ನಿಡಗುಂದಿ : ಬೀದಿ ನಾಯಿಗಳ ನಿಯಂತ್ರಣಕ್ಕೆ ವಿಶೇಷ ಕಾರ್ಯಾಚರಣೆ

ನಿಡಗುಂದಿ: ಸುಪ್ರೀಂ ಕೋರ್ಟ್ ನಿರ್ದೇಶನ ಹಾಗೂ ಸರಕಾರದ ಮಾರ್ಗಸೂಚಿಗಳ ಅನ್ವಯ ಸಾರ್ವಜನಿಕರ ಸುರಕ್ಷತೆ ಮತ್ತು ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪಟ್ಟಣ ಪಂಚಾಯಿತಿ ವತಿಯಿಂದ ಶನಿವಾರ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಅಲೆದಾಡುತ್ತಿರುವ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಹರಣ ಚಿಕಿತ್ಸೆ (ಎಬಿಸಿ) ಹಾಗೂ ರೇಬೀಸ್ ನಿರೋಧಕ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ಸಾರ್ವಜನಿಕರು, ಮಕ್ಕಳು ಹಾಗೂ ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದರು. ಒಂದು ಚಿಕ್ಕ ಮಗುವಿಗೆ ನಾಯಿ ಕಚ್ಚಿದ ಘಟನೆ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪಟ್ಟಣ ಪಂಚಾಯಿತಿ ಮಾಹಿತಿ ಪ್ರಕಾರ, ಐದು ಸಿಬ್ಬಂದಿಯ ತಂಡ ಹಾಗೂ ಒಬ್ಬ ವೈದ್ಯರನ್ನು ನಿಯೋಜಿಸಲಾಗಿದೆ. 15 ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದ್ದು, ಪಟ್ಟಣದಲ್ಲಿ ಅಂದಾಜು 249 ಬೀದಿ ನಾಯಿಗಳಿವೆ. ಮೊದಲ ದಿನವೇ ಸುಮಾರು 25 ನಾಯಿಗಳನ್ನು ಹಿಡಿದು ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಚಿಕಿತ್ಸೆ ಪಡೆದ ನಾಯಿಗಳಿಗೆ ಕಿವಿಗೆ ಗುರುತು ಮಾಡಿ ಮತ್ತೆ ಅದೇ ಪ್ರದೇಶಕ್ಕೆ ಬಿಡಲಾಗುತ್ತದೆ. ಇದರಿಂದ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಬರುವುದರ ಜೊತೆಗೆ ರೇಬೀಸ್ ಹರಡುವ ಅಪಾಯ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯ ಯಶಸ್ವಿಯಾಗಲು ಸಾರ್ವಜನಿಕರು ಸಹಕರಿಸಬೇಕು ಎಂದು ಪಪಂ ಮನವಿ ಮಾಡಿದೆ.
ಸಾಕುನಾಯಿ ಮಾಲಕರು ತಮ್ಮ ನಾಯಿಗಳನ್ನು ಸರಿಯಾಗಿ ಮನೆಯಲ್ಲಿ ಕಾಯ್ದು ಕೊಳ್ಳಬೇಕು. ಬೀದಿನಾಯಿಗಳನ್ನು ಹಿಡಿಯುವ ತಂಡಕ್ಕೆ ಯಾವುದೇ ತೊಂದರೆ ಆಗಬಾರದು. ಪಟ್ಟಣ ಪಂಚಾಯತ್ ಹಮ್ಮಿಕೊಂಡಿರುವ ಈ ಕಾರ್ಯಾಚರಣೆ ಶ್ಲಾಘನೀಯವಾಗಿದೆ.
-ಶಿವಾನಂದ ಅವಟಿ, ಜಿಪಂ ಮಾಜಿ ಸದಸ್ಯ
ಪಟ್ಟಣದ ನಾಗರಿಕರು ಮನೆಗಳ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಹೋಟೆಲ್, ಮಾಂಸ ಮಾರಾಟಗಾರರು ಹಸಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಕಸದ ರಾಶಿಗಳೇ ಬೀದಿ ನಾಯಿಗಳ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣವಾಗುತ್ತಿವೆ. ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾರ್ವಜನಿಕರು ಸಹಕಾರ ನೀಡಬೇಕು.
-ಪ್ರತಾಪ್ ಕೊಡುಗೆ, ಮುಖ್ಯಾಧಿಕಾರಿ, ಪಪಂ
ಎಲ್ಲಿಯಾದರೂ ಬೀದಿ ನಾಯಿಗಳುಕಂಡುಬಂದರೆ ಪಪಂಗೆ ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕು.
-ಮನೋಹರ್ ಅಜ್ಮನಿ, ಆರೋಗ್ಯ ನಿರೀಕ್ಷಕ






