ಹಾಲಿನ ಉತ್ಪಾದನೆ ಹೆಚ್ಚಳ: ಆರ್ಥಿಕ ಸಂಕಷ್ಟದಿಂದ ಪಾರಾಗುತ್ತಿರುವ ಹೈನುಗಾರರು

ಶಿಡ್ಲಘಟ್ಟ : ಬೇಸಿಗೆಯ ಆರಂಭದ ದಿನಗಳಲ್ಲಿ, ಹೈನೋದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಉತ್ಪಾದಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಮಳೆಗಾಲ ಆರಂಭವಾದ ನಂತರ ಹಾಲಿನ ಉತ್ಪಾದನೆ ಹೆಚ್ಚಳವಾಗಿರುವುದು ಉತ್ಪಾದಕರ ಆರ್ಥಿಕ ಮಟ್ಟ ಸುಧಾರಣೆಗೆ ಅನುಕೂಲವಾಗುತ್ತಿದೆ.
ಪ್ರತಿಯೊಂದು ಹಳ್ಳಿಗಳಲ್ಲಿ ಬಹುತೇಕ ರೈತರು ಹೈನುಗಾರಿಕೆಯಿಂದ ಇಡೀ ಕುಟುಂಬವನ್ನು ನಿರ್ವಹಣೆ ಮಾಡುತ್ತಾರೆ. ಆದರೆ ಬೇಸಿಗೆ ಆರಂಭವಾದ ನಂತರ ಹಾಲಿನ ಉತ್ಪಾದನೆ ಕಡಿಮೆಯಾಗಿದ್ದರಿಂದ, ಕೃಷಿ, ತೋಟಗಾರಿಕೆ ಬೆಳೆಗಳಿಗೂ ಬೆಲೆಯಿಲ್ಲದೆ ಕಂಗಾಲಾಗಿದ್ದರು. ತೋಟಗಳಲ್ಲಿ ನೀರಾವರಿ ಹೊಂದಿರುವ ರೈತರು, ಮಾತ್ರ, ತಮ್ಮ ತೋಟಗಳಲ್ಲಿ ಮೇವಿನ ಜೋಳ ಸೇರಿದಂತೆ ಮೇವಿನ ಬೆಳೆ ಬೆಳೆದುಕೊಂಡು, ರಾಸುಗಳಿಗೆ ಹಸಿರು ಮೇವು ನೀಡುತ್ತಾರೆ.
ಪಶುಪಾಲನಾ ಇಲಾಖೆಯಿಂದಲೂ ನೀರಾವರಿ ಇರುವ ರೈತರಿಗೆ ಮೇವಿನ ಬೀಜಗಳನ್ನು ವಿತರಣೆ ಮಾಡಿ, ಹಸಿರು ಮೇವು ಸಂಗ್ರಹಿಸಲು ಮುಂದಾಗಿತ್ತು. ಆದರೆ, ರೈತರು ತಾವು ಬೆಳೆದ ಮೇವನ್ನು ತಮ್ಮ ಮನೆಗಳಲ್ಲಿನ ರಾಸುಗಳಿಗೆ ಬಳಕೆ ಮಾಡಿಕೊಂಡು ಬೆರಳೆಣಿಕೆಯಷ್ಟು ಮಂದಿ ಮಾತ್ರ, ಹಾಲಿನ ಉತ್ಪಾದನೆ ಕಡಿಮೆಯಾಗದಂತೆ ನೋಡಿಕೊಂಡಿದ್ದರು. ನೀರಾವರಿ ಇಲ್ಲದ ಉತ್ಪಾದಕರು, ಮಾರುಕಟ್ಟೆಯಲ್ಲಿ ಹಸಿರು ಮೇವು ಖರೀದಿಸಿಕೊಂಡು ಬಂದು ರಾಸುಗಳಿಗೆ ಹಸಿರು ಮೇವು ಒದಗಿಸಿದರೂ, ನಿರೀಕ್ಷೆಯಂತೆ ಹಾಲು ಉತ್ಪಾದನೆ ಮಾಡಲು ಸಾಧ್ಯವಾಗಿರಲಿಲ್ಲ.
ಮಳೆಗಾಲದಲ್ಲಿ ರೈತರಿಗೆ ಬಯಲಿನಲ್ಲಿ ಹಸಿರು ಹುಲ್ಲು ಸಿಗುತ್ತಿದೆ. ಇದರ ಜೊತೆಗೆ ತೋಟಗಳಲ್ಲಿ ಬೆಳೆದಿರುವ ಮೇವಿನ ಜೋಳವು ಸಿಗುತ್ತಿರುವ ಕಾರಣ, ಇತ್ತಿಚೆಗೆ ರಾಸುಗಳಲ್ಲಿ ಹಾಲಿನ ಉತ್ಪಾದನಾ ಸಾಮರ್ಥ್ಯವೂ ಹೆಚ್ಚಾಗಿದ್ದು, ಉತ್ಪಾದಕರ ಆರ್ಥಿಕ ಮಟ್ಟ ಸುಧಾರಣೆಗೆ ಅನುಕೂಲವಾಗಿದೆ.
