ನೀಟ್: ಅತಿ ದೊಡ್ಡ ವಂಚನೆ!

ನೀಟ್ ತನ್ನ ಹುಟ್ಟಿನಲ್ಲೇ ಅಪ್ರಜಾಸತ್ತಾತ್ಮಕವಾಗಿ ಮೂರು ಸುಪ್ರೀಂ ಕೋರ್ಟ್ ತೀರ್ಪುಗಳ ಮತ್ತು ಮೂರು ತಜ್ಞ ಸಮಿತಿಗಳ ವಿರುದ್ಧ ಹೇರಲ್ಪಟ್ಟಿದೆ. ಇದು ಅತಿಕ್ರಮಣಕಾರಿ ಹಾಗೂ ಅಸಾಂವಿಧಾನಿಕ. ಉನ್ನತ ಶಿಕ್ಷಣದ ಮೇಲಿನ ರಾಜ್ಯಗಳ ಅಧಿಕಾರವನ್ನು ಹೊಸಕಿ ಹಾಕುತ್ತದೆ. ಅಂತಿಮವಾಗಿ ಇದು, ಸಮಾನತೆ ವಿರೋಧಿಯಾಗಿ ಬಡ, ಪ್ರತಿಭಾವಂತ ಮಕ್ಕಳನ್ನು ಶಿಕ್ಷಣದ ಪರಿಧಿಯಿಂದಲೇ ದೂರ ತಳ್ಳುತ್ತಾ, ಭಾರತದ ಅರ್ಧಕ್ಕಿಂತ ಹೆಚ್ಚು ವೈದ್ಯಕೀಯ ಸೀಟುಗಳನ್ನು ಹಣವುಳ್ಳವರಿಗೆ ಹರಾಜು ಹಾಕುತ್ತದೆ. ಇಪ್ಪತ್ತೊಂದು ವಿದ್ಯಾರ್ಥಿಗಳು ಮೃತರಾಗಿದ್ದಾರೆ. ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ. ಬೇಡಿಕೆ ಸರಳ ಮತ್ತು ರಾಜಿ ರಹಿತವಾದುದು: ಎನ್‌ಟಿಎಯನ್ನು ರದ್ದುಗೊಳಿಸಿ, ನೀಟ್ ಅನ್ನು ರದ್ದುಗೊಳಿಸಿ ಮತ್ತು ರಾಜ್ಯಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಮರುಸ್ಥಾಪಿಸಿ. ಸಿಇಟಿ ಪ್ರಕ್ರಿಯೆಯು - ಪಾರದರ್ಶಕ, ಉತ್ತರದಾಯಿ, ಈಗಾಗಲೇ ನಮ್ಮ ಬಹುಪಾಲು ಸೀಟುಗಳನ್ನು ಭರ್ತಿ ಮಾಡುತ್ತಿರುವ ಸ್ಥಳೀಯ ಪ್ರತಿಭೆಯಲ್ಲಿ ಬೇರೂರಿದ ಪರೀಕ್ಷೆ. ಶಿಕ್ಷಣ ಒಂದು ಸಾರ್ವಜನಿಕ ಸೇವೆ, ಮಾರಾಟದ ಸರಕಲ್ಲ. ಅದನ್ನು ಮರಳಿ ಪಡೆಯಲೇಬೇಕು.
