ನೂತನ ಮೀನುಗಾರಿಕಾ ಗಣತಿ: ಸಾಂಪ್ರದಾಯಿಕ ಮೀನುಗಾರಿಕಾ ಸಮುದಾಯಗಳು ಅವನತಿಯತ್ತ?

ಗ್ರಾಮವೊಂದರ ಮೀನುಗಾರಿಕಾ ಸಮುದಾಯ ಮತ್ತು ಅವರ ಸಲಕರಣೆಗಳನ್ನು ಪ್ರತಿನಿಧಿಸುವ ಬೋಳುಮರವೊಂದನ್ನು ಕೋರಮಂಡಲ ಕರಾವಳಿಯುದ್ದಕ್ಕೂ ಕಾಣಬಹುದು.
ಮೀನುಗಾರರು ತಲೆತಲಾಂತರದಿಂದ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯಗಳು ಮತ್ತು ನಿಯಮಗಳನ್ನು ಹಾಗೂ ಅವರು ತಮ್ಮ ಮಣ್ಣಿನೊಂದಿಗೆ ಹೊಂದಿರುವ ಸಂಬಂಧವನ್ನು ಗಣತಿಯು ನಿರ್ಲಕ್ಷಿಸಿದರೆ, ಅದು ಕರಾವಳಿ ಪ್ರದೇಶಗಳಲ್ಲಿ ಮೀನುಗಾರರು ಹೊಂದಿರುವ ಸಾಂಪ್ರದಾಯಿಕ ಹಕ್ಕುಗಳು ಮತ್ತು ಮೀನುಗಾರಿಕೆಯಲ್ಲಿನ ಅವರ ಭಾಗೀದಾರಿಕೆಯನ್ನೇ ವ್ಯವಸ್ಥಿತವಾಗಿ ಅಳಿಸಿಹಾಕಬಹುದು. ಗಣತಿಯು ಮೀನು ಉತ್ಪಾದನೆ ಪ್ರಮಾಣ ಎಂಬ ಏಕೈಕ ಅಂಶದ ಆಚೆಗೂ ಗಮನ ಹರಿಸಿ, ಈ ನೆಲದೊಂದಿಗೆ ಹಾಸುಹೊಕ್ಕಾಗಿ ಬೆರೆತು ಹೋಗಿರುವ ಸಾಂಪ್ರದಾಯಿಕ ಮೀನುಗಾರರನ್ನೂ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಬೇಕಾಗಿದೆ.
ಭಾರತ ಸರಕಾರದ ಮಹತ್ವದ ಐದನೇ ರಾಷ್ಟ್ರೀಯ ಸಾಗರ ಮೀನುಗಾರಿಕಾ ಗಣತಿ 2025, ಕಳೆದ ವರ್ಷದ ಕೊನೆಯ ವೇಳೆಗೆ ಮುಕ್ತಾಯಗೊಂಡಿತು. ಸಾಗರ ಗಣತಿ ಮತ್ತು ಬಂದರು ಕೇಂದ್ರಿತ ಅಭಿವೃದ್ಧಿ ಕಾರ್ಯಕ್ರಮ ‘ಸಾಗರ್ಮಾಲಾ’- ಇವೆರಡೂ ಸಾಗರ ಮತ್ತು ಕರಾವಳಿ ಸಂಪನ್ಮೂಲಗಳ ಗರಿಷ್ಠ ಬಳಕೆಗೆ ಒತ್ತು ನೀಡುವ ‘ನೀಲಿ ಕ್ರಾಂತಿ’ಯ ಮಹತ್ವದ ಭಾಗಗಳಾಗಿವೆ.
