ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದ ಏಕೈಕ ರಾಜ ರಾಜಾ ಮಹೇಂದ್ರಪ್ರತಾಪ್ ಸಿಂಗ್: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಭಾಗ - 11
ಭಾರತದ ಮೊದಲ ಸರಕಾರ ರಚನೆಯಾದದ್ದು ಯಾವಾಗ?
ಉತ್ತರ: 1915ರಲ್ಲಿ. ‘ತಾತ್ಕಾಲಿಕ ಭಾರತ ಸರಕಾರ’ ಕಾಬೂಲಿನಲ್ಲಿ ಸ್ಥಾಪನೆಯಾಯಿತು. ಅರ್ಥಾತ್ ಬ್ರಿಟಿಷರ ವಿರುದ್ಧ ದೇಶಭ್ರಷ್ಟ ಸ್ಥಿತಿಯ ಈ ಸರಕಾರಕ್ಕೆ ಮಾನ್ಯತೆ ದೊರಕಿಸಿ ಕ್ರಮೇಣ ವಿದೇಶಗಳ ಸಹಾಯ ಸಹಕಾರ ಪಡೆದು ಬ್ರಿಟಿಷರನ್ನು ದೇಶದಿಂದ ಓಡಿಸುವ ಯೋಜನೆ ಹಾಕಿಕೊಂಡಿದ್ದ ಸರಕಾರ. ಈ ಸರಕಾರವನ್ನು ಸ್ಥಾಪಿಸಿದ್ದು ರಾಜಾ ಮಹೇಂದ್ರ ಪ್ರತಾಪ್ ಸಿಂಗ್. ಮೌಲಾನಾ ಬರ್ಕತುಲಾ ಈ ಸರಕಾರದ ಪ್ರಧಾನಿ. ಸರ್ವತಂತ್ರ ಸ್ವತಂತ್ರ ಸರಕಾರವಾಗಿ ಇದನ್ನು ರೂಪಿಸಿ ಭಾರತೀಯರ ಮಾನ್ಯತೆ ಪಡೆಯುವುದು ಇದರ ಉದ್ದೇಶವಾಗಿತ್ತು.
ಈ ಸಾಹಸವೇ ಒಂದು ಅಪೂರ್ವ ಕತೆ. ಈ ಕತೆಯ ಪ್ರಧಾನ ನಾಯಕ ರಾಜಾ ಮಹೇಂದ್ರಪ್ರತಾಪ್ ಸಿಂಗ್.
ಡಿಸೆಂಬರ್ 1886ರಂದು ಜನಿಸಿದ ಮಹೇಂದ್ರಪ್ರತಾಪರನ್ನು ಹಾಥರಸ್‌ನ ಮುರ್ಸಾನ್ ರಾಜಕುಟುಂಬದ ರಾಜ ದತ್ತು ತೆಗೆದುಕೊಂಡ. ಮಹೇಂದ್ರಪ್ರತಾಪ್ ಅಂದಿನ ಮುಹಮ್ಮದನ್ ಆಂಗ್ಲೋ ಓರಿಯೆಂಟಲ್ ಕಾಲೇಜಿನಲ್ಲಿ (ಇಂದಿನ ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯ) ವಿದ್ಯಾಭ್ಯಾಸ ಪಡೆದರು.
ವಿದ್ಯಾರ್ಥಿಯಾಗಿದ್ದಾಗಲೇ ಮಹೇಂದ್ರಪ್ರತಾಪ್ ಜಿಂದ್‌ನ ರಾಜಕುಮಾರಿ ಬಲ್ವೀರ್ ಕೌರ್ ಅವರನ್ನು ಮದುವೆಯಾದರು. ವಿದ್ಯಾರ್ಥಿಯಾಗಿದ್ದಾಗಲೇ ಮಹೇಂದ್ರ ಪ್ರತಾಪ್ ಆಧುನಿಕ, ರಾಜಕೀಯ, ಸಾಮಾಜಿಕ ಚಿಂತನೆಗಳ ಪ್ರಭಾವಕ್ಕೆ ಒಳಗಾದದ್ದಷ್ಟೇ ಅಲ್ಲ, ಸ್ವಾತಂತ್ರ್ಯ ಹೋರಾಟದ ಪ್ರಭಾವಕ್ಕೂ ಒಳಗಾದರು. ಈ ಪ್ರಭಾವದಲ್ಲೇ ಅವರು 1906ರ ಕಾಂಗ್ರೆಸ್ ಅಧಿವೇಶನಕ್ಕೆ ಹಾಜರಾದರು. ಇದಾದ ಬಳಿಕ ಅವರು ಸ್ವಾತಂತ್ರ್ಯ ಹೋರಾಟಕ್ಕಿಳಿದರು. ತನ್ನ ಅರಸುತನದ ಅವಧಿಯಲ್ಲಿ ಅಂದರೆ 1909ರಲ್ಲಿ ಸಿಂಗ್ ಭಾರತದ ಮೊದಲ ಪಾಲಿಟೆಕ್ನಿಕ್ ವಿದ್ಯಾಕೇಂದ್ರವನ್ನು ವೃಂದಾವನದಲ್ಲಿ ಸ್ಥಾಪಿಸಿದರು. ಪ್ರೇಮ ಮಹಾವಿದ್ಯಾನಿಲಯ ಎಂದು ಇದಕ್ಕೆ ಹೆಸರಿಟ್ಟರು. ಇದು ಹಲವಾರು ರಾಷ್ಟ್ರೀಯ ನಾಯಕರು ಭಾಗವಹಿಸುವಿಕೆಯ ತಾಣವಾಗಿ ಬೆಳೆಯಿತು. ಸ್ವದೇಶೀ ಬೆಂಬಲ ಮತ್ತು ಅಸ್ಪಶ್ಯತಾ ವಿರೋಧಿ ಹೋರಾಟಗಳಿಗೆ ಸಕ್ರಿಯ ಬೆಂಬಲ ವ್ಯಕ್ತಪಡಿಸಿದ್ದ ಮಹೇಂದ್ರಪ್ರತಾಪ್ 1914ರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಂತರ್‌ರಾಷ್ಟ್ರೀಯ ಬೆಂಬಲ ಪಡೆಯಲು ವಿದೇಶ ಯಾತ್ರೆ ಆರಂಭಿಸಿದರು.
ಜರ್ಮನಿ, ಬಲ್ಗೇರಿಯಾ, ಹಂಗೇರಿ, ತುರ್ಕಿಯ, ರಶ್ಯ, ಜಪಾನ್‌ಗಳಿಗೆ ಭೇಟಿ ನೀಡಿದ ಮಹೇಂದ್ರ ಪ್ರತಾಪ್, ಮೊದಲನೆಯ ಮಹಾಯುದ್ಧದ ವೇಳೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ಹಲವು ದೇಶಗಳ ಸಹಾಯ ಅಪೇಕ್ಷಿಸಿ ಪ್ರವಾಸ ಭೇಟಿ ಮಾಡಿದರು. ಜರ್ಮನ್ ಹಾಗೂ ತುರ್ಕಿಯದ ಸಹಾಯದೊಂದಿಗೆ ಮಹೇಂದ್ರ ಪ್ರತಾಪ್ ಅವರು ಅಫ್ಘಾನಿಸ್ತಾನದ ಕಾಬೂಲಿನಲ್ಲಿ ತಾತ್ಕಾಲಿಕ ಭಾರತ ಸರಕಾರವನ್ನು ಸ್ಥಾಪಿಸಿದರು. ಅಫ್ಘಾನಿಸ್ತಾನದಿಂದಲೇ ಕಾರ್ಯಾಚರಣೆ ನಡೆಸಿದರೂ ಈ ಸರಕಾರಕ್ಕೆ ಅಫ್ಘಾನಿಸ್ತಾನವೇ ಮಾನ್ಯತೆ ನೀಡಲಿಲ್ಲ. ರಾಜಕೀಯದ ಗಾಳಿ ಬದಲಾಗಿದ್ದೇ ಅಫ್ಘಾನಿಸ್ತಾನ ಬ್ರಿಟಿಷರ ಪರವಾಗಿ ನಿಂತಿತು. ಈ ವೇಳೆಗೆ ರಶ್ಯದಲ್ಲಿ ನಡೆದ ಕ್ರಾಂತಿಯ ಕಾರಣಕ್ಕೆ ರಾಜಾ ಮಹೇಂದ್ರಪ್ರತಾಪ್ ಅವರಿಗೆ ರಶ್ಯದ ಮೇಲೆ ನಂಬಿಕೆ ಇತ್ತು. ಲೆನಿನ್‌ಗೆ ಬರೆದ ಪತ್ರ ಮತ್ತು ಅದಕ್ಕೆ ಲೆನಿನ್ ಬರೆದ ಉತ್ತರದಲ್ಲೂ ಈ ಸಾಧ್ಯತೆ ಇತ್ತು. ಆದರೆ ರಶ್ಯ ಕ್ರಾಂತಿಯ ತಕ್ಷಣದ ಒತ್ತಡಗಳಲ್ಲಿ ಮುಳುಗಿ ಭಾರತವನ್ನು ನಿರ್ಲಕ್ಷಿಸಿತು. ರಾಜಾ ಮಹೇಂದ್ರಪ್ರತಾಪ್ ಅವರ ತಾತ್ಕಾಲಿಕ ಸರಕಾರವೂ ಮೂಲೆಗುಂಪಾಯಿತು.
ಮಹೇಂದ್ರ ಪ್ರತಾಪ್ ಮಾತ್ರ ಮುಂದಿನ 3 ದಶಕ ಕಾಲ ವಿದೇಶಗಳನ್ನು ಸುತ್ತುತ್ತಾ, ವಿದೇಶೀ ನಾಯಕರನ್ನು ರಾಜತಾಂತ್ರಿಕ ಬೆಂಬಲಕ್ಕಾಗಿ ವಿನಂತಿಸುತ್ತಾ ತಮ್ಮ ಜೀವನ ಕಳೆದರು. ಈ ಅವಧಿಯಲ್ಲಿ ಅವರು ಜರ್ಮನಿಯ ಕೈಸರ್‌ನನ್ನೂ ರಶ್ಯದ ಬಾಲ್ಶೆವಿಕ್ ನಾಯಕರನ್ನೂ ಭೇಟಿಯಾಗಿದ್ದರು.
ಅವರು ದೇಶ ಬಿಟ್ಟು ಬರ್ಲಿನ್‌ನಲ್ಲಿ ಅಧಿಕೃತವಾಗಿ ಇದ್ದಾಗ ಜಪಾನ್‌ನಲ್ಲಿ world Federation Centre ಎಂಬ ಸಂಸ್ಥೆಯನ್ನು ವಸುಧೈವ ಕುಟುಂಬಕಂ ಎಂಬ ಧ್ಯೇಯವಾಕ್ಯದೊಂದಿಗೆ ಸ್ಥಾಪಿಸಿದ್ದರು.
ಅವರು ದೇಶ ಬಿಟ್ಟಾಗ ಅವರಿಗೆ 28ರ ಹರೆಯ. ಸತತ 32 ವರ್ಷ ದೇಶ ಬಿಟ್ಟು ಹತ್ತು ಹಲವು ದೇಶ ಸುತ್ತುತ್ತಾ ಭಾರತದ ಸ್ವಾತಂತ್ರ್ಯಕ್ಕಾಗಿ ಸಹಾಯ ಸಹಕಾರ ಕೋರುತ್ತಾ ಭವಿಷ್ಯದ ಜಗತ್ತಿನಲ್ಲಿ ಪರಸ್ಪರ ಸಹಕಾರದೊಂದಿಗೆ ಬಾಳಬೇಕಾದ ಅಗತ್ಯದ ಬಗ್ಗೆ ಮಾತನಾಡುತ್ತಾ ಓಡಾಡಿದರು. ಯುರೋಪ್, ಏಶ್ಯಗಳ ಬಹುತೇಕ ದೇಶಗಳ ಮುಖ್ಯಸ್ಥರ ಜೊತೆ ಅವರಿಗೆ ಹೊಕ್ಕುಬಳಿಕೆ ಇತ್ತು.
1946ರಲ್ಲಿ ದೇಶ ಸ್ವತಂತ್ರವಾಗುವ ಘೋಷಣೆಯ ಬಳಿಕ ಅವರು ಭಾರತಕ್ಕೆ ಮರಳಿದರು.
ಗಾಂಧಿ, ಟಾಗೋರ್, ಸುಭಾಸ್, ನೆಹರೂ ಎಲ್ಲರಿಗೂ ಅವರೊಂದಿಗೆ ಅಷ್ಟಿಷ್ಟು ಒಡನಾಟ ಇತ್ತು. ಬಹುತೇಕ ಹೋರಾಟಗಾರರು ಅವರ ಮೇಲೆ ಅತೀವ ಪ್ರೀತಿ ಹೊಂದಿದ್ದರು. ಆದರೆ ಅವರ ಒಟ್ಟಾರೆ ಕೆಲಸದ ಮಾದರಿಯೋ ಗೊತ್ತಿಲ್ಲ; ಮುಖ್ಯವಾಹಿನಿಯೊಂದಿಗೆ ಕೈಜೋಡಿಸಲು ಅವರಿಗೆ ಸಾಧ್ಯವೇ ಆಗಲಿಲ್ಲ. ಅಷ್ಟು ವರ್ಷ ತನ್ನ ಪ್ರೀತಿಯ ಪುಟ್ಟ ಸಂಸ್ಥಾನ, ದೇಶವನ್ನು ಸದಾ ಎದೆಯೊಳಗಿಟ್ಟುಕೊಂಡು ಓಡಾಡಿದರು. ಹೇಗೆ ಬದುಕಿದರೋ.
