ಮೋದಿ ಸಿದ್ಧಾಂತ: ಅಸ್ಥಿರತೆಯ ಯುಗದಲ್ಲಿ ಸ್ಥಿರತೆ

ವಿನ್‌ಸ್ಟನ್ ಚರ್ಚಿಲ್ ಅವರು ವಿಕ್ಟೋರಿಯನ್ ಯುಗದ ಕೊನೆಯ ದಶಕಗಳನ್ನು ‘ಮಹಾನ್ ವ್ಯಕ್ತಿಗಳು ಮತ್ತು ಸಣ್ಣ ಘಟನೆಗಳ ಯುಗ’ ಎಂದು ಒಮ್ಮೆ ಬಣ್ಣಿಸಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಪಂಡಿತ್ ನೆಹರು ಅವರು 1959–1960ರ ಅವಧಿಯನ್ನು ‘ಸಣ್ಣ ವ್ಯಕ್ತಿಗಳು ಮಹತ್ವದ ಘಟನೆಗಳು ಮತ್ತು ಮಹತ್ವದ ನಿರ್ಧಾರಗಳನ್ನು ಎದುರಿಸುತ್ತಿದ್ದ ಕಾಲ’ ಎಂದು ವಿವರಿಸಿದ್ದರು.
21ನೇ ಶತಮಾನದ ಕಾಲುಭಾಗ ಈಗಾಗಲೇ ಕಳೆದಿದೆ. ಈ ಅವಧಿಯನ್ನು ಅಪಾರ ಮಹತ್ವದ ಘಟನೆಗಳಿಂದ ಗುರುತಿಸಬಹುದು. ಅತ್ಯಂತ ಪ್ರತಿಭಾವಂತ ಕಲ್ಪನೆಯನ್ನೂ ಬೆರಗುಗೊಳಿಸುವಷ್ಟು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಹಂತಗಳನ್ನು ದಾಟಿ ಸಾಗಿದ ಪ್ರಗತಿಯ ಜೊತೆಗೆ, ಈವರೆಗೆ ಕಂಡುಬರದಷ್ಟು ಅಧಃಪತನ ಮತ್ತು ನೈತಿಕ ಅವನತಿಯೂ ಕಂಡುಬಂದಿದೆ.
ಎರಡನೇ ವಿಶ್ವಯುದ್ಧದ ನಂತರದ ಜಗತ್ತು ಮಾನವ ಜೀವನದ ಗುಣಮಟ್ಟ, ಸಂಪತ್ತು ಮತ್ತು ಸಾಮಾನ್ಯವಾಗಿ ರಾಜಕೀಯ ನೈತಿಕತೆಯಲ್ಲಿ ಹಿಂದೆಂದೂ ಕಾಣದಂತಹ ಪ್ರಗತಿಯನ್ನು ಕಂಡಿತು. ಜಾಗತಿಕ ವ್ಯವಸ್ಥೆ ಕ್ರಮೇಣ ಏಕಧ್ರುವೀಯತೆಯತ್ತ ಸಾಗಿತು. ಅದು ಹೊಸ ವಾಸ್ತವಿಕತೆಯಾಗಿ ರೂಪುಗೊಳ್ಳುತ್ತಿದೆ ಎಂದು ತೋರುತ್ತಿದ್ದಂತೆಯೇ, ಕಳೆದ ಒಂದು ದಶಕದ ಘಟನೆಗಳು ಮತ್ತೆ ಜಾಗತಿಕ ವ್ಯವಸ್ಥೆಯನ್ನು ಬದಲಿಸಿದವು. ಈ ಬದಲಾವಣೆಗಳು ನಿರಂತರವಾಗಿ ಮುಂದುವರಿಯುತ್ತಿದ್ದು, ಹಿಂದೆ ಭದ್ರವೆಂದು ಪರಿಗಣಿಸಲಾಗಿದ್ದ ಅಡಿಪಾಯಗಳನ್ನೇ ನಡುಗಿಸುವ ಭೂಕಂಪಗಳ ಸರಣಿಯಂತೆ ಪರಿಣಾಮ ಬೀರುತ್ತಿವೆ.
ಸಾಂಕ್ರಾಮಿಕ, ಉಕ್ರೇನ್‌ನಲ್ಲಿನ ಯುದ್ಧ ಮತ್ತು ಇದೀಗ ಅಮೆರಿಕ–ಇರಾನ್ ಯುದ್ಧ, ಕಾನೂನಿನ ಆಳ್ವಿಕೆಯನ್ನು ಆಧರಿಸಿದ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಬದಿಗೊತ್ತಿರುವುದು ಹಾಗೂ ದಂಡಾತ್ಮಕ ಸುಂಕಗಳ ಹೊಸ ನೀತಿ - ಇವೆಲ್ಲವೂ ಜಾಗತಿಕ ಪೂರೈಕೆ ಸರಪಳಿಗಳನ್ನು ಛಿದ್ರಗೊಳಿಸಿವೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿವೆ. ಇದೇ ವೇಳೆ, ಯುರೋಪ್ ತನ್ನನ್ನು ತಾನೇ ನಿಭಾಯಿಸಿಕೊಳ್ಳಬೇಕಾದ ಹೊಸ ರಾಜಕೀಯ - ಆರ್ಥಿಕ ವಾಸ್ತವಿಕತೆಯೊಂದಿಗೆ ಹೊಂದಿಕೊಳ್ಳಲು ಹೋರಾಡುತ್ತಿದೆ.