ಗಣತಿ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವುದು ಈ ಸಾಗರ ಗಣತಿಯ ಪ್ರಮುಖ ಉದ್ದೇಶಗಳ ಪೈಕಿ ಒಂದಾಗಿದೆ ಎಂದು ಗಣತಿ ಅಧಿಸೂಚನೆಯು ಹೇಳುತ್ತದೆ. ಜೊತೆಗೆ, ಮೀನುಗಾರಿಕಾ ಮೂಲಸೌಕರ್ಯಗಳಾಗಿರುವ ಬಂದರುಗಳು, ಜೆಟ್ಟಿಗಳು ಮತ್ತು ಮೀನುಗಳನ್ನು ದಡಕ್ಕೆ ತರುವ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಆ್ಯಪ್ಗಳು ಮತ್ತು ಡ್ರೋನ್ಗಳನ್ನು ಬಳಸಿ ಮಾಹಿತಿ ಕಲೆಹಾಕುವುದು ಅದರ ಇನ್ನೊಂದು ಪ್ರಮುಖ ಉದ್ದೇಶವಾಗಿದೆ.
ಈ ಸಾಗರ ಗಣತಿಯ ನೇತೃತ್ವವನ್ನು ಕೊಚ್ಚಿಯಲ್ಲಿರುವ ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್ಗೆ ಸೇರಿದ ಸೆಂಟ್ರಲ್ ಮರೀನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ವಹಿಸಿದೆ.
ಸಾಗರ ಗಣತಿಯ ಉದ್ದೇಶಗಳು ಮತ್ತು ಕಾರ್ಯಕ್ರಮಗಳು ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಮೀನುಗಾರರ ಕಲ್ಯಾಣಕ್ಕೆ ಒತ್ತು ನೀಡುವುದಾದರೂ, ಅವುಗಳು ಹಿಂದಿನಿಂದಲೂ ಖಾಸಗಿ ಕೊಳಗಳಲ್ಲಿ ಶ್ರೀಮಂತ ಕುಳಗಳು ನಡೆಸುವ ಬೃಹತ್ ಪ್ರಮಾಣದ ಮೀನು ಸಾಕಣೆಗೆ ಉತ್ತೇಜನ ನೀಡುವ ಕೆಲಸವನ್ನು ಮಾಡಿಕೊಂಡು ಬರುತ್ತಿವೆ. ಇದರ ಜೊತೆಗೆ, ಬೃಹತ್ ಪ್ರಮಾಣದಲ್ಲಿ ಬಂಡವಾಳ ಬೇಕಾಗಿರುವ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ.
ಮೀನುಗಾರಿಕಾ ಇಲಾಖೆಯ 2025ರ ವರದಿಯು ಮೂಲಭೂತ ಬದಲಾವಣೆಯೊಂದನ್ನು ಹೊರಗೆಡವಿದೆ. ಈಗ ಒಟ್ಟು ಸಾಗರ ಮೀನು ಉತ್ಪಾದನೆಯ ಶೇ. 52 ಭಾಗವು ಯಾಂತ್ರೀಕೃತ ಟ್ರಾಲರ್ಗಳಿಂದ ನಡೆಯುತ್ತಿದೆ. ಎರಡನೇ ಸ್ಥಾನದಲ್ಲಿರುವ ಸೀನ್ ಬಲೆಗಳು 22ಶೇ. ಉತ್ಪಾದನೆ ಮಾಡಿದರೆ, ಗಿಲ್ನೆಟ್ಗಳು 11.5 ಶೇ. ಮೀನು ಉತ್ಪಾದಿಸುತ್ತವೆ.
ಇದಕ್ಕೆ ವ್ಯತಿರಿಕ್ತವಾಗಿ, 1960ರಲ್ಲಿ, ಮೀನುಗಾರಿಕೆಗಾಗಿ ಬಳಸುವ ಸಣ್ಣ ದೋಣಿಗಳ ಪ್ರಮಾಣ ಶೇ. 88ರಷ್ಟಿದ್ದರೆ, ಈಗ ಅವುಗಳ ಪ್ರಮಾಣ ಕೇವಲ ಒಂದು ಶೇಕಡಕ್ಕೆ ಕುಸಿದಿದೆ. ಇದು ಸಾಂಪ್ರದಾಯಿಕ ಸಾಮಾಜಿಕ-ಪರಿಸರ ವ್ಯವಸ್ಥೆ ಕ್ಷಿಪ್ರವಾಗಿ ನಾಶವಾಗುತ್ತಿರುವುದನ್ನು ತೋರಿಸುತ್ತದೆ.
ಸಾಂಪ್ರದಾಯಿಕ ಮೀನುಗಾರರು ಹೊರಗೆ?
ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಶೇ. 91.6 ಕುಟುಂಬಗಳು ಸಾಂಪ್ರದಾಯಿಕ ಮೀನುಗಾರಿಕಾ ಹಿನ್ನೆಲೆಯನ್ನು ಹೊಂದಿವೆ ಹಾಗೂ ಈ ಪೈಕಿ, ಶೇ. 67.3 ಕುಟುಂಬಗಳು ಬಡತನ ರೇಖೆಯ ಕೆಳಗಿವೆ (ಬಿಪಿಎಲ್) ಎಂದು 2016ರ ಸಿಎಮ್ಎಫ್ಆರ್ಐ ಗಣತಿ ಹೇಳುತ್ತದೆ.
ಖಾಸಗಿ ಕೊಳಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮಾಡುವ ಮೀನುಕೃಷಿಯಿಂದಾಗಿ ಮೀನು ಉತ್ಪಾದನೆಯಲ್ಲಿ ಸ್ಪರ್ಧೆ ಏರ್ಪಟ್ಟಿತು ಹಾಗೂ ಬಂದರುಗಳ ಅಭಿವೃದ್ಧಿ ಮುಂತಾದ ಮೂಲಸೌಕರ್ಯ ಯೋಜನೆಗಳಿಂದಾಗಿ ಮೀನುಗಾರರು ನಿರ್ವಸಿತರಾದರು. ಅಂತಿಮವಾಗಿ, ಈ ಮೀನುಗಾರರು ವಲಸೆ ಕಾರ್ಮಿಕರಾಗಿ ಬೇರೆ ರಾಜ್ಯಗಳಿಗೆ ಹೋಗಿ ವಿವಿಧ ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ಅರೆಕಾಲಿಕ ಕೆಲಸಗಳನ್ನು ಮಾಡುತ್ತಿದ್ದಾರೆ.
ಅವರು ಮೀನುಗಾರಿಕಾ ಋತುವಿನಲ್ಲಿ, ಮೀನುಗಳು ಹೇರಳವಾಗಿ ದೊರೆಯುವಾಗ ತಮ್ಮ ಗ್ರಾಮಗಳಲ್ಲಿ ನಿಂತು ಮೀನುಗಾರಿಕೆ ಮಾಡುತ್ತಾರೆ. ಬೇರೆ ಋತುಗಳಲ್ಲಿ ಅವರು ಮೀನುಗಾರಿಕೆ ಮಾಡಲು ಬೇರೆ ರಾಜ್ಯಗಳಿಗೆ ಪ್ರಯಾಣಿಸುತ್ತಾರೆ. ಇಂಥ ಸಣ್ಣ ಪ್ರಮಾಣದ ಮೀನುಗಾರರ ಪೈಕಿ ಹೆಚ್ಚಿನವರಿಗೆ ಸ್ಥಳೀಯ ಸರಕಾರದಿಂದ ನೆರವು ಸಿಗುವುದಿಲ್ಲ. ಅಲ್ಲದೆ, ಅವರಿಗೆ ಯಾವುದೇ ಅಧಿಕೃತ ಸಂಘಟನೆಗಳಿಂದ ಮಾನ್ಯತೆಯೂ ಸಿಗುವುದಿಲ್ಲ. ಸರಕಾರಿ ಪ್ರಾಯೋಜಿತ ಬದಲಾವಣೆಗಳು ಮೀನುಗಾರ ಕುಟುಂಬಗಳ ಗುರುತನ್ನೇ ಬದಲಾಯಿಸಿತು. ಇಂಥ ಪರಿಸ್ಥಿತಿಯಲ್ಲಿ, ಓರ್ವ ಮೀನುಗಾರನನ್ನು ಸಾಂಪ್ರದಾಯಿಕ ಮೀನುಗಾರಿಕಾ ಸಮುದಾಯಗಳಿಗೆ ಸೇರಿದ ಸಕ್ರಿಯ ಅಥವಾ ಅರೆಕಾಲಿಕ ಮೀನುಗಾರ ಎಂಬುದಾಗಿ ಗುರುತಿಸುವುದು ಹೇಗೆ? ಅದೂ ಅಲ್ಲದೆ, ಮೀನುಗಾರಿಕಾ ಕೆಲಸಗಾರರಿಗೆ ಸ್ಪಷ್ಟ ವ್ಯಾಖ್ಯಾನವೂ ಇಲ್ಲ. ಹಾಗಾಗಿ ಅವರನ್ನು ಗುರುತಿಸುವುದು ಹೇಗೆ?
ಪ್ರಸಕ್ತ ಸಾಗರ ಮೀನುಗಾರಿಕಾ ಗಣತಿ 2025ರಲ್ಲಿ, ಬಂದರುಗಳು, ಜೆಟ್ಟಿಗಳು ಮುಂತಾದ ಮೀನುಗಾರಿಕಾ ಮೂಲಸೌಕರ್ಯಗಳಿಂದ ಅಂಕಿಅಂಶಗಳನ್ನು ಸಂಗ್ರಹಿಸಲಾಗಿದೆ. ಈ ಅಂಕಿಸಂಖ್ಯೆಗಳನ್ನು ಡಿಜಿಟಲ್ ತಲೆಯೆಣಿಕೆಗಳು ಮತ್ತು ಡ್ರೋನ್ಗಳನ್ನು ಬಳಸಿ ಪಡೆಯಲಾಗಿದೆ. ಈ ಪ್ರಕ್ರಿಯೆಯಲ್ಲಿ, ನೋಂದಾಯಿತ ಮೀನು ಕೃಷಿ ಸಂಘಟನೆಗಳು ಮತ್ತು ಸ್ವ-ಸಹಾಯ ಗುಂಪುಗಳಿಗೆ ಆದ್ಯತೆ ನೀಡಲಾಗಿದೆ. ಆದರೆ, ಇದು ನೈಜ ಮೀನುಗಾರಿಕಾ ಸಮುದಾಯಗಳನ್ನೇ ಬದಿಗೆ ಸರಿಸುತ್ತದೆ. ಮೂಲಸೌಕರ್ಯ ಕೇಂದ್ರಗಳನ್ನು ಸಾಮಾನ್ಯವಾಗಿ ನಿರ್ವಹಿಸುವುದು ಖಾಸಗಿ ಸಂಸ್ಥೆಗಳು ಮತ್ತು ಸರಕಾರಿ ಇಲಾಖೆಗಳೇ ಹೊರತು ಸಾಂಪ್ರದಾಯಿಕ ಮೀನುಗಾರರಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಟ್ರಾಲರ್ ಮಾಲಕರು, ಯಾಂತ್ರೀಕೃತ ದೋಣಿಗಳ ಅಸೋಸಿಯೇಶನ್ಗಳು ಮತ್ತು ಬೃಹತ್ ಮೀನು ಉತ್ಪಾದಕ ರೈತರಿಂದ ತುಂಬಿಹೋಗಿರುವ ನೋಂದಾಯಿತ ಸಂಘಟನೆಗಳನ್ನು ಸೇರ್ಪಡೆಗೊಳಿಸಿರುವುದು ಈ ಪ್ರಕ್ರಿಯೆಯನ್ನು ಮತ್ತಷ್ಟು ಹದಗೆಡಿಸಿದೆ. ಈ ಸಂಘಟನೆಗಳಲ್ಲಿರುವವರು ಬಹುತೇಕ ಭೂಮಾಲಕ ಜಾತಿಗಳು ಮತ್ತು ಉದ್ಯಮ ಕುಟುಂಬಗಳಿಗೆ ಸೇರಿದವರು.
ಇಂಥ ಪ್ರಕ್ರಿಯೆಯು ಸಾಂಪ್ರದಾಯಿಕ ಅನೌಪಚಾರಿಕ ಮೀನುಗಾರರು ಮತ್ತು ಸಮುದಾಯಗಳನ್ನು ಗಣತಿಯ ವ್ಯಾಪ್ತಿಯಿಂದ ವ್ಯವಸ್ಥಿತವಾಗಿ ಹೊರಗಿಡಬಹುದು ಎಂಬ ಕಳವಳಗಳಿಗೆ ಕಾರಣವಾಗಿದೆ.
ಓರ್ವ ಮೀನುಗಾರ ಸಮುದಾಯದವನಾಗಿ ಮತ್ತು ಸಂಶೋಧಕನಾಗಿ, ಮೀನುಗಾರನೆಂದರೆ ಯಾರು ಹಾಗೂ ನಾವು ನಮ್ಮ ಸಮುದ್ರ-ಮೀನುಗಾರರ ಜಗತ್ತು ಮತ್ತು ಅಭಿವೃದ್ಧಿಯ ನಡುವೆ ಹೇಗೆ ಸಿಕ್ಕಿಹಾಕಿಕೊಂಡಿದ್ದೇವೆ ಎನ್ನುವುದನ್ನು ನಾನು ಇಲ್ಲಿ ಸಂಶೋಧಿಸುತ್ತೇನೆ.
ಮೀನುಗಾರನೆಂದರೆ ಯಾರು?
ಮೀನುಗಾರನೆಂದರೆ ಯಾರು? ಸಾಮಾನ್ಯ ನಂಬಿಕೆ ಯಂತೆ, ಮೀನು ಹಿಡಿಯುವವ ಮೀನುಗಾರ. ವಾಸ್ತವವಾಗಿ, ಮೀನುಗಾರರ ಜಗತ್ತು ತುಂಬಾ ಹೆಚ್ಚು ಶ್ರೀಮಂತವಾಗಿದೆ. ಅವರನ್ನು ವೃತ್ತಿಪರ ಮೀನುಗಾರಿಕೆಯ ಮಟ್ಟಕ್ಕೆ ಇಳಿಸುವಂತಿಲ್ಲ. ಕರಾವಳಿ ರಾಜ್ಯಗಳ ಮೀನುಗಾರರು ಐತಿಹಾಸಿಕವಾಗಿ ಗ್ರಾಮಗಳ ವ್ಯವಹಾರಗಳು ಮತ್ತು ಸಂಪನ್ಮೂಲಗಳನ್ನು ನಿಭಾಯಿಸಿದವರು. ಅವರು ತಮ್ಮ ಜ್ಞಾನ, ಸಂಪ್ರದಾಯಗಳು, ಸಂರಕ್ಷಣೆ ಮತ್ತು ಗ್ರಾಮದ ಎಲ್ಲರ ಸಮ್ಮತಿಯೊಂದಿಗೆ ಜಲ ಜಗತ್ತನ್ನು ಅಭಿವೃದ್ಧಿಪಡಿಸಿದವರು. ಅವರ ವಿಧಾನವು ಜಾತಿ ತಾರತಮ್ಯದಿಂದ ಕೂಡಿದ ಕೃಷಿ ಸಮಾಜದ ಕಟ್ಟುಪಾಡುಗಳಿಗೆ ವಿರುದ್ಧವಾಗಿದೆ. ಕೃಷಿ ಸಮಾಜದಲ್ಲಿ ಜಾತಿಗಳು ಮತ್ತು ಸಮುದಾಯಗಳನ್ನು ಶ್ರೇಣೀಕೃತ ವ್ಯವಸ್ಥೆಯ ಪ್ರಕಾರ ವಿಂಗಡಿಸಲಾಗಿದೆ. ಸಂಗಮ್ ಸಾಹಿತ್ಯವು ಮೀನುಗಾರರನ್ನು ‘ನೈತಾಲ್’ (ಸಾಗರ ಮತ್ತು ಕರಾವಳಿ) ಎಂಬುದಾಗಿ ಗುರುತಿಸುತ್ತದೆ ಹಾಗೂ ಸಮಾಜವನ್ನು ಪರಿಸರ, ಆರ್ಥಿಕತೆ, ದೇವರು ಮತ್ತು ಜೀವನ ವಿಧಾನದ ಆಧಾರದಲ್ಲಿ ನಿರೂಪಿಸುತ್ತದೆ; ಕೇವಲ ಜಾತಿಯ ಆಧಾರದಲ್ಲಲ್ಲ.