1916ರಲ್ಲೇ ಬ್ರಿಟಿಷರು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು ಈ ಕಾರಣಕ್ಕೆ ಮಹೇಂದ್ರಪ್ರತಾಪ್ ಭಾರತಕ್ಕೆ ಮರಳಲು ಸಾಧ್ಯವೇ ಆಗಲಿಲ್ಲ. (ಹೀಗೆ ವಿದೇಶದಲ್ಲೇ ಇರಬೇಕಾದ ಸ್ಥಿತಿ ರಾಸ್ ಬಿಹಾರಿ ಬೋಸ್‌ಗೂ ಬಂದಿತ್ತು.)
ಭಾರತದ ಸಂಸ್ಥಾನಗಳ ಬಹುತೇಕ ರಾಜರು ಒಂದೋ ಬ್ರಿಟಿಷರ ಯಜಮಾನಿಕೆಯನ್ನು ಒಪ್ಪಿಕೊಂಡು ಬೂಟು ನೆಕ್ಕಿದರೆ, ಕೆಲವರು ಅಂದಿನ ಸ್ಥಿತಿಯನ್ನು ಅನಿವಾರ್ಯವಾಗಿ ಒಪ್ಪಿಕೊಂಡು ಕೈಲಾದಷ್ಟು ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯನ್ನು ಮಾಡಿದ್ದರು. ಆದರೆ ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದ ಏಕೈಕ ರಾಜ-ರಾಜಾ ಮಹೇಂದ್ರಪ್ರತಾಪ್.
ಸ್ವಾತಂತ್ರ್ಯಾನಂತರ 1957ರ ಲೋಕಸ್ಪರ್ಧೆಗೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. (ಅವರ ವಿರುದ್ಧ ಅಟಲ್ ಬಿಹಾರಿ ವಾಜಪೇಯಿ ಎಂಬವರೂ ಸ್ಪರ್ಧಿಸಿದ್ದರು!)
ರಾಜಾ ಮಹೇಂದ್ರ ಪ್ರತಾಪ್ ಸಿಂಗ್ 1979ರಲ್ಲಿ ನಿಧನ ಹೊಂದಿದರು. ಅವರ ಆತ್ಮ ಚರಿತ್ರೆಯನ್ನು ಓದಿದರೆ ಒಂದು ಕಾಲಮಾನದ ಚಡಪಡಿಕೆಗಳ ಅನುಭವ ಆಗುತ್ತದೆ.
ಅವರೊಮ್ಮೆ ದ್ವಾರಕೆಗೆ ಹೋದಾಗ ದೇವಾಲಯದ ಬಾಗಿಲಲ್ಲಿ ‘‘ನಿಮ್ಮ ಜಾತಿ ಯಾವುದು?’’ ಎಂದು ಕೇಳಿದಾಗ ಮಹೇಂದ್ರಪ್ರತಾಪ್, ‘‘ಚಮ್ಮಾರ’’ ಎಂದು ಉತ್ತರಿಸಿ, ದೇವಸ್ಥಾನ ಪ್ರವೇಶಿಸದೇ ಮರಳಿದ್ದರು.
‘‘ರಮ್ಯ ಕಾದಂಬರಿ ಪಾತ್ರವೊಂದು ನೇರ ವರ್ತಮಾನದ ರಾಜಕಾರಣಕ್ಕೆ ಧುತ್ತೆಂದು ಬಂದಿಳಿದ ಹಾಗೆ ಪ್ರತಾಪ್ ಇದ್ದರು’’ ಎಂದು ನೆಹರೂ ಅವರ ಬಗ್ಗೆ ಹೇಳಿದ್ದರು. ನೆಹರೂ ಸಮವಯಸ್ಕ ಈ ಕನಸುಗಾರ.