ಈ ಲೇಖನ ಮುದ್ರಣಕ್ಕೆ ಹೋಗುವ ಹೊತ್ತಿಗೆ, ಇಪ್ಪತ್ತೊಂದು ಎಳೆಯ ವಿದ್ಯಾರ್ಥಿಗಳು ಸತ್ತಿದ್ದಾರೆ-ಅಪಘಾತದಿಂದಲ್ಲ, ಒಂದು ಪರೀಕ್ಷೆಯಿಂದ ಕೊಲ್ಲಲ್ಪಟ್ಟಿದ್ದಾರೆ. ಇನ್ನೂ ನೂರಾರು ಮಂದಿ, ಖಿನ್ನತೆಯನ್ನು ಎದೆಯೊಳಗೆ ಹೊತ್ತು ನಡೆಯುತ್ತಿದ್ದಾರೆ - ಆಳುವವರು ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಜಂತರ್ ಮಂತರ್‌ನಲ್ಲಿ ನಡೆದ ಐತಿಹಾಸಿಕ ವಿದ್ಯಾರ್ಥಿ ಹೋರಾಟ ಈಗಾಗಲೇ ಒಂದು ಯಶಸ್ಸನ್ನು ಪಡೆದಿದೆ: ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ಒತ್ತಡಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಲೇಬೇಕಾಯಿತು. ಮತ್ತೊಮ್ಮೆ ದೇಶದಾದ್ಯಂತ ಎದ್ದಿರುವ ಪ್ರಶ್ನೆ: ಒಂದು ದೇಶದ ಮಕ್ಕಳ ಭವಿಷ್ಯವನ್ನು ಒಂದೇ ಪರೀಕ್ಷೆ ನಿರ್ಧರಿಸಬೇಕೇ? ಅಧಿಕಾರದಲ್ಲಿರುವವರು ಇದಕ್ಕೆ ಪ್ರಾಮಾಣಿಕವಾಗಿ ಉತ್ತರಿಸಬೇಕಿದೆ.
22 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ತಮ್ಮ ಬಾಲ್ಯ ಮತ್ತು ಯೌವನವನ್ನು ಈ ಪರೀಕ್ಷೆಗಾಗಿ ಬಲಿಕೊಟ್ಟರು. ಎಚ್ಚರಗೊಂಡಾಗ ಇವರುಗಳು ಕಂಡ ಕಠೋರ ಸತ್ಯ: ತಮ್ಮ ಕನಸುಗಳು ಹಣವುಳ್ಳವರಿಗೆ ಹರಾಜು ಹಾಕಲಾಗಿದೆ ಎಂಬುದು. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಫಲಿತಾಂಶ ತಿರುಚುವಿಕೆ ಕೇವಲ ಹಗರಣಗಳಾಗಿ ಉಳಿದಿಲ್ಲ. ಇವುಗಳು ಈಗ ದಿನನಿತ್ಯದ ಸಂಗತಿಗಳಾಗುತ್ತಿವೆ! ಇದು ವ್ಯವಸ್ಥೆಯ ವೈಫಲ್ಯವಲ್ಲ. ಇದೊಂದು ಅಪರಾಧ ಮತ್ತು ಇದರ ಬೇರುಗಳು ಮೂವತ್ತೈದು ವರ್ಷಗಳಷ್ಟು ಆಳದಲ್ಲಿದೆ. 1990ರ ದಶಕದಿಂದೀಚೆಗಿನ ಜಾಗತೀಕರಣ ನೀತಿಗಳಿಗೆ ಅನುಗುಣವಾಗಿ ರೂಪುಗೊಂಡಿರುವ ನಮ್ಮ ಶಿಕ್ಷಣ ನೀತಿಗಳು ಹಾಗೂ ಶೈಕ್ಷಣಿಕ ವ್ಯವಸ್ಥೆ ಇದಕ್ಕೆ ಮೂಲ ಕಾರಣ ಎಂಬುದನ್ನು ನಾವು ಮರೆಯಬಾರದು.
ಜಾಗತೀಕರಣ ನೀತಿಯ ಪರಿಣಾಮ ನಾಯಿ ಕೊಡೆಗಳಂತೆ ಬೆಳೆದ ಖಾಸಗಿ ವೈದ್ಯಕೀಯ ಕಾಲೇಜುಗಳು
1993ಕ್ಕೂ ಮೊದಲು, ವೈದ್ಯಕೀಯ ಪ್ರವೇಶ ಪಿಯುಸಿ ಅಂಕಗಳ ಮೇಲೆ ನಿಂತಿತ್ತು, ರಾಜ್ಯದ ನಿರ್ದಿಷ್ಟ ಪ್ರದೇಶದ ಜನಗಳ ಅವಶ್ಯಕತೆಗೆ ಅನುಗುಣವಾಗಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುತ್ತಿತ್ತು. ಜಾಗತೀಕರಣ ನೀತಿಗಳು ಇದನ್ನು ಮೂಲಭೂತವಾಗಿ ಬದಲಿಸಿತು: ವೈದ್ಯಕೀಯ ಶಿಕ್ಷಣ ಒಂದು ಮಾರಾಟದ ಸರಕಾಗಿ ಪರಿವರ್ತನೆಗೊಂಡಿತು. ಜಾಗತೀಕರಣದ ಕಾಲಘಟ್ಟದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ. 894ರಷ್ಟು ಪ್ರಮಾಣದಲ್ಲಿ ಬೆಳೆದರೆ; ಸರಕಾರಿ ಕಾಲೇಜುಗಳ ಬೆಳವಣಿಗೆ ಕೇವಲ ಶೇ. 314(ಟೇಬಲ್ ನೋಡಿ). ಬಹುಪಾಲು ಖಾಸಗಿ ಕಾಲೇಜುಗಳು 2003ರ ನಂತರ ಆರಂಭವಾದವು. ಸುಪ್ರೀಂ ಕೋರ್ಟಿನ 11 ನ್ಯಾಯಾಧೀಶರು ಟಿ.ಎಂ.ಎ. ಪೈ ಮೊಕದ್ದಮೆಯಲ್ಲಿ ನೀಡಿದ ತೀರ್ಪು (2002) ಮತ್ತು ಅದನ್ನು ಅನುಸರಿಸಿದ ತೀರ್ಪುಗಳು ಖಾಸಗಿ ವೃತ್ತಿಪರ ಕಾಲೇಜುಗಳು ನಾಯಿ ಕೊಡೆಗಳಂತೆ ಬೆಳೆಯಲು ಕಾರಣವಾದವು. ಈ ತೀರ್ಪುಗಳು, ಖಾಸಗಿ ವೃತ್ತಿಪರ ಕಾಲೇಜುಗಳಿಗೆ ಪ್ರವೇಶ ಮತ್ತು ಶುಲ್ಕ ನಿಗದಿಪಡಿಸಲು ಅನಿರ್ಬಂಧಿತ ಅಧಿಕಾರವನ್ನು ಕೊಟ್ಟವು. ಇದಕ್ಕೆ ಮಟ್ಟ ಹಾಕಲು ಹಿಂದಿನವರೆಗೆ ಯಾವುದೇ ಸರಕಾರಕ್ಕೆ ಸಾಧ್ಯವಾಗಿಲ್ಲ.
ವಿವಿಧ ರಾಜ್ಯಗಳ ಶೈಕ್ಷಣಿಕ ಮಂಡಳಿಗಳ ವಿದ್ಯಾರ್ಥಿಗಳ ನಡುವೆ ‘ಏಕರೂಪ ಅರ್ಹತೆ’ಯ ಹೆಸರಿನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು 1980ರ ದಶಕದ ಕೊನೆಯಲ್ಲಿ ಜಾರಿಗೆ ತರಲಾಯಿತು. ಆದರೆ ವಾಸ್ತವದಲ್ಲಿ, ಖಾಸಗಿ ಕಾಲೇಜುಗಳಿಗೆ ಬೇಕಿದ್ದದ್ದು ವಿವಿಧ ರಾಜ್ಯಗಳಲ್ಲಿರುವ ಶ್ರೀಮಂತ ಖರೀದಿದಾರರು. ಲಕ್ಷಾಂತರ ರೂಪಾಯಿ ತಮ್ಮ ಸೀಟುಗಳನ್ನು ಖರೀದಿಸಬಲ್ಲ ವಿವಿಧ ರಾಜ್ಯಗಳ ವಿದ್ಯಾರ್ಥಿಗಳನ್ನು ಸೆಳೆಯಲು ಸಿಇಟಿ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಒಂದು ಉತ್ತಮ ಸಾಧನವಾಯಿತು. 2004ರ ನಂತರದ ದಿನಗಳಲ್ಲಿ, ಭಾರತದ ಒಳಗಡೆ ‘ಸಿರಿವಂತ ಗ್ರಾಹಕರ’ ಸಂಖ್ಯೆಯಲ್ಲಿ ಅಭಾವ ಉಂಟಾಯಿತು. ವಿದೇಶಗಳಲ್ಲಿರುವ ‘ಹಣವುಳ್ಳ ಗ್ರಾಹಕರಿಗೆ’ ಭಾರತದಲ್ಲಿರುವ ವೈದ್ಯಕೀಯ ಸೀಟುಗಳನ್ನು ಮಾರಲು 2016ರಲ್ಲಿ ನೀಟ್ ಅನ್ನು ಇಡೀ ದೇಶದ ಮೇಲೆ ಹೇರಲಾಯಿತು. ಸಿಇಟಿ ವೈದ್ಯಕೀಯ ಶಿಕ್ಷಣವನ್ನು ರಾಷ್ಟ್ರೀಯ ಸರಕಾಗಿಸಿತು; ನೀಟ್ ಅದನ್ನು ಜಾಗತಿಕ ಸರಕಾಗಿಸಿತು - ಅತ್ಯಂತ ಉದಾತ್ತ ವೃತ್ತಿಯೊಂದು ಅಂತರ್‌ರಾಷ್ಟ್ರೀಯ ಮಳಿಗೆಯ ಸರಕಾಗಿ ಪರಿವರ್ತನೆಗೊಂಡದ್ದು ದುರಂತವೇ ಸರಿ.
ವ್ಯಾಪಾರೀಕರಣ: ಒಂದು ವೈದ್ಯಕೀಯ ಸೀಟಿನ ಬೆಲೆ
ಭಾರತದ ವೈದ್ಯಕೀಯ ಸೀಟುಗಳಲ್ಲಿ ಶೇ. 55- ಅಂದರೆ 71,552 ಸೀಟುಗಳು - ಈಗ ಖಾಸಗಿ ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳ ಪಾಲಾಗಿವೆ. ಈ ಸೀಟುಗಳ ಶುಲ್ಕಗಳು ಸಾಮಾನ್ಯ ಕುಟುಂಬರ್ಕೆ ಕೈಗೆಟುಕದ ಬಾನಿನೆತ್ತರದಲ್ಲಿವೆ (ಟೇಬಲ್ ನೋಡಿ). ನೀಟ್‌ನಲ್ಲಿ ಫೇಲಾದ ವಿದ್ಯಾರ್ಥಿಯೂ ಮ್ಯಾನೇಜ್‌ಮೆಂಟ್ ಕೋಟಾದ ಮೂಲಕ ರೂ. 50 ಲಕ್ಷದಿಂದ 3 ಕೋಟಿಗೆ ಎಂಬಿಬಿಎಸ್ ಸೀಟು ಖರೀದಿಸಬಹುದು. 2025ರಲ್ಲಿ ಕರ್ನಾಟಕದಲ್ಲಿ, 720 ಅಂಕಗಳಿಗೆ ಕೇವಲ 114 ಅಂಕ ಪಡೆದ - ಅಂದರೆ ಕೇವಲ ಶೇ. 15 ಪಡೆದ, ಅಖಿಲ ಭಾರತ ರ್ಯಾಂಕ್ 13,10,859 ಇದ್ದ ಅಭ್ಯರ್ಥಿಯೊಬ್ಬರು ಎಂಬಿಬಿಎಸ್ ಸೀಟು ಪಡೆದುಕೊಂಡರು (ಕೆಇಎ 2025)! ಈ ಮಗುವನ್ನು ಪ್ರತಿಭೆ ಸೋಲಿಸಲಿಲ್ಲ. ಪ್ರತಿಭೆ ಎಂಬುದು ಮೊದಲಿನಿಂದಲೂ ಇಲ್ಲಿ ಮುಖ್ಯವೇ ಆಗಿರಲಿಲ್ಲ.
ಎಲ್ಲಿಯವರೆಗೆ ಖಾಸಗಿ ಕಾಲೇಜುಗಳಲ್ಲಿ ಆಕಾಶದೆತ್ತರದ ಶುಲ್ಕಗಳು ಮತ್ತು ಶೇ. 55 ಸೀಟುಗಳು ಶ್ರೀಮಂತರಿಗಾಗಿ ಮೀಸಲಿಡುವ ಪದ್ಧತಿ ಮುಂದುವರಿಯುತ್ತದೆಯೋ ಅಲ್ಲಿಯವರೆಗೆ, ಎಲ್ಲಾ ಪರೀಕ್ಷಾ ಸುಧಾರಣೆಗಳು ಅಂತಿಮವಾಗಿ ಕ್ರೂರ ಪ್ರಹಸನವಾಗಿ ಪರಿಣಮಿಸುತ್ತವೆ. ನೀಟ್ ಮತ್ತು ಪರೀಕ್ಷಾ ಅಕ್ರಮಗಳು ದಿನನಿತ್ಯದ ಸಾಮಾನ್ಯ ಘಟನೆಗಳಾಗಿಯೇ ಉಳಿಯುತ್ತವೆ.
ಒಂದು ಅಪ್ರಜಾಸತ್ತಾತ್ಮಕ, ಅಸಾಂವಿಧಾನಿಕ ಹೇರಿಕೆ
ಉನ್ನತ ಶಿಕ್ಷಣ ಪ್ರವೇಶ ಎಂಬುದು ರಾಜ್ಯದ ವಿಷಯ. ಮೂರು ಮಹತ್ವದ ಸುಪ್ರೀಂ ಕೋರ್ಟ್ ಪೀಠಗಳು - ಟಿಎಂಎ ಪೈ (2002), ಇಸ್ಲಾಮಿಕ್ ಅಕಾಡಮಿ (2003), ಪಿ.ಎ. ಇನಾಂದಾರ್ (2005) - ಇಡೀ ಭಾರತಕ್ಕೆ ಒಂದು ಅಖಿಲ ಭಾರತ ಪರೀಕ್ಷೆಯನ್ನು ಜಾರಿಗೊಳಿಸಬೇಕೆಂದು ಆದೇಶಿಸಿರಲಿಲ್ಲ. ಮೂರು MHR ತಜ್ಞ ಸಮಿತಿಗಳು - ಆಚಾರ್ಯ (2010), ರಾಮಸ್ವಾಮಿ (2011), ಜೋಶಿ (2015) - ಭಾರತದಂತಹ ವೈವಿಧ್ಯಮಯ ದೇಶಕ್ಕೆ ಕೇಂದ್ರೀಕೃತ ಪರೀಕ್ಷೆ ಕಾರ್ಯಸಾಧ್ಯವಲ್ಲ ಎಂದು ಎಚ್ಚರಿಸಿದ್ದವು, ಹಲವು ಪ್ರವೇಶ ಪರೀಕ್ಷೆಗಳ ಪರ ಇದ್ದವು; ಇದರೊಟ್ಟಿಗೆ ಬೆಳೆಯುತ್ತಿರುವ ಕೋಚಿಂಗ್ ಪಿಡುಗಿನ ಬಗ್ಗೆಯೂ ಎಚ್ಚರಿಕೆ ನೀಡಿದ್ದವು. ಪ್ರತಿಯೊಂದು ಎಚ್ಚರಿಕೆಯನ್ನೂ ಕಸದ ಬುಟ್ಟಿಗೆ ಎಸೆಯಲಾಯಿತು. ನೀಟ್ ಅನ್ನು 2016ರಲ್ಲಿ ಹೇರಲಾಯಿತು. ಈ ಮಹತ್ವದ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಎನ್‌ಟಿಎ(ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ಗೆ ನೀಡಲಾಯಿತು. ವಿಪರ್ಯಾಸವೆಂದರೆ, ಎನ್‌ಟಿಎಯಲ್ಲಿ ಒಬ್ಬರಾದರೂ, ಶಿಕ್ಷಣ ತಜ್ಞರು ಹಾಗೂ ಪ್ರೊಫೆಸರ್‌ಗಳಿಲ್ಲ, ರಾಜ್ಯಗಳ ಪ್ರಾತಿನಿಧ್ಯವೂ ಇಲ್ಲದ, ಇದೊಂದು ನೋಂದಾಯಿತ ಸಂಸ್ಥೆಯಷ್ಟೇ. ಜೊತೆಗೆ ಹಲವು ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ವಂಚನೆಗಳ ಕುಖ್ಯಾತಿಯನ್ನು ಇದು ಹೊಂದಿದೆ.
ಅನ್ಯಾಯ ಪ್ರತಿಯೊಂದು ರಾಜ್ಯದಲ್ಲೂ ತಾಂಡವವಾಡುತ್ತಿದೆ. ಕರ್ನಾಟಕವೇ ಇದಕ್ಕೆ ಸ್ಪಷ್ಟ ಸಾಕ್ಷಿ (ಟೇಬಲ್ ನೋಡಿ): ಸರಕಾರಿ ಕಾಲೇಜುಗಳಲ್ಲಿರುವ ಶೇ. 85 ಸೀಟುಗಳನ್ನು ಕರ್ನಾಟಕದ (ಆ ರಾಜ್ಯದ ವಿದ್ಯಾರ್ಥಿಗಳಿಂದಲೇ) ವಿದ್ಯಾರ್ಥಿಗಳಿಂದಲೇ ತುಂಬಬೇಕೆಂಬುದು ಚಾಲ್ತಿಯಲ್ಲಿರುವ ನಿಯಮ. ಅಂದರೆ 6,600ಕ್ಕೂ ಹೆಚ್ಚು ಸೀಟುಗಳು ಈಗಾಗಲೇ ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಾಗಿವೆ. ಬಹುಪಾಲು ಸೀಟುಗಳು ಸ್ಥಳೀಯವಾಗಿಯೇ ಭರ್ತಿಯಾಗುವುದಾದರೆ, ಈಗಾಗಲೇ ಖಾತ್ರಿಯಾಗಿರುವ ತಮ್ಮ ಹಕ್ಕನ್ನು ಪಡೆಯಲು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಈ ದೂರದ, ಸರಕನ್ನಾಗಿ ಮಾಡಲ್ಪಟ್ಟ, ರಾಷ್ಟ್ರೀಯ ಪರೀಕ್ಷೆಯ ಪಿಡುಗಿಗೆ ಏಕೆ ದಬ್ಬಬೇಕು?
ಸಮಾನತೆ ವಿರೋಧಿ ವಿನ್ಯಾಸ
ನೀಟ್‌ನ 40ನೇ ಪರ್ಸೆಂಟೈಲ್ ನಿಯಮವು, ವಾಸ್ತವದಲ್ಲಿ ತೇರ್ಗಡೆಯಾಗಬೇಕು ಅಥವಾ ಕನಿಷ್ಠ ಅಂಕಗಳನ್ನು ಪಡೆಯಬೇಕೆಂಬ ಮೂಲಭೂತ ನಿಯಮವನ್ನೇ ಗಾಳಿಗೆ ತೂರಿದೆ. ಇದರ ಪ್ರಕಾರ, ಯಾವುದೇ ಸಂದರ್ಭದಲ್ಲಿಯಾದರೂ ಸರಿ, ಪರೀಕ್ಷೆ ಬರೆದ 23 ಲಕ್ಷ ವಿದ್ಯಾರ್ಥಿಗಳ ಪೈಕಿ ಸುಮಾರು 13 ಲಕ್ಷ ಅಭ್ಯರ್ಥಿಗಳನ್ನು ‘ಅರ್ಹ’ ಎಂದು ಘೋಷಿಸಲೇಬೇಕಾಗುತ್ತದೆ. ಖರೀದಿದಾರರ ವಲಯವನ್ನು ವಿಶಾಲವಾಗಿಡಲು ಗಣಿತವನ್ನು ಬಂಡವಾಳಿಗರು ತಮ್ಮಿಷ್ಟಕ್ಕೆ ತಕ್ಕಂತೆ ಬಗ್ಗಿಸಿಕೊಂಡಿದ್ದಾರೆ! ಸಿಇಟಿ ಪರೀಕ್ಷೆಯು ದ್ವಿತೀಯ ಪಿಯುಸಿ ಅಂಕಗಳಿಗೆ ಶೇ. 50 ಮತ್ತು ಪ್ರವೇಶ (ಸಿಇಟಿ) ಪರೀಕ್ಷೆಗೆ ಶೇ. 50 ನೀಡುವುದು ಕಾಲದ ಪರೀಕ್ಷೆಯಲ್ಲಿ ಸಾಬೀತಾದ ನೀತಿಯಾಗಿತ್ತು. ಒಂದು ವರ್ಷದ ವಿನಾಶಕಾರಿ ಕೋಚಿಂಗ್‌ಗಿಂತ ಎರಡು ವರ್ಷಗಳ ನಿಜವಾದ ಕಲಿಕೆಗೆ ಬೆಲೆ ಕೊಡಲಾಗಿತ್ತು. 2020ರಿಂದೀಚೆಗೆ, ನೀಟ್ ಪಿಯುಸಿ ಅಂಕಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ. ಪದವಿಪೂರ್ವ ತರಗತಿಗಳಲ್ಲಿನ ನಿಜವಾದ ಕಲಿಕೆ ಕುಸಿದುಬಿದ್ದಿದೆ. ಇಡೀ ತಲೆಮಾರೊಂದು ತಾರ್ಕಿಕವಾಗಿ ಆಲೋಚಿಸುವ ಬದಲಾಗಿ, ಬಹು ಆಯ್ಕೆಯ ಉತ್ತರಗಳಲ್ಲಿ ಒಂದನ್ನು ಆಯ್ಕೆ ಮಾಡುವ ತರಬೇತಿಯನ್ನು ಮಾತ್ರ ಪಡೆಯುತ್ತಿರುವುದು ಖೇದಕರ.
ಕೋಚಿಂಗ್ ಮಾಫಿಯಾ ಮತ್ತು ಅದು ಬಿಟ್ಟುಹೋಗುವ ಶವಗಳು
ಮನೆಯಿಂದ ದೂರ, ಹದಿಹರೆಯದ ಮಕ್ಕಳನ್ನು ದಿನಕ್ಕೆ 8-10 ಗಂಟೆಗಳ ಕಾಲ, ಬದುಕಲು ಅಲ್ಲ, ಕೇವಲ ಬಾಯಿಪಾಠಕ್ಕಾಗಿ ಕಟ್ಟಲ್ಪಟ್ಟ ನಿರ್ಜೀವ ವಸತಿಗೃಹಗಳಲ್ಲಿ ದುಡಿಸಿಕೊಳ್ಳಲಾಗುತ್ತದೆ. ಸಾವಿರಾರು ಮಂದಿ ಕುಸಿದುಬೀಳುತ್ತಾರೆ. ನೂರಾರು ಮಂದಿ ತಮ್ಮ ಪ್ರಾಣ ತೆಗೆದುಕೊಂಡಿದ್ದಾರೆ. ಕೋಟಾ ಒಂದು ದುರಂತವಲ್ಲ - ಅದೊಂದು ವ್ಯಾಪಾರ ಮಾದರಿ. ನ್ಯಾಯಮೂರ್ತಿ ಎ.ಕೆ. ರಾಜನ್ ಸಮಿತಿ, ತಮಿಳುನಾಡಿನ 2019-20ರ ವೈದ್ಯಕೀಯ ಬ್ಯಾಚ್‌ನ ಶೇ. 99 ವಿದ್ಯಾರ್ಥಿಗಳು ಮೊದಲೇ ಕೋಚಿಂಗ್ ಪಡೆದಿದ್ದರು ಎಂಬ ಕಟು ಸತ್ಯವನ್ನು ನಮಗೆ ತೋರಿಸಿತು (ರಾಜನ್ ಸಮಿತಿ, 2021). 2019ರಲ್ಲಿ, ನೀಟ್ ಪಾಸಾದ 7,97,042 ವಿದ್ಯಾರ್ಥಿಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಕೇವಲ ಮೂರು ಕೋಚಿಂಗ್ ಸಂಸ್ಥೆಗಳಿಂದ ತರಬೇತಿ ಪಡೆದಿದ್ದರು (ಡೇಕಾ, 2020). ನಾಲ್ಕು ಕೋಟಿ ವಿದ್ಯಾರ್ಥಿಗಳು ಇಂದು ರೂ. 