೆ ಪ್ರಸ್ತುತ ಆರೋಪದಿಂದ ಮುಕ್ತಿ ಸಿಕ್ಕಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಗಲ್ಫ್ ದೊರೆಗಳು ತಾಳುತ್ತಾ ಬಂದಿರುವ ಧೋರಣೆಗಳು, ಅಮೆರಿಕ ಮತ್ತು ಇಸ್ರೇಲ್‌ಗಳ ನೈಜ ಪಾಲುದಾರರು ಅಥವಾ ನೈಜ ಗುಲಾಮರು ಯಾರು ಎಂಬುದನ್ನು ಎಲ್ಲರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X