ರಾಜ್ಯ ಪಿಯು ಉಪನ್ಯಾಸಕರ ಸಂಘದಲ್ಲಿ 27 ಲಕ್ಷ ರೂ.ಗೂ ಅಧಿಕ ಲೂಟಿ

ನಿಂಗೇಗೌಡ ಎ.ಎಚ್.
ಬೆಂಗಳೂರು : ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಲ್ಲಿ ಬರೋಬ್ಬರಿ 27ಲಕ್ಷ ರೂ.ಗೂ ಅಧಿಕ ಹಣದ ದುರುಪಯೋಗ ಆರೋಪ ಕೇಳಿ ಬಂದಿದೆ.
ಸಂಘದ ಹಂಗಾಮಿ ರಾಜ್ಯಾಧ್ಯಕ್ಷ ನಿಂಗೇಗೌಡ ಎ.ಎಚ್., ಹಿಂದಿನ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹಾಗೂ ಖಜಾಂಚಿ ಎಂ.ಜಯಣ್ಣ ಎಂಬವರ ಮೇಲೆ ಈ ಹಣಕಾಸು ದುರುಪಯೋಗ ಮಾಡಿರುವ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಲಭ್ಯವಾಗಿವೆ.
2024ರಲ್ಲಿ ನಡೆದ ಸಂಘದ ವಾರ್ಷಿಕ ಸದಸ್ಯತ್ವದ ಅಭಿಯಾನದಲ್ಲಿ ಸುಮಾರು 5,800 ಜನ ಉಪನ್ಯಾಸಕರು ಸದಸ್ಯತ್ವ ಪಡೆದುಕೊಂಡಿದ್ದು, ಪ್ರತಿ ಸದಸ್ಯತ್ವಕ್ಕೆ 300 ರೂ.ಗಳಂತೆ ಸುಮಾರು 17,40,000 ರೂ.ಗಳು ಸಂಗ್ರಹವಾಗಬೇಕಿತ್ತು. 2024ರ ಆಗಸ್ಟ್ನಿಂದ ನವೆಂಬರ್ ನಡುವೆ 4,222 ಮಂದಿ ಉಪನ್ಯಾಸಕರು ನೇರವಾಗಿ ಸಂಘದ ಖಾತೆಗೆ ಸದಸ್ಯತ್ವದ ಹಣವನ್ನು ಸಂದಾಯ ಮಾಡಿರುತ್ತಾರೆ. ಅದರ ಮೊತ್ತ 12,66,600 ರೂ., ಉಳಿಕೆ ಸದಸ್ಯತ್ವದ ಹಣ ನಗದಾಗಿ ಸ್ವೀಕರಿಸಿದ್ದು, ಅದರ ಲೆಕ್ಕವನ್ನು ನೀಡಿಲ್ಲ ಎಂದು ಸಂಘದ ಸದಸ್ಯ ಮಂಜುನಾಥ ಎಸ್.ಗಂಭೀರ ಆರೋಪ ಮಾಡಿದ್ದಾರೆ.
ಸದಸ್ಯತ್ವದ ಹಣ ವೈಯಕ್ತಿಕ ಖಾತೆಗೆ ವರ್ಗಾವಣೆ :
ಬರೋಬ್ಬರಿ 5 ಲಕ್ಷ ರೂ. ಸದಸ್ಯತ್ವದ ಹಣವನ್ನು ಹಂಗಾಮಿ ಅಧ್ಯಕ್ಷ ನಿಂಗೇಗೌಡ ಎ.ಎಚ್. ಅವರು ತಮ್ಮ ವೈಯಕ್ತಿಕ ಖಾತೆಗೆ ದಿನಾಂಕ 2026ರ ಜ.31ರಂದು ಆರ್ಟಿಜಿಎಸ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಖಜಾಂಚಿ ಎಂ.ಜಯಣ್ಣ ಕೂಡ ದಿನಾಂಕ 2025ರ ಸೆ.8ರಂದು ತಮ್ಮ ವೈಯಕ್ತಿಕ ಖಾತೆಗೆ ಎರಡೂವರೆ ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ. ಜೊತೆಗೆ, ಸಂಘದ ಖಾತೆಗಳಿಂದ ಮನಬಂದಂತೆ ಹಣ ಲೂಟಿ ಮಾಡಿರುವ ಬಗ್ಗೆ ಯಾವುದಕ್ಕೂ ಆಡಿಟ್ ರಿಪೋರ್ಟ್ಗಳಿಲ್ಲ. ಈ ಇಬ್ಬರೂ ನಗದು ರೂಪದಲ್ಲಿ ಉಪನ್ಯಾಸಕರ ಲಕ್ಷಾಂತರ ರೂ. ಲೂಟಿ ಮಾಡಿರುವುದು ನಮಗೆಲ್ಲ ಎಸಗಿದ ಮಹಾ ಮೋಸವಾಗಿದೆ ಎಂದು ಮಂಜುನಾಥ ಎಸ್. ದೂರಿದ್ದಾರೆ.