ನಮ್ಮ ಪ್ರಕಾರ, ಒಬ್ಬ ಮೀನುಗಾರನು, ಕಛ್ನ ರಣದಿಂದ ಹಿಡಿದು ಸುಂದರಬನಗಳವರೆಗೆ, ದಮನ್ನಿಂದ ಹಿಡಿದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳವರೆಗೆ ಚಾಚಿಕೊಂಡಿರುವ ಸಮುದ್ರ, ಕಾಲುವೆಗಳು, ಉಪ್ಪುನೀರಿನ ಜೌಗುಪ್ರದೇಶಗಳು ಮತ್ತು ಕಾಂಡ್ಲಾ ಮರಗಳಿಂದ ಉದ್ಭವಿಸಿದ ಪರಿಸರವ್ಯವಸ್ಥೆಗೆ ಒಳಪಟ್ಟವನು. ಮೀನುಗಾರನ ಗುರುತು ಸಮುದಾಯ, ಕರಾವಳಿ ಪರಿಸರ ಮತ್ತು ಪರಂಪರಾಗತವಾಗಿ ಬಂದ ಸಾಮಾಜಿಕ ಸಂಬಂಧಗಳಲ್ಲಿ ಬೆಸೆದಿದೆ. ಆದರೆ, ಪ್ರಸಕ್ತ ಗಣತಿಯು ಡಿಜಿಟಲ್ ಸಲಕರಣೆಗಳು ಮತ್ತು ಸಮುದ್ರದಿಂದ ಮೀನುಗಳನ್ನು ತಂದು ಹಾಕುವ ಕೇಂದ್ರಗಳ ಮೂಲಕ ‘ಸಕ್ರಿಯ ಮೀನುಗಾರರನ್ನು’ ಹುಡುಕುತ್ತಿದೆ. ಆದರೆ, ಈ ವಿಧಾನವು ನಿರ್ದಿಷ್ಟ ಸ್ಥಳಗಳಲ್ಲಿ ಪರಂಪರಾಗತವಾಗಿ ವಾಸಿಸುತ್ತಾ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರನ್ನು ಗಣತಿಯ ವ್ಯಾಪ್ತಿಯಿಂದ ಹೊರಗಿಡುತ್ತದೆ. ಮೀನುಗಾರರು ತಲೆತಲಾಂತರದಿಂದ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯಗಳು ಮತ್ತು ನಿಯಮಗಳನ್ನು ಹಾಗೂ ಅವರು ತಮ್ಮ ಮಣ್ಣಿನೊಂದಿಗೆ ಹೊಂದಿರುವ ಸಂಬಂಧವನ್ನು ಗಣತಿಯು ನಿರ್ಲಕ್ಷಿಸಿದರೆ, ಅದು ಕರಾವಳಿ ಪ್ರದೇಶಗಳಲ್ಲಿ ಮೀನುಗಾರರು ಹೊಂದಿರುವ ಸಾಂಪ್ರದಾಯಿಕ ಹಕ್ಕುಗಳು ಮತ್ತು ಮೀನುಗಾರಿಕೆಯಲ್ಲಿನ ಅವರ ಭಾಗೀದಾರಿಕೆಯನ್ನೇ ವ್ಯವಸ್ಥಿತವಾಗಿ ಅಳಿಸಿಹಾಕಬಹುದು. ಗಣತಿಯು ಮೀನು ಉತ್ಪಾದನೆ ಪ್ರಮಾಣ ಎಂಬ ಏಕೈಕ ಅಂಶದ ಆಚೆಗೂ ಗಮನ ಹರಿಸಿ, ಈ ನೆಲದೊಂದಿಗೆ ಹಾಸುಹೊಕ್ಕಾಗಿ ಬೆರೆತು ಹೋಗಿರುವ ಸಾಂಪ್ರದಾಯಿಕ ಮೀನುಗಾರರನ್ನೂ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಬೇಕಾಗಿದೆ.
2015ರ ಬಳಿಕ, ಈ ನೀತಿಯು ವಿಸ್ತರಣೆಗೊಂಡು, ‘ಸಾಗರಮಾಲಾ’ ಯೋಜನೆಯಡಿ ಭಾರತದ ಕರಾವಳಿ ಮೂಲ ಸೌಕರ್ಯ ಅಭಿವೃದ್ಧಿಯ ಪ್ರಮುಖ ನೀತಿಯಾಗಿ ಮಾರ್ಪಟ್ಟಿದೆ. ಸಾಗರಮಾಲಾ ಯೋಜನೆಯಡಿ ಸಾಗರ ಮೂಲಸೌಕರ್ಯಕ್ಕಾಗಿ ಸುಮಾರು ಎಂಟು ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಅಂದಿನಿಂದ, ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಸಾಂಪ್ರದಾಯಿಕ ಮೀನುಗಾರರು ನಿರ್ವಸಿತರಾಗುವ ಹಾಗೂ ಮೀನುಗಾರಿಕೆಗಾಗಿ ಸಮುದ್ರಕ್ಕೆ ಹೋಗುವ ಹಕ್ಕನ್ನು ಕಳೆದು ಕೊಳ್ಳುವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಈಗ 2025ರ ಗಣತಿ ಯೊಂದಿಗೆ, ತಮ್ಮ ಸಾಂಪ್ರದಾಯಿಕ ಗುರುತು ಮತ್ತು ಈ ನೆಲಕ್ಕೆ ಸೇರಿದವರೆಂಬ ಹಕ್ಕನ್ನು ಕಳೆದುಕೊಳ್ಳುವ ಅವರ ಭೀತಿಯು ಮತ್ತಷ್ಟು ತೀವ್ರಗೊಂಡಿದೆ.
(ಲೇಖಕ ರಾಮು ಅವಲ ಲಂಡನ್ನ ಕ್ವೀನ್ ಮೇರಿ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಅಧ್ಯಯನ ಮಾಡುತ್ತಿದ್ದಾರೆ. ಹತ್ತು ವರ್ಷಗಳ ಸಾಗರಮಾಲಾ ಕಾರ್ಯಕ್ರಮವನ್ನು ವಿಶ್ಲೇಷಿಸುವ ಲೇಖನಗಳ ಸರಣಿಯಲ್ಲಿ ಇದು ಮೊದಲನೆಯದು. ಲೇಖನ ತಯಾರಿಯಲ್ಲಿ ಸೆಂಟರ್ ಫಾರ್ ಫೈನಾನ್ಶಿಯಲ್ ಅಕೌಂಟಬಿಲಿಟಿ ಆ್ಯಂಡ್ ಡೆಲ್ಲಿ ಫೋರಮ್ ಸಹಕಾರ ನೀಡಿದೆ.)







