ಅಕ್ರಮ ಮದ್ಯ ಮಾರಾಟಕ್ಕಿಲ್ಲ ಕಡಿವಾಣ
ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾದ ದುಶ್ಚಟ

ಸಾಂದರ್ಭಿಕ ಚಿತ್ರ
ಸೇಡಂ: ಪಟ್ಟಣದ ಬಹುತೇಕ ಗಲ್ಲಿ-ಗಲ್ಲಿಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕುಡುಕರು ಹೆಚ್ಚಾಗಿ ಹಲವು ಕುಟುಂಬಗಳ ನೆಮ್ಮದಿ ಹಾಳಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಕಿರಾಣಿ ಅಂಗಡಿಗಳು, ಮನೆಗಳು ಹಾಗೂ ಚಹಾ ಹೋಟೆಲ್ಗಳ ಮೂಲಕ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಮನೆಗಳಲ್ಲೇ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಆರೋಪಗಳಿವೆ. ಈ ಅಕ್ರಮ ದಂಧೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಬೆಂಬಲವಿದೆ ಎಂದು ಕೆಲ ಸಾರ್ವಜನಿಕರು ಆರೋಪಿಸಿದ್ದಾರೆ.
ಮನೆ ಬಾಗಿಲಿಗೇ ಮದ್ಯ; ಹೆಚ್ಚುತ್ತಿರುವ ಕುಡುಕರ ಸಂಖ್ಯೆ :
ಹಿಂದೆ ಗ್ರಾಮೀಣ ಭಾಗದ ಮದ್ಯ ವ್ಯಸನಿಗಳು ಪಟ್ಟಣಕ್ಕೆ ತೆರಳಿ ಮದ್ಯ ಖರೀದಿಸಿ, ನಂತರ ಗ್ರಾಮಗಳಿಗೆ ತಂದು ಸೇವಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮನೆಗಳು ಹಾಗೂ ಸಣ್ಣ ಅಂಗಡಿಗಳಲ್ಲೇ ಅಕ್ರಮವಾಗಿ ಮದ್ಯ ದೊರೆಯುತ್ತಿರುವುದರಿಂದ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಅಕ್ರಮ ಮದ್ಯ ಮಾರಾಟದ ಕುರಿತು ಮಾಹಿತಿ ನೀಡಲು ಸ್ಥಳೀಯರು ಹಿಂದೇಟು ಹಾಕುತ್ತಿದ್ದಾರೆ. ಪ್ರಭಾವಿಗಳ ಒತ್ತಡ ಹಾಗೂ ಬೆದರಿಕೆಯ ಭೀತಿಯಿಂದಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಲು ಜನರು ಹಿಂಜರಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಅಕ್ರಮ ದಂಧೆ ಮತ್ತಷ್ಟು ಬೇರೂರುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಪಟ್ಟಣದ ಹಲವು ಬಡಾವಣೆಗಳ ಮನೆಗಳಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡಲಾಗುತ್ತಿದೆ ಎನ್ನಲಾಗುತ್ತಿದ್ದು, ಕೆಲವರು ಸ್ಥಳೀಯವಾಗಿ ತಯಾರಿಸಿದ ಸೇಂದಿಯನ್ನು ಮಾರಾಟ ಮಾಡುತ್ತಿದ್ದರೆ, ಇನ್ನೂ ಕೆಲವರು ನೆರೆಯ ಆಂಧ್ರಪ್ರದೇಶದ ಗುಡಿಗಳಿಂದ ಸೇಂದಿ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.
ಇದರ ಜತೆಗೆ ಆರೋಗ್ಯಕ್ಕೆ ಅಪಾಯಕಾರಿ ಎನ್ನಲಾಗುವ ಸಿ.ಎಚ್. ಪೌಡರ್ ಕೂಡ ಅಕ್ರಮವಾಗಿ ಮಾರಾಟವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಈ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ :
ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಮದ್ಯ ಮತ್ತು ಸೇಂದಿ ಮಾರಾಟಕ್ಕೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಸ್ಥಳಗಳನ್ನು ಗುರುತಿಸಿ ದಾಳಿ ನಡೆಸಿ, ಪ್ರಕರಣ ದಾಖಲಿಸುವುದರ ಜತೆಗೆ ಇಂತಹ ಚಟುವಟಿಕೆಗಳು ಮರುಕಳಿಸದಂತೆ ನಿಗಾ ವಹಿಸಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಈಗಾಗಲೇ ಗ್ರಾಮೀಣ ಭಾಗದಲ್ಲಿ ಅಕ್ರಮ ಸೇಂದಿ ಹಾಗೂ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ.
-ಓಂಪ್ರಕಾಶ್ ಮಠಪತಿ, ಅಬಕಾರಿ ಇಲಾಖೆ ಅಧಿಕಾರಿ, ಸೇಡಂ
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ರಾಜಾರೋಷವಾಗಿ ಅಕ್ರಮ ಸೇಂದಿ ಹಾಗೂ ಮದ್ಯ ಮಾರಾಟ ನಡೆಯುತ್ತಿದ್ದರೂ, ಅಬಕಾರಿ ಅಧಿಕಾರಿಗಳು ಸಮರ್ಪಕವಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ. ಅಧಿಕಾರಿಗಳು ಕೂಡಲೇ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು.
-ರವಿನಾಯಕ ಶೇಟಿಹೂಡ, ತಾಲೂಕು ಅಧ್ಯಕ್ಷರು, ಜಯ ಕರ್ನಾಟಕ ಸಂಘ