ನಿವೃತ್ತರಾಗಿ ಎರಡೂವರೆ ವರ್ಷವಾದರೂ ಜಯಣ್ಣನೇ ಖಜಾಂಚಿ :
ಸಂಘದ ಖಜಾಂಚಿ ಆಗಿದ್ದ ಎಂ.ಜಯಣ್ಣ ಅವರು 2024ರ ಜನವರಿಯಲ್ಲೇ ನಿವೃತ್ತಿ ಹೊಂದಿದ್ದಾರೆ. ಸಂಘದ ಬೈಲಾ ನಿಯಮದ ಪ್ರಕಾರ ನಿವೃತ್ತರಾದ ಕೂಡಲೇ ಅವರ ಸಂಘದ ಸದಸ್ಯತ್ವ ರದ್ಧಾಗುತ್ತದೆ. ಆದರೆ, ಎಂ.ಜಯಣ್ಣ ನಿವೃತ್ತರಾದರೂ ಎರಡೂವರೆ ವರ್ಷಗಳಿಂದ ಖಜಾಂಚಿಯಾಗಿಯೇ ಮುಂದು ವರಿಯುತ್ತಿರುವುದು ಇವರ ಲೂಟಿಕೋರತನಕ್ಕೆ ಮತ್ತೊಂದು ಸಾಕ್ಷಿ.
ಮಕ್ಕಳು ಮತ್ತು ಶಿಕ್ಷಕರ ಕಲ್ಯಾಣ ನಿಧಿಯ ಹಣವೂ ಲೂಟಿ :
ತಿಮ್ಮಯ್ಯ ಪುರ್ಲೆ ಅವರು ಸಂಘದ ಅಧ್ಯಕ್ಷರಾಗಿದ್ದ ಮತ್ತು ನಿಂಗೇಗೌಡ ಎ.ಎಚ್. ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಸಂಘದಲ್ಲಿ ಶೈಕ್ಷಣಿಕ ಸಮಾವೇಶಗಳನ್ನು ನಡೆಸುವುದಾಗಿ ಹೇಳಿ ವಿದ್ಯಾರ್ಥಿಗಳ ಕಲ್ಯಾಣ ನಿಧಿ ಮತ್ತು ಶಿಕ್ಷಕರ ಕಲ್ಯಾಣ ನಿಧಿಯಿಂದ 2018ರಲ್ಲಿ 10 ಲಕ್ಷ ರೂ. ಪಡೆದುಕೊಂಡಿದ್ದು, ಯಾವುದೇ ಶೈಕ್ಷಣಿಕ ಸಮಾವೇಶಗಳನ್ನು ನಡೆಸದೆ ಮನಬಂದಂತೆ ಹಣವನ್ನು ವಿಥ್ ಡ್ರಾ ಮಾಡಿಕೊಂಡಿರುತ್ತಾರೆ ಎಂದು ಸದಸ್ಯ ಮಂಜುನಾಥ ದಾಖಲೆ ಸಮೇತವಾಗಿ ವಿವರಿಸಿದ್ದಾರೆ.
ಒಂದೇ ಬ್ಯಾಂಕ್ನಲ್ಲಿ ಎರಡು ಖಾತೆ :
ಈ ಲೂಟಿ ಕೋರತನವನ್ನು ಮುಚ್ಚಿಹಾಕಲು ಸಂಘದ ಹೆಸರಿನಲ್ಲಿ ಒಂದೇ ಬ್ಯಾಂಕ್ನಲ್ಲಿ ಎರಡು ಖಾತೆಗಳನ್ನು ತೆರೆಯಲಾಗಿದೆ. ರಾಜಾಜಿನಗರದ ವಿವೇಕಾನಂದ ಕಾಲೇಜು ಶಾಖೆಯ ಅಪೆಕ್ಸ್ ಬ್ಯಾಂಕ್ನಲ್ಲಿ 2016ರ ಮೇನಲ್ಲಿ ತೆರೆದಿದ್ದ ಖಾತೆಯನ್ನು 2024ರ ಜೂನ್ನಲ್ಲಿ ಸ್ಥಗಿತಗೊಳಿಸಲಾಗಿದೆ. ನಂತರ ಅದೇ ಬ್ಯಾಂಕಿನಲ್ಲಿ ಮತ್ತೊಂದು ಹೊಸ ಖಾತೆಯನ್ನು ತೆರೆದು ವ್ಯವಹಾರ ನಡೆಸಲಾಗಿದೆ ಎಂದು ಸದಸ್ಯರು ದೂರಿದ್ದಾರೆ.
ಗೃಹ ನಿರ್ಮಾಣ ಸಹಕಾರ ಸಂಘದ ಹೆಸರಿನಲ್ಲಿ ವಂಚನೆ :
ಅರುಣೋದಯ ಗೃಹ ನಿರ್ಮಾಣ ಸಹಕಾರ ಸಂಘದ ಹೆಸರಿನಲ್ಲಿ ನೂರಾರು ಉಪನ್ಯಾಸಕರನ್ನು ಸದಸ್ಯರನ್ನಾಗಿ ಮಾಡಿಕೊಂಡು ಲಕ್ಷಾಂತರ ರೂಪಾಯಿಗಳನ್ನು ವಂಚಿಸಿರುವ ಆರೋಪಗಳು ನಿಂಗೇಗೌಡರ ಮೇಲಿದೆ ಎಂಬುದು ಹಲವು ಸದಸ್ಯರ ಮಾತಾಗಿದೆ.
ಐವರ ವಿರುದ್ಧ ದೂರು ದಾಖಲು :
ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಸಂಘದ ಹಣ ದುರುಪಯೋಗಕ್ಕೆ ಸಂಬಂಧಿಸಿ ಉಪನ್ಯಾಸಕ ಮಂಜುನಾಥ ಅವರು ದೂರು ನೀಡಿದ್ದು, ಆರೋಪಿಗಳಾದ ನಿಂಗೇಗೌಡ, ತಿಮ್ಮಯ್ಯಪುರ್ಲೆ, ಜಯಣ್ಣ, ಶಿವರಾವ್ ಬಿ., ಮಾಲಿಪಾಟೀಲ್ ಹಾಗೂ ಎಸ್.ಆರ್.ವೆಂಕಟೇಶ್ ವಿರುದ್ಧ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.






