ಹಂಗಾರಕಟ್ಟೆ-ಕೋಡಿಬೆಂಗ್ರೆಗೆ ಹೊಸ ಬಾರ್ಜ್ ಸೇವೆ

ಉಡುಪಿ: ಉಡುಪಿ ಜಿಲ್ಲೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿ ಬೀಚ್ಗಳಲೇ ಪ್ರಮುಖ ಆಕರ್ಷಣೀಯ ಹಾಗೂ ಪ್ರವಾಸಿಗರ ಅಚ್ಚು ಮೆಚ್ಚಿನ ತಾಣ. ಇಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಇದೀಗ ಮಲ್ಪೆ ಸಮೀಪದ ಕೋಡಿಬೆಂಗ್ರೆಯಲ್ಲಿನ ಟೂರಿಸಂ ಸ್ಥಳಗಳಿಗೆ ಮತ್ತೆ ಕಳೆ ಬಂದಿದೆ. ಇದಕ್ಕೆ ಕಾರಣ ಹಂಗಾರಕಟ್ಟೆ ಹಾಗೂ ಕೋಡಿಬೆಂಗ್ರೆ ನಡುವೆ ಆರಂಭಗೊಂಡ ಹೊಸ ಬಾರ್ಜ್ ವ್ಯವಸ್ಥೆ.
ಹಂಗಾರಕಟ್ಟೆ ಮತ್ತು ಕೋಡಿಬೆಂಗ್ರೆ ಮಧ್ಯೆ ದಶಕದಿಂದ ಕಾರ್ಯನಿರ್ವಹಿಸುತ್ತಿದ್ದ ಬಾರ್ಜ್ ಕೆಟ್ಟುಹೋಗಿ ಹಲವು ತಿಂಗಳುಗಳ ಕಾಲ ಸಂಪರ್ಕವೇ ಕಡಿತ ಆಗಿತ್ತು. ಇದರಿಂದ ಇಲ್ಲಿನ ಜನ ಕೂಡ ಸಂಕಷ್ಟ ಎದುರಿಸುತ್ತಿದ್ದರು. ಈಗ ಐದು ಕೋಟಿ ರೂ. ವೆಚ್ಚದಲ್ಲಿ ಹೊಸ ಬಾರ್ಜ್ ಸೇವೆ ಮರುಸ್ಥಾಪನೆ ಮಾಡಿದ್ದರಿಂದ ಈ ಭಾಗದ ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಚುರುಕು ಆಗಿದೆ. ಬಾರ್ಜ್ ಇಲ್ಲದ ಕಾರಣ ಈ ಪ್ರದೇಶದ ಪ್ರವಾಸೋದ್ಯಮಕ್ಕೆ ಒಂದು ವರ್ಷದಿಂದ ತೊಡಕಾಗಿತ್ತು.
ಬಂದರು ಮತ್ತು ಮೀನುಗಾರಿಕೆ ಇಲಾಖೆ ಮೂಲಕ ನೂತನವಾಗಿ ಇಲ್ಲಿ ಆರಂಭಗೊಂಡಿರುವ ಹೊಸ ಬಾರ್ಜ್ ಹಂಗಾರಕಟ್ಟೆ ಮತ್ತು ಕೋಡಿಬೆಂಗ್ರೆ ಮಧ್ಯೆ ಓಡಾಟ ನಡೆಸುತ್ತಿದೆ. ಕೆಲವು ಸಮಯ ಬಾರ್ಜ್ ಇಲ್ಲದೇ ಇರುವುದರಿಂದ ಕೋಡಿಬೆಂಗ್ರೆಯ ಜನ ಸುಮಾರು 30ಕಿ.ಮೀ. ಸುತ್ತಿ ಹಂಗಾರಕಟ್ಟೆಗೆ ಬರುವಂತಾಗಿತ್ತು.
ಕೋಡಿಬೆಂಗ್ರೆ ಟೂರಿಸಂ ಸ್ಪಾಟ್: ಕೋಡಿಬೆಂಗ್ರೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಪ್ರವಾಸಿಗರನ್ನು ಕೈಬೀಸಿ ಕರೆಯುವ ಪ್ರವಾಸಿ ತಾಣವಾಗಿದೆ. ಇಲ್ಲಿರುವ ಮನಮೋಹಕ ಡೆಲ್ಟಾ ಬೀಚ್ ಎಲ್ಲರ ಗಮನ ಸೆಳೆಯುತ್ತಿದೆ.
ಕೋಡಿಬೆಂಗ್ರೆಗೆ ತಲುಪಲು ಹಂಗಾರಕಟ್ಟೆ ಮೂಲಕ ಬಹಳ ಹತ್ತಿರದ ಹಾದಿ. ಇದು ಸೀತಾ ನದಿ ಮತ್ತು ಸ್ವರ್ಣ ನದಿಯ ಸಂಗಮ ತಾಣ ಆಗಿರುವುದರಿಂದ ಪ್ರಯಾಣ ದೊಡ್ಡ ಸವಾಲು ಆಗಿದೆ. ಹಾಗಾಗಿ ಹಂಗಾರ ಕಟ್ಟೆಯಿಂದ ಕೋಡಿಬೆಂಗ್ರೆಗೆ ಹೋಗಲು ಬೋಟಿನ ಅವಶ್ಯಕತೆ ಇದೆ.
ಹಂಗಾರಕಟ್ಟೆ ಬಂದರಿಗೆ ಅಭಿಮುಖವಾಗಿರುವ ಇನ್ನೊಂದು ಪಾರ್ಶ್ವದಲ್ಲಿ ಅಳಿವೆಬಾಗಿಲು ಇದೆ. ನದಿ ಮತ್ತು ಸಮುದ್ರ ಸೇರುವ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ದೋಣಿ ಪಯಣ ಕಷ್ಟ. ಗಾಳಿ, ನೀರಿನ ಹರಿವು ದೋಣಿ ಪಯಣವನ್ನು ಭೀತಿಗೆ ಒಳಪಡಿಸುತ್ತದೆ. ಆದುದರಿಂದ ಇಲ್ಲಿಗೆ ಬಾರ್ಜ್ನಂತಹ ಬೋಟು ಅತೀ ಅಗತ್ಯವಾಗಿದೆ.
10 ನಿಮಿಷಗಳ ಪಯಣ: ಕೋಡಿಬೆಂಗ್ರೆ-ಹಂಗಾರಕಟ್ಟೆ ನಡುವೆ ಬಾರ್ಜ್ನಲ್ಲಿ ಸಂಚರಿಸುವುದೇ ಒಂದು ಅಪೂರ್ವ ಅನುಭವವನ್ನು ನೀಡುತ್ತದೆ. ಒಂದು ಕಡೆ ಸಾಗರ ಸೇರಲು ತವಕಿಸುವ ನದಿಗಳು, ಸೂರ್ಯಾಸ್ತಮಾನದ ಸುಂದರ ದೃಶ್ಯ ಹಾಗೂ ಹಂಗಾರಕಟ್ಟೆ ಕೋಡಿಬೆಂಗ್ರೆ ಕಿರು ಬಂದರು ಮನಸ್ಸಿಗೆ ಮುದ ನೀಡುತ್ತದೆ.
ಈ ಹಾದಿ ಕೇವಲ 10 ನಿಮಿಷಗಳ ಪಯಣ. ಕೋಡಿಬೆಂಗ್ರೆಯಿಂದ ಹಂಗಾರಕಟ್ಟೆಗೆ ಸುಮಾರು 700 ಮೀಟರ್ ದೂರ. ಇಲ್ಲದಿದ್ದರೆ ಕೋಡಿ ಬೆಂಗ್ರೆಯ ಜನ ಕೆಮ್ಮಣ್ಣು, ಸಂತೆಕಟ್ಟೆ, ಬ್ರಹ್ಮಾವರ ತಲುಪಿ ಅಲ್ಲಿಂದ ಐರೋಡಿ ಮೂಲಕ ಸುಮಾರು 30 ಕಿ.ಮೀ. ಸುತ್ತು ಬಳಸಿ ಹಂಗಾರಕಟ್ಟೆಗೆ ತಲುಪಬೇಕು.
ಈ ಹಿಂದೆ ಇಲ್ಲಿ ದೊಡ್ಡ ಬಾರ್ಜ್ ಸೇವೆ ಇದ್ದಾಗ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದರು. ಇದರಿಂದ ಈ ಭಾಗದ ಆರ್ಥಿಕ ವ್ಯವಹಾರ ಹೆಚ್ಚುವುದರ ಜತೆಗೆ ಬಾರ್ಜ್ ನ ಸಂಪೂರ್ಣ ಸದುಪಯೋಗ ದೊರೆತಿತ್ತು. ಬಳಿಕ ಬಾರ್ಜ್ ಇಲ್ಲದೆ ಇಲ್ಲಿನ ಆರ್ಥಿಕತೆಗೆ ಹೊಡೆತ ಬಿದ್ದಿತ್ತು. ಇದೀಗ ಮತ್ತೆ ಪ್ರವಾಸೋದ್ಯಮಕ್ಕೆ ಕಳೆ ಬಂದಿದೆ.
ಮಿನಿ ಬಸ್ ತೆರಳಲು ಅವಕಾಶ
ಹೊಸದಾಗಿ ಆರಂಭಗೊಂಡಿರುವ ಬಾರ್ಜ್ ನಲ್ಲಿ ಆರು ಏಳು ಕಾರುಗಳು, ಸುಮಾರು ಹದಿನೈದು ಬೈಕ್ ಗಳು ಒಮ್ಮೆಗೆ ಸಾಗಬಹುದಾಗಿದೆ. ಜೊತೆಗೆ ಮಿನಿ ಬಸ್ ಕೂಡ ತೆರಳಲು ಇದರಲ್ಲಿ ಅವಕಾಶವಿದೆ.
ಕುಂದಾಪುರ ಬ್ರಹ್ಮಾವರ ಕಡೆಯಿಂದ ಬರುವ ಪ್ರವಾಸಿಗರು ಬಾರ್ಜ್ ನಲ್ಲಿ ಹಂಗಾರಕಟ್ಟೆಯಿಂದ ಡೆಲ್ಟಾ ಪಾಯಿಂಟ್ ಗೆ ಸಾಗಿ ಸುವರ್ಣಾ ನದಿ, ಸೀತಾನದಿಯ ಸೊಗಬನ್ನು ಸವಿದು ಅಲ್ಲಿಂದ ಕೆಮ್ಮಣ್ಣು, ಹೂಡೆ ಮಾರ್ಗವಾಗಿ ಮಲ್ಪೆ ಉಡುಪಿ ಕಡೆಗೆ ಸಾಗಲು ಅನುಕೂಲವಾಗಿದೆ. ಪ್ರವಾಸೋದ್ಯಮ ಚಟುವಟಿಕೆ ಬೆಳೆಯುವುದರಿಂದ ಇಲ್ಲಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಜತೆಗೆ ಈ ಪ್ರದೇಶವನ್ನು ಇನ್ನಷ್ಟು ಬೆಳವಣಿಗೆ ಗೊಳಿಸುವ ನಿಟ್ಟಿನಲ್ಲಿ, ಆರ್ಥಿಕ ಚಟುವಟಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬೇಕಿದೆ ಎಂಬುದು ಸ್ಥಳೀಯರ ಆಗ್ರಹ.
ಬಾರ್ಜ್ ಸೇವೆ ಸ್ಥಗಿತವಾಗಿದ್ದರಿಂದ ನಮ್ಮೂರಿನ ಜನರು ಹಂಗಾರಕಟ್ಟೆ ಕೋಡಿಕನ್ಯಾಣ ತಲುಪಲುಸಮಸ್ಯೆಯಾಗಿತ್ತು. ಅದೇ ರೀತಿ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಹಿನ್ನಡೆಯಾಗಿತ್ತು. ಇದೀಗ ಸರಕಾರ ಹೊಸ ಬಾರ್ಜ್ ವ್ಯವಸ್ಥೆ ಮಾಡಿದ್ದರಿಂದ ನಮ್ಮೂರಿಗೆ ಸಾಕಷ್ಟು ಅನುಕೂಲವಾಗಿದೆ. ಪ್ರವಾಸಿ ಚಟುವಟಿಕೆ ಮತ್ತೆ ಹೆಚ್ಚುವ ನಿರೀಕ್ಷೆ ಇದೆ.
-ರಮೇಶ್ ತಿಂಗಳಾಯ ಕೋಡಿಬೆಂಗ್ರೆ







