ವೈವಾಹಿಕ ಜೀವನದಲ್ಲಿ ಜಾತಿ ಅಡಚಣೆ

ಅಂತರ್ಜಾತಿ ವಿವಾಹದಲ್ಲಿ ಆಧುನಿಕ ಭಾರತವು ಹಿಂದೆ ಬಿದ್ದಿಲ್ಲ. ಹಲವು ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು ಅಂತರ್ಜಾತಿ ವಿವಾಹವಾಗಿದ್ದಾರೆ.
ಕರ್ನಾಟಕವೂ ಅಂತರ್ಜಾತಿ ವಿವಾಹಗಳ ಕುತೂಹಲಕಾರಿ ಇತಿಹಾಸವನ್ನು ಹೊಂದಿದೆ. ಭಕ್ತಿ ಭಂಡಾರಿ ಬಸವಣ್ಣ ಅಂಥ ವಿವಾಹಗಳ ಮಹಾನ್ ಪ್ರೋತ್ಸಾಹಕನಾಗಿದ್ದ. ಸರ್ವಜ್ಞ ಸ್ವತಃ ಅಂಥ ವಿವಾಹದಲ್ಲಿ ಪಾಲುದಾರನಾಗಿದ್ದ.
ಮಹಾತ್ಮಾ ಗಾಂಧೀಯವರು ಜಾತೀಯ ವಿವಾಹಗಳಿಗೆ ಹಾಜರಾಗದಿರಲು ನಿರ್ಧರಿಸಿದ್ದರು. ಸ್ವಾಮಿ ವಿವೇಕಾನಂದರು ಜಾತೀಯ ವಿವಾಹಗಳನ್ನು ಖಂಡಿಸಿದ್ದರು. ಪಂಡಿತ್ ನೆಹರೂ ಅವರು ಸ್ವತಃ ತಮ್ಮ ಮನೆಯಲ್ಲಿ ಅದನ್ನು ಆಚರಣೆಗೆ ತಂದರು. ಡಾ. ಅಂಬೇಡ್ಕರ್ ರವರು ತಮ್ಮ ಜಾತಿಯವರಲ್ಲದವರನ್ನು ವಿವಾಹವಾದರಲ್ಲದೆ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವಂತೆ ಕರೆ ನೀಡಿದರು. ರಾಮ ಮನೋಹರ ಲೋಹಿಯಾ ಅವರು ಅದನ್ನು ಬಲವಾಗಿ ಪ್ರತಿಪಾದಿಸಿದರಲ್ಲದೆ ಎಲ್ಲಾ ಪತ್ರಾಂಕಿತ ಹುದ್ದೆಗಳನ್ನು ಅಂಥ ಕುಟುಂಬಗಳ ಅಭ್ಯರ್ಥಿಗಳಿಗೆ ಮಾತ್ರ ನೀಡಬೇಕೆಂದು ಸಲಹೆ ಮಾಡುವ ಮಟ್ಟಕ್ಕೂ ಹೋದರು. ಚರಣ್ ಸಿಂಗ್ ಅವರು ಮೇ 22, 1954ಕ್ಕಿಂತ ಮುಂಚೆ ಅಂಥ ಕುಟುಂಬದ ಸದಸ್ಯರುಗಳಿಗೆ ಮೀಸಲಾತಿಯನ್ನು ಜಾರಿಗೊಳಿಸುವಂತೆ ಪ್ರಧಾನಮಂತ್ರಿಯವರಿಗೆ ಪತ್ರವನ್ನೂ ಬರೆದಿದ್ದರು. ಪ್ರಸಿದ್ಧ ಕವಿ ಹಾಗೂ ಶಾಸಕರಾದ ಡಾ. ಸಿದ್ದಲಿಂಗಯ್ಯನವರು ಅಂತರ್ಜಾತಿಯ ವಿವಾಹಿತರಿಗೆ ಶೇ. ಐದರಷ್ಟು ಉದ್ಯೋಗಗಳನ್ನು ಮೀಸಲಿರಿಸುವಂತೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ನಿರ್ಣಯ ಮಂಡಿಸಿದ್ದರು.
ವಾಸ್ತವಗಳು ಏನೇ ಇದ್ದರೂ, ಇಂದಿನ ತನಕ ಕೇಂದ್ರವಾಗಲಿ ಅಥವಾ ರಾಜ್ಯಗಳಾಗಲಿ ಅಂತಹ ನೀತಿಯನ್ನು ಜಾರಿಗೊಳಿಸಿಲ್ಲ.
ಭಾರತದಲ್ಲಿ ಅನೇಕ ದಾರ್ಶನಿಕರು ಈ ನಿಟ್ಟಿನಲ್ಲಿ ಹೋರಾಟವನ್ನೇ ಮಾಡಿದರೂ ಸಫಲರಾಗಲಿಲ್ಲ. ಈ ವಿಫಲತೆಯನ್ನು ಕಂಡು ಮರುಗಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವಜಾತಿ ವಿವಾಹ ಕಾನೂನುಬಾಹಿರ ಎಂದು ಕಾನೂನು ತನ್ನಿ ಎಂಬ ಸಲಹೆಯನ್ನು ನೀಡಿದ್ದರು. ಅಲ್ಲದೆ, ‘Annihilation Of Caste’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿದ್ದರು.
ಭಾರತದಲ್ಲಿ ಜಾತಿ ಒಪ್ಪಿತ ವಾಸ್ತವ. ಇದು ಒಂದು ಬೃಹತ್ ವೃಕ್ಷದ ರೀತಿ. ಮರದ ಬೇರುಗಳು ಭೂಮಿಯಲ್ಲಿ ಆಳವಾಗಿ ಊರಿವೆ. ಅಂತೆಯೇ ಜಾತಿ ಕೂಡ ಮರದ ಬೇರಿನಂತೆ. ಅದು ಮರದ ಕೊಂಬೆಯಂತೆ ಟಿಸಿಲೊಡೆದಿಲ್ಲ. ಕೊಂಬೆಗಳಾಗಿದ್ದರೆ ಅವನ್ನು ತುಂಡರಿಸಬಹುದಿತ್ತು.