ಎಸ್ಪಿ, ಕಮಿಷನರ್ ವರ್ಗಾವಣೆಯ ಪ್ರಮೇಯವೇ ಇಲ್ಲ: ಪದ್ಮರಾಜ್

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಆರೇಳು ತಿಂಗಳ ಹಿಂದೆ ಅಶಾಂತಿಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದಾಗ ಇಲ್ಲಿನ ಕಾಂಗ್ರೆಸ್ ಅಧಿಕಾರಿಗಳ ಆಗ್ರಹದ ಮೇರೆಗೆ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಇಆದರೆ ಇದೀಗ ಕೆಲವೊಂದು ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಅವರ ವರ್ಗಾವಣೆಯ ಕುರಿತಂತೆ ಗೊಂದಲ ಸೃಷ್ಟಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಆಕ್ಷೇಪಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪೊಲೀಸ್ ಕಮಿಷನರ್ ಮತ್ತು ಎಸ್ಪಿಯವರ ವರ್ಗಾವಣೆ ಆರೋಪದ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಅವರನ್ನು ವರ್ಗಾವಣೆ ಮಾಡುವ ಪ್ರಮೇಯವೇ ಇಲ್ಲ ಎಂದರು.
ಕಳೆದ ಏಳೆಂಟು ತಿಂಗಳಿನಿಂದ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಅಹಿತಕರ ಘಟನೆಗಳು ನಡೆದಿಲ್ಲ. ಅನೈತಿಕ ಚಟುವಟಿಕೆಗಳು ನಿಂತಿವೆ. ಡ್ರಗ್ಸ್‌ಗೆ ಸಂಬಂಧಿಸಿ ಜಿಲ್ಲೆಯ ಪೋಷಕರಲ್ಲಿದ್ದ ಭಯದ ವಾತಾವರಣ ಕಡಿಮೆಯಾಗಿದೆ. ಡ್ರಗ್ಸ್ ದಂಧೆಗೆ ತೊಡಗಿದವರ ಶೇ 90ರಷ್ಟು ಬಂಧನಾಗಿದೆ. ನಮ್ಮದು ಕೇವಲ ಚುನಾವಣೆ ಗೆಲ್ಲುವುದು ಮಾತ್ರವೇ ಆಶಯವಲ್ಲ. ಬದಲಾಗಿ ಜನ ನೆಮ್ಮದಿಂದ ಬದುಕುವುದು, ಸಮಾಜದ ಕಲ್ಯಾಣ ನಮ್ಮ ಉದ್ದೇಶವಾಗಿದೆ. ಆದರೆ ಬಿಜೆಪಿ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಗೊಂದಲ ಸೃಷ್ಟಿಸುತ್ತಿದೆ. ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ರಿಯಾಯಿತಿ ನೀಡಿದ್ದಾರೆ. ಅದು ವಿವಾದದ ವಿಚಾರವೇ ಅಲ್ಲ. ಅದಕ್ಕೆ ಯಾರೂ ಅಡ್ಡ ಬಂದಿಲ್ಲ. ಆದರೆ ಜೂಜಿಗೆ ಮಾತ್ರವೇ ತಡೆಯಾಗಿದೆ. ಇದರಿಂದ ಅದೆಷ್ಟೋ ಜನರು ಉದ್ಯೋಗಕ್ಕೆ ಹೋಗುವ ಊಲಕ ಮನೆಯವರು ನೆಮ್ಮದಿ ಕಾಣುವಂತಾಗಿದೆ. ಧಾರ್ಮಿಕ ಆಚರಣೆಗೆ ಕಾಂಗ್ರೆಸ್ ಯಾವತ್ತೂ ಅಡ್ಡಿಪಡಿಸಿಲ್ಲ ಎಂದು ಅವರು ಹೇಳಿದರು.