ವಿನಾಶದ ಭವಿಷ್ಯವನ್ನು ಊಹಿಸಿದವರ ನಿರೀಕ್ಷೆಗಳಿಗೆ ವಿರುದ್ಧವಾಗಿ, ಈ ಪ್ರಕ್ಷುಬ್ಧ ಅವಧಿಯಲ್ಲಿ ಭಾರತವು ಸ್ಥಿರತೆಯ ದ್ವೀಪವಾಗಿ ಮತ್ತು ಬೆಳವಣಿಗೆಯ ಚಾಲಕಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ಕಾರಣವೇನೆಂಬುದನ್ನು ವಿಶ್ಲೇಷಿಸಿದರೆ, ಸ್ಪಷ್ಟ ನಿರ್ದೇಶನದೊಂದಿಗೆ ಭಾರತದಲ್ಲಿ ರಾಜಕೀಯ ನಿರಂತರತೆ ಇರುವುದೇ ಇದನ್ನು ಸಾಧ್ಯವಾಗಿಸಿದೆ ಎಂಬುದು ಸ್ಪಷ್ಟವಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಒಂದು ದಶಕಕ್ಕೂ ಹೆಚ್ಚಿನ ಅವಧಿಯ ನಾಯಕತ್ವದ ಮೊದಲ ಪ್ರಮುಖ ಲಕ್ಷಣವೆಂದರೆ, ಸ್ಪಷ್ಟವಾದ ರಾಷ್ಟ್ರೀಯ ಗುರಿಯೊಂದಿಗೆ ಹೊಂದಿಕೊಂಡಿರುವ ಸ್ಥಿರತೆ ಮತ್ತು ರಾಜಕೀಯ ನಿರಂತರತೆ. ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಲ್ಲಿ ಇದೇ ಲಕ್ಷಣ ಗಮನಾರ್ಹವಾಗಿ ಕಾಣಿಸದಿರುವುದು ವಿಶೇಷ.
ಕಳೆದ ಹನ್ನೆರಡು ವರ್ಷಗಳ ರಾಜಕೀಯ ಲೆಕ್ಕಾಚಾರವನ್ನು ಗಮನಿಸಿದರೆ, ಬ್ರಿಟನ್ ನಲ್ಲಿ ಆರು ಪ್ರಧಾನಮಂತ್ರಿಗಳು ಬದಲಾಗಿದ್ದಾರೆ. ಫ್ರಾನ್ಸ್ ನಲ್ಲಿ ಒಂಬತ್ತು ಪ್ರಧಾನಮಂತ್ರಿಗಳು ಬದಲಾಗಿದ್ದು, ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಆರನೇ ಪ್ರಧಾನಮಂತ್ರಿಯನ್ನು ಹುಡುಕುವ ಸ್ಥಿತಿಯಲ್ಲಿ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರೋನ್ ಇದ್ದಾರೆ. ಜಪಾನ್ ಮತ್ತು ಇಟಲಿಯಲ್ಲಿ ತಲಾ ಐವರು ಪ್ರಧಾನಮಂತ್ರಿಗಳು ಬದಲಾಗಿದ್ದಾರೆ. ಅಮೆರಿಕ ನಾಲ್ಕು ಅಧ್ಯಕ್ಷೀಯ ಅವಧಿಗಳನ್ನು ಕಂಡಿದ್ದು, ಎರಡು ಬಾರಿ ಪಕ್ಷಗಳ ನಡುವೆ ಅಧಿಕಾರ ಹಸ್ತಾಂತರವಾಗಿದೆ; ಅಲ್ಲಿ ಆಡಳಿತದ ಮೂಲಭೂತ ಸಂಗತಿಗಳ ಬಗ್ಗೆಯೇ ಎರಡೂ ಪಕ್ಷಗಳು ಒಮ್ಮತಕ್ಕೆ ಬರುವುದು ವಿರಳ.
ಪ್ರಧಾನಮಂತ್ರಿ ಮೋದಿ ಅವರ ನಾಯಕತ್ವದ ಮೂಲಾಧಾರವೆಂದರೆ ಸ್ಥಿರತೆ ಮತ್ತು ಭಾರತ ತನ್ನ ಅಡಿಪಾಯದ ಮೇಲೆ ಮತ್ತಷ್ಟು ನಿರ್ಮಾಣವಾಗಬೇಕು ಎಂಬ ಅಚಲ ನಂಬಿಕೆಯಿಂದ ರೂಪುಗೊಂಡ ನೀತಿ. ದೇಶದೊಳಗೆ ಬಲಿಷ್ಠ ಮತ್ತು ಸ್ಥಿರವಾದ ಭಾರತ ನಿರ್ಮಾಣವಾದರೆ, ಜಾಗತಿಕ ವೇದಿಕೆಯಲ್ಲೂ ಭಾರತ ಹೆಚ್ಚು ಆತ್ಮವಿಶ್ವಾಸದಿಂದ ಮತ್ತು ಸ್ವಾಯತ್ತವಾಗಿ ಕಾರ್ಯನಿರ್ವಹಿಸಬಹುದು ಎಂಬುದು ಅವರ ದೃಢ ನಂಬಿಕೆ.
