ಒಂದು ಭಾಷಾ ವಿಷಯವಾಗಿ ಇಂಗ್ಲಿಷ್ ಇರಲಿ

‘ಮಾತೃಭಾಷಾ ಮಾಧ್ಯಮದ ಶಿಕ್ಷಣದ ಹೆಸರಿನಲ್ಲಿ ಬಡವರನ್ನು ಅವಕಾಶಗಳಿಂದ ವಂಚಿಸುವುದು ಬೇಡ’ ಎಂಬ ಡಾ.ಚಂದ್ರಶೇಖರ್. ಆರ್.ವಿ. ಅವರ ಇತ್ತೀಚಿನ ಲೇಖನ (ವಾ.ಭಾ., ಜು.11) ಪ್ರಸಕ್ತ ಸಂದರ್ಭದ ಕಠೋರ ವಾಸ್ತವವನ್ನು ಪ್ರಸ್ತುತಪಡಿಸಿರುವುದು ನಿಜವಾದರೂ ಅದಕ್ಕೆ ಅವರು ನೀಡಿರುವ ಸಮರ್ಥನೆ ಸಮಂಜಸವಾದುದಲ್ಲ. ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆ ಅಥವಾ ಸ್ಥಳೀಯ ಭಾಷಾ ಮಾಧ್ಯಮದಲ್ಲಿ ನೀಡಬೇಕೆಂದು ಒತ್ತಾಯಿಸುತ್ತಿರುವುದು ಭಾಷೆಯನ್ನು ಉಳಿಸಬೇಕೆಂಬ ಇರಾದೆಯಿಂದಲ್ಲ. ಶಿಕ್ಷಣ ಮಾಧ್ಯಮವು ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯಾಗಿದ್ದರೆ ಮಕ್ಕಳು ತಮಗೆ ಪರಿಚಿತವಾದ ಭಾಷೆಯ ಮೂಲಕ ವಿಜ್ಞಾನ, ಗಣಿತ, ಸಮಾಜ ವಿಜ್ಞಾನಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ, ಆನಂದದಾಯಕವಾಗಿರುತ್ತದೆ ಮತ್ತು ತಮಗೆ ಉಂಟಾಗುವ ಸಂದೇಹಗಳನ್ನು ಗುರುಗಳೊಂದಿಗೆ ತೋಡಿಕೊಂಡು ಪರಿಹರಿಸಿಕೊಳ್ಳಲು ಸುಲಭವಾಗುತ್ತದೆ ಎಂಬ ಕಾರಣಕ್ಕಾಗಿ. ಹೀಗಾದಾಗ ಮಾತೃಭಾಷೆ ಅಥವಾ ಸ್ಥಳೀಯ ಭಾಷಾ ಮಾಧ್ಯಮ ಮಕ್ಕಳಲ್ಲಿ ಜ್ಞಾನಾಸಕ್ತಿ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಬೋಧಿಸುವಾಗ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು ಮತ್ತು ಅರ್ಥವಾಗದ್ದನ್ನು ಮತ್ತೆ ಕೇಳಿ ತಿಳಿದುಕೊಳ್ಳಲು ಸಹ ಭಾಷೆಯ ತೊಡಕಿನಿಂದ ಮಕ್ಕಳು ಹಿಂಜರಿಯಬಹುದು. ಹೀಗಾಗಿ ಉಪಾಧ್ಯಾಯರು ಮತ್ತು ಮಕ್ಕಳ ನಡುವೆ ಭಾಷೆಯಿಂದಾಗಿಯೇ ಅಂತರ ಸೃಷ್ಟಿಯಾಗಿ ಇಡೀ ಶೈಕ್ಷಣಿಕ ಪರಿಸರ ಏಕಮುಖವಾಗಿ ಬಹುಮಂದಿ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ನಿರಾಸಕ್ತಿ ಬೆಳೆಯಬಹುದು.
ವಿಜ್ಞಾನ, ಗಣಿತ, ಸಮಾಜ ವಿಜ್ಞಾನಗಳಲ್ಲದೆ ಗಣಕಯಂತ್ರಕ್ಕೆ ಸಂಬಂಧಿಸಿದ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎ.ಐ.) ಮುಂತಾದ ಹೊಸ ವಿಷಯಗಳನ್ನು ತನ್ನದನ್ನಾಗಿಸಿಕೊಳ್ಳುವುದು ತ್ರಾಸದಾಯಕವಾಗಿರುವಾಗ ಅದನ್ನು ತನಗೆ ಪರಿಚಿತವಲ್ಲದ ಭಾಷೆಯ ಮೂಲಕ ಕಲಿಯುವುದು ಮತ್ತೂ ಹೆಚ್ಚಿನ ಹಿಂಸೆಗೆ ಕಾರಣವಾಗುತ್ತದೆ. ಆದರೆ ತನ್ನದೇ ಆದ ಭಾಷೆಯ ಮೂಲಕ ಕಲಿಯುವಾಗ ಅಂತಹ ತೊಡಕಾಗುವುದಿಲ್ಲ. ಒಂದು ವೇಳೆ ಅರ್ಥವಾಗದಿದ್ದರೆ ಉಪಾಧ್ಯಾಯರೊಂದಿಗೆ ಸಂವಾದ ಮಾಡಿ ತನ್ನ ಗೊಂದಲವನ್ನು ನಿವಾರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಒಮ್ಮೆ ವಿಷಯ ಜ್ಞಾನ ಕರಗತವಾದರೆ ನಂತರ ತನಗೆ ಅರ್ಧಂಬರ್ಧ ಗೊತ್ತಿರುವ ಇಂಗ್ಲಿಷ್ ಭಾಷೆಯಲ್ಲಿ ಬೇಕಾದರೆ ವಿವರಿಸಲು ಶಕ್ತನಾಗುತ್ತಾನೆ. ಒಟ್ಟಿನಲ್ಲಿ ಯಾವುದೇ ಜ್ಞಾನದ ಮೂಲ ಪರಿಕಲ್ಪನೆ ಮನಸ್ಸಿಗೆ ನಾಟಿದ್ದಾದರೆ ನಂತರ ಅದರ ಆನ್ವಯಿಕತೆ ಮತ್ತು ಸೃಜನಶೀಲತೆಗಳೂ ಸುಲಭ ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ಕುರುಡು ಪಾಠವಾಗಿ ಉದ್ಯೋಗಕ್ಕೆ ಅನರ್ಹನಾಗುತ್ತಾನೆ. ಆದ್ದರಿಂದಲೇ ಇಂದು ನಿರುದ್ಯೋಗಿಗಳ ಸಂಖ್ಯೆಗಿಂತ ಪದವಿ ಪ್ರಮಾಣ ಪತ್ರಗಳಿದ್ದರೂ ಉದ್ಯೋಗಕ್ಕೆ ಅನರ್ಹರಾಗಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಗಳು ತಿಳಿಸುತ್ತವೆ. ಇತ್ತೀಚೆಗೆ ಬಿಡುಗಡೆಯಾದ ‘ಪರಖ್(PARAKH) - 2024’ ವರದಿಯನ್ನು ಗಮನಿಸಬಹುದು. 6 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ (ದೇಶದ ಸರಾಸರಿ) ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಪ್ರಾಪಂಚಿಕ ಜ್ಞಾನಗಳಿಗೆ ಸಂಬಂಧಿಸಿದಂತೆ ಶೇ.50 ಕ್ಕಿಂತ ಕಡಿಮೆ ಇದೆ.
ಯಾರೂ ಬಡವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬಾರದು ಎಂದು ಹೇಳುತ್ತಿಲ್ಲ. ಶಿಕ್ಷಣದ ಖಾಸಗೀಕರಣ ಹೆಚ್ಚಾಗಿರುವುದರಿಂದ, ಶಿಕ್ಷಣವನ್ನು ಸಹ ಉದ್ಯಮವನ್ನಾಗಿಸಿರುವ ಬಂಡವಾಳಶಾಹಿಗಳು ತಮ್ಮ ತೀರದ ಧನದಾಸೆಯ ನಿಮಿತ್ತ ಜನರಲ್ಲಿ ಇಂಗ್ಲಿಷ್ ಮಾಧ್ಯಮದ ಪಿತ್ತವನ್ನು ಬಿತ್ತಿದ್ದಾರೆ ಮತ್ತು ಸರಕಾರಿ ಶಾಲೆಗಳನ್ನು ನಮ್ಮ ಎಲ್ಲ ಘನ ಸರಕಾರಗಳು ಎಲ್ಲ ರೀತಿಯಲ್ಲಿಯೂ ಹಾಳುಗೆಡವಿರುವುದರ ಪರಿಣಾಮದಿಂದಾಗಿ ಮಾತೃಭಾಷೆ ಅಥವಾ ಸ್ಥಳೀಯ ಭಾಷಾ ಮಾಧ್ಯಮ ಸಕಾರಣವಿಲ್ಲದೆ ಸೊರಗುತ್ತಿದೆ.
ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಉದ್ಯೋಗದ ದೃಷ್ಟಿಯಿಂದ ಅಗತ್ಯವಿರುವಷ್ಟು ಇಂಗ್ಲಿಷ್ ಭಾಷಾ ಜ್ಞಾನವನ್ನು ಗಳಿಸಿಕೊಳ್ಳುವುದು ಅನಿವಾರ್ಯ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಆದ್ದರಿಂದ ಇಂಗ್ಲಿಷ್ ಅನ್ನು ಮಾಧ್ಯಮ ಮಾಡುವ ಬದಲು ಒಂದು ಭಾಷೆಯನ್ನಾಗಿ ಕಲಿಸುವುದು ಉತ್ತಮ. ಏಕೆಂದರೆ ಆಂಗ್ಲ ಭಾಷಾ ಮಾಧ್ಯಮದ ಮೂಲಕ ಆಂಗ್ಲ ಭಾಷೆಯನ್ನೂ ಕಲಿಯಲಾಗದು ಮತ್ತು ವಿಷಯ ಜ್ಞಾನದ ಸಂಪಾದನೆಯೂ ಅಷ್ಟಕ್ಕಷ್ಟೆ! ವಿಶ್ವಾದ್ಯಂತ ಇಂಗ್ಲಿಷ್ ಕಲಿಸಲು ಕಾರ್ಯನಿರ್ವಹಿಸುವ ಬ್ರಿಟಿಷ್ ಸಂಸ್ಥೆಯಾದ ಬ್ರಿಟಿಷ್ ಕೌನ್ಸಿಲ್ ಈ ವಿಷಯದ ಕುರಿತು ಹೀಗೆ ಹೇಳುತ್ತದೆ: ‘‘ಆಂಗ್ಲ ಭಾಷೆಯಲ್ಲಿ ಪರಿಣತಿ ಸಾಧಿಸಲು ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸುವುದಕ್ಕಿಂತ ಬೋಧನಾ ಮಾಧ್ಯಮವಾಗಿ ಕಲಿಸುವುದು ಖಚಿತವಾದ ಮಾರ್ಗ ಎಂಬ ಅಭಿಪ್ರಾಯವನ್ನು ಬೆಂಬಲಿಸಲು ಅತ್ಯಂತ ಕಡಿಮೆ ಅಥವಾ ಯಾವುದೇ ಪುರಾವೆಗಳಿಲ್ಲ. ಇಂಗ್ಲಿಷನ್ನು ಒಂದು ಭಾಷಾ ವಿಷಯವನ್ನಾಗಿ ಕಲಿಸಿದಾಗ ಮಾತ್ರ ನಾವು ಆಂಗ್ಲ ಭಾಷೆಯ ಗುಣಮಟ್ಟ ಹಾಗೂ ನಿರರ್ಗಳತೆಯನ್ನು ಸಾಧಿಸಲು ಸಾಧ್ಯ’’.
ಆದ್ದರಿಂದ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷನ್ನು ಒಂದು ಭಾಷಾ ವಿಷಯವಾಗಿ ನಿಗದಿಗೊಳಿಸಿ, ಇಂಗ್ಲಿಷ್ ಭಾಷೆಯಲ್ಲಿ ಪರಿಣತರಾದ ಶಿಕ್ಷಕರಿಂದ ಇಂಗ್ಲಿಷ್ ಪಾಠ, ಪದ್ಯಗಳ ಬೋಧನೆಯನ್ನು ಒಂದು ನೆಪವಾಗಿ ಪರಿಭಾವಿಸಿ, ಭಾಷಾ ಕಲಿಕೆ ಅಂದರೆ ಗ್ರಹಿಕೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯ ಸಾಧಿತವಾಗುವುದನ್ನು ಪ್ರಮುಖವಾದ ಗುರಿಯನ್ನಾಗಿಸಿಕೊಂಡು ಬೋಧನೆ ಮಾಡಿಸಬೇಕಾಗುತ್ತದೆ.
ಭಾರತದ ಹಾಗೆ ಕರ್ನಾಟಕವೂ ಬಹು ಭಾಷೆಗಳನ್ನಾಡುವ ಪ್ರದೇಶ.
2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಕನ್ನಡವನ್ನು ಮಾತೃಭಾಷೆಯಾಗಿ ಹೊಂದಿರುವವರು ಶೇ.66.56ರಷ್ಟು ಮಂದಿ. ಉಳಿದವರು ಸುಮಾರು 72 ಭಾಷೆಗಳನ್ನು ತಾಯ್ನುಡಿಯನ್ನಾಗಿ ಬಳಸುತ್ತಾರೆ. ಹೀಗಾಗಿ ಈ ಎಲ್ಲ ಭಾಷೆಗಳನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡುವುದು ಪ್ರಾಯೋಗಿಕವಾಗಿ ಅಸಾಧ್ಯ. ಆದ್ದರಿಂದ ಸ್ಥಳೀಯ ಭಾಷೆಯಾದ ಕನ್ನಡವನ್ನು ಮಾತೃಭಾಷೆಗೆ ಪರ್ಯಾಯವಾಗಿ ಮಾಧ್ಯಮ ಭಾಷೆಯನ್ನಾಗಿ ಪರಿಗಣಿಸುವುದು ಉಚಿತವಾದುದು. ಕೆಲವು ಪ್ರದೇಶಗಳಲ್ಲಿ ಉರ್ದು, ತೆಲುಗು, ತಮಿಳು, ಮರಾಠಿ ಭಾಷೆಗಳನ್ನಾಡುವ ಜನ ಹೆಚ್ಚು ವಾಸಿಸುತ್ತಿದ್ದರೆ ಮತ್ತು ಅಂತಹ ಕಡೆ ಆಯಾ ಭಾಷಾ ಮಾಧ್ಯಮಗಳಿಗೆ ಹೆಚ್ಚು ಬೇಡಿಕೆ ಇದ್ದಲ್ಲಿ ಆಯಾ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡಬಹುದು. ಉಳಿದಂತೆ ಸ್ಥಳೀಯ ಭಾಷೆಯೇ ಮಾತೃಭಾಷೆಯ ಸ್ಥಾನವನ್ನು ಶಿಕ್ಷಣದ ದೃಷ್ಟಿಯಿಂದ ಅಲಂಕರಿಸುವುದರಲ್ಲಿ ಯಾವ ಅನ್ಯಾಯವೂ ಆಗದು. ಇನ್ನು ಕನ್ನಡದ ಉಪಭಾಷೆಗಳಿಗೊಂದೊಂದು ಶಿಕ್ಷಣ ಮಾಧ್ಯಮ ಆರಂಭಿಸಬೇಕೆಂಬುದು ಹಾಸ್ಯಾಸ್ಪದವಾದೀತು.
ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವುದರಿಂದ ಸಮಾನ ಶಿಕ್ಷಣಕ್ಕೂ ಅವಕಾಶ ನೀಡಿದ ಹಾಗೆ ಆಗುತ್ತದೆ. ಬಡವರಿಗೆ ನ್ಯಾಯವನ್ನು ಹಾಗೂ ಶೈಕ್ಷಣಿಕ ಮೌಲ್ಯವನ್ನು (ಮಾಧ್ಯಮದ ದೃಷ್ಟಿಯಿಂದ) ಕಾಪಾಡಿದ ಹಾಗೆ ಆಗುತ್ತದೆ.
ಹೀಗಾಗಿ, ‘‘ಮೊದಲು ತಾಯ ಹಾಲ ಕುಡಿದು, ಲಲ್ಲೆಯಿಂದ ತೊದಲ ನುಡಿದು, ಕೆಳೆಯರೊಡನೆ ಬೆಳೆದು ಬಂದ ಮಾತದಾವುದು’’ ಎಂದು ಬಿ.ಎಂ.ಶ್ರೀಕಂಠಯ್ಯನವರು ಹೇಳಿದ ಹಾಗೆ ಮೊದಲು ತನ್ನ ಚಿರಪರಿಚಿತ ಭಾಷೆಯನ್ನು ಜೀರ್ಣಿಸಿಕೊಳ್ಳುತ್ತಾ ಇಂಗ್ಲಿಷನ್ನು ಹಾಗೂ ಇತರ ಜ್ಞಾನಶಿಸ್ತುಗಳನ್ನು ಕರಗತ ಮಾಡಿಕೊಳ್ಳಲು ವ್ಯವಸ್ಥೆಗೊಳಿಸುವುದು ಉತ್ತಮ. ಇವು ವಿದ್ಯಾರ್ಥಿಯ ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿಯಾಗುತ್ತವೆ. ಹೀಗಾಗಿ ಮಗುವಿನ ಮಾತೃಭಾಷೆ ಅಥವಾ ಸುಪರಿಚಿತವಾದ ಸ್ಥಳೀಯ ಭಾಷೆಯ ಮೂಲಕ ಶಾಸ್ತ್ರವಿಷಯಗಳ ಬೋಧನೆ ಅನಿವಾರ್ಯ. ಪ್ರಸ್ತುತ ನಮ್ಮ ಸಂದರ್ಭದಲ್ಲಿ ಉದ್ಯೋಗಗಳ ಸಂಪಾದನೆಗೆ ಇಂಗ್ಲಿಷ್ ಭಾಷೆಯ ಅಗತ್ಯ ಇರುವುದರಿಂದ ಇಂಗ್ಲಿಷ್ ಅನ್ನು ಒಂದು ಭಾಷಾ ವಿಷಯವನ್ನಾಗಿ ಕಲಿಸುವುದು ಸಹ ಲೇಸು.
ಆದ್ದರಿಂದ ಇಂಗ್ಲಿಷ್ ಭಾಷೆಯ ಬಗ್ಗೆ ಅನಗತ್ಯ ಭಯವಾಗಲಿ, ಅತಿಯಾದ ಮೋಹವಾಗಲಿ ಸಲ್ಲದು.
ಶಿಕ್ಷಣ ಕ್ಷೇತ್ರವನ್ನು ಉದ್ಯಮವನ್ನಾಗಿ ಮಾಡಿರುವ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಸೃಷ್ಟಿಸಿರುವ ಮೃಗೀಯ ಸ್ಪರ್ಧೆಗಾಗಲಿ, ಮೇಲ್ಜಾತಿ ಮತ್ತು ಮೇಲ್ವರ್ಗದವರ ಭ್ರಮಾತ್ಮಕ ಅಶೈಕ್ಷಣಿಕ ಆಕಾಂಕ್ಷೆಗಳ ಆಕರ್ಷಣೆಗಾಗಲಿ ತುತ್ತಾಗದೆ ಅರ್ಥಪೂರ್ಣವಾದ ಶಿಕ್ಷಣವನ್ನು ರೂಪಿಸುವತ್ತ ಹಾಗೂ ಪಡೆಯುವುದರತ್ತ ಪ್ರಯತ್ನಶೀಲರಾಗೋಣ.