58,000 ಕೋಟಿಯ ಕೋಚಿಂಗ್ ಉದ್ಯಮದ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಇದು 2028ರ ವೇಳೆಗೆ ರೂ. 1.3 ಲಕ್ಷ ಕೋಟಿ ತಲುಪುವ ನಿರೀಕ್ಷೆಯಿದೆ (ಗೋಯಲ್ ಮತ್ತಿತರರು, 2024). ನೀಟ್ ಪರೀಕ್ಷೆಯು ಕೇವಲ ಸಿಬಿಎಸ್‌ಇ (ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ) ಪಠ್ಯಕ್ರಮದ ಮೇಲೆ ನಿರ್ಮಿತವಾದ ಒಂದು ತಾರತಮ್ಯದ ಪರೀಕ್ಷೆ. ಇದು, ಗ್ರಾಮೀಣ, ಬಡ ಮತ್ತು ಪ್ರಾದೇಶಿಕ ಭಾಷಾ ಮಾಧ್ಯಮದ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ವೈದ್ಯಕೀಯ ಸೀಟ್ ಅನ್ನು ಪಡೆಯುವ ಪ್ರಕ್ರಿಯೆಯಿಂದಲೇ ಹೊರಗಿಡುತ್ತದೆ. ನಮ್ಮ ದೇಶದ ಬಹುತೇಕ ಮಾಧ್ಯಮ ವರ್ಗದ ವಿದ್ಯಾರ್ಥಿಗಳಿಗೂ ಶೇ. 6-8 ಲಕ್ಷ ಕೋಚಿಂಗ್ ಶುಲ್ಕ ಎಟುಕದ ಕನಸು. ತಮಿಳುನಾಡಿನ ಅನಿತಾ, ತನ್ನ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ 1,200ಕ್ಕೆ 1,176 ಅಂಕ ಗಳಿಸಿದ್ದರೂ ನೀಟ್ ಪಾಸಾಗಲಿಲ್ಲ. ಆಕೆ ತನ್ನ ಪ್ರಾಣ ತೆಗೆದುಕೊಂಡಳು. ನೀಟ್‌ಗೆ ಈಗ ಹೊಸ ಹೆಸರು ಸಿಕ್ಕಿದೆ: ಸಮಾನತೆ-ವಿರೋಧಿ ನಿರ್ಮೂಲನಾ ಪರೀಕ್ಷೆ (Non-Egalitarian and elimination Test - NEET). ಇನ್ನಷ್ಟು ಅನಿತಾ, ಭಾಗ್ಯಶ್ರೀ ರಾಜಶೇಖರ್, ಆಕಾಂಕ್ಷಾ ಚತುರ್ವೇದಿ, ಪ್ರದೀಪ್ ಕುಮಾರ್ ಅಥವಾ ಅಂಕಿತಾ ಸಂಗ್ಳೆ ಅವರನ್ನು ಕಳೆದುಕೊಳ್ಳುವ ಮೊದಲು - ನಾವು ಎಚ್ಚೆತ್ತುಕೊಳ್ಳೋಣ!