ಭಾರತವು ಪರಂಪರೆ ಮತ್ತು ಜ್ಞಾನದ ಅಪಾರ ಸಂಪತ್ತನ್ನು ಹೊಂದಿರುವ ದೇಶ. ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಈ ಸಂಪತ್ತು ವಸಾಹತುಶಾಹಿಯ ಅವಶೇಷಗಳ ಅಡಿಯಲ್ಲಿ ಹೂತುಹೋಗಿತ್ತು. ಪ್ರಾಚೀನ ಭಾರತೀಯ ಜ್ಞಾನವನ್ನು ಸಮಕಾಲೀನ ಕಾಲಕ್ಕೆ ತಕ್ಕಂತೆ ಅಳವಡಿಸಿಕೊಂಡು ಬಳಸುವ ದೃಷ್ಟಿಕೋನವು ಹೊಸ ಮಂತ್ರವಾಗಿ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ನೈತಿಕತೆ, ಮೌಲ್ಯಗಳು ಮತ್ತು ವಂಚಿತ ವರ್ಗಗಳ ಬಗ್ಗೆ ಸಹಾನುಭೂತಿ ಇಂದಿನ ಸಂಸ್ಥೆಗಳ ಕಾರ್ಯವೈಖರಿಯ ಆಧಾರವಾಗುತ್ತಿವೆ. ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಬಳಸಿಕೊಂಡು ಅತ್ಯಂತ ಬಡವರಿಗೂ ತಲುಪುವ ಸಮೃದ್ಧಿಯನ್ನು ಸೃಷ್ಟಿಸುವುದು ಹಾಗೂ ಕುತೂಹಲ ಮತ್ತು ಸಾಹಸ ಮನೋಭಾವ ಹೊಂದಿರುವ ಪ್ರತಿಯೊಬ್ಬ ಯುವ ಮನಸ್ಸಿಗೂ ಅವಕಾಶ ಕಲ್ಪಿಸುವುದು ರಾಷ್ಟ್ರ ನಿರ್ಮಾಣದ ಈ ಮಾದರಿಯ ಪ್ರಮುಖ ಗಮನಕೇಂದ್ರಗಳಾಗಿವೆ. ಹೊಸ ಭಾರತೀಯ ಗುರುತಿನ ಕೇಂದ್ರದಲ್ಲಿರುವ ಬಲವಾದ ಭಾರತೀಯತೆಯ ಭಾವನೆ, ಅಹಂಕಾರವಿಲ್ಲದ ಸ್ವಾಭಿಮಾನ ಮತ್ತು ಬಲಿಷ್ಠ, ಸ್ಥಿರ ಹಾಗೂ ಆತ್ಮವಿಶ್ವಾಸಿ ರಾಷ್ಟ್ರದಲ್ಲಿ ಇಂದಿನ ಕನಸುಗಳು ನಾಳೆಯ ವಾಸ್ತವಿಕತೆಗಳಾಗುತ್ತವೆ ಎಂಬ ನಂಬಿಕೆ - ಇವೆಲ್ಲವೂ ಮೋದಿ ಸಿದ್ಧಾಂತದ ಸಾರವಾಗಿದೆ.
ಪ್ರಜಾಸತ್ತಾತ್ಮಕ ಜಗತ್ತಿನ ರಾಜಕೀಯದ ಪ್ರಮುಖ ಲಕ್ಷಣವೇ ಹೊಸ ಗುರುತನ್ನು ಕಂಡುಕೊಳ್ಳಲು ನಡೆಯುತ್ತಿರುವ ನಿರಂತರ ಬದಲಾವಣೆಗಳಾಗಿರುವ ಈ ದಶಕದಲ್ಲಿ, ಪ್ರಧಾನಮಂತ್ರಿ ಮೋದಿ ಅವರು ಭಾರತದ ಮಿತ್ರರು ಮತ್ತು ಪ್ರತಿಸ್ಪರ್ಧಿಗಳೂ ಮೆಚ್ಚುವಂತಹ ಎರಡು ಸಂಗತಿಗಳನ್ನು ಭಾರತಕ್ಕೆ ನೀಡಿದ್ದಾರೆ: ಸ್ಥಿರತೆ ಮತ್ತು ನಿರಂತರತೆ. ಇತರ ದೇಶಗಳಲ್ಲಿ ಸರ್ಕಾರಗಳು ತಾವು ನಿಭಾಯಿಸಲು ಆಯ್ಕೆಯಾಗಿದ್ದ ಬಿಕ್ಕಟ್ಟುಗಳಿಗಿಂತಲೂ ವೇಗವಾಗಿ ಪತನಗೊಂಡಿವೆ. ಆದರೆ ಭಾರತವು ಗೆಲ್ಲಲು ಹೊರಟಿರುವ ಹಾದಿಯಲ್ಲಿನ ಯಾವುದೇ ಅಡೆತೆಗಳಿಗೂ ವಿಚಲಿತವಾಗದ ಬಲಿಷ್ಠ ಯೋಧನಂತೆ ಆ ಬಿಕ್ಕಟ್ಟುಗಳನ್ನೂ ದಾಟಿ ಮುನ್ನಡೆದಿದೆ.
ಈ ಸ್ಥಿರತೆಯ ಬುನಾದಿಯು ಪ್ರಧಾನಮಂತ್ರಿ ಅವರು 2014ರಿಂದ ನಿರಂತರವಾಗಿ ಪ್ರತಿಪಾದಿಸುತ್ತಿರುವ ಸರಳವಾದ ಸಿದ್ಧಾಂತದಲ್ಲಿದೆ: ಭಾರತದ ನಿರ್ಧಾರಗಳನ್ನು ರಾಷ್ಟ್ರೀಯ ಹಿತಾಸಕ್ತಿ ನಿರ್ಧರಿಸುತ್ತದೆಯೇ ಹೊರತು, ಬಾಹ್ಯ ಒತ್ತಡಗಳಲ್ಲ. ಅಂತಿಮವಾಗಿ, ಭಾರತದ ಹಿತಾಸಕ್ತಿಗಳನ್ನು ಭಾರತದ ವೈವಿಧ್ಯತೆ ಮತ್ತು ಸಂಕೀರ್ಣತೆಗಳನ್ನು ಬಲ್ಲ ಹಾಗೂ ಅರ್ಥೈಸಿಕೊಳ್ಳುವ ಭಾರತೀಯರೇ ನಿರ್ಧರಿಸುತ್ತಾರೆ.
ಇದರ ಒಂದು ಸ್ಪಷ್ಟ ರೂಪವೆಂದರೆ, ಯಾವುದೇ ಬಣಗಳಿಗೆ ಸೇರ್ಪಡೆಯಾಗದೆ 'ಕ್ರಿಯಾ ಸ್ವಾತಂತ್ರ್ಯ'ವನ್ನು ಆಧರಿಸಿದ ವಿದೇಶಾಂಗ ನೀತಿ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ, ಭಾರತವು ರಷ್ಯಾದೊಂದಿಗಿನ ತನ್ನ ಐತಿಹಾಸಿಕ ಬಾಂಧವ್ಯವನ್ನು ತೊರೆಯದೆ ಅಮೆರಿಕದೊಂದಿಗೆ ತಾಂತ್ರಿಕ ಸಹಭಾಗಿತ್ವವನ್ನು ಗಟ್ಟಿಗೊಳಿಸಿದೆ. ಅದು ಬ್ರಿಕ್ಸ್ ನಂತಹ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಲೇ ಕ್ವಾಡ್ ನಲ್ಲೂ ಭಾಗವಹಿಸುತ್ತದೆ. ಇಸ್ರೇಲ್ ನೊಂದಿಗೆ ನಿಕಟ ಕಾರ್ಯತಂತ್ರದ ಸಂಬಂಧಗಳನ್ನು ಬೆಳೆಸಿಕೊಳ್ಳುವ ಜೊತೆಗೇ, ಸೌದಿ ಅರೇಬಿಯಾ, ಯುಎಇ ಮತ್ತು ವಿಶಾಲ ಅರಬ್ ಜಗತ್ತಿನೊಂದಿಗೆ ಸಂಬಂಧಗಳನ್ನು ಬಲಪಡಿಸಿಕೊಂಡಿದೆ ಹಾಗೂ ಇರಾನ್ ಜೊತೆಗೂ ಸಂವಹನದ ಬಾಗಿಲುಗಳನ್ನು ತೆರೆದಿಟ್ಟಿದೆ.
ಈ ವೈರುಧ್ಯಗಳನ್ನು ನಿಭಾಯಿಸುವ ಭಾರತದ ಸಾಮರ್ಥ್ಯಕ್ಕೆ ಮೂಲ ಕಾರಣ, ಭಾರತದ ವಿದೇಶಾಂಗ ನೀತಿಯು ತಾತ್ಕಾಲಿಕ ಲಾಭ-ನಷ್ಟಗಳಿಗೆ ಮಣಿಯುವುದಿಲ್ಲ ಮತ್ತು ಅದರ ಬೇರುಗಳು ಅತ್ಯಂತ ಆಳವಾಗಿವೆ ಎಂಬುದನ್ನು ಅದರ ಮಿತ್ರರು ಮತ್ತು ಶತ್ರುಗಳಿಬ್ಬರೂ ಗುರುತಿಸಿರುವುದು.
ಇದು ರಾಜಕೀಯ ಸ್ಥಿರತೆಯಿಂದ ದೊರೆತರೂ ಸಾಕಷ್ಟು ಗಮನಕ್ಕೆ ಬಾರದ ಒಂದು ಪ್ರಮುಖ ಲಾಭವಾಗಿದೆ. ನವದೆಹಲಿಯಲ್ಲಿ ಯಾರೊಂದಿಗೆ ಸಂಪರ್ಕ ಸಾಧಿಸಬೇಕು ಎಂಬುದು ಜಾಗತಿಕ ನಾಯಕರಿಗೆ ಸ್ಪಷ್ಟವಾಗಿದೆ. ಭಾರತದ ರೇಖೆಗಳು ಸ್ಪಷ್ಟವಾಗಿ ನಿರ್ಧರಿಸಲ್ಪಟ್ಟಿವೆ; ಅವು ರಾಜಕೀಯ ಅನುಕೂಲತೆಗೆ ಒಳಪಡುವುದಿಲ್ಲ ಮತ್ತು ಚುನಾವಣಾ ಚಕ್ರಗಳಿಗೆ ಅನುಗುಣವಾಗಿ ಬದಲಾಗಿಲ್ಲ. ಪ್ರಧಾನಮಂತ್ರಿ ಮೋದಿ ಅವರು ಒಂದು ಭರವಸೆಯನ್ನು ನೀಡಿದರೆ, ಆ ಭರವಸೆ ಕೇವಲ ಸುದ್ದಿಯನ್ನು ಮೀರಿ ಉಳಿಯುತ್ತದೆ ಎಂಬುದು ಅವರಿಗೆ ತಿಳಿದಿದೆ.