ದ್ವೇಷ ಭಾಷಣ ವಿರುದ್ಧದ ಕಾನೂನು ಮಂಜೂರಾಗಿದೆ. ಅದನ್ನು ವಿರೋಧಿಸುವ ಮೂಲಕ ತಾವು ದ್ವೇಷ ಭಾಷಣ ಮಾಡುತ್ತಿರುವುದನ್ನು ಒಪ್ಪಿಕೊಳ್ಳುತ್ತೀರಾ, ನಿಮಗೆ ಯಾಕೆ ಭಯ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಪದ್ಮರಾಜ್, ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರದಿಂದ ಮಂಗಳೂರಿನಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲಿ ಸಂಸದರು, ಶಾಸಕರು ಪಕ್ಷಬೇಧವಿಲ್ಲದೆ ಭಾಗವಹಿಸಿರುವುದು ಸ್ವಾಗತಾರ್ಹ. ಅಭಿವೃದ್ಧಿ ವಿಚಾರದಲ್ಲಿ ಈ ರೀತಿಯ ನಡೆಯನ್ನು ರಾಜಕಾರಣಿಗಳು ತೋರಿಸಬೇಕಾಗಿದೆ. ಈ ಮೂಲಕ ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನರಿಗೆ ನ್ಯಾಯ ಒದಗಿಸಬೇಕಾಗಿದೆ. ಅದು ಬಿಟ್ಟು ಜನರ ನಡುವೆ ಇಲ್ಲಸಲ್ಲದ ವಿಚಾರ ಹಿಡಿದು ಚಿಲ್ಲರೆ ರಾಜಕೀಯ ಮಾಡುವುದು, ಅಭಿವೃದ್ಧಿ ಕಾರ್ಯಗಳಿಗೆ ಟೀಕೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಪ್ರವಾಸೋದ್ಯಮ ಸಮಾವೇಶದಲ್ಲಿ ರಾಜ್ಯ ಸರಕಾರದ ಮಾಸ್ಟರ್ ಪ್ಲಾನ್‌ಗೆ ಸ್ಪಂದಿಸಿ ಹೂಡಿಕೆದಾರರನ್ನು ಆಕರ್ಷಿತರಾಗಿದ್ದಾರೆ. ಏಕ ಗವಾಕ್ಷಿ ಮಾದರಿಯಲ್ಲಿ ಮೂರು ಜಿಲ್ಲೆಗಳಿಗೆ ಅನ್ವಯ ಆಗುವಂತೆ ನೋಡಲ್ ಅಧಿಕಾರಿ ನೇಮಕ ಮಾಡುವ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ. ಕೇಂದ್ರ ಸರಕಾರದ ಸಹಕಾರವೂ ಅಗತ್ಯವಾಗಿದ್ದು, ಕರಾವಳಿಯ ಶಾಸಕರು, ಸಂಸದರು ಭಗಾವಹಿಸುವ ಮೂಲಕ ಸಹಕಾರ ಭರವಸೆ ನೀಡಿದ್ದಾರೆ. ಈ ಮೂಲಕ ನಾವು ಕಂಡ ಕರಾವಳಿ ಕರ್ನಾಟಕದ ಅಭಿವೃದ್ಧಿಯ ಕನಸು ಈಡೇರಲಿದೆ ಎಂದು ಹೇಳಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪದ್ಮರಾಜ್, ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎನ್ನುವ ಸ್ಥಳೀಯ ಶಾಸಕರು ಕಾಮಗಾರಿಯ ಫ್ಲೆಕ್ಸ್ ಹಾಕಿಸಿಕೊಳ್ಳುವುದು ಹೇಗೆ ? ಎಂದು ಮರು ಪ್ರಶ್ನಿಸಿದರಲ್ಲದೆ, ಅನುದಾನ ಬಿಡುಗಡೆಗಾಗಿ ಶಾಸಕರು ಯಾವ ರೀತಿಯಲ್ಲಿ ಸರಕಾರ ಹಾಗೂ ಸಚಿವರನ್ನು ಸಂಪರ್ಕಿಸಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ ಎಂದರು.
ಜಿಲ್ಲೆಯ ಕೆಲ ಬಿಜೆಪಿ ಶಾಸಕರು ‘ರಾಜ್ಯದಲ್ಲೀಗ ಅವರ ಸರಕಾರ ಇರುವುದು. ನಮಗೆ ಏನೂ ಮಾಡಲಾಗುತ್ತಿಲ್ಲ’ ಎಂಬ ಮಾತುಗಳನಾಡುತ್ತಿದ್ದಾರೆ. ನಿಮಗೆ ಆಗದಿದ್ದರೆ ರಾಜೀನಾಮೆ ನೀಡಿ ಮನೆಯಲ್ಲಿರಿ. ಇಲ್ಲ ಎಂದಾದಲ್ಲಿ ಜಿಲ್ಲೆಯ ಸಮಸ್ಯೆ, ಕುಂದುಕೊರತೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡುವ ಕಾರ್ಯ ಮಾಡಿ ಎಂದರು.
ಬಿಜೆಪಿ ಅವಧಿಯಲ್ಲಿ ಕೆಲವೊಂದು ಟಂಡರ್ ಇಲ್ಲದೆ ನಡೆದ ಕಾಮಗಾರಿಗಳಿಗೆ ಬಿಲ್ ಬಂದಿಲ್ಲ. ಅದನ್ನೇ ಅನುದಾನ ಬಂದಿಲ್ಲ ಎಂದು ಬಿಂಬಿಸಲಾಗುತ್ತಿದೆ. ಆದರೆ ಸರಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ಚಾಲ್ತಿಯಲ್ಲಿವೆ. ಒಂದು ವೇಳೆ ಸ್ಥಳೀಯ ಶಾಸಕರಿಗೆ ತಮ್ಮಿಂದ ಜಿಲ್ಲೆಗೆ ಪೂರಕವಾಗಿ ಅನುದಾನ ತರಿಸಿಕೊಲ್ಳಲು ಸಾಧ್ಯ ಆಗದಿದ್ದರೆ ನಮ್ಮನ್ನು ಜತೆಗೆ ಕರಿಸಿಕೊಳ್ಳಿ. ನಾವು ಸಚಿವರಿಗೆ ಮನವರಿಗೆ ಮಾಡುತ್ತೇವೆ ಎಂದರು.
ಗೋಷ್ಟಿಯಲ್ಲಿ ಪ್ರಕಾಶ್ ಸಾಲಿಯಾನ್, ಅಪ್ಪಿ, ನವೀನ್ ಡಿಸೋಜಾ, ವಿಕಾಸ್ ಶೆಟ್ಟಿ, ಪದ್ಮನಾಭ, ಶುಭೋದಯ ಆಳ್ವ ಉಪಸ್ಥಿತರಿದ್ದರು.







