ಆಧಾರ್‌ನಲ್ಲಿ ಹೆಸರು ಬದಲಾವಣೆ: ಪ್ರತಿಭಾವಂತ ವಿದ್ಯಾರ್ಥಿಯ ಪದವಿ ಓದುವ ಕನಸಿಗೆ ವಿಘ್ನ

ಔರಾದ್: ಉನ್ನತ ವ್ಯಾಸಂಗ ಮಾಡಿ ಉತ್ತಮ ಉದ್ಯೋಗ ಪಡೆದು ತಂದೆ-ತಾಯಿಗೆ ಆಸರೆಯಾಗಬೇಕು ಎಂಬ ಪ್ರತಿಭಾವಂತ ವಿದ್ಯಾರ್ಥಿಯ ಕನಸಿಗೆ ಆಧಾರ್‌ನಲ್ಲಿನ ಹೆಸರು ವ್ಯತ್ಯಾಸ ತೊಡಕಾಗಿದೆ.
ತಾಲೂಕಿನ ಕೊಳ್ಳೂರ್ ಗ್ರಾಮದ ಹಣಮಾಗೊಂಡ ಆಡು ಮೇಯಿಸುತ್ತಲೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಅಂಕ ಗಳಿಸಿದ್ದು, ಬಿಕಾಂ ಪದವಿ ಪಡೆದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ಕನಸು ಕಂಡಿದ್ದಾನೆ. ಆದರೆ, ಆಧಾರ್ ನಲ್ಲಿರುವ ಹೆಸರು ವ್ಯತ್ಯಾಸದಿಂದಾಗಿ ಪದವಿ ಪ್ರವೇಶ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾನೆ.
ದಾಖಲೆಗಳಲ್ಲಿ ಒಂದೇ ಹೆಸರು, ಆಧಾರ್‌ನಲ್ಲಿ ಬೇರೆ ಹೆಸರು :
ಹಣಮಾಗೊಂಡ ಅವರ ಜನನ ಪ್ರಮಾಣಪತ್ರ, ಹತ್ತನೇ ತರಗತಿ ಅಂಕಪಟ್ಟಿ ಹಾಗೂ ಪಿಯುಸಿ ಅಂಕಪಟ್ಟಿಯಲ್ಲಿ ‘ಹಣಮಾಗೊಂಡ’ ಎಂದು ಹೆಸರಿದೆ. ಆದರೆ ಆಧಾರ್ ಕಾರ್ಡ್‌ನಲ್ಲಿ ಮಾತ್ರ ‘ಹಣಮಂತ’ ಎಂದು ನಮೂದಿಸಲಾಗಿದೆ. ಈ ಹೆಸರು ವ್ಯತ್ಯಾಸದಿಂದ ಪದವಿ ಪ್ರವೇಶದ ವೇಳೆ ಸಮಸ್ಯೆ ಎದುರಾಗಿದೆ.
ಹತ್ತಕ್ಕೂ ಹೆಚ್ಚು ಬಾರಿ ಅರ್ಜಿ ತಿರಸ್ಕೃತ :
ಆಧಾರ್ ಕಾರ್ಡ್‌ನಲ್ಲಿನ ಹೆಸರು ಬದಲಾವಣೆಗಾಗಿ ಅಗತ್ಯ ದಾಖಲೆಗಳೊಂದಿಗೆ ಹಣಮಾಗೊಂಡ ಹತ್ತಕ್ಕೂ ಹೆಚ್ಚು ಬಾರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪ್ರತಿ ಬಾರಿಯೂ ಅರ್ಜಿ ತಿರಸ್ಕೃತವಾಗಿದೆ ಎನ್ನಲಾಗಿದೆ.
ಹೆಸರು ತಿದ್ದುಪಡಿಗಾಗಿ ನೆಮ್ಮದಿ ಕೇಂದ್ರಗಳಿಗೆ ಅಲೆದಾಡಿ ಸಾಕಾಗಿರುವ ವಿದ್ಯಾರ್ಥಿ, ಇದೀಗ ಉನ್ನತ ಶಿಕ್ಷಣದ ಅವಕಾಶ ಕೈತಪ್ಪಬಹುದೆಂಬ ಆತಂಕದಲ್ಲಿದ್ದಾನೆ.
ಆಡು ಮೇಯಿಸುತ್ತಲೇ ಶೇ.90 ಅಂಕ :
ಹಣಮಾಗೊಂಡ ಬಡ ಕುಟುಂಬದ ವಿದ್ಯಾರ್ಥಿಯಾಗಿದ್ದು, ಪೋಷಕರು ಆಡು ಮೇಯಿಸುವ ವೃತ್ತಿ ಮಾಡುತ್ತಿದ್ದಾರೆ. ಪೋಷಕರಿಗೆ ಆಡು ಮೇಯಿಸುವಲ್ಲಿ ನೆರವಾಗುತ್ತಲೇ ವಿದ್ಯಾಭ್ಯಾಸ ಮುಂದುವರಿಸಿದ ಅವರು, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.90 ಅಂಕ ಗಳಿಸಿದ್ದರು.
ಈ ಕುರಿತು ಏ.16ರಂದು ‘ವಾರ್ತಾ ಭಾರತಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಮಗ ಉನ್ನತ ಶಿಕ್ಷಣ ಪಡೆದು ಕುಟುಂಬಕ್ಕೆ ಆಸರೆಯಾಗಬೇಕು ಎಂಬುದು ಪೋಷಕರ ಆಶಯವಾಗಿತ್ತು. ಇದೀಗ ಆಧಾರ್‌ನಲ್ಲಿನ ಹೆಸರು ವ್ಯತ್ಯಾಸ ಆ ಕನಸಿಗೆ ಅಡ್ಡಿಯಾಗಿದೆ.
ಹಣಮಾಗೊಂಡ ಅವರ ಸಮಸ್ಯೆಯನ್ನು ಅಧಿಕಾರಿಗಳು ತಕ್ಷಣ ಬಗೆಹರಿಸಿ, ಉನ್ನತ ಶಿಕ್ಷಣ ಮುಂದುವರಿಸಲು ನೆರವಾಗಬೇಕು. ದಾಖಲೆಗಳಲ್ಲಿನ ಸಣ್ಣ ವ್ಯತ್ಯಾಸವೊಂದು ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯಕ್ಕೆ ತಡೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
ಬಿಕಾಂ ಪದವಿ ಮಾಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬುದು ನನ್ನ ಆಸೆ. ಆದರೆ ಆಧಾರ್ ಕಾರ್ಡ್‌ನಲ್ಲಿನ ಹೆಸರು ವ್ಯತ್ಯಾಸದಿಂದ ಮುಂದಿನ ಭವಿಷ್ಯದ ಬಗ್ಗೆ ಆತಂಕವಾಗಿದೆ. ಹೆಸರು ತಿದ್ದುಪಡಿಯಾದರೆ ಉನ್ನತ ಶಿಕ್ಷಣ ಮುಂದುವರಿಸುತ್ತೇನೆ.
-ಹಣಮಾಗೊಂಡ, ಸಮಸ್ಯೆಗೊಳಗಾದ ವಿದ್ಯಾರ್ಥಿ
ಹಣಮಾಗೊಂಡ ಅವರ ಆಧಾರ್ ಕಾರ್ಡ್ನಲ್ಲಿನ ಹೆಸರಿನ ಸಮಸ್ಯೆ ಗಮನಕ್ಕೆ ಬಂದಿದೆ. ಈ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ.
-ಮಹೇಶ್ ಪಾಟೀಲ್, ತಹಶೀಲ್ದಾರ್, ಔರಾದ್






