888 ಕಾಲೇಜುಗಳಿಗೆ ಮಾತ್ರ ನ್ಯಾಕ್ ಮಾನ್ಯತೆ: ರಾಜ್ಯ ಶಿಕ್ಷಣ ನೀತಿ ಆಯೋಗ ವರದಿ

ಬೆಂಗಳೂರು : ನ್ಯಾಕ್ ಮತ್ತು ಎನ್‌ಐಆರ್‌ಎಫ್ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು ಆತಂಕದ ಪ್ರವೃತ್ತಿಯನ್ನು ತೋರಿಸುತ್ತದೆ. 3,506 ಕಾಲೇಜುಗಳಲ್ಲಿ ಕೇವಲ 888 ಕಾಲೇಜುಗಳು ಮಾತ್ರ ಮಾನ್ಯತೆ ಪಡೆದಿವೆ. ಕೇವಲ ಶೇ. 23ರಷ್ಟು ಎ ಬ್ಯಾಂಡ್ ರೇಟಿಂಗ್ ಸಾಧಿಸಿದೆ ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವು ಬಯಲು ಮಾಡಿದೆ.
ವಿಸ್ತರಣೆ, ಸಮತೆ, ಗುಣಮಟ್ಟ, ಆಡಳಿತ, ಹಣಕಾಸು ಪರಿಕಲ್ಪನೆ ಅಡಿಯಲ್ಲಿ ಸುಖ್‌ದೇವ್ ಥೋರಟ್ ಅವರ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ನೀಡಿರುವ ವರದಿಯು, ರಾಜ್ಯದ ಉನ್ನತ ಶಿಕ್ಷಣದಲ್ಲಿನ ಗುಣಮಟ್ಟದ ಕುರಿತು ವಿವಿಧ ಆಯಾಮಗಳಿಂದ ಚರ್ಚಿಸಿದೆ. ಈ ವರದಿಯ ಪ್ರತಿ "the-file.in"ಗೆ ಲಭ್ಯವಾಗಿದೆ.
ಥೋರಟ್ ಅವರು ಈ ವರದಿಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿ (2025)ಯಲ್ಲಿ ಸಲ್ಲಿಸಿದ್ದರು. ಈ ವರದಿ ಮೇಲೆ ಸಲಹೆ ಸೂಚನೆಗಳನ್ನು ನೀಡಲು ಸಚಿವರಿಗೆ ಕಳಿಸಲಾಗಿತ್ತು. ಆದರೆ ಯಾವೊಬ್ಬ ಸಚಿವರೂ ಸಹ ಈ ವರದಿ ಮೇಲೆ ಅಭಿಪ್ರಾಯ, ಸಲಹೆ ಸೂಚನೆಗಳನ್ನು ನೀಡಿರಲಿಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಒಂದು ತಿಂಗಳ ಕಳೆದಿದ್ದರೂ ಥೋರಟ್ ನೀಡಿರುವ ವರದಿಯತ್ತ ಕ್ರಮವಹಿಸಿಲ್ಲ.
ಕರ್ನಾಟಕದಲ್ಲಿನ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಸಂಖ್ಯೆಯ ಸಮರ್ಪಕತೆ ಸಮಸ್ಯೆಯನ್ನು ಆಯೋಗವು ಪರಿಶೀಲಿಸಿದೆ. ಕರ್ನಾಟಕವು ತನ್ನ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳನ್ನು ಗಮನಾರ್ಹವಾಗಿ ವಿಸ್ತರಿಸಿದೆ. ರಾಜ್ಯದಲ್ಲಿ ಒಟ್ಟು 7 ಕೃಷಿ ವಿಶ್ವವಿದ್ಯಾನಿಲಯಗಳಿವೆ. ಇದು ಇತರೆಡೆಗಳಿಗಿಂತ
ಹೆಚ್ಚಿದೆ. 2013-14ರಲ್ಲಿ 45ರಷ್ಟಿದ್ದ ವಿಶ್ವವಿದ್ಯಾನಿಲಯಗಳ ಸಂಖ್ಯೆ 93ಕ್ಕೇರಿದೆ. ಅದೇ ರೀತಿ, 2013-14ರಲ್ಲಿ 2,857 ಇದ್ದ ಕಾಲೇಜುಗಳ ಸಂಖ್ಯೆಯು 2023-24ರಲ್ಲಿ 4,735ಕ್ಕೇರಿದೆ.ಆದರೆ, 2013-14ರಲ್ಲಿ 1,098 ಇದ್ದ ಸ್ವತಂತ್ರ ಸಂಸ್ಥೆಗಳ ಸಂಖ್ಯೆಯು 2023-24ರಲ್ಲಿ 993ಕ್ಕೆ ಇಳಿದಿದೆ ಎಂದು ಆಯೋಗವು ತನ್ನ ವರದಿಯಲ್ಲಿ ವಿವರಿಸಿದೆ.
11.5 ಲಕ್ಷ ಪ್ರವೇಶಾತಿ ಸಾಮರ್ಥ್ಯ-ದಾಖಲಾತಿ ಸಂಖ್ಯೆ ಕೇವಲ 4,29,303ರಷ್ಟು: ಕರ್ನಾಟಕವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 11.5 ಲಕ್ಷ ಪ್ರವೇಶಾತಿ ಸಾಮರ್ಥ್ಯ ಹೊಂದಿದೆ. ಆದರೂ ಸಹ 2023-24ರಲ್ಲಿ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿನ ಸ್ನಾತಕ ಪದವಿ ಕೋರ್ಸ್
ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕೇವಲ 4,29,303ರಷ್ಟಿತ್ತು. ಕರ್ನಾಟಕದಲ್ಲಿ ಸಮಸ್ಯೆಯು ಪೂರೈಕೆಯಲ್ಲಿಲ್ಲ, ಬೇಡಿಕೆಯಲ್ಲಿದೆ ಎಂಬುದು ಇದರಿಂದ ತಿಳಿದು ಬರುತ್ತದೆ.
ಕೇವಲ ಶೇ.23ರಷ್ಟು ಎ ಬ್ಯಾಂಡ್ ರೇಟಿಂಗ್ :
ನ್ಯಾಕ್ ಮತ್ತು ಎನ್‌ಐಆರ್‌ಎಫ್ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು ಆತಂಕದ ಪ್ರವೃತ್ತಿಯನ್ನು ತೋರಿಸುತ್ತದೆ. 3,506 ಕಾಲೇಜುಗಳಲ್ಲಿ ಕೇವಲ 888 ಕಾಲೇಜುಗಳು ಮಾತ್ರ ಮಾನ್ಯತೆ ಪಡೆದಿವೆ. ಕೇವಲ ಶೇ.23ರಷ್ಟು ಎ ಬ್ಯಾಂಡ್ ರೇಟಿಂಗ್ ಸಾಧಿಸಿದೆ. ಇವುಗಳಲ್ಲಿ ಸರಕಾರಿ ಕಾಲೇಜುಗಳಲ್ಲಿ ಕೇವಲ ಶೇ. 8ರಷ್ಟಿವೆ. ಅದೇ ರಿತಿ 86 ವಿಶ್ವವಿದ್ಯಾನಿಲಯಗಳ ಮಟ್ಟದ ಸಂಸ್ಥೆಗಳಲ್ಲಿ ಕೇವಲ 32 ಸಂಸ್ಥೆಗಳು ಮಾತ್ರ ಮಾನ್ಯತೆ ಪಡೆದಿದೆ. ಕೇವಲ 19 ಸಂಸ್ಥೆಗಳು ಎ ದರ್ಜೆಯನ್ನು ತಲುಪಿವೆ. ಎನ್‌ಐಆರ್‌ಎಫ್ ಶ್ರೇಯಾಂಕದಲ್ಲಿ ಕೇವಲ 4 ಕರ್ನಾಟಕದ ಖಾಸಗಿ ಕಾಲೇಜುಗಳು ಅಗ್ರ 100ರಲ್ಲಿ ಸ್ಥಾನಪಡೆದಿವೆ. ಸರಕಾರಿ ಕಾಲೇಜುಗಳ ಸಂಖ್ಯೆಯು ಗಣನೀಯವಾಗಿ ಕಡಿಮೆ ಇದೆ. ಅಗ್ರ 100 ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟದ ಕೇವಲ 11 ವಿಶ್ವವಿದ್ಯಾನಿಲಯಗಳಿವೆ. ಇದರಲ್ಲಿ ಕೇವಲ 4 ರಾಜ್ಯ ವಿಶ್ವವಿದ್ಯಾನಿಲಯಗಳು (ಎರಡು ಕೃಷಿ, ತಂತ್ರಜ್ಞಾನ ಎರಡು ಸಾಮಾನ್ಯ) ಸೇರಿವೆ. ಈ ಪಟ್ಟಿಯಲ್ಲಿ 6 ಖಾಸಗಿ ವಿಶ್ವವಿದ್ಯಾನಿಲಯಗಳಿವೆ. ಇದು ವಿಶೇಷವಾಗಿ ಸಾರ್ವಜನಿಕ ಸಂಸ್ಥೆಗಳಲ್ಲಿ ಗುಣಮಟ್ಟ ಮತ್ತು ಮಾನ್ಯತೆಯಲ್ಲಿನ ಗಮನಾರ್ಹ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ ಎಂದು ಆಯೋಗವು ವಿವರಿಸಿದೆ.
ಉತ್ತೀರ್ಣತೆ ದರ-ಮುಕ್ತ ವಿಶ್ವವಿದ್ಯಾನಿಲಯಗಳಲ್ಲಿ ಗಮನಾರ್ಹವಾಗಿ ಕಡಿಮೆ :
2021-22ರಲ್ಲಿ ಕರ್ನಾಟಕದ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ಪದವಿಯಲ್ಲಿ ಶೇ.85.2ರಷ್ಟು ಉತ್ತೀರ್ಣತೆ ದರವನ್ನು ಕಂಡವು. ಹೀಗೆ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಗಳು ಮತ್ತು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಈ ದರವು ಗಮನರ್ಹಾವಾಗಿ ಕಡಿಮೆ ಇದೆ. ಸ್ನಾತಕೋತ್ತರ ಮಟ್ಟದಲ್ಲಿ ಇದೇ ರೀತಿಯ ಪ್ರವೃತ್ತಿ ಕಾಣುತ್ತದೆ. ಅಲ್ಲಿ ಒಟ್ಟಾರೆ ಉತ್ತೀರ್ಣತೆ ದರವು ಶೇ.90ರಷ್ಟಿದೆ. ಆದರೆ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಗಳಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ. ಮತ್ತು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ಸ್ವಲ್ಪ ಕಡಿಮೆ ಇದೆ. ನಿರಂತರವಾಗಿ ಕಾಣುವ ಈ ಪ್ರವೃತ್ತಿಯು ವಿದ್ಯಾರ್ಥಿಗಳ ಯಶಸ್ಸನ್ನು ಖಾತ್ರಿಪಡಿಸುವಲ್ಲಿ ಸಾರ್ವಜನಿಕ ಮತ್ತು ಮುಕ್ತ ವಿಶ್ವವಿದ್ಯಾನಿಲಯಗಳ ಮುಂದಿರುವ ನಿರ್ದಿಷ್ಟ ಸವಾಲನ್ನು ಸೂಚಿಸುತ್ತದೆ.
ಪ್ರತ್ಯೇಕ ಗುಣಮಟ್ಟ ನಿಧಿ :
ಪ್ರಸ್ತುತ ಕರ್ನಾಟಕದ ಉನ್ನತ ಶಿಕ್ಷಣ ಬಜೆಟ್ ವೇತನ ಮತ್ತು ಅಭಿವೃದ್ಧಿಗೆ 90:10 ಅನುಪಾತದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಗುಣಮಟ್ಟ ವರ್ಧನೆಗೆ ಬೇಕಾಗುವ ಪ್ರಮಾಣಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಆದ್ದರಿಂದ ಆಯೋಗವು 75:25 ಪ್ರಮಾಣದಲ್ಲಿ ವೇತನ-ಅಭಿವೃದ್ಧಿ ವೆಚ್ಚ ಮಾನದಂಡವನ್ನು ಸ್ಥಾಪಿಸಬೇಕು. ಇದಕ್ಕಾಗಿ ಪ್ರತ್ಯೇಕ ಗುಣಮಟ್ಟ ನಿಧಿಯನ್ನು ರಚಿಸಬೇಕು ಎಂದು ಆಯೋಗವು ಪ್ರಸ್ತಾವಿಸಿದೆ. ಹಣಕಾಸು ನೆರವಿನ ಆಚೆಗೂ ಕರ್ನಾಟಕದ ಸುಮಾರು 90 ವಿಶ್ವವಿದ್ಯಾನಿಲಯಗಳು ಮತ್ತು 4,200 ಕಾಲೇಜುಗಳು ನ್ಯಾಕ್ ಮತ್ತು ಎನ್‌ಐಆರ್‌ಎಫ್ ಗುಣಮಟ್ಟ ಸೂಚಕಗಳಿಗೆ ಸಂಬಂಧಿಸಿ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಯೋಜಿತ ನೆರವಿನ ಅಗತ್ಯವಿದೆ. ಈ ಸಂಸ್ಥೆಗಳಿಗೆ ಅಗತ್ಯವಾದ ಪರಿಣಿತಿ ಒದಗಿಸಲು ಕರ್ನಾಟಕ ರಾಜ್ಯ ಗುಣಮಟ್ಟ ಮೌಲ್ಯಮಾಪನ ಮಂಡಳಿ ಸ್ಥಾಪಿಸಬೇಕು ಎಂದು ಆಯೋಗವು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಕಾಲೇಜು-ವಿಶ್ವವಿದ್ಯಾನಿಲಯಗಳಿಂದ ತುಂಬಿ ತುಳುಕುತ್ತಿದೆ ಕರ್ನಾಟಕ :
ಈ ಹಿನ್ನೆಲೆಯಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಕಾಲೇಜುಗಳ ಸಂಖ್ಯೆಯನ್ನು ಪರಿಗಣಿಸಿದರೆ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಿಂದ ತುಂಬಿ ತುಳುಕುತ್ತಿದೆ. ಅನೇಕ ಕಾಲೇಜುಗಳು ಒಟ್ಟು 100 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ಪ್ರತಿ ಕಾಲೇಜಿಗೆ ಸರಾಸರಿ ಸುಮಾರು 45+ ಇದೆ. ಈ ಸನ್ನಿವೇಶವನ್ನು ಗಮನಿಸಿದರೆ ರಾಜ್ಯದಲ್ಲಿ ಹೊಸ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸುವುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಮತ್ತು ಸಮರ್ಥ ಪ್ರಾಧಿಕಾರದ ಮೂಲಕ ಕಾರ್ಯಸಾಧ್ಯತೆಯ ಕುರಿತು ಅಧ್ಯಯನಕ್ಕೆ ಒಳಪಡಿಸಬೇಕು ಎಂದು ಆಯೋಗವು ಶಿಫಾರಸು ಮಾಡಿದೆ.