ರಾಸುಗಳಿಗೆ ಬೇಡಿಕೆ: ಹೈನುಗಾರರು ಬೇಸಿಗೆಯಲ್ಲಿ ರೋಗ ಬಾಧೆ ಹಾಗೂ ಮೇವು ಒದಗಿಸಲು ಸಾಧ್ಯವಾಗದೆ ರಾಸುಗಳನ್ನು ಮಾರಾಟ ಮಾಡಿದ್ದರು. ಮಳೆಗಾಲ ಆರಂಭವಾದ ನಂತರ ಮತ್ತೆ ಖರೀದಿಗೆ ಇಳಿದಿರುವುದರಿಂದ ರಾಸುಗಳಿಗೆ ಬೇಡಿಕೆ ಹೆಚ್ಚಾಗಿದೆ. ರಾಸುಗಳ ಬೆಲೆಗಳೂ ಗಗನಮುಖಿಯಾಗಿವೆ.
ಸೆಮೆನ್ ತೆಗೆದುಕೊಳ್ಳುವ ಹಂತದಲ್ಲಿರುವ ಹಸುಗಳು 40 ಸಾವಿರದಿಂದ ಆರಂಭವಾಗಿ 8 ತಿಂಗಳಿನ ಹಸುಗಳು ಸುಮಾರು 80 ಸಾವಿರ ರೂ.ವರೆಗೂ ಮಾರಾಟವಾಗುತ್ತಿದೆ. ಎಚ್.ಎಫ್.ತಳಿಯ ಹಸುಗಳಿಗೆ ಹೆಚ್ಚು ಬೇಡಿಕೆ ಇದೆ. ಇವುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣ ಉತ್ಪಾದಕರು ಕಪ್ಪು ಬಿಳುಪಿನ ಹಸುಗಳನ್ನೇ ಹೆಚ್ಚು ನೆಚ್ಚಿ ಕೊಳ್ಳುತ್ತಿದ್ದಾರೆ. ಜರ್ಸಿ ತಳಿಯ ಹಸುಗಳಲ್ಲಿ ಹಾಲಿನ ಉತ್ಪಾದನೆ ಜಾಸ್ತಿಯಿದ್ದರೂ ರೋಗ ನಿರೋಧಕ ಶಕ್ತಿ ಕಡಿಮೆ ಎನ್ನುವ ಕಾರಣಕ್ಕೆ ಹೆಚ್ಚು ಮಂದಿ ರೈತರು, ಜರ್ಸಿ ಹಸುಗಳ ಕಡೆಗೆ ಗಮನಹರಿಸುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಹಾಲಿನ ದರ: ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ಒಂದು ಲೀಟರ್ ಹಾಲಿಗೆ 3.5 ಕೊಬ್ಬಿನಾಂಶ, ಎಸ್.ಎನ್.ಎಫ್ 8.5, ಬಂದರೆ 34.15 ರೂ., ಕೊಬ್ಬಿನಾಂಶ ಏರಿಕೆಯಾದರೆ, 3.5 ರ ಮೇಲೆ 0.25. ಪೈಸೆ ಜಾಸ್ತಿಯಾಗುತ್ತದೆ. ಸರಕಾರದಿಂದ 5 ರೂ. ಸಿಗುತ್ತಿದೆ. 3.5ಕ್ಕಿಂತ ಕಡಿಮೆ ಕೊಬ್ಬಿನಾಂಶವಿದ್ದರೆ ಪ್ರೋತ್ಸಾಹಧನ ಸಿಗುವುದಿಲ್ಲ.
ಬೇಸಿಗೆಯಲ್ಲಿ ಹಸಿರು ಮೇವು ಒದಗಿಸಲು ತುಂಬಾ ಪರದಾಡಿದೆವು. ಹಾಲು ಕಡಿಮೆಯಾಗಿ, ಜೀವನ ನಡೆಸುವುದು ತುಂಬಾ ಕಷ್ಟವಾಗಿತ್ತು. ಸಂಘಗಳಿಗೆ ಸಾಲ ಮಾಡಿಕೊಂಡು ಬಂದು ಕಟ್ಟಿದೆವು. ಈಗ ಹಾಲಿನ ಉತ್ಪಾದನೆ ಸುಧಾರಣೆಯಾಗುತ್ತಿದೆ.
-ಭಾಗ್ಯಮ್ಮ, ರೈತ ಮಹಿಳೆ
ಎಪ್ರಿಲ್ ತಿಂಗಳಿನಲ್ಲಿ 1 ಲಕ್ಷ 12 ಸಾವಿರ ಲೀಟರ್ ಇದ್ದ ಹಾಲಿನ ಪ್ರಮಾಣ, ಈಗ 1 ಲಕ್ಷ 28 ಸಾವಿರ ಲೀಟರ್ ಗೆ ಏರಿಕೆಯಾಗಿದೆ. ಜುಲೈ ತಿಂಗಳಿನಲ್ಲಿ ಎಲ್ಲ ಉತ್ಪಾದಕರು ಪ್ರೋತ್ಸಾಹಧನಕ್ಕೆ ಅರ್ಹರಾಗಿದ್ದಾರೆ. ತಾಲೂಕಿನಲ್ಲಿ 218 ಸಂಘಗಗಳಿದ್ದು, 9,120 ಮಂದಿ ಹಾಲು ಉತ್ಪಾದಕರಿದ್ದಾರೆ.
-ಡಾ.ಬಿ.ಆರ್.ರವಿಕಿರಣ್, ಶಿಡ್ಲಘಟ್ಟ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ







