ಕಾರ್ಯನಿರ್ವಹಿಸದ ಸಮೀಕ್ಷೆ ಆ್ಯಪ್: ಶಿಕ್ಷಕರ ಪರದಾಟ

ಶಿವಮೊಗ್ಗ : ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಇಲಾಖೆಯ ವತಿಯಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಜಾತಿ ಜನಗಣತಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಗಣತಿ ಕಾರ್ಯಕ್ಕೆ ಸರಕಾರ ಒಳಪಡಿಸಿರುವ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ ಶಿಕ್ಷಕರು ಪರದಾಡುವಂತಾಗಿದೆ. ಇದರಿಂದ ಶಿಕ್ಷಕರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಪ್ರಾಥಮಿಕ ಶಾಲಾ ಶಿಕ್ಷಕರ ಮೂಲಕ ಸರಕಾರ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ ನಡೆಸಲು ಮುಂದಾಗಿದೆ. ಆದರೆ ಜಾತಿ ಗಣತಿ ನಡೆಸಲು ಮೂಲಭೂತ ಸೌಲಭ್ಯ ನೀಡುವಲ್ಲಿ ಸರಕಾರ ಮುಂದಾಗಿಲ್ಲ. ಇದಲ್ಲದೇ ಸರಕಾರ ಸಮೀಕ್ಷೆ ನಡೆಸಲು ನೀಡಿರುವ ಆ್ಯಪ್ ಕೂಡ ಕೈಕೊಟ್ಟಿದೆ. ಒಂದೇ ಮನೆಯಲ್ಲೇ ದಿನವಿಡೀ ಸಮಯ ಕಳೆಯುವಂತಹ ಸ್ಥಿತಿ ಶಿಕ್ಷಕರಿಗೆ ಎದುರಾಗಿದೆ. ಕೆಲವು ಶಿಕ್ಷಕರು 7 ಮನೆ ಪೂರ್ಣಗೊಳಿಸಿದರೆ, ಇನ್ನು ಕೆಲವು ಶಿಕ್ಷಕರು ಒಂದೇ ಒಂದು ಮನೆ ಪೂರ್ಣಗೊಳಿಸಲು ಪದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ವರ್ ಸಮಸ್ಯೆ:
ರಾಜ್ಯ ಸರಕಾರ ಸಮೀಕ್ಷೆ ನಡೆಸಲು ನಡೆಸಲು ಕೆಎಸ್‌ಸಿಬಿಸಿ ಆ್ಯಪ್ ಸಿದ್ಧಪಡಿಸಿದೆ. ಈ ಆ್ಯಪ್ ಮೂಲಕ ಶಿಕ್ಷಕರು ಗಣತಿ ಕಾರ್ಯ ನಡೆಸಬೇಕಿದೆ. ಆದರೆ ಸರ್ವರ್ ಸಮಸ್ಯೆಯಿಂದ ಶಿಕ್ಷಕರು ಸರ್ವೆ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ. ಸರ್ವರ್ ಸಮಸ್ಯೆ ಬಗೆಹರಿಸುವಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರ ಆರೋಪವಾಗಿದೆ.
ಸಮೀಕ್ಷೆಯ ಆ್ಯಪ್ ಪದೇಪದೇ ಕಾರಣವಿಲ್ಲದೇ ಬದಲಾವಣೆ ಆಗುತ್ತಿದೆ. ಶಿಕ್ಷಕರು ಲಾಗಿನ್ ಮಾಡಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಗ್ರಾಮೀಣ ಪ್ರದೇಶಗಳ ಅನೇಕ ಕಡೆಗಳಲ್ಲಿ ನೆಟ್‌ವರ್ಕ್ ಸಮಸ್ಯೆ, ಕೆಲವು ಕಡೆಗಳಲ್ಲಿ ಲಾಗಿನ್ ನಂತರದಲ್ಲಿ ಓಟಿಪಿ ಬರುತ್ತಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಸರಿಪಡಿಸದೇ ಸರ್ವೆ ನಡೆಸಿ ಅಂದರೆ ಹೇಗೆ ಸಾಧ್ಯ ಎಂದು ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.
ಸೂಚನಾ ಪತ್ರದಲ್ಲಿ ಸೂಚಿಸಿರುವ ಪ್ರದೇಶ ಒಂದಾದರೆ, ಗಣತಿ ಮಾಡಬೇಕಾದ ಪ್ರದೇಶವೇ ಮತ್ತೊಂದು. ಇದೆ ಹೀಗಾದರೆ ಸರ್ವೆ ಸೂಸುತ್ರವಾಗಿ ನಡೆಸುವುದು ಹೇಗೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಟಾರ್ಗೆಟ್ ಕೊಟ್ಟಿದ್ದಾರೆ. ಹಬ್ಬ ಹರಿದಿನಗಳನ್ನು ಬಿಟ್ಟು ಗಣತಿ ಕಾರ್ಯಕ್ಕೆ ಬಂದರೆ ಸರ್ವರ್ ಸಮಸ್ಯೆಯಿಂದ ಕೆಲಸ ಮುಂದಕ್ಕೆ ಸಾಗುತ್ತಿಲ್ಲ ಎಂದು ಗಣತಿ ಕಾರ್ಯಕ್ಕೆ ನಿಯೋಜಿತಗೊಂಡ ಶಿಕ್ಷಕರೊಬ್ಬರು ತಮ್ಮ ಅನಿಸಿಕೆ ಹಂಚಿಕೊಂಡರು.
ಬಿಇಒ ಕಚೇರಿ ಕದ ತಟ್ಟಿದ ಶಿಕ್ಷಕರು:
ಸರ್ವೆ ಆ್ಯಪ್ ಕೈಕೊಟ್ಟ ಹಿನ್ನೆಲೆಯಲ್ಲಿ ಗಣತಿ ಕಾರ್ಯ ಸ್ಥಗಿತಗೊಳಿಸಿ ಶಿಕ್ಷಕರು ಬಿಇಒ ಕಚೇರಿಗೆ ಆಗಮಿಸಿ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವೆ ಆ್ಯಪ್ ಸರಿ ಮಾಡಿಕೊಟ್ಟಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸುವುದಾಗಿ ಶಿಕ್ಷಕರು ಹೇಳಿದರು.
ಒಟ್ಟಾರೆ, ನೆಟ್‌ವರ್ಕ್ ಸಮಸ್ಯೆಯಿಂದ ದಾಖಲೆ ಭರ್ತಿ ಮಾಡಲು ಸಾಧ್ಯವಾಗದೆ ಶಿಕ್ಷಕರು ಕಿರಿಕಿರಿ ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟಿರುವ ಆ್ಯಪ್ ಸರಿಪಡಿಸದಿದ್ದರೆ ಸಮೀಕ್ಷೆ ಕಾರ್ಯ ವಿಳಂಬವಾಗುವುದು ಗ್ಯಾರಂಟಿ.
ಕರ್ತವ್ಯ ಲೋಪ: ಸಮನ್ವಯಾಧಿಕಾರಿ ಅಮಾನತು
ಶಿವಮೊಗ್ಗ: ಸಮೀಕ್ಷೆಯ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆ ಸಮನ್ವಯಾಧಿಕಾರಿ ರಂಗನಾಥ್ ಎಂ. ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ರಂಗನಾಥ್ ಎಂ. ಅವರು ಹೊನಸಗರ ತಾಲೂಕು ಬಿ.ಆರ್.ಸಿ. ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ಪೂರ್ವಾನುಮತಿ ಪಡೆಯದೆ ರಜೆ ಹಾಕಿದ್ದು, ದೂರವಾಣಿ ಕರೆಗು ಸ್ಪಂದಿಸಲಿಲ್ಲ. ಇದರಿಂದ ಸಮೀಕ್ಷೆ ಕಾರ್ಯಕ್ಕೆ ತೊಡಕಾಗಿದೆ. ಈ ಹಿನ್ನೆಲೆ ತಕ್ಷಣದಿಂದಲೇ ರಂಗನಾಥ್ ಎಂ. ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ನಮ್ಮ ವೈಯಕ್ತಿಕ ಕೆಲಸಗಳನ್ನು ಬಿಟ್ಟು ಗಣತಿ ಕಾರ್ಯವನ್ನು ಆದ್ಯತೆ ಮೇಲೆ ತೆಗೆದುಕೊಂಡಿದ್ದೇವೆ.ಸಮೀಕ್ಷೆ ನಡೆಸಲು ನನಗೆ 118 ಮನೆಗಳನ್ನು ನೀಡಿದ್ದಾರೆ. ನಾನು 7 ಮನೆಗಳನ್ನು ಪೂರ್ಣಗೊಳಿಸಿದ್ದೇನೆ. ಸರ್ವರ್ ಸಮಸ್ಯೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಸ್ಪಂದನೆ ಮಾಡುವುದು ಕಡಿಮೆಯಾಗುತ್ತಿದೆ. ಸರ್ವರ್ ಸಮಸ್ಯೆ ಬಗೆಹರಿಸಿಕೊಟ್ಟರೆ ಕಾಲಮಿತಿಯಲ್ಲಿ ಪೂರ್ಣಗೊಳಿಸುತ್ತೇವೆ.
-ಬಸವರಾಜ್, ಗಣತಿಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕ







