ನೀಟ್: ವೈದ್ಯಕೀಯ ಆಕಾಂಕ್ಷಿಗಳ ಸಾವು ನೋವು

ನೀಟ್ ಪರೀಕ್ಷೆ ಇರುವುದೇ ಹಗರಣ ಮಾಡಲು ಮತ್ತು ವಂಚನೆ ಮಾಡಲು, ನೀಟ್ ಕೋಚಿಂಗ್ ಸೆಂಟರ್‌ಗಳು ಇರುವುದೇ ಲೂಟಿ ಮಾಡಲು. ದಕ್ಷಿಣ ಭಾರತೀಯ ವೈದ್ಯಕೀಯ ಆಕಾಂಕ್ಷಿಗಳ ಪ್ರಾಣಕ್ಕೆ ಕಂಟಕವಾದ ಈ ದರಿದ್ರ ವ್ಯವಸ್ಥೆಯನ್ನು ಕಿತ್ತೊಗೆದು ಮೊದಲಿದ್ದ ಪಿಯುಸಿ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಅಧ್ಯಯನಕ್ಕೆ ಪ್ರವೇಶ ಮಾಡಿಕೊಡುತ್ತಿದ್ದ ವ್ಯವಸ್ಥೆಯೇ ಜಾರಿಯಾಗಲಿ. ಈ ಸಾವು ನೋವುಗಳು ನಿಲ್ಲಲಿ, ಈಗ ಆಗಿರುವ ಸಾವು ನೋವುಗಳಿಗೆ ನ್ಯಾಯ ಸಿಗಲಿ.
ನಾಲ್ಕು ವಾರಗಳ ಹಿಂದೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದ ಘಟನೆಯಿಂದ ಭಾರತದ ಶಿಕ್ಷಣ ವ್ಯವಸ್ಥೆ ತನ್ನ ಪಥ ಬದಲಾಯಿಸಿದೆ ಎಂಬುದು ಮತ್ತೊಮ್ಮೆ ಸಾಬೀತಾಗುತ್ತದೆ. ಶಿಕ್ಷಣ ಜೀವನ ಕಟ್ಟಿಕೊಳ್ಳಲಿಕ್ಕೆ ಬೇಕಾದ ಬುನಾದಿ ಆದರೆ ಈಗ ಸಾವು ನೋವುಗಳಿಗೆ ಮೆಟ್ಟಿಲು.
ಜೌನ್ ಪುರ ಜಿಲ್ಲೆಯ ಖಲೀಲ್‌ಪುರದಲ್ಲಿ 20 ವರ್ಷದ ಸೂರಜ್ ಭಾಸ್ಕರ್ ಎಂಬ ನೀಟ್ ಆಕಾಂಕ್ಷಿ ಸ್ವತಹ ತಾನೇ ತನ್ನ ಕಾಲನ್ನು ಕತ್ತರಿಸಿಕೊಂಡಿದ್ದಾನೆ, ಕಾರಣ- ಈತ ಎರಡು ಬಾರಿ ನೀಟ್ ಪರೀಕ್ಷೆಗೆ ಪ್ರಯತ್ನಿಸಿದ್ದರೂ ಪರೀಕ್ಷೆಯಲ್ಲಿ ಪಾಸ್ ಆಗಿರಲಿಲ್ಲ. ತಾನು ಡಾಕ್ಟರ್ ಆಗಲೇ ಬೇಕೆಂಬ ಕನಸುಕಂಡಿದ್ದ, ಅದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ, ‘‘2026ಕ್ಕೆ ನಾನು ಡಾಕ್ಟರ್ ಆಗುತ್ತೇನೆ’’ ಎಂದು ಆತನ ಡೈರಿಯಲ್ಲಿ ಬರೆದುಕೊಂಡಿದ್ದ. ವೈದ್ಯಕೀಯ ಅಧ್ಯಯನ ಮಾಡಲು ನೀಟ್ ಪರೀಕ್ಷೆ ಪಾಸಾಗುವುದು ಕಡ್ಡಾಯ. ಅದನ್ನು ಭೇದಿಸಲು ಆಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ, ಕೊನೆಗೆ ನೀಟ್ ಪರೀಕ್ಷೆ ಅಡಿಯಲ್ಲಿ ಬರುವ ಅಂಗವಿಕಲತೆಯ ಕೋಟಾ ಪಡೆದು ತಾನು ಡಾಕ್ಟರ್ ಆಗುವ ಕನಸನ್ನು ಈಡೇರಿಸಿಕೊಳ್ಳಲು ತನ್ನ ಕಾಲನ್ನು ಕತ್ತರಿಸಿಕೊಂಡಿದ್ದಾನೆ.
‘ನೀಟ್’ ಎಂಬ ಕೆಟ್ಟ ಪೆಡಂಭೂತದಿಂದ ಇದಕ್ಕಿಂತಲೂ ದೊಡ್ಡ ಮಟ್ಟದ ದುರ್ಘಟನೆ ತಮಿಳುನಾಡಿನಲ್ಲಿ ಸಂಭವಿಸಿತ್ತು. ಅರಿಯಲೂರು ಜಿಲ್ಲೆಯ ಕೂಳುಮೂರ್ ಊರಿನ 17 ವರ್ಷದ ಷಣ್ಮುಗಂ ಅನಿತಾ ಎಂಬ ದಲಿತ ಸಮುದಾಯಕ್ಕೆ ಸೇರಿದ ಹುಡುಗಿಯ ತಾಯಿ ಈಕೆ ಚಿಕ್ಕವಯಸ್ಸಿನಲ್ಲಿ ಇರುವಾಗಲೇ ತೀರಿಹೋಗಿದ್ದಳು, ಹಾಗಾಗಿ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದಳು. ತಂದೆಯ ದಿನಗೂಲಿ ಮಾಡುವ ಅಸಂಘಟಿತ ಕಾರ್ಮಿಕ. ಈಕೆ ಬಡ ದಲಿತ ಕುಟುಂಬಕ್ಕೆ ಸೇರಿದವಳಾಗಿದ್ದಳು. ಇವರ ಮನೆಯಲ್ಲಿ ಶೌಚಾಲಯ ಸೌಲಭ್ಯವೂ ಇರಲಿಲ್ಲ ಅಂತಹ ಕಡುಬಡತನ. ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಿಂದ ಬಂದಿದ್ದ ಹುಡುಗಿ ಎರಡನೇ ವರ್ಷದ ಪಿಯುಸಿ ಪರೀಕ್ಷೆಯಲ್ಲಿ 1,200ಕ್ಕೆ 1176 ಅಂಕ ಗಳಿಸಿದ್ದಳು (ಅದರಲ್ಲಿ ಭೌತಶಾಸ್ತ್ರ ಮತ್ತು ಗಣಿತದಲ್ಲಿ ನೂರಕ್ಕೆ ನೂರರಷ್ಟು ಅಂಕಗಳಿಸಿದ್ದಳು).
ಪಿಯುಸಿ ಪರೀಕ್ಷೆಯನ್ನು ‘ತಮಿಳುನಾಡು ಸ್ಟೇಟ್ ಬೋರ್ಡ್ ಎಕ್ಸಾಮಿನೇಷನ್’ ನಡೆಸುತ್ತದೆ. ಅನಿತಾ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದ ಕಾರಣ ‘ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ವತಿಯಿಂದ ಎರೋನಾಟಿಕಲ್ ಇಂಜಿನಿಯರಿಂಗ್ ಕೋರ್ಸ್ ಅಧ್ಯಯನ ಮಾಡಲು ಅವಕಾಶ ಬರುತ್ತದೆ. ಆದರೆ ಅನಿತಾ ಆ ಅವಕಾಶವನ್ನು ನಿರಾಕರಿಸುತ್ತಾಳೆ. ಕಾರಣ ಆಕೆಗಿದ್ದ ಗುರಿ ಡಾಕ್ಟರ್ ಆಗಬೇಕೆಂಬುವುದು.
ಅನಿತಾ ಡಾಕ್ಟರ್ ಆಗಲೇಬೇಕೆಂಬ ಗುರಿ ಸಾಧಿಸಲು ಹಗಲಿರುಳು ಶ್ರಮಿಸಿದ್ದಳು. ನೀಟ್ ಪರೀಕ್ಷೆ ಬಂದ ಕಾರಣ, ವೈದ್ಯಕೀಯ ಅಧ್ಯಯನಕ್ಕೆ ಪ್ರವೇಶ ಪಡೆಯಲು ನೀಟ್ ಪರೀಕ್ಷೆ ಕಡ್ಡಾಯ. ವೈದ್ಯಕೀಯ ಅಧ್ಯಯನಕ್ಕೆ ಅರ್ಹತೆ ಪಡೆಯಲು ನೀಟ್ ರ್ಯಾಂಕ್ ಮುಖ್ಯವಾಗುತ್ತದೆ, ಪಿಯುಸಿಯಲ್ಲಿ ಗಳಿಸಿದ ಅಂಕಗಳು ಪರಿಗಣನೆಗೆ ಬರುವುದಿಲ್ಲ. ಹಾಗಾಗಿ ಈಕೆ ನೀಟ್ ಪರೀಕ್ಷೆ ಬರೆಯುತ್ತಾಳೆ, ನೀಟ್ ಪರೀಕ್ಷೆಯಲ್ಲಿ 720 ಅಂಕಕ್ಕೆ 86 ಅಂಕ (ಶೇ. 12.33) ಗಳಿಸಿ ಫೇಲಾಗುತ್ತಾಳೆ. ನೀಟ್ ಮೂಲಕ ತನಗಾದ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಅನಿತಾ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಾಳೆ.
ಸುಪ್ರೀಂ ಕೋರ್ಟ್ ಮನವಿಯನ್ನು ವಜಾಗೊಳಿಸಿ, ನೀಟ್ ಆಧಾರದ ಮೇಲೆ ಮಾತ್ರ ವೈದ್ಯಕೀಯ ಅಧ್ಯಯನಕ್ಕೆ ಪ್ರವೇಶ ನೀಡಬೇಕೆಂದು ತೀರ್ಪು ನೀಡಿತು. ಈ ತೀರ್ಪಿನಿಂದಾಗಿ ಅನಿತಾಳ ವೈದ್ಯಕೀಯ ಕನಸು ಛಿದ್ರಗೊಂಡಿತು, ಆಗ ತಮಿಳುನಾಡು ಸರಕಾರ ಏನೂ ಮಾಡಲು ಸಾಧ್ಯವಾಗಲಿಲ್ಲ, ಸುಪ್ರೀಂ ಕೋರ್ಟ್ ತೀರ್ಪು ಬಂದ 9ನೇ ದಿನಕ್ಕೆ ಅನಿತಾ ನೇಣಿಗೆ ಶರಣಾಗುತ್ತಾಳೆ.
ಇದೇ ರೀತಿ, 2022ರಲ್ಲಿ ನೀಟ್ ಪರೀಕ್ಷೆಯ ಫಲಿತಾಂಶ ಬಂದಾಗ ತಮಿಳುನಾಡಿನಲ್ಲಿ ಲಕ್ಷಣ ಶ್ವೇತಾ ಎಂಬ ಹುಡುಗಿ ನೇಣು ಬಿಗಿದುಕೊಂಡು ಸಾಯುತ್ತಾಳೆ. ನೊಯ್ಡಾದಲ್ಲಿ 22 ವರ್ಷದ ಸಂಪದ ಸಿಂಗ್ ಎಂಬ ಹುಡುಗಿ 19ನೇ ಮಹಡಿಯಿಂದ ಬಿದ್ದು ಸಾಯುತ್ತಾಳೆ. ಈ ಸಾವು ನೋವುಗಳಿಗೆಲ್ಲ ನೇರ ಕಾರಣ ಮತ್ತು ಹೊಣೆ ಒಕ್ಕೂಟ ಸರಕಾರ, ಸುಪ್ರೀಂ ಕೋರ್ಟ್ ಮತ್ತು ದರಿದ್ರ ನೀಟ್ ಪರೀಕ್ಷಾ ಪದ್ಧತಿ.
ಈ ಆತ್ಮಹತ್ಯೆ ಎಂಬುವುದು ಇಷ್ಟಕ್ಕೆ ನಿಂತಿಲ್ಲ, ‘ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೊ’ ನೀಡಿದ ಮಾಹಿತಿ ಪ್ರಕಾರ 2017ರಲ್ಲಿ 9,905 ವಿದ್ಯಾರ್ಥಿಗಳು, 2018ರಲ್ಲಿ 10,159 ವಿದ್ಯಾರ್ಥಿಗಳು, 2019ರಲ್ಲಿ 10,335 ವಿದ್ಯಾರ್ಥಿಗಳು, 2020ರಲ್ಲಿ 12,526 ವಿದ್ಯಾರ್ಥಿಗಳು, 2021ರಲ್ಲಿ 13,089 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಡಿಯಾದಲ್ಲಿ ಪ್ರಜಾಪ್ರಭುತ್ವ ಇದೆ, ಸಂವಿಧಾನ ಇದೆ, ಒಕ್ಕೂಟ ಸರಕಾರ ಇದೆ, ರಾಜ್ಯ ಸರಕಾರಗಳಿವೆ, ನಾಗರಿಕ ಹಕ್ಕುಗಳ ಆ ರಕ್ಷಣೆ ಮಾಡುವ ಸಮಿತಿಗಳಿವೆ, ಸುಪ್ರೀಂ ಕೋರ್ಟ್ ಇದೆ, ಹೈಕೋರ್ಟ್ ಗಳಿವೆ ಆದರೆ ಏನು ಪ್ರಯೋಜನ?
ನೀಟ್ ಪರೀಕ್ಷಾ ಪದ್ಧತಿ ಬರುವುದಕ್ಕಿಂತ ಮೊದಲು ಆಯಾ ರಾಜ್ಯದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಅವುಗಳದ್ದೇ ಸ್ವಂತ ಪ್ರವೇಶ ಪರೀಕ್ಷೆಗಳಿದ್ದವು, ಉದಾಹರಣೆಗೆ ಎಐಐಎಂಎಸ್, ಜೆಐಪಿಎಂಇಆರ್, ಐಎಂಎಸ್: ಬಿಎಚ್ ಯು, ಕೆಎಂಸಿ ಮಣಿಪಾಲ್ ಮತ್ತು ಮಂಗಳೂರು, ಸಿಎಂಸಿ ವೆಲ್ಲೂರ್ ಈ ತರಹದ ವೈದ್ಯಕೀಯ ಕಾಲೇಜುಗಳು ಸ್ವತಃ ತಾವೇ ಪ್ರವೇಶ ಪರೀಕ್ಷೆ ನಡೆಸಿ ಮತ್ತು ಪಿಯುಸಿ ಅಂಕಗಳ ಆಧಾರದ ಮೇಲೆ ವೈದ್ಯಕೀಯ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡುತ್ತಿತ್ತು ಮತ್ತು ಈ ವ್ಯವಸ್ಥೆಯಿಂದ ಹಿಂದುಳಿದ ಸಮುದಾಯದವರಿಗೆ ಮತ್ತು ಆಯಾ ರಾಜ್ಯದವರಿಗೆ ವೈದ್ಯಕೀಯ ಅಧ್ಯಯನ ಮಾಡಲು ಅವಕಾಶ ದೊರೆಯುತ್ತಿತ್ತು. ಹಾಗಾಗಿ ಈ ವ್ಯವಸ್ಥೆಯೇ ಉತ್ತಮವಾಗಿತ್ತು.
ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದ ಸಮಯ 2012ರಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಎಂಬ ಪರಿಕಲ್ಪನೆಯನ್ನು ಮೊದಲಿಗೆ ಪರಿಚಯಿಸಲಾಯಿತು. ಆ ಸಮಯದಲ್ಲಿ ನೀಟ್ ಪರೀಕ್ಷೆ ಪದ್ಧತಿಯನ್ನು ಮೊದಲು ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳುನಾಡು ತೀವ್ರವಾಗಿ ವಿರೋಧಿಸಿತ್ತು. ತಮಿಳುನಾಡು ನೀಟ್ ಪದ್ಧತಿಯನ್ನು ವಿರೋಧಿಸಲು ಕಾರಣ-ದಕ್ಷಿಣ ಭಾರತದಲ್ಲಿ ಸಾಕಷ್ಟು ಸರಕಾರಿ ವೈದ್ಯಕೀಯ ಕಾಲೇಜುಗಳಿದ್ದವು, ಆಗ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸ್ವತಃ ಕಾಲೇಜುಗಳೇ ಮಾಡುವ ಪ್ರವೇಶ ಪರೀಕ್ಷೆ ಮತ್ತು ಪಿಯುಸಿ ಅಂಕಗಳ ಪರಿಗಣಿಸುವುದು ಮತ್ತು ಆ ರಾಜ್ಯದವರಿಗೆ ಮೀಸಲಾತಿ ಇದ್ದ ಕಾರಣ ಇವುಗಳಿಂದ ಸ್ಥಳೀಯರಿಗೆ ಮತ್ತು ಆ ರಾಜ್ಯದವರಿಗೆ ವೈದ್ಯಕೀಯ ಅಧ್ಯಯನ ಮಾಡಲು ಅವಕಾಶ ದೊರೆಯುತ್ತಿತ್ತು. ಆದರೆ ಉತ್ತರ ಭಾರತದಲ್ಲಿ ವೈದ್ಯಕೀಯ ಕಾಲೇಜುಗಳ ಪ್ರಮಾಣ ಕಡಿಮೆ, ದಕ್ಷಿಣ ಭಾರತದಲ್ಲಿ ಇರುವ ಕಾಲೇಜುಗಳಿಗೆ ಉತ್ತರ ಭಾರತದ ವಿದ್ಯಾರ್ಥಿಗಳು ಪ್ರವೇಶ ಮಾಡಿಸಲು ಮತ್ತು ಶ್ರೀಮಂತರ ಮಕ್ಕಳಿಗೆ ಮಾತ್ರ ವೈದ್ಯಕೀಯ ಅಧ್ಯಯನ ಮಾಡಲಿಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ಈ ವ್ಯವಸ್ಥೆ ಬಂದಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ- ದಕ್ಷಿಣ ಭಾರತದವರ ಮತ್ತು ಹಿಂದುಳಿದ ಸಮುದಾಯಗಳಿಗೆ ಸಿಗಬೇಕಾದ ಸೌಲಭ್ಯವೆಲ್ಲ ಕಿತ್ತು ಹಣ ಇರುವವರಿಗೆ ಮತ್ತು ಉತ್ತರ ಭಾರತದವರಿಗೆ ಕೊಡುವ ಹುನ್ನಾರವೇ ಈ ನೀಟ್ ಪರೀಕ್ಷಾ ಪದ್ಧತಿ. ನೀಟ್ ಪರೀಕ್ಷೆ ಆರಂಭವಾದಾಗ ಈ ಪರೀಕ್ಷಾ ಪದ್ಧತಿಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಹಾಕಲಾಯಿತು, ಸುಪ್ರೀಂ ಕೋರ್ಟ್ ಈ ಪದ್ಧತಿಯನ್ನು ವಜಾಗೊಳಿಸಿತು ನಂತರ ಅದೇ ಸುಪ್ರೀಂ ಕೋರ್ಟ್ 2016ರಲ್ಲಿ ನೀಟ್ ಪರೀಕ್ಷೆಗೆ ಅವಕಾಶ ಕೊಟ್ಟಿತು.
ಈ ಕೆಟ್ಟ, ನೀಟ್ ವ್ಯವಸ್ಥೆಯಿಂದ ದಕ್ಷಿಣ ಭಾರತದ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ ಅಧ್ಯಯನ ಕೈತಪ್ಪಿ ವಂಚನೆಯಾಯಿತು, ಈ ವಂಚನೆ ಅತಿರೇಕಕ್ಕೆ ಹೋದಾಗ ಪ್ರತಿಭಾನ್ವಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು.
ಈ ನೀಟ್ ಪರೀಕ್ಷೆ ಬಂದ ಕಾರಣ ಸಾವಿರಾರು-ಲಕ್ಷಾಂತರ ಕೋಚಿಂಗ್ ಸೆಂಟರ್‌ಗಳು ಹುಟ್ಟಿಕೊಂಡವು, ದುಬಾರಿ ಬೆಲೆತೆತ್ತು ಕೋಚಿಂಗ್ ಸೆಂಟರ್‌ಗಳಿಗೆ ಸೇರಿದರೆ ಮಾತ್ರ ನೀಟ್ ಪರೀಕ್ಷೆ ಪಾಸಾಗಲಿಕ್ಕೆ ಸಾಧ್ಯ ಎಂಬ ಭ್ರಮೆಯನ್ನು ಜನರಲ್ಲಿ ಬಿತ್ತಲಾಯಿತು. ಕೋಚಿಂಗ್ ಸೆಂಟರ್‌ಗೆ ಸೇರಲು ಲಕ್ಷಾಂತರ ರೂಪಾಯಿ ಬೇಕು. ಈ ಹಣ ಹೊಂದಿಸಲು ಹಿಂದುಳಿದ ಸಮುದಾಯಗಳಿಗೆ ಆಗದು. ಎಲ್ಲಾ ರಾಜ್ಯದ ಶಿಕ್ಷಣ ವ್ಯವಸ್ಥೆಯ ಪಠ್ಯಕ್ರಮ ಒಂದೇ ರೀತಿ ಇರುವುದಿಲ್ಲ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದರೂ ನೀಟ್ ಪರೀಕ್ಷೆ ಪಾಸ್ ಆಗುವುದು ಕಷ್ಟ ಸಾಧ್ಯ.
ನೀಟ್ ಪರೀಕ್ಷೆ-ಹಲವು ಹಗರಣ
2024ರಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಹಗರಣ ನಡೆದಿತ್ತು ಮತ್ತು ಇಂಡಿಯಾದಾದ್ಯಂತ ಟೀಕೆಗೆ ಗುರಿಯಾಗಿತ್ತು. ನೀಟ್ ಪರೀಕ್ಷೆ ನಡೆಯುವ ಹಿಂದಿನ ದಿನ ಬಿಹಾರ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ದರೋಡೆಕೋರರು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದಾಗ ಪ್ರತಿಯೊಬ್ಬ ಆಕಾಂಕ್ಷಿಯಿಂದ 30ರಿಂದ 50 ಲಕ್ಷ ಹಣ ಪಡೆದಿದ್ದರು. ಸುಮಾರು ಆಕಾಂಕ್ಷಿಗಳು 718, 719 ಅಂಕಗಳನ್ನು ಗಳಿಸಿದ್ದರು, ಇದು ಗಣಿತಶಾಸ್ತ್ರದಲ್ಲಿ ಅಸಾಧ್ಯ. ಒಂದು ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ 45 ಪ್ರಶ್ನೆಗಳಿರುತ್ತವೆ. ಒಂದು ಪ್ರಶ್ನೆಗೆ ನಾಲ್ಕು ಅಂಕ, ಒಂದು ಪ್ರಶ್ನೆ ತಪ್ಪಾದರೆ ಋಣಾತ್ಮಕವಾಗಿ ಒಂದು ಅಂಕ ಕಡಿಮೆಯಾಗುತ್ತದೆ. ಹಾಗಾಗಿ 718, 719 ಅಂಕಗಳು ಗಳಿಸಲು ಸಾಧ್ಯವಿಲ್ಲ. 67 ವಿದ್ಯಾರ್ಥಿಗಳು 720 ಅಂಕಗಳನ್ನು ಗಳಿಸಿದ್ದರು.
2024ರಲ್ಲಿ ಸೋರಿಕೆಯಾದ ನೀಟ್ ಪ್ರಶ್ನೆ ಪತ್ರಿಕೆಯಿಂದ 155 ವಿದ್ಯಾರ್ಥಿಗಳು ಉಪಯೋಗ ಪಡೆದಿದ್ದಾರೆಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು. ಆಗ 1,563 ವಿದ್ಯಾರ್ಥಿಗಳಿಗೆ ಮಾತ್ರ ನೀಟ್ ಮರುಪರೀಕ್ಷೆ ಮಾಡಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೂ ಮರುಪರೀಕ್ಷೆ ಮಾಡಿಲ್ಲ. ನೀಟ್ ಹಗರಣ ತನಿಖೆಯಾದಾಗ ಆ ಹಗರಣದ ಕಿಂಗ್ ಪಿನ್ ಮತ್ತು ಸ್ಕೂಲ್ ಪ್ರಿನ್ಸಿಪಾಲರನ್ನು ಸೇರಿ 49 ಜನ ಆರೋಪಿಗಳನ್ನು ಬಂಧಿಸಲಾಯಿತು ಮತ್ತೆ 26 ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಯಿತು.
ನೀಟ್ ಕೋಚಿಂಗ್ ಸೆಂಟರ್‌ಗಳು ಹುಟ್ಟಿಕೊಂಡು ಜನರಿಗೆ ನಮ್ಮಲ್ಲಿ ಕೋಚಿಂಗ್ ಪಡೆದರೆ ಡಾಕ್ಟರ್ ಆಗುವುದು ಶೇ. ನೂರರಷ್ಟು ಖಚಿತ ಎಂದೂ, ಕೇವಲ ನೂರು ದಿನದಲ್ಲಿ ನೀಟ್ ಪರೀಕ್ಷೆ ಪಾಸ್ ಮಾಡಬಹುದೆಂದೂ ಸುಳ್ಳು ಹಬ್ಬಿಸುವುದು ಮತ್ತು ಎಲ್ಲರಿಂದ ಲಕ್ಷಾಂತರ ರೂಪಾಯಿ ಲೂಟಿ ಮಾಡುವುದು, ಈ ಕೋಚಿಂಗ್ ಸೆಂಟರ್‌ಗಳು ಜನರಿಗೆ ಮಂಕು ಬೂದಿ ಎರಚುತ್ತಿವೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆ, ಪ್ರಾಮಾಣಿಕತೆ, ಆಸಕ್ತಿ, ಕುತೂಹಲಕ್ಕೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಬೆಲೆಯಿಲ್ಲ. ವಿದ್ಯಾರ್ಥಿಗಳನ್ನು ಯಂತ್ರಗಳನ್ನಾಗಿಸಿ ಕೇವಲ ರೆಡಿಮೇಡ್ ಪ್ರಶ್ನೆಗಳಿಗೆ ಯಾಂತ್ರಿಕವಾಗಿ ಉತ್ತರಿಸುವ, ತಂತ್ರಗಾರಿಕೆಗಷ್ಟೇ ಬೆಲೆ ಇಂತಹ ಅಪಮೌಲ್ಯಗಳನ್ನೇ ಕೋಚಿಂಗ್ ಸೆಂಟರ್‌ಗಳು ಕಲಿಸಿಕೊಡುವುದು. ಇಂತಹವುಗಳನ್ನೇ ಕಲಿಯಲು ಲಕ್ಷಾಂತರ ರೂ. ತೆರಬೇಕು.
ಸಂವಿಧಾನದಲ್ಲಿ ಅಧಿಕೃತವಾಗಿ ಖಾಸಗೀಕರಣಕ್ಕೆ ಅವಕಾಶ ಸಿಕ್ಕ ಕಾರಣ, ಈ ಖಾಸಗೀಕರಣ ಎಂಬುದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಿತಿಮೀರಿದೆ. ಇದೇ ರೀತಿ ಮುಂದುವರಿದರೆ ಹಿಂದುಳಿದ ಸಮುದಾಯದವರ ಪಾಲಿಗೆ ವೈದ್ಯಕೀಯ ಶಿಕ್ಷಣ ಮರೀಚಿಕೆ!
ನೀಟ್ ಪರೀಕ್ಷೆ ಇರುವುದೇ ಹಗರಣ ಮಾಡಲು ಮತ್ತು ವಂಚನೆ ಮಾಡಲು, ನೀಟ್ ಕೋಚಿಂಗ್ ಸೆಂಟರ್‌ಗಳು ಇರುವುದೇ ಲೂಟಿ ಮಾಡಲು. ದಕ್ಷಿಣ ಭಾರತೀಯ ವೈದ್ಯಕೀಯ ಆಕಾಂಕ್ಷಿಗಳ ಪ್ರಾಣಕ್ಕೆ ಕಂಟಕವಾದ ಈ ದರಿದ್ರ ವ್ಯವಸ್ಥೆಯನ್ನು ಕಿತ್ತೊಗೆದು ಮೊದಲಿದ್ದ ಪಿಯುಸಿ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಅಧ್ಯಯನಕ್ಕೆ ಪ್ರವೇಶ ಮಾಡಿಕೊಡುತ್ತಿದ್ದ ವ್ಯವಸ್ಥೆಯೇ ಜಾರಿಯಾಗಲಿ. ಈ ಸಾವು ನೋವುಗಳು ನಿಲ್ಲಲಿ, ಈಗ ಆಗಿರುವ ಸಾವು ನೋವುಗಳಿಗೆ ನ್ಯಾಯ ಸಿಗಲಿ.