ಪ್ರಧಾನಮಂತ್ರಿ ಮೋದಿ ಅವರು ಭಾರತದ ಸ್ಥಿರತೆಯನ್ನು ನಿರಂತರವಾಗಿ ಜಾಗತಿಕ ದಕ್ಷಿಣಕ್ಕೆ ಒಂದು ವೇದಿಕೆಯಾಗಿ ಪರಿವರ್ತಿಸಿದ್ದಾರೆ. ಶ್ರೀಮಂತ ರಾಷ್ಟ್ರಗಳು ಲಸಿಕೆ ಡೋಸ್ ಗಳನ್ನು ತಮ್ಮಲ್ಲೇ ಸಂಗ್ರಹಿಸಿಟ್ಟುಕೊಂಡಿದ್ದಾಗ, ಲಸಿಕೆ ಮೈತ್ರಿ ಅಡಿಯಲ್ಲಿ ನೂರಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಗಳನ್ನು ಪೂರೈಸಿದರು; ಈ ದೇಶಗಳ ಕಳವಳಗಳನ್ನು ಹಿಂದೆ ನಿರ್ಲಕ್ಷಿಸಿದ್ದ ವೇದಿಕೆಗಳ ಮುಂದೆ ಮಂಡಿಸಲು 'ವಾಯ್ಸ್ ಆಫ್ ಗ್ಲೋಬಲ್ ಸೌತ್' ಶೃಂಗಸಭೆಯನ್ನು ಆಯೋಜಿಸಿದರು; ಮತ್ತು ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ಆಫ್ರಿಕನ್ ಯೂನಿಯನ್ ಗೆ ಜಿ20ಯಲ್ಲಿ ಖಾಯಂ ಸ್ಥಾನ ದೊರೆಯುವಂತೆ ಮಾಡಿದರು.
ಸಾಂಕ್ರಾಮಿಕದ ಆಘಾತವನ್ನು ಎದುರಿಸಿದ್ದು:
ಈ ದೃಷ್ಟಿಕೋನದಿಂದ ದೊರೆತ ಲಾಭಗಳಿಗೆ ಗಮನಾರ್ಹ ಉದಾಹರಣೆಯೆಂದರೆ, ಸಾಂಕ್ರಾಮಿಕದ ಅವಧಿಯಲ್ಲಿ ಭಾರತವು ತನ್ನ ಆರ್ಥಿಕತೆಯನ್ನು ಮುನ್ನಡೆಸಿದ ರೀತಿ. ಅಭಿವೃದ್ಧಿ ಹೊಂದಿದ ಜಗತ್ತಿನ ಬಹುತೇಕ ರಾಷ್ಟ್ರಗಳು ಆರ್ಥಿಕತೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣವನ್ನು ಹರಿಸುವ ಕ್ರಮಕ್ಕೆ ಮೊರೆಹೋದಾಗ, ಪ್ರಧಾನಮಂತ್ರಿ ಮೋದಿ ಅವರು ಕಲ್ಯಾಣ ಕ್ರಮಗಳು ಮತ್ತು ಸಾಮಾಜಿಕ ಭದ್ರತೆಯ ಮೂಲಕ ಬಡವರ ರಕ್ಷಣೆಗೆ ಗಮನಹರಿಸುವುದರ ಜೊತೆಗೆ ದೀರ್ಘಾವಧಿಯ ರಚನಾತ್ಮಕ ಸುಧಾರಣೆಗಳನ್ನೂ ಮುಂದುವರಿಸಿದರು.
₹20 ಲಕ್ಷ ಕೋಟಿ ಮೊತ್ತದ ಆತ್ಮನಿರ್ಭರ ಭಾರತ ಪ್ಯಾಕೇಜ್ ಸಾಂಕ್ರಾಮಿಕದ ಆಘಾತದ ಸಂದರ್ಭದಲ್ಲಿ ಬೆಂಬಲ ಒದಗಿಸಿದರೆ, ಸರ್ಕಾರವು ಉಂಟಾದ ಅಡಚಣೆಯನ್ನು ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವ ಬದಲಾವಣೆಗಳನ್ನು ವೇಗಗೊಳಿಸಲು ಬಳಸಿಕೊಂಡಿತು. ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪಿಎಲ್‌ಐ) ಕಾರ್ಯಕ್ರಮವನ್ನು ಸಾಂಕ್ರಾಮಿಕದ ಅವಧಿಯಲ್ಲೇ ಆರಂಭಿಸಲಾಯಿತು. ಇದರಿಂದ ಜಾಗತಿಕ ಪೂರೈಕೆ ಸರಪಳಿಗಳ ದುರ್ಬಲತೆಯ ಸಂದರ್ಭವನ್ನು ದೇಶೀಯ ಉತ್ಪಾದನೆಯನ್ನು ವಿಸ್ತರಿಸುವ ಅವಕಾಶವನ್ನಾಗಿ ಪರಿವರ್ತಿಸಲಾಯಿತು.
ಉದ್ಯಮಶೀಲ ಆರ್ಥಿಕತೆಯೂ ತನ್ನ ಚಟುವಟಿಕೆಯನ್ನು ಮುಂದುವರಿಸಿತು. ವಿಶೇಷವಾಗಿ ಎಂಎಸ್‌ಎಂಇಗಳಿಗೆ, ಮೋದಿ ಸರ್ಕಾರವು ₹3 ಲಕ್ಷ ಕೋಟಿ ಮೊತ್ತದ ತುರ್ತು ಸಾಲ ಸೌಲಭ್ಯ ಖಾತರಿ ಯೋಜನೆಯನ್ನು ಪರಿಚಯಿಸಿತು. ಆರ್ಥಿಕ ಚಟುವಟಿಕೆಗಳು ಹಠಾತ್ತನೆ ಅಸ್ತವ್ಯಸ್ತಗೊಂಡ ಸಂದರ್ಭದಲ್ಲಿ ಇದು ಅಗತ್ಯ ಹಣದ ಹರಿವನ್ನು ಒದಗಿಸಿತು.
ಅಲ್ಲದೆ, ಅಸಾಧಾರಣ ಪ್ರಮಾಣದ ಲಸಿಕಾ ಅಭಿಯಾನವನ್ನು ಕೈಗೊಳ್ಳಲಾಯಿತು. ಈ ರಕ್ಷಣೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಒದಗಿಸುವ ಭಾರತದ ಸಾಮರ್ಥ್ಯದ ಬಗ್ಗೆ ವಿಮರ್ಶಕರು ಪ್ರಶ್ನೆಗಳನ್ನು ಎತ್ತಿದರು. ದೇಶದ ವಿರೋಧ ಪಕ್ಷಗಳೂ ಲಸಿಕೆಗಳು ಮತ್ತು ಅವುಗಳ ವಿತರಣೆಯ ಬಗ್ಗೆ ನಿರಾಶೆ ಮತ್ತು ಆತಂಕದ ವಾತಾವರಣವನ್ನು ಸೃಷ್ಟಿಸಿದವು.
ಪ್ರಧಾನಮಂತ್ರಿ ಮೋದಿ ಅವರು ಭಾರತೀಯ ನಿರ್ಮಿತ ಲಸಿಕೆಯನ್ನು ಸಾರ್ವಜನಿಕವಾಗಿ ಮೊದಲಿಗರಾಗಿ ಸ್ವೀಕರಿಸಿದರು. ಇದು ಭಾರತದ ಔಷಧೀಯ ಉದ್ಯಮದ ಸಾಮರ್ಥ್ಯದ ಮೇಲಿನ ಪ್ರಬಲ ವಿಶ್ವಾಸದ ಅಭಿವ್ಯಕ್ತಿಯಾಗಿದ್ದು, ದೇಶದಲ್ಲಿ ವಿಶ್ವಾಸ ಮೂಡಿಸುವ ಬಲವಾದ ಸಂದೇಶವನ್ನೂ ನೀಡಿತು. ಇದರ ಬೆನ್ನಲ್ಲೇ ಭಾರತ ಕೇವಲ 18 ತಿಂಗಳಲ್ಲಿ 200 ಕೋಟಿ ಡೋಸ್‌ಗಳ ಗುರಿಯನ್ನು ದಾಟಿತು.
ಬಿಕ್ಕಟ್ಟು ನಿರ್ವಹಣೆಯಾಗಿ ಆರಂಭವಾದದ್ದು ಆರ್ಥಿಕ ಚೇತರಿಕೆ ಮತ್ತು ಸುಧಾರಣೆಗಳಿಗೆ ವೇದಿಕೆಯಾಯಿತು. ಜಿ20 ರಾಷ್ಟ್ರಗಳ ಪೈಕಿ ಭಾರತದ ಆರ್ಥಿಕ ಚೇತರಿಕೆ ಅತ್ಯಂತ ಬಲಿಷ್ಠವಾಗಿ ಹೊರಹೊಮ್ಮಿತು. ಇಂತಹ ಕಠಿಣ ಸಮಯದಲ್ಲಿ ಸ್ಥಿರತೆ ಎಂದರೆ ಶತಮಾನಕ್ಕೊಮ್ಮೆ ಎದುರಾಗುವಂತಹ ಆಘಾತವನ್ನು ಕೇವಲ ಸಹಿಸಿಕೊಳ್ಳುವುದಷ್ಟೇ ಅಲ್ಲ; ಚೇತರಿಸಿಕೊಳ್ಳಲು, ಸುಧಾರಣೆಗಳನ್ನು ಮುಂದುವರಿಸಲು ಮತ್ತು ಮುಂದೆ ಸಾಗಲು ಅಗತ್ಯವಾದ ಸಾಮರ್ಥ್ಯವನ್ನು ಉಳಿಸಿಕೊಳ್ಳುವುದೂ ಆಗಿತ್ತು.
ಭಾರತದ ದೃಢತೆಯ ಮೇಲೆ ಜಾಗತಿಕ ವಿಶ್ವಾಸ:
ಸ್ಥಿರತೆಯು ಅಂತಿಮವಾಗಿ ವಿಶ್ವಾಸಾರ್ಹತೆಯನ್ನು ನೀಡುತ್ತದೆ. ಇತರರು ಅದರ ಮೇಲೆ ವಿಶ್ವಾಸವಿಟ್ಟು ಹೂಡಿಕೆ ಮಾಡಲು ಸಿದ್ಧರಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಜಾಗತಿಕ ಹೂಡಿಕೆದಾರರ ದೃಷ್ಟಿಯಲ್ಲಿ, ಪ್ರಧಾನಮಂತ್ರಿ ಮೋದಿ ಅವರೇ ಆ ಸ್ಥಿರತೆಯ ಪ್ರತಿರೂಪವಾಗಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಅವರು ಈ ಸ್ಥಿರತೆಯನ್ನು ಆಧಾರವಾಗಿಸಿಕೊಂಡು, ರಾಜಕೀಯ ನಿರಂತರತೆಯನ್ನು ಒದಗಿಸಿದ್ದಾರೆ ಮತ್ತು ಭಾರತವು ದೀರ್ಘಾವಧಿಯ ಬೆಳವಣಿಗೆಗೆ ಮುಕ್ತವಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಹೂಡಿಕೆದಾರರಿಗೆ ನೀಡಿದ್ದಾರೆ.
2026ರ ಸೆಪ್ಟೆಂಬರ್‌ನಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ದಾಖಲೆಯ 780 ಶತಕೋಟಿ ಡಾಲರ್‌ಗಳನ್ನು ದಾಟಿದ್ದು ಕೇವಲ ಒಂದು ಆರ್ಥಿಕ ಮೈಲಿಗಲ್ಲಲ್ಲ - ಇದು ಪ್ರಧಾನಿ ಮೋದಿ ವರ್ಷಗಳಿಂದ ನಿರ್ಮಿಸಿದ ಆರ್ಥಿಕತೆಯ ಬೆಳವಣಿಗೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಜಾಗತಿಕ ಸಮುದಾಯ ನೀಡಿದ ಸ್ಪಷ್ಟ ಮತ್ತು ಸೌಹಾರ್ದಯುತ ಬೆಂಬಲವಾಗಿದೆ.
ಸ್ವತಂತ್ರ ಮೌಲ್ಯಮಾಪನಗಳಲ್ಲಿಯೂ ಈ ವಿಶ್ವಾಸ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ಎಸ್ & ಪಿ ಸಂಸ್ಥೆಯು 2025ರ ಆಗಸ್ಟ್ ನಲ್ಲಿ ಭಾರತದ ಸಾರ್ವಭೌಮ ಸಾಲದ ರೇಟಿಂಗ್ ಅನ್ನು BBB-ನಿಂದ BBBಗೆ ಏರಿಸಿತು. 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಏರಿಕೆ ಕಂಡುಬಂದಿತು. 2026ರ ಸೆಪ್ಟೆಂಬರ್‌ನಲ್ಲಿ ಜಪಾನ್ ಕ್ರೆಡಿಟ್ ರೇಟಿಂಗ್ ಏಜೆನ್ಸಿಯು 30 ವರ್ಷಗಳ ಬಳಿಕ ಭಾರತದ ಸಾರ್ವಭೌಮ ಸಾಲದ ರೇಟಿಂಗ್ ಅನ್ನು ‘A’ ವರ್ಗಕ್ಕೆ ಏರಿಸಿತು.
ಪ್ರಧಾನಮಂತ್ರಿ ಮೋದಿ ಅವರು ವಿಶ್ವ ನಾಯಕರೊಂದಿಗಿನ ತಮ್ಮ ಸಂಪರ್ಕದಲ್ಲಿ ಆರ್ಥಿಕ ರಾಜತಾಂತ್ರಿಕತೆಯನ್ನು ಪ್ರಮುಖ ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಭಾರತದ ರಾಜಕೀಯ ಸಂಬಂಧಗಳನ್ನು ಬಳಸಿಕೊಂಡು ಆಳವಾದ ವಾಣಿಜ್ಯ ಪಾಲುದಾರಿಕೆಗಳಿಗೆ ಅವಕಾಶಗಳನ್ನು ತೆರೆದಿದ್ದಾರೆ. 38 ದೇಶಗಳನ್ನು ಒಳಗೊಂಡ 9 ಮುಕ್ತ ವ್ಯಾಪಾರ ಒಪ್ಪಂದಗಳು ಭಾರತೀಯ ಆರ್ಥಿಕತೆಯೊಂದಿಗೆ ಇನ್ನಷ್ಟು ಆಪ್ತವಾಗಿ ಏಕೀಕರಿಸಲು ಹೆಚ್ಚುತ್ತಿರುವ ಸಿದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಒಟ್ಟಾರೆಯಾಗಿ ನೋಡಿದರೆ, ಇವು ಕೇವಲ ಆರ್ಥಿಕ ಅಂಕಿ-ಅಂಶಗಳಲ್ಲ. ಕಂಪನಿಗಳು, ಮಾರುಕಟ್ಟೆಗಳು, ರೇಟಿಂಗ್ ಸಂಸ್ಥೆಗಳು ಮತ್ತು ಸರ್ಕಾರಗಳು ಭಾರತದ ಮುಂದಿನ ಹಾದಿಯ ಮೇಲೆ ದೀರ್ಘಾವಧಿಯ ವಿಶ್ವಾಸವನ್ನು ಇರಿಸುತ್ತಿವೆ ಎಂಬುದನ್ನು ಇವು ತೋರಿಸುತ್ತವೆ.
ಸ್ಥಿರತೆಯ ಅರ್ಥಶಾಸ್ತ್ರ:
ಪ್ರಧಾನಮಂತ್ರಿ ಮೋದಿ ಅವರ ದೀರ್ಘಕಾಲದ ರಾಜಕೀಯ ಮತ್ತು ನೀತಿ ಸ್ಥಿರತೆಯಿಂದ ಹಲವು ವರ್ಷಗಳು, ಕೆಲವೊಮ್ಮೆ ದಶಕಗಳ ಬಳಿಕ ಫಲ ನೀಡುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೆತ್ತಿಕೊಂಡು, ಅವುಗಳನ್ನು ನಿರಂತರವಾಗಿ ಮುಂದುವರಿಸುವ ಅಪರೂಪದ ಸಾಮರ್ಥ್ಯ ಭಾರತಕ್ಕೆ ದೊರೆತಿದೆ. ನಾಯಕತ್ವದಲ್ಲಿನ ಬದಲಾವಣೆಗಳು ಅಥವಾ ಅಲ್ಪಾವಧಿಯ ರಾಜಕೀಯ ಒತ್ತಡಗಳಿಂದ ಸೀಮಿತವಾಗಿರುವ ಸರ್ಕಾರಗಳು ದೀರ್ಘಾವಧಿಯಲ್ಲಿ ಫಲ ನೀಡುವ ಇಂತಹ ಯೋಜನೆಗಳನ್ನು ನಿರಂತರವಾಗಿ ಮುಂದುವರಿಸಲು ಸಾಮಾನ್ಯವಾಗಿ ಕಷ್ಟಪಡುತ್ತವೆ. ಈ ಸ್ಥಿರತೆಯು ಭಾರತವನ್ನು ಭವಿಷ್ಯದ ಕೈಗಾರಿಕೆಗಳತ್ತ ದೃಢವಾಗಿ ಕೊಂಡೊಯ್ಯಲು ಪ್ರಧಾನಮಂತ್ರಿ ಮೋದಿ ಅವರಿಗೆ ಅವಕಾಶ ನೀಡಿದೆ.
ಆಡಳಿತದಲ್ಲಿನ ಪ್ರಧಾನಮಂತ್ರಿ ಮೋದಿ ಅವರ ಸ್ಥಿರತೆಯೇ ಒಂದು ದಶಕದ ಅವಧಿಯ ರಾಷ್ಟ್ರೀಯ ಅಭಿಯಾನಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಸಿದೆ. ಸೆಮಿಕಾನ್ ಇಂಡಿಯಾ ಅಡಿಯಲ್ಲಿ 12 ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಅವುಗಳಲ್ಲಿ 3 ಈಗಾಗಲೇ ಉತ್ಪಾದನಾ ಹಂತದಲ್ಲಿವೆ. ₹19,000 ಕೋಟಿ ಮೊತ್ತದ ಹಸಿರು ಹೈಡ್ರೋಜನ್ ಮಿಷನ್ 2030ರ ವೇಳೆಗೆ ವರ್ಷಕ್ಕೆ 50 ಲಕ್ಷ ಟನ್ ಉತ್ಪಾದನಾ ಗುರಿಯನ್ನು ಹೊಂದಿದೆ. ಭಾರತ ಈಗಾಗಲೇ ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲನ್ನು ನಿರ್ವಹಿಸುತ್ತಿದೆ. ಪರಮಾಣು ಇಂಧನ ಮಿಷನ್ 2047ರ ವೇಳೆಗೆ 100 ಗಿಗಾವಾಟ್ ಗುರಿಯನ್ನು ಹೊಂದಿದ್ದು, ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳಿಗಾಗಿ ₹20,000 ಕೋಟಿ ಮೀಸಲಿಡಲಾಗಿದೆ ಮತ್ತು ʼಶಾಂತಿʼ ಕಾಯ್ದೆಯ ಮೂಲಕ ಈ ಕ್ಷೇತ್ರವನ್ನು ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಮುಕ್ತಗೊಳಿಸಲಾಗಿದೆ.
ಸಾಮಾನ್ಯವಾಗಿ ಸುದ್ದಿಗಳು “ಕೆಟ್ಟ ಸುದ್ದಿಯೇ ಒಳ್ಳೆಯ ಸುದ್ದಿ” ಎಂಬ ಗಾದೆಯನ್ನು ಅನುಸರಿಸುತ್ತವೆ – ಕನಿಷ್ಠ ಅಂತಹ ಸುದ್ದಿಯನ್ನು ಹರಡುವವರ ಅರ್ಥಶಾಸ್ತ್ರದ ದೃಷ್ಟಿಯಿಂದಾದರೂ ಇದು ನಿಜ. ಇವು ಸವಾಲಿನ ಸಮಯಗಳು. ಜಗತ್ತಿನ ಇತರ ಭಾಗಗಳಂತೆ ಭಾರತವೂ ಅಸ್ಥಿರ ರಾಜಕೀಯ ಮೈತ್ರಿಗಳು, ಯುದ್ಧ, ಅಂತರರಾಷ್ಟ್ರೀಯ ವ್ಯವಸ್ಥೆಯ ಕುಸಿತ ಮತ್ತು ಅಸ್ಥಿರ ಆರ್ಥಿಕ ಕ್ರಮಗಳಿಂದ ಉಂಟಾಗುವ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಶಕ್ತಿ ಮತ್ತು ಅನುಕೂಲತೆಗಳನ್ನು ಅಳೆಯುವುದು ಹೆಚ್ಚಿನ ನೆಮ್ಮದಿಗೆ ಕಾರಣವಾಗಬಹುದು. ಇಂದು ಭಾರತದ ಅತ್ಯಂತ ದೊಡ್ಡ ಬಲಗಳೆಂದರೆ ಅದರ ರಾಜಕೀಯ ಸ್ಥಿರತೆ ಮತ್ತು ಮೋದಿ ಸಿದ್ಧಾಂತದದ ಮೂಲಕ ರೂಪುಗೊಂಡ ಬೆಳವಣಿಗೆ ಮತ್ತು ಅಭಿವೃದ್ಧಿಯ ದಿಕ್ಕು. ನಾವು ನಿದ್ರಿಸುವ ಮುನ್ನ ಸಾಗಬೇಕಾದ ಹಾದಿ ಸುದೀರ್ಘವಾಗಿದೆ', ಆದರೆ 140 ಕೋಟಿ ಭಾರತೀಯರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಸಾಂವಿಧಾನಿಕ ಗುರಿಯನ್ನು ತಲುಪಿಸಲು ನಾವು ಕ್ರಮಿಸಬೇಕಾದ ಹಾದಿಯನ್ನು ತೋರಿಸುವ 'ಮೋದಿ ಸಿದ್ಧಾಂತ' ನಮ್ಮೊಂದಿಗಿದೆ.






